»   » ಆಶ್ಚರ್ಯ ಹುಟ್ಟಿಸುವ ಆತ್ಮಕಥೆ, ಅಂತರಾತ್ಮ

ಆಶ್ಚರ್ಯ ಹುಟ್ಟಿಸುವ ಆತ್ಮಕಥೆ, ಅಂತರಾತ್ಮ

Posted By: *ದೇವಶೆಟ್ಟಿ ಮಹೇಶ್
Subscribe to Filmibeat Kannada

ದೆವ್ವ ಬಿಡಿಸುವ, ಭೂತ ಓಡಿಸುವ, ಹುಚ್ಚು ಹಿಡಿಸುವ, ಕಚ್ಚಿ ಹರಿಸುವ ಚಿತ್ರಗಳು ನಮ್ಮಲ್ಲಿ ಅದೆಷ್ಟೋ ಬಂದಿವೆ. ಹೀಗಿದ್ದೂ ಅವು ಯಾಕೋ ಗೆಲ್ಲುವುದಿಲ್ಲ. ಕಾರಣ ಇವತ್ತಿಗೂ ನಿಗೂಢ. ಅದೇ ನಿರೀಕ್ಷೆಯಲ್ಲಿ ನೀವು ಅಂತರಾತ್ಮ ಚಿತ್ರಕ್ಕೆ ಹೋದರೆ ಖಂಡಿತ ಆಶ್ಚರ್ಯ ಕಾದಿದೆ. ಇಡೀ ಚಿತ್ರ ಲವಲವಿಕೆಯಿಂದ ಕೂಡಿದೆ.

ನಾವು ಜೀವರಹಿತವಾದ ಮೇಲೆ ಅಂತರಾತ್ಮವಾಗಿ ಭೂಮಿ ಮೇಲೆ ಓಡಾಡುತ್ತೇವೆ ಎಂಬ ಕಾಲ್ಪನಿಕ ಕತೆಗೆ ಸಿನಿಮಾ ರೂಪ ಕೊಟ್ಟಿದ್ದಾರೆ ನಿರ್ದೇಶಕ ಶಂಕರ್. ಆದರೆ, ಸಿನಿಮಾ ನೋಡಿ ಹೊರಬಂದ ನಮಗೆ ಅದು ಕೇವಲ ಕಲ್ಪನೆಯಾ? ಎಂಬ ಪ್ರಶ್ನಾಭೂತ ನಮ್ಮನ್ನು ಹಿಂಬಾಲಿಸತೊಡಗುತ್ತದೆ! ಆ ಮಟ್ಟಿಗೆ ನಿರ್ದೇಶಕರು ಗೆದ್ದಿದ್ದಾರೆ. ದೃಶ್ಯ ಜೋಡಣೆ, ಅದರ ನಿರೂಪಣೆ ಮತ್ತು ವಿಶ್ಲೇಷಣೆ ಎಲ್ಲವೂ ಚೆನ್ನಾಗಿದೆ. ಕೊನೆ ತನಕ ಅದು ಓಡಿಸಿಕೊಂಡು ಹೋಗುತ್ತದೆ.

ಅಲ್ಲಲ್ಲಿ ಕುತೂಹಲದ ಕೋಲಾಹಲ ಏಳುತ್ತದೆ. ಅಂತರಾತ್ಮದ ಪ್ರತಿನಿಧಿಯಾಗಿ ಮಿಥುನ್ ಕಷ್ಟಪಟ್ಟು ನಟಿಸಿದ್ದಾರೆ. ನಾಯಕಿ ವಿಶಾಖ ಸಿಂಗ್ ಅಭಿನಯಕ್ಕೆ ಮೋಸ ಮಾಡಿಲ್ಲ. ಆಕೆ ಗ್ಲ್ಯಾಮರಸ್ ಅಲ್ಲದಿದ್ದರೂ ಲಕ್ಷಣವಾಗಿ ಕಾಣುತ್ತಾರೆ. ವಿಲನ್ ಕಮ್ ಎರಡನೇ ನಾಯಕ ರೋಹನ್ ಗೌಡ ಇನ್ನಷ್ಟು ಚೆನ್ನಾಗಿ ಪಾತ್ರಪೋಷಣೆ ಮಾಡಬಹುದಿತ್ತು. ಇಡೀ ಚಿತ್ರದ ಮುಖ್ಯಪ್ರಾಣ ನಟಿ ಉಮಾಶ್ರೀ. ಮೈಮೇಲೆ ದೆವ್ವ ಬಂದಂತೆ ಆಡುತ್ತಿದ್ದರೆ ಒಮ್ಮೆ ಮೈ ಜುಂ ಎನ್ನುತ್ತದೆ. ಹಾಸ್ಯ ಮಾಡುವಾಗ ನಗೆಮಲ್ಲಿಗೆ ಅರಳುತ್ತದೆ. ತಮ್ಮ ಕೆಲಸಕ್ಕೆ ಎಲ್ಲಿಯೂ ಚ್ಯುತಿ ಬಾರದಂತೆ ನೋಡಿಕೊಂಡಿದ್ದಾರೆ

ಸಂಕಲನಕಾರ ಶ್ರೀ. ಚಿತ್ರಕತೆಯಲ್ಲಿ ಇನ್ನಷ್ಟು ಚುರುಕು ಬೇಕಿತ್ತು. ಗಿರಿಧರ್ ದೀವಾನ್ ಸಂಗೀತದಲ್ಲಿ ಹಿಂದಿ ಚಿತ್ರದ ಟ್ಯೂನ್‌ಗಳ ಗಾಳಿ ಬೀಸುತ್ತದೆ. ಒಟ್ಟು ಕತೆಯನ್ನು ಹೇಳುವಾಗ ನಿರ್ದೇಶಕರು ಕೆಲವೆಡೆ ಗೊಂದಲ ಮೂಡಿಸುತ್ತಾರೆ. ಅಲ್ಲಲ್ಲಿ 'ಬೋರ್'ವೆಲ್ ತೋಡಿದ ಶಬ್ದ ಕೇಳುತ್ತದೆ!

ಒಟ್ಟಾರೆ ಚಿತ್ರ ಚೆನ್ನಾಗಿದೆ. ಇನ್ನೂ ಚೆನ್ನಾಗಿದ್ದರೆ ಚೆನ್ನಾಗಿರುತ್ತಿತ್ತು ಎನ್ನುವುದು ವಿಮರ್ಶೆ ಎಂಬ ನಾಣ್ಯದ ಇನ್ನೊಂದು ಮುಖ. ಇದು ಕಂಡಾಗ ಅದು ಕಾಣುವುದಿಲ್ಲ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada