For Quick Alerts
  ALLOW NOTIFICATIONS  
  For Daily Alerts

  ಸ್ವಮೇಕ್ ಕ್ರಾಂತಿಗೆ 'ಕಂಕಣ' ಸೂರ್ಯಕಾಂತಿ!

  |

  ರಿಮೇಕ್ ಚಿತ್ರಗಳಿಗೆ ಸೂರ್ಯಕಾಂತಿ ಗ್ರಹಣ ಬಿಡಿಸಿದೆ. ಸ್ವಮೇಕ್ 'ಕಂಕಣ'ತೊಟ್ಟು ಫಳಫಳಿಸಿದೆ!ಸ್ವಮೇಕ್ ಚಿತ್ರಗಳನ್ನು ಇಷ್ಟಪಡುವವರಿಗೆ 'ಸೂರ್ಯಕಾಂತಿ' ನಿರಾಸೆ ಮೂಡಿಸುವುದಿಲ್ಲ.ಚಿತ್ರದಲ್ಲಿ ಹಲವಾರು ತಿರುವು, ವಿನಾ ಕಾರಣ ದೃಶ್ಯಗಳಿದ್ದರೂ ನಿರ್ದೇಶಕ ಕೆ ಎಂ ಚೈತನ್ಯ ಒಮ್ಮೆ ನೋಡಬಹುದಾದ ಚಿತ್ರವನ್ನು ನೀಡಿದ್ದಾರೆ. ಚಿತ್ರದ ಎಲ್ಲಾ ಪಾತ್ರಗಳಿಗೆ ನ್ಯಾಯ ಒದಗಿಸುವಲ್ಲಿ ಸಫಲರಾಗಿದ್ದಾರೆ. ಭೂಗತ ಕಥಾ ಹಂದರದ ಮತ್ತೊಂದು ಚಿತ್ರ ಎಂದು ಸೂರ್ಯಕಾಂತಿಯನ್ನು ತಳ್ಳಿಹಾಕುವಂತಿಲ್ಲ.

  ಇಲ್ಲಿ ಕಥಾನಾಯಕ ಚೇತನ್ ಅಂತಾರಾಷ್ಟ್ರೀಯ ಬಾಡಿಗೆ ಹಂತಕ. 'ಆ ದಿನಗಳು' ಚಿತ್ರದಲ್ಲಿ ಮುಗ್ಧ ಹುಡುಗನಾಗಿ ಕಾಣಿಸಿದ್ದ ಚೇತನ್, ಈ ಚಿತ್ರದಲ್ಲಿ ಟಫ್ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಚಿತ್ರಕ್ಕೆ 'ಮಾಸ್' ಟಚ್ ನೀಡಿರುವ ನಿರ್ದೇಶಕರು ಪ್ರೇಕ್ಷರನ್ನು ಸೀಟ್ ನಲ್ಲಿ ಕೂರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಚೇತನ್ ರ ನಟನೆ, ಇಳಯರಾಜ ಅವರ ಸಂಗೀತ, ವೇಣು ಕ್ಯಾಮೆರಾ ಕೈಚಳಕ ನಾರಯಣಸ್ವಾಮಿಅವರ ಪ್ರೆಷ್ ಕತೆ ಜತೆಯಾಗಿದೆ.

  ನಾಯಕ (ರೋಹಿತ್ ಅಲಿಯಾಸ್ ಸೂರ್ಯ) ಉಜ್ಬೆಕಿಸ್ತಾನ್ ಮೂಲದ ಕಿಲ್ಲರ್. ಬೆಂಗಳೂರು ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡುವ ಸಲುವಾಗಿ ನಗರಕ್ಕೆ ಬರುತ್ತಾನೆ. ಆದರೆ ರೊಹಿತ್ ನನ್ನು ಮುಗಿಸಲು ಮತ್ತೊಂದು ಭೂಗತ ತಂಡ ಸಂಚು ರೂಪಿಸುತ್ತದೆ. ಅವರ ಸಂಚಿಗೆ ರೋಹಿತ್ ನನ್ನೇ ಹೋಲುವ ಸೂರ್ಯ ಎಂಬ ಯುವಕ ಬಲಿಯಾಗುತ್ತಾನೆ. ಸಾವಪ್ಪಿದ ಸೂರ್ಯ ಸಾಹೇಬ್ ಗ್ರೂಪ್ ಮಾಲೀಕರ ಸಾಕುಮಗ.

  ಸೂರ್ಯನನ್ನು ಕರೆತರಲು ವಿಮಾನ ನಿಲ್ದಾಣಕ್ಕೆ ಬಂದವರು ಅವನನ್ನೇ ಹೋಲುವ ರೋಹಿತ್ ನನ್ನು ಕರೆದೊಯ್ಯುತ್ತ್ತಾರೆ. ತಾನು ರೋಹಿತ್ ಎಂದು ಹೇಳದೆ ಸೂರ್ಯನಾಗಿಯೇ ನಟಿಸುತ್ತಾನೆ. ಹಲವಾರು ತಿರುವುಗಳ ಬಳಿಕ ಸಾಹೇಬ್ ಗ್ರೂಪ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ರೋಹಿತ್ ಆಯ್ಕೆಯಾಗುತ್ತಾನೆ .

  ಸಂಸ್ಥೆಯ ಮಾಲೀಕ ರಾಮಕೃಷ್ಣ ( ಅಪ್ಪಾ ಸಾಹೇಬ್) ಮುದ್ದಿನ ಮಗಳು ರೆಗಿನಾ ( ಕಾಂತಿ)ಜೊತೆ ಸೂರ್ಯನಾಗಿ ಬದಲಾಗಿರುವ ರೋಹಿತ್ ಗೆ ಪ್ರೇಮಾಂಕುರವಾಗುತ್ತದೆ. ಕಾಂತಿಗೆ ಸೂರ್ಯ ಎಂದರೆ ಅಷ್ಟಕ್ಕಷ್ಟೆ. ಆದರೆ ಸೂರ್ಯ, ಕಾಂತಿ ಕಡೆಗೆ ಆಕರ್ಷಿತನಾಗುತ್ತಾನೆ. ಆಗ ಇಬ್ಬರ ನಡುವೆ ನ್ಯೂಟನ್ ನ ಮೂರನೇ ನಿಯಮ ಅನ್ವಯವಾಗುತ್ತದೆ. ಅರ್ಥಾತ್ ಇಬ್ಬರ ನಡುವೆ ಪ್ರೇಮಾಂಕುರವಾಗಿ ಎಡಿಸನ್ ನ ಬಲ್ಬ್ ನಂತೆ ಬೆಳಗುತ್ತದೆ!

  ಈ ನಡುವೆ ತಾನು ಹತ್ಯೆ ಮಾಡಬೇಕಾದ ವ್ಯಕ್ತಿ ಕಾಂತಿ ಎಂಬುದು ಸೂರ್ಯನಿಗೆ ಗೊತ್ತಾಗುತ್ತದೆ. ಪ್ರೀತಿಸಿದ ಹುಡುಗಿಯನ್ನು ಸೂರ್ಯ ಕೊಲ್ಲುತ್ತಾನಾ? ಕೊನೆಗೆ ಕತೆ ಏನಾಗುತ್ತದೆ? ಎಂಬುದನ್ನು ತೆರೆಯ ಮೇಲೆ ನೋಡಿದರೇನೆ ಚೆಂದ. ಒಟ್ಟಿನಲ್ಲಿ ಸಾಲುಸಾಲು ರಿಮೇಕ್ ಚಿತ್ರಗಳಿಗೆ ಸೂರ್ಯಕಾಂತಿ ಬ್ರೇಕ್ ಹಾಕಿದೆ.

  ಚಿತ್ರದ ಪ್ಲಸ್ ಪಾಯಿಂಟ್: ಚಿತ್ರತಾಂತ್ರಿಕವಾಗಿ ಸೂಪರ್ಬ್. ಇಳಯರಾಜ ಅವರ ಆರು ಹಾಡುಗಳಲ್ಲಿ ಮೂರೂ ಹಾಡುಗಳು ( ಸ್ವಲ್ಪ ಸೌಂಡು ಜಾಸ್ತಿ ಮಾಡು, ಎದೆಯ ಬಾಗಿಲು ಮತ್ತು ಮುನಿ ನಾನು) ಪ್ರೇಕ್ಷಕರ ಬಾಯಲ್ಲಿ ಗುನುಗುಟ್ಟುತ್ತದೆ. ಉಜ್ಬೆಕಿಸ್ತಾನ್, ಉತ್ತರಾಂಚಲ್, ಬೆಳಗಾವಿ, ಗೋವಾ, ಕಾರವಾರ ಮುಂತಾದ ರಮಣೀಯ ದೃಶ್ಯಗಳನ್ನು ಸೆರೆ ಹಿಡಿದ ವೇಣು ಕ್ಯಾಮೆರಾ ಕೈಚಳಕದ ಬಗ್ಗೆ ಎರಡು ಮಾತಿಲ್ಲ. ಮೈನವಿರೇಳುವ ರವಿ ವರ್ಮ ಅವರ ಸಾಹಸ ಸಂಯೋಜನೆ ಪ್ರಶಂಸಾರ್ಹ.

  ಚಿತ್ರದ ಮೈನಸ್ ಪಾಯಿಂಟ್: ಕೆಲವೊಂದು ವಿನಾಕಾರಣ ಬಂದು ಹೋಗುವ ದೃಶ್ಯಗಳಿಗೆ ಮುಲಾಜಿಲ್ಲದೆ ಕತ್ತರಿ ಹಾಕಬಹುದಿತ್ತು. ಉದಾಹರಣೆಗೆ ನಾಯಕಿಯ ತಂದೆ ಮತ್ತು ತಾತನ ಪಾತ್ರಕ್ಕೆ ಇನ್ನೂ ಮಹತ್ವ ನೀಡಿದ್ದರೆ ಚಿತ್ರಕಥೆಯಲ್ಲಿ ಬಿಗಿ ಇರುತಿತ್ತು. ಚಿತ್ರದ ಶೇ.75 ಭಾಗ ಬೆಳಗಾವಿಯಲ್ಲಿ ಚಿತ್ರಿಕರಿಸಿದ್ದರಿಂದ ಅಲ್ಲಿನ ಕನ್ನಡ ಭಾಷೆ ಬಳಸಿದ್ದರೆ ಪಾತ್ರಕ್ಕೆ ಇನ್ನು ನೈಜತೆ ಇರುತ್ತಿತ್ತು.ಚಿತ್ರದ ಹಿನ್ನಲೆ ಸಂಗೀತ ನಿರೀಕ್ಷಿತ ಮಟ್ಟದಲ್ಲಿಲ್ಲ.ಹಾಸ್ಯರಸ ಊಟಕ್ಕಿಲ್ಲದ ಉಪ್ಪಿನಕಾಯಂತಾಗಿದೆ. ಬೆಳಗಾವಿ 'ಬೆಳಗಾಂ 'ಆಗಿದೆ.

  ಕೊನೆ ತೀರ್ಪು: ನಿರ್ದೇಶಕ ಚೈತನ್ಯ್ ಅವರ ಸ್ವಮೇಕ್ ಚಿತ್ರ, ತಾಂತ್ರಿಕವಾಗಿ ಉತ್ತಮವಾಗಿರುವ ಮತ್ತು ಎಲ್ಲಾ ಪಾತ್ರಧಾರಿಗಳು ಉತ್ತಮವಾಗಿ ನಿರ್ವಹಿಸಿರುವುದರಿಂದ ಪ್ರೇಕ್ಷಕ ಮಹಾಪ್ರಭುಗಳು ಒಮ್ಮೆ ಹೋಗಿ ಬೆನ್ನುತಟ್ಟವುದರಲ್ಲಿ ತೊಂದರೆಯಿಲ್ಲ. ಸ್ವಮೇಕ್ ಕಂಕಣ ತೊಟ್ಟ ಸೂರ್ಯ ಮತ್ತಷ್ಟು ಕಾಂತಿಯುತವಾಗಿದೆ.

  ನಿರ್ಮಾಪಕರು: ಸುಜಾತ ಬಿ ಎನ್

  ನಿರ್ದೇಶನ: ಕೆ ಎಂ ಚೈತನ್ಯ

  ಸಂಗೀತ: ಇಳಯರಾಜ

  ತಾರಾಗಣ: ಚೇತನ್, ರೆಗಿನಾ, ನಾಸರ್, ಗಣೇಶ್ ಯಾದವ್, ರಾಮಕೃಷ್ಣ, ಕಿಶೋರಿ ಬಲ್ಲಾಳ್, ಏಣಗಿ ನಟರಾಜ್, ಆಸಿಫ್.

  ಕಂಕಣ ಸೂರ್ಯಗ್ರಹಣ, ವಜ್ರದುಂಗುರವನ್ನು ಕಣ್ತುಂಬ ನೋಡಿ, ಆನಂದಿಸಿ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X