For Quick Alerts
  ALLOW NOTIFICATIONS  
  For Daily Alerts

  ಭಟ್ರ ಕೈಯಲ್ಲಿ ಅರಳಿದ ಪಂಚರ್ ಅಂಗಿ

  By * ಎಂಎನ್ಕೆ,ಮುಳುಗುಂದ ನಾಕಾ, ಗದಗ
  |

  Director Yogaraj Bhat
  ಗಾಂಧಿನಗರದಲ್ಲಿ ಸ್ಟಾರ್ ನಿರ್ದೇಶಕ ಎನಿಸಿರುವ ಯೋಗರಾಜ್ ಭಟ್ ಅವರ ಭಾರಿ ನಿರೀಕ್ಷೆ ಮೂಡಿಸಿದ್ದ ಪಂಚರಂಗಿ ಚಿತ್ರ ಬಿಡುಗಡೆಯಾಗಿ ಎರಡು ವಾರ ಮುಗಿದು ಮೂರನೇ ವಾರಕ್ಕೆ ಮುನ್ನುಗ್ಗುವ ಮೂಲಕ ಯಶಸ್ವಿ ಪ್ರದರ್ಶನ ಕಾಣತೊಡಗಿದೆ ? ನಾನು ನನ್ನ ಕನಸು ಚಿತ್ರದ ನಂತರ ತುಂಬಾ ನಿರೀಕ್ಷೆ ಇಟ್ಟುಕೊಂಡು ಚಿತ್ರ ಮಂದಿರಕ್ಕೆ ತೆರಳಿದ್ದರಿಂದ ಭಟ್ಟರ ಪಂಚರಂಗಿ ನಿರಾಶೆ ಮೂಡಿಸಿತು. ಭಟ್ ರ ಕುಸರಿ ಕಂಡು ? ಆಶ್ಚರ್ಯವೂ ಆಯಿತು, ರೊಕ್ಕ ಮತ್ತು ಸಮಯ ಕಳೆದುಕೊಂಡೆನಲ್ಲ ಎಂದು ಕೋಪಾನು ಬಂತು.

  ಉತ್ತಮ ಚಿತ್ರವೆಂದರೆ ಯಾವುದು ? ಒಂದು ಚಿತ್ರ ಎಂದರೆ ಹೇಗಿರಬೇಕು? ಅದನ್ನು ಸಿನಿಮಾ ಶಾಲೆಯಲ್ಲಿ ಕಲಿಸುವುದು, ಸಂವಾದಗಳಲ್ಲಿ ಅಲೆಸುವುದು ಬೇರೇ. ಆದರೆ ನನಗೆ ಸಿನಿಮಾ ಬೇಕಾಗಿರುವುದು ಮನೋಲ್ಲಾಸಕ್ಕಾಗಿ. ಆದರೆ, ಯಾವುದೇ ಕತೆ ಇಲ್ಲದೇ, ಮನಸ್ಸಿಗೆ ತಿಳಿದ ಹಾಗೆ ರೀಲು ಸುತ್ತೋದು ಒಂದು ಮನರಂಜನೆಯೇ?

  ಯೋಗರಾಜ್ ಭಟ್ ಒಬ್ಬ ನುರಿತ, ಅನುಭವಿ ಹಾಗೂ ಕ್ರಿಯೇಟಿವ್ ನಿರ್ದೇಶಕ ಎಂದೇ ಹೆಸರುವಾಸಿ. ಅವರಿಂದ ಹೊಸತನ ನಿರೀಕ್ಷಿಸುವುದು ಸಹಜವೆ. ಆದರೆ, ಅವರ ಕೂಸು ಪಂಚರಂಗಿಯಲ್ಲಿ ಎಲ್ಲೂ ಹೊಸತನದ ಎಳೆ ಕಾಣುತ್ತಿಲ್ಲ. ಎಲ್ಲವೂ ಅಲ್ಲೊಂದಿಷ್ಟು, ಇಲ್ಲೊಂದಿಷ್ಟು ಹೆಕ್ಕಿದ ಸರಕೇ. ಭಾರಿ ಯಶಸ್ಸು ಕಂಡ ಹಿಂದಿ ಚಿತ್ರವೊಂದನ್ನು ಭಟ್ರು ಮನಸ್ಸಿನಲ್ಲಿಟ್ಟುಕೊಂಡು ಕತೆ ಹೆಣೆದಿರುವ ಸಾಧ್ಯತೆ ಇದೆ ಎನ್ನುವುದು ನಮ್ಮ ಅನಿಸಿಕೆ.

  ಒಂದೇ ಸಾಲಿನಲ್ಲಿ ಚಿತ್ರದ ಕತೆ ಹೇಳುವುದಾದರೆ ಒಂದು ಸಂಸಾರ, ಅವರಿಗೆ ಇಬ್ಬರ ಮಕ್ಕಳು. ಹಿರಿಯವನು ಸಾಫ್ಟ್ ವೇರ್ ಇಂಜಿನಿಯರ್, ಕಿರಿಯವನು ಸ್ನಾತಕೋತ್ತರ ಪದವೀಧರ ಕಮ್ ಉಂಡಾಡಿ ಕಿಂಗ್. ದೊಡ್ಡವನಿಗೆ ಹುಡುಗಿ ನೋಡಲು ಮನೆಮಂದಿಯೆಲ್ಲಾ ಗಂಡಿನ ಮನೆಗೆ ತೆರಳುವುದು. ಅಲ್ಲಿ ನಡೆಯುವಂತ ಮಾತುಕತೆ, ಚರ್ಚೆ, ಪ್ರೇಮ, ಅಫೇರ್ ಗಳ ವಿಷಯಗಳಿಗೆ ಎರಡು ಗಂಟೆ ಹತ್ತು ನಿಮಿಷವನ್ನು ಸವೆಸಿದ್ದಾರೆ ಭಟ್ರು.

  ಭಟ್ರು ಚಿತ್ರದ ವಿಶೇಷತೆಗಳಲ್ಲಿ ಪ್ರತಿಯೊಂದಕ್ಕೂ 'ಗಳು' ಎಂದು ಹಚ್ಚಿ ಮಾತನಾಡುವುದು. ಭೂಮಿಯ ಮೇಲಿರುವ ಎಲ್ಲ ವಸ್ತುಗಳು ನಿರ್ಜೀವ ಎಂದು ವಾದಿಸುವ ಭಟ್ರ ವಾದಕ್ಕೆ ಏನಂತ ಹೇಳಬೇಕು. ಸಜೀವ, ನಿರ್ಜೀವ ಎಂದು ವಿಂಗಡಣೆ ಮಾಡಿರುವ ವಿಜ್ಞಾನಕ್ಕೆ ಏನಂತ ಹೇಳುತ್ತೀರಿ? ನಾನು ಹೇಳಿದ್ದು, ಹೇಳುತ್ತಿರುವುದೆಲ್ಲಾ ಸರ್ವ ಶ್ರೇಷ್ಠ ಎಂಬ ಮನಸ್ಥಿತಿ. ತಮ್ಮ ಮೂಗಿನ ನೇರಕ್ಕೆ ಎಲ್ಲವನ್ನೂ ಹೇಳುವುದೇ ಒಂದು ಮನರಂಜನೆಯೇ? ನಾನು ನಿರ್ಮಿಸಿದ ಚಿತ್ರ ಹೇಗಾದರೂ ಇರಲಿ, ಪ್ರೇಕ್ಷಕರು ಕಣ್ಣು ಮೂಗು ಬಾಯಿ ಮುಚ್ಚುಕೊಂಡು ಸಿನಿಮಾ ನೋಡ್ತಾರೆ ಅನ್ನುವ ಧೈರ್ಯವೇ?

  ಚಿತ್ರದಲ್ಲಿ ಬ್ರೋಕರ್ ಪಂಚಾಕ್ಷರಿಯ ನಾಲಿಗೆಯನ್ನು ಭಾರಿ ಪ್ರಮಾಣದಲ್ಲಿ ಹರಿ ಬಿಟ್ಟಿದ್ದು ಮಾತ್ರ ಸರಿಯಲ್ಲ. ಮದುವೆ ಬ್ರೋಕರ್ ಸಂಭಾಷಣೆ ಓವರ್ ಆಕ್ಟಿಂಗ್. ಆತನ ಎಲುಬಿಲ್ಲದ ನಾಲಿಗೆಯಿಂದ ಬರುವ ಸಂಭಾಷಣೆ ಛೆ ಏನ್ರೀ ಇದು ಅಂತ ಅನ್ನಿಸೋದು ಸಹಜ. ಈ ಹುಡಿಗೀಗೂ ಲಗ್ನ ಮಾಡ್ಸಿ ಗಬ್ಬ ಎಬ್ಬಿಸಿಬಿಟ್ಟರಾಯ್ತು ಎಂದು ಹೇಳಿಸುವ ಸಂಭಾಷಣೆಯಂತೂ ಕಿರಿಕಿರಿ ಉಂಟು ಮಾಡುತ್ತೆ.

  ಭಟ್ರ ಮುಂಗಾರುಮಳೆಯಲ್ಲೂ ಕತೆ ಇಲ್ಲ. ಆದರೆ, ಅಲ್ಲಿ ಚೆಂದದ ಸಂಭಾಷಣೆ ಇತ್ತು. ಕಾಯ್ಕಿಣಿ ಅವರ ಹಾಡುಗಳ ರಸದೌತಣ, ಮನೋಮೂರ್ತಿ ಅವರ ಸಂಗೀತ, ಕೃಷ್ಣ ಅವರ ಛಾಯಾಗ್ರಹಣ, ಜೊತೆಗೆ ಗಣೇಶ ಅವರ ಡೈಲಾಗ್ ಡೆಲಿವರಿ, ಪೂಜಾ ಗಾಂಧಿ ಅವರ ಮುಗ್ಧ ನಟನೆ, ದೇವದಾಸ್ ಎಂಬ ಫಸ್ಟ್ ಹಿರೋನ ಆಟಾಟೋಪ ಎಲ್ಲವೂ ನಯ ನಾಜೋಕಾಗಿತ್ತು. ಮುಂಗಾರಿನ ನಾಯಕ ನಾಯಕಿಯನ್ನು ಹೊರತುಪಡಿಸಿದರೆ, ಬಹುತೇಕ ಮುಂಗಾರುವಿನ ಇಡೀ ಟೀಮಿಗೆ ಟೀಮೆ ಪಂಚರಂಗಿಯಲ್ಲಿ ಕೆಲಸ ಮಾಡಿದೆ.

  ಆದರೆ, ಈ ಚಿತ್ರದ ವೀಕ್ನೇಸ್ಸೇ ಕತೆ. ಚಿತ್ರದಲ್ಲಿ ಯಾವುದೂ ಕೂಡಾ ಮನಸ್ಸಿನಲ್ಲಿ ಉಳಿಯುವಂತ ಸರಕಿಲ್ಲ. ಕೆಲ ಸನ್ನಿವೇಶಗಳು ಜೀವನಕ್ಕೆ ತುಂಬಾ ಹತ್ತಿರವಾಗುವಂತೆ, ಪ್ರಸ್ತುತ ದಿನಮಾನಕ್ಕೆ ಸೂಕ್ತ ಅನಿಸುತ್ತವೆ. ಆ ಸನ್ನಿವೇಶಕ್ಕೆ ಮಾತ್ರ ಭಟ್ರ ಕುಸರಿಗೆ ಚಿತ್ರಮಂದಿರದಲ್ಲಿ ಕೇಕೆ ಬೀಳುತ್ತವೆ. ಹಾಡುಗಳು ನಾಲ್ಕೆ ದಿನಕ್ಕೆ ಮಂಗಮಾಯ. ಸಂಭಾಷಣೆ, ಸಂಗೀತ ಕೂಡಾ ಹೇಳಿಕೊಳ್ಳುವಂತಿಲ್ಲ. ಸುಧಾ ಬೆಳವಾಡಿ, ಪದ್ಮಜಾ ರಾವ್, ಅನಂತನಾಗ್ ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ. ಅವರಿಂದ ಇನ್ನೊಂದಿಷ್ಟು ಕಲೆಯನ್ನು ಹೆಕ್ಕಬಹುದಿತ್ತು ಅನ್ನಿಸುವುದು ಸಹಜ.

  ಆ ಸಮಯಕ್ಕೆ ಮಾಡಲು ಎನೂ ಕೆಲಸ ಇಲ್ಲದವರು. ಹೇಗಾದರೂ ಇರಲಿ ಒಟ್ಟಿನಲ್ಲಿ ಸಿನಿಮಾ ನೋಡಬೇಕು ಎನ್ನುವ ಚಟವಿದ್ದರೆ(ಚಟವಿದ್ದವರು) ರೊಕ್ಕ ಕೊಟ್ಟ ಸಿನಿಮಾ ನೋಡಲಿಕ್ಕೆ ಅಡ್ಡಿಯಿಲ್ಲ. ಚಿತ್ರ ಬಿಡುಗಡೆಯಾಗಿ ಮೂರನೇ ವಾರಕ್ಕೆ ಕಾಲಿಟ್ಟಿದೆ. ಹಾಕಿದ ರೊಕ್ಕಕ್ಕೆ ಪಂಚರಂಗಿ ಡಬಲ್ ದುಡಿಮೆ ಮಾಡಿದೆ ಎನ್ನುವುದು ಭಟ್ ರಿಗೆ ಮೇಲಾಗಿ ಚಿತ್ರರಂಗದ ಮಟ್ಟಿಗೆ ಖುಷಿಯ ಸಂಗತಿ.

  ಕನ್ನಡ ಚಿತ್ರರಂಗದ ಪ್ರಸ್ತುತ ಖ್ಯಾತ ನಿರ್ದೇಶಕರಲ್ಲಿ ಯೋಗರಾಜ್ ಭಟ್, ದುನಿಯಾ ಸೂರಿ ಹಾಗೂ ಮೊಗ್ಗಿನ ಮನಸ್ಸಿನ ಶಶಾಂಕ್ ಹಾಗೂ ಮಠದ ಗುರುಪ್ರಸಾದ್. ಈ ಎಲ್ಲರೂ ಅಮೀರ್ ಖಾನ್ ಅವರ ಗರಡಿಯಲ್ಲಿ ಹೊರಬರುತ್ತಿರುವ ಚಿತ್ರಗಳ ಕಡೆಗೊಮ್ಮೆ ಕಣ್ಣು ಹಾಯಿಸಿಲಿ. ಇನ್ನೊಂದು, ಇಲ್ಲಿ ಅವಶ್ಯಕತೆ ಇಲ್ಲದಿದ್ದರೂ ಗುರುಪ್ರಸಾದ್ ಅವರ ಹೆಸರು ಎಳೆದು ತಂದಿದ್ದೇನೆ. ಇವರಲ್ಲಿ ಸಾಕಷ್ಟು ಪ್ರತಿಭೆ ಇದೆ. ಅದು ಬೆಳ್ಳಿ ತೆರೆಯ ಮೇಲೆ ಬರಲಿ. ಕಮರ್ಷಿಯಲ್ ಹಿರೋನನ್ನು ಹಾಕಿಕೊಂಡು ವಿಭಿನ್ನ ರೀತಿಯ ಚಿತ್ರ ಅವರ ಗರಡಿಯಿಂದ ಬರಲಿ ಎನ್ನುವುದು ಕನ್ನಡ ಚಿತ್ರ ಅಭಿಮಾನಿಗಳ ಆಶಯವಾಗಿದೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X