»   » ಮಿ.ತೀರ್ಥ :ತಿರುಪತಿಗೇ ಲಡ್ಡು,ಅತಿರೇಕದ ಫುಡ್ಡು

ಮಿ.ತೀರ್ಥ :ತಿರುಪತಿಗೇ ಲಡ್ಡು,ಅತಿರೇಕದ ಫುಡ್ಡು

Posted By: * ವಿನಾಯಕ ರಾಮ್
Subscribe to Filmibeat Kannada

ಅಪ್ಪ ಗಣಿತದ ಮೇಷ್ಟ್ರು. ಮಗ ಬೀದಿ ಸುತ್ತೋ ಕಾಮಣ್ಣ. ಅಪ್ಪಲೆಕ್ಕಾಚಾರದಲ್ಲಿ ತುಂಬಾ ಕಟ್ಟು ನಿಟ್ಟು. ಮಗ ಲೆಕ್ಕಕ್ಕೂ ಇಲ್ಲ ಜಮ ಕ್ಕೂ ಇಲ್ಲ. ಅಪ್ಪನಿಗೆ ಮಗ ಗಣೀತ ಕಲಿಯಬೇಕೆಂಬ ಆಸೆ. ಮಗನಿಗೆಮೆಕ್ಯಾನಿಕ್ ಆಗೋ ಕನಸು.

ಅಪ್ಪ ಪ್ರಸಾದ ಆದರೆ, ಮಗ 'ತೀರ್ಥ'. ಆತ ಘನ, ಈತ ದ್ರವ. ಮಗ ಮಾತು ಕೇಳುತ್ತಿಲ್ಲ ಎಂದು ಅಪ್ಪಅವನನ್ನು ಜರಿಯುತ್ತಾನೆ. ಮಗ ಬದುಕಿದ್ದಾಗಲೇ ಮಗನ ಹೆಸರಲ್ಲಿ ಕಲ್ಲು ನಿಲ್ಲಿಸಿ, ಪಿಂಡ ಬಿಡುತ್ತಾನೆ!

ಮಗ ಮನೆಯಿಂದ ದೂರವಾಗುತ್ತಾನೆ. ಅಲ್ಲಿಂದ ತೀರ್ಥವೇ ಪ್ರಸಾದವಾಗಿ ಪರಿವರ್ತನೆಗೊಳ್ಳುತ್ತದೆ. ಪರದೆಯ ಮುಂದೆ ಪರದಾಡುತ್ತಾ ಕೂತಿರುವ ಪ್ರೇಕ್ಷಕ 'ಮಹಾ ಮಂಗಳಾರತಿ' ಎತ್ತಲು ಶುರು ಮಾಡುತ್ತಾನೆ. ತೀರ್ಥ ಡಬ್ಬದಲ್ಲೇ ಕೂತು ತುಂಬಾ ದಿನ ಅಲ್ಲಲ್ಲ... ತುಂಬಾ ವರ್ಷಗಳ ನಂತರ ತೆರೆ ಕಂಡಿರುವುದಕ್ಕೆ ಹೀಗೆಲ್ಲಾ ಆಗಿದೆಯೋ ಗೊತ್ತಿಲ್ಲ.

ಸುದೀಪ್ ಚೆನ್ನಾಗಿ ಮಾಡಿದ್ದಾರೆ. ಚಿತ್ರದುದ್ದಕ್ಕೂ ಮಸ್ತ್ ಆಗಿ ಕಾಣುತ್ತಾರೆ. ನಾಯಕಿ ಸೋನಾಲಿ ಮುದ್ದಾಗಿದ್ದಾರೆ. ಕುಣಿಯೋದೇ ನನ್ನ ಬಿಜಿನೆಸ್ಸು ಎನ್ನುತ್ತಾರೆ. ಸಾಧುಕೋಕಿಲಾ ದುನಿಯಾ ಚಿತ್ರದ ಶಿವಲಿಂಗು ಪಾತ್ರವನ್ನು ಅನುಕರಿಸಲು ಹೋಗಿ, ಪ್ರೇಕ್ಷಕರ ಮೇಲಿದ್ದ ಹಗೆ ತೀರಿಸಿ ಕೊಂಡಂತಿದೆ. ಹಾಸ್ಯ ಸನ್ನಿವೇಶಕ್ಕೂ ಪಾತ್ರಕ್ಕೂ ಸಂಬಂಧ ಲೇದು.

ಅನಂತನಾಗ್ ನಟನೆಯ ಬಗ್ಗೆ ಹೇಳಲೇಬೇಕು. ಇತ್ತೀಚೆಗೆ ಅವರಿಂದ ಈ ಮಟ್ಟದ ಅಭಿನಯ ತೆಗೆಸಿದ್ದು ಸಾಧು ಮಾತ್ರ. ಅವಿನಾಶ್, ನೀನಾಸಂ ಅಶ್ವತ್ಥ್, ಯತಿರಾಜ್ ಮೊದಲಾದವರನ್ನು ಬಳಸಿಕೊಂಡ ರೀತಿಯಲ್ಲಿ ಮಲಯಾಳಂನ ಸ್ಫಟಿಕಂ ಚಿತ್ರದ ಕತೆಯ ಎಳೆಯನ್ನು ಬಳಸಿಕೊಂಡಿಲ್ಲ. ಇನ್ನೂ ಚೆನ್ನಾಗಿ ಮಾಡಬಹುದಿತ್ತು.

ತೀರ್ಥವನ್ನು ಆ ಪೂಜಾರಿ ಕೊಟ್ಟರೂ ಈ ಪೂಜಾರಿಗೆ ಹಂಚಲು ಬಂದಿಲ್ಲ ಎನ್ನಬಹುದು! ಗುರುಕಿರಣ್ ಹಾಡುಗಳನ್ನು ಕೇಳುವುದಕ್ಕಿಂತ ತೆರೆಯ ಮೇಲಿನ ದೃಶ್ಯಗಳನ್ನು ಕಣ್ತುಂಬಾ ನೋಡಬಹುದು.

'ತೀರ್ಥ'ರೂಪರೆಲ್ಲ ನೆನಪಾಗುತ್ತಾರೆ. ನೆನಪು ಕಹಿಯಾಗಿ, ಕಹಿಯು ಬೇವಾಗಿ, ಬೇವು ಕಾವಾಗಿ ಮೂರ್ತ ರೂಪ ತೀರ್ಥದಲ್ಲಿ ಲೀನವಾಗುತ್ತದೆ. ಮನಸ್ಸು ಹಗುರವಾಗಿ, ಹೃದಯ ಭಾರವಾಗುತ್ತದೆ. ಅಲ್ಲಿಗೆ ಆ ಕತೆ ಮುಗಿಯುತ್ತದೆ...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada