»   » ವಿಮರ್ಶೆ: ಸ್ವಯಂವರ ಒಂದು ಫ್ಯಾಮಿಲಿ ಪ್ಯಾಕೇಜ್

ವಿಮರ್ಶೆ: ಸ್ವಯಂವರ ಒಂದು ಫ್ಯಾಮಿಲಿ ಪ್ಯಾಕೇಜ್

By: *ವಿನಾಯಕರಾಮ್ ಕಲಗಾರು
Subscribe to Filmibeat Kannada

ಕತೆ ಹಳ್ಳಿಯಿಂದ ಓಪನ್ ಆಗುತ್ತದೆ. ಹುಡುಗನೊಬ್ಬ ಅಲ್ಲಿ ಒಂದಷ್ಟು ತರಲೆ ಮಾಡಿಕೊಂಡು, ಊರು ಬಿಡುತ್ತಾನೆ. ಪೇಟೆಗೆ ಬಂದು ಸೆಟಲ್ ಆಗುವ ಹೊತ್ತಿಗೆ ಬಟ್ಟಲು ಕಣ್ಣಿನ ಹುಡುಗಿ ಸಿಗುತ್ತಾಳೆ. ಅಲ್ಲಿ ಲವ್ ಆಗಿ, ಎಲ್ಲ ಓಕೆ ಆಗಿ, ಇನ್ನೇನು ಮದುವೆ ಯಾಗಬೇಕು; ಅವನ ಗ್ರಹ ಮಂಡಲಕ್ಕೆ ಶನಿ ಮಹಾರಾಜ್ ಎಂಟ್ರಿ ಕೊಡುತ್ತಾನೆ. ಈತನ ರೂಮಿಗೆ ಇನ್ನೊಬ್ಬ ಬಂದು ಸೇರಿಕೊಳ್ಳುತ್ತಾನೆ. ಅಲ್ಲಿಂದ ಶುರು ಹಗ್ಗಜಗ್ಗಾಟ, ಜಟಾಪಟಿ, ಕಿತ್ತಾಟ, ಕೂಗಾಟ, ಶಂಭೋ ಶಂಕರ ಹರಹರ ಸ್ವಯಂವರ'...

ಕಿಟ್ಟಿಯದ್ದು ಎಂದಿನಂತೆ ಸೊಗಸು ನಟನೆ. ದಿಗಂತ್ ದಿಢೀರ್ ಅಂತ ಬದಲಾದಂತೆ ಭಾಸವಾಗುತ್ತದೆ. ಫ್ರೆಂಚ್ ಗಡ್ಡ ಅಡ್ಡ ಬರುವುದರಿಂದ ಹಾಗೆನಿಸಿದರೆ ಆಶ್ಚರ್ಯವಿಲ್ಲ. ಶರ್ಮಿಳಾ ಮಾಂಡ್ರೆ ಹಿಂದಿನ ಸಿನಿಮಾಗಳಿಗಿಂತ ಮುದ್ದಾಗಿ ಕಾಣುತ್ತಾರೆ. ಅದೇಕೋ ಆ ಹೈಟಿಗೆ ಆ ತೂಕ, ರೂಪ, ರಸ, ಗಂಧ ಯಾವುದೂ ಸರಿಹೋಗುತ್ತಿರಲಿಲ್ಲ. ಇಲ್ಲಿ ಹಾಗಾಗಿಲ್ಲ. ಕ್ಯಾಮೆರಾಮನ್ ವೇಣು ಹಾಗೆ ತೋರಿಸಿದ್ದಾರೆ ಎಂದರೆ ತಪ್ಪಾಗಲಾರದು.

ತೆರೆದ ಕಣ್ಣಿಗೇ ಕನಸಿನ ಲೋಕ ತೋರಿಸುತ್ತಾರೆ ವೇಣು. ಮಣಿಕಾಂತ್ ಕದ್ರಿ ಸಂಗೀತದಲ್ಲಿ ಕೊನೆಯ ಟಪ್ಪಾಂಗೊಚ್ಚಿ ಸಾಂಗ್ ಮಸ್ತಾಗಿದೆ. ಸಂಭಾಷಣೆಯೇ ಚಿತ್ರದ ಜೀವಾಳ. ಜನ ಮೊದಲಾರ್ಧವನ್ನು ಬಿದ್ದು ಬಿದ್ದು ಎಂಜಾಯ್ ಮಾಡುತ್ತಾರೆ. ರಂಗಾಯಣ ರಘು ಮೊದಲಿನಂತೆ ಸಿಪ್ಪೆ
ಸುಲಿಯದೇ ಬಾಳೆ ಹಣ್ಣು ನುಂಗಿದಂತೆ ನಟಿಸಿದ್ದಾರೆ.

ಲಕ್ಷ್ಮಿದೇವಿ, ಟೆನ್ನಿಸ್ ಕೃಷ್ಣ, ಉಮೇಶ್ ಕಾಮಿಡಿ ಊಟಕ್ಕಿರುವ ಉಪ್ಪು ಹಾಗೂ ಉಪ್ಪಿನ ಕಾಯಿಯಂತಿದೆ. ಸುಧಾ ಬೆಳವಾಡಿ, ರಮೇಶ್ ಭಟ್ ಮೊದಲಾದವರದ್ದು ಮಾಮೂಲಿ ನಟನೆ. ಒಟ್ಟಾರೆ ಇಡೀ ಚಿತ್ರ ಒಮ್ಮೆ ನೋಡಲು ಮೋಸವಿಲ್ಲ. ದಿಗಂತ್ ಎಂಟ್ರಿ ನಂತರ ಸಲೀಸಾಗಿ ನೋಡಿಸಿಕೊಂಡು ಹೋಗುತ್ತದೆ. ನಿರ್ದೇಶಕ ಅನಂತರಾಜು ಸಂಭಾಷಣೆ ಹಾಗೂ ದೃಶ್ಯಜೋಡಣೆಗೆ ಕೊಟ್ಟಿರುವ ಮಹತ್ವ ವನ್ನು ಚಿತ್ರಕತೆಗೂ ಕೊಡಬಹುದಿತ್ತು. ಅದೇನೇ ಇರಲಿ, ಸ್ವಯಂವರ ಒಂದು ಫ್ಯಾಮಿಲಿ ಪ್ಯಾಕೇಜ್. ಇಲ್ಲಿ ಎಲ್ಲ ಇದೆ. ಕಾಮಿಡಿ, ಸೆಂಟಿಮೆಂಟ್, ಫೈಟಿಂಗ್, ತ್ರಿಕೋನ ಪ್ರೇಮ... ನೋಡುತ್ತಾ ನೋಡುತ್ತ ಪ್ರೇಕ್ಷಕರು ಒಂದಷ್ಟು ಎಂಜಾಯ್ ಮಾಡುವ ಅಂಶಗಳು ಇಲ್ಲಿವೆ...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada