»   »  ತಾಕತ್ ಚಿತ್ರವಿಮರ್ಶೆ: ಇನ್ನಷ್ಟು ಬೇಕಿತ್ತು ಗಮ್ಮತ್ತು!

ತಾಕತ್ ಚಿತ್ರವಿಮರ್ಶೆ: ಇನ್ನಷ್ಟು ಬೇಕಿತ್ತು ಗಮ್ಮತ್ತು!

Subscribe to Filmibeat Kannada
ದುನಿಯಾ ವಿಜಯ್ ಹಗ್ಗ ಜಗ್ಗಾಟ, ಕಿತ್ತಾಟ, ಕಾದಾಟ, ಅಲ್ಲಲ್ಲಿ ತುಂಟಾಟ, ಮತ್ತೆ ತೆಗೆದು ತೋರಿಸುವ ಮೈ-ಮಾಟ ಇನ್ನೂ ಬಿಟ್ಟಿಲ್ಲ. ಆದರೆ ಪ್ರೇಕ್ಷಕ ಇನ್ ಸಂಕಟ!ನಿಜ, ಇಲ್ಲಿ ವಿಜಿ ಅದೇ 'ಜಂಗ್ಲಿ" ಶಿವಲಿಂಗು, ಏನಿದು ಫೈಟಿಂಗು...ಭುಜದಲ್ಲಿ ಭಲೇ ತಾಕತ್ ಇದೆ, ಎದೆಯಲ್ಲಿ ಎನರ್ಜಿಯಿದೆ. ತೊಲೆಯನ್ನೇ ಹೋಲುವ ತೋಳಿದೆ, ಹಾಡಿದೆ, ಪಾಡಿದೆ, ಆದರೆ ಅದೇ ಈಗ ಬೇಸರ ತಂದಿದೆ!

*ವಿನಾಯಕರಾಮ್ ಕಲಗಾರು

ತಾಕತ್ ಒಂದು ಹಳ್ಳಿಯಲ್ಲಿ ನಡೆಯುವ ಕತೆ. ಒಬ್ಬ ಹುಡುಗಿ, ಕಾಲೇಜು ಬೆಡಗಿ. ನಾಯಕ ಬಸ್ ಕ್ಲೀನರ್ ಬಸ್ಯಾ. ಇಬ್ಬರ ನಡುವೆ ವಿರಹ, ನೂರು ಇನ್ನೂರು ಮುನ್ನೂರು, ಸಾವಿರ ಸಾವಿರ, ಲಕ್ಷ ಲಕ್ಷ ತರಹ... ಮತ್ತೇನಿದೆ ವಿಷ್ಯಾ? ಏನೂ ಇಲ್ಲಾ ಅಂದ ನಮ್ ಮಾದೇಶ್ವರಾ... ಮೊದಲಾರ್ಧ ಕುರ್ಲಾ ಎಕ್ಸ್‌ಪ್ರೆಸ್. ನೋಡಿದ್ದೇ ಗೊತ್ತಾಗುವುದಿಲ್ಲ. ಆದರೆ ದ್ವಿತಿಯಾರ್ಧ ಗೊತ್ತಾಗಿದ್ದರೂ ನೋಡಬೇಕೆನಿಸುವುದಿಲ್ಲ. ಆಗ ನಿದಿರೆ ಬರದಿರೇ ಏನಂತೀ ಎನ್ನುವಷ್ಟರಲ್ಲಿ ಲವ್ವೋ ಲವ್ವೋ ಲವ್ವೋ ಎನ್ನುತ್ತಾರೆ ನಾಯಕ/ನಾಯಕಿ...

ಸಂಭಾಷಣೆಯಲ್ಲಿ ರಮೇಶ್ ದುಬಾಯ್‌ನಲ್ಲಿರುವ ಶೇಖ್ ಇದ್ದಹಾಗೆ, ನಿಜ. ಆದರೆ ಚಿತ್ರಕತೆ ಹೆಣೆಯುವಾಗ ಹಣ್ಣೆಲೆ ಚಿಗುರಿದಾಗ. ಹಿಂದೆ ಎರಡು ಚಿತ್ರಗಳಲ್ಲಿ ಏನು ತಪ್ಪು ಮಾಡಿದ್ದರೊ, ಅದರ ಮುಂದುವರಿದ ಭಾಗ ತಾಕತ್ ಎಂದರೆ ತಪ್ಪು ತಪ್ಪು... ಅಲ್ಲಿ ಇದ್ದ ಕೆಲ ಮಿಸ್ಟೇಕ್‌ಗಳ ತುಣುಕುಗಳು ಇಲ್ಲಿ ಎದ್ದುಕಾಣುತ್ತವೆ. ಅದ್ಧೂರಿತನ, ಹೊಡೆದಾಟದ ಹಾದಿ, ಅಲ್ಲಲ್ಲಿ ಗುರುಕಿರಣ್ ಸಂಗೀತ, ಅದಕ್ಕೆ ತಕ್ಕ ತಕಮಿತ ಎಲ್ಲಾ ಇದೆ. ಆದರೆ ಜನಸಾಮಾನ್ಯರ ನಾಡಿ ಮಿಡಿತಕ್ಕೆ ಹೊಂದುವ ಅಂಶಗಳು ಕಡಿಮೆ ಇವೆ.

ಜನಕ್ಕೆ ನಾಯಕ ಎದುರಾಳಿಗಳನ್ನು ಹಿಗ್ಗಾಮಗ್ಗಾ ಥಳಿಸುವ ದೃಶ್ಯ ಹೊಸತೇನಲ್ಲ. ಚಿತ್ರರಂಗ ಅಂಬೆಗಾಲಿಡುವ ಕಾಲತ್ತಿಲ್ಲೈ ಅದನ್ನೇ ಮಾಡಿಕೊಂಡು ಬಂದಿದೆ. ಅದರ ಬದಲು ಕತೆ-ನಿರೂಪಣೆಯಲ್ಲಿ ಇನ್ನಷ್ಟು, ಮತ್ತಷ್ಟು, ಮತ್ತೊಂದಿಷ್ಟು ಬದಲಾವಣೆ ಮಾಡಿಕೊಳ್ಳಬೇಕು, ಆಗ ಮಾತ್ರ ತಾಕತ್‌ಗೆ ಮಗದಷ್ಟು ಕಿಮ್ಮತ್- ಗಮ್ಮತ್ ಬರುತ್ತಿತ್ತು.

ಇಲ್ಲಿ ಇರುವುದು ಕೇವಲ ವಿಜಿ ಬಾಡಿ ದೌಲತ್, ನಿರ್ಮಾಪಕರ ಖರ್ಚಿನ ಸೌಲತ್... ಆದರೆ ಸಿನಿಮಾ ಕಿಸ್ಮತ್ ಏನು? ಜರೂರತ್ ಇದ್ರೆ ನೋಡಿ ತಾಕತ್ ಹಕೀಕತ್... ವಿಜಿ ಬಗ್ಗೆ ಎರಡು,ಮೂರು, ನಾಲ್ಕು ಮಾತಿಲ್ಲ. ಬಾಡಿಗೆ ತಕ್ಕ ನಾಡಿ, ನಾಡಿಗೆ ತಕ್ಕಂತೆ ಮಾಡಿ, ಮೈ ನಡುಗಿಸುವಂತೆ ಗುದ್ದಾಡಿದ್ದಾರೆ ವಿಜಿ. ನಟನೆ ಹಾಗೂ ಹಾವಭಾವದಲ್ಲೂ ಅಷ್ಟೇ, ಈ ಪಾಪಿ ದುನಿಯಾ...ಶುಭಾ ಫೂಂಜಾ ಗೊಂಬೆ ಗೊಂಬೆ ಗೊಂಬೆ... ನೀ ಕರ್ಪೂರದ, ವಯ್ಯಾರದ, ಗ್ಲ್ಯಾಮರ್ ಬೊಂಬೆ. ಇಬ್ಬರು ಸೇರಿ ಕುಣಿಯನಿಂತರೆ ಕಪ್ಪು ಬಿಳುಪು ನೇರ ಪ್ರಸಾರ!

ಛಾಯಾಗ್ರಹಣ ಹೊಡೆದಾಟದ ದೃಶ್ಯಗಳನ್ನೇ ಹೆಚ್ಚು ವೈಭವೀಕರಿಸಿದೆ. ನೃತ್ಯ ಸಂಜೋಜನೆಯಲ್ಲಿ ಹೊಸ ಯೋಚನೆಯಿದೆ. ಸಂಗೀತದಲ್ಲಿ ಎರಡು ಹಾಡುಗಳಲ್ಲಿ ತಾಕತ್ ಕಾಣುತ್ತದೆ. ಉಳಿದದ್ದು ಬರ್ಕತ್ತಿಲಾಖಾನ್... ರಂಗಾಯಣ ರಘು ಥಳುಕ್ಕು ಬಳುಕಿನ ಹಾಳೂರಲ್ಲಿ ಉಳೀದೋನೆ ಹಳ್ಳಿ ಗೌಡ. ಗೌಡರ ಪಾತ್ರಕ್ಕೆ ನ್ಯಾಯ, ಜೀವ ತುಂಬಿದ್ದಾರೆ. ಇಲ್ಲಿ ಖಂಡಿತ ಅತಿಯಾಟ, ತುಂಟಾಟ, ಕಿರುಚಾಟ ಮಾಡಿಲ್ಲ. ನಂದ ಸುರ್ ಕುಡುಕನಾಗಿ ಖಡಕ್ ನಟನೆ ತೋರಿದ್ದಾರೆ. ಅವಿನಾಶ್ ಆಡುವ ಕಂಗ್ಲಿಷ್ ಆಗಾಗ ಕಚಕುಳಿಯಿಡುತ್ತದೆ. ಬಸ್ ಕಂಡಕ್ಟರ್ ಪಾತ್ರ ಸಂಕೇತ್ ಕಾಶಿಗೆ ಸರಿಯಾಗಿ ಹೊಂದುತ್ತದೆ. ಸಂಭಾಷಣೆ ವಿಭಾಗದಲ್ಲಿ ರಮೇಶ್ ಮತ್ತೆ ಗೆದ್ದಿದ್ದಾರೆ.

ಶೋಭರಾಜ್ ಪಾತ್ರ ಈಗಿನ ಶೋಭಾಯಮಾನ ಬಿಜೆಪಿ ಸರಕಾರದ ಥರ, ಫುಲ್ ಶೈನಿಂಗೋ ಶೈನಿಂಗು, ಏನಿದು ಮಿಂಚಿಂಗು? ಒಟ್ಟಾರೆ ತಾಕತ್‌ನಲ್ಲಿ ಒಂದಿಷ್ಟು ವಿಜಿ ಹಾಗೂ ಅವರನ್ನೇ ಹೋಲುವ ಕೆಲ ಅಭಿಮಾನಿಗಳಿಗೆ ತಾಕತ್ತಿನ ಅಭಿಷೇಕವಿದೆ. ಆದರೆ ರಮೇಶ್ ಹಾಗೂ ವಿಜಿ ವಿಜಯಕ್ಕೆ ಇನ್ನೊಂದಿಷ್ಟು ಮೆಟ್ಟಿಲು ಹತ್ತಬೇಕಿತ್ತು, ಇದೆ ಕೂಡ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada