»   »  ಚಿತ್ರ ವಿಮರ್ಶೆ: ಲೂಸ್ ಕಥೆಯುಳ್ಳ ಪ್ರೀತ್ಸೆ ಪ್ರೀತ್ಸೆ

ಚಿತ್ರ ವಿಮರ್ಶೆ: ಲೂಸ್ ಕಥೆಯುಳ್ಳ ಪ್ರೀತ್ಸೆ ಪ್ರೀತ್ಸೆ

By: * ಮಹೇಶ್ ದೇವಶೆಟ್ಟಿ , ವಿನಾಯಕರಾಮ್ ಕಲಗಾರು
Subscribe to Filmibeat Kannada

ಚಿತ್ರ: ಪ್ರೀತ್ಸೆ ಪ್ರೀತ್ಸೆ.
ನಿರ್ದೇಶನ: ಮಾದೇಶ್.
ಸಂಗೀತ: ಅನೂಪ್ ಸಿಳಿನ್.
ಛಾಯಾಗ್ರಹಣ: ವೀನಸ್ ಮೂರ್ತಿ.
ತಾರಾಗಣ: ಯೋಗೀಶ್, ಉದಯತಾರಾ, ಪ್ರಜ್ಞಾ, ಜೈಜಗದೀಶ್, ಸಂಗೀತ, ರಂಗಾಯಣ ರಘು, ಪಿ.ಎನ್. ಸತ್ಯಾ ಮುಂತಾದವರು.

ಹಳೇ ಕತೆ ಬೇಕಾಗಿಲ್ಲ, ಹೊಸ ಕತೆ ಹುಟ್ಟಾಕೋಹಾಗಿಲ್ಲ. ಆ ಕತೆಗೂ ಈ ಕತೆಗೂ ಸಂಬಂಧ ಇಲ್ಲ... ಹೀಗೆ ಹೇಳುತ್ತಾ ಹೇಳುತ್ತಾ ನಾಯಕ ಪ್ರೇಕ್ಷಕರ ದಿಕ್ಕು ತಪ್ಪಿಸುತ್ತಾನೆ. ಈ ಡೈಲಾಗ್ ಬರುವುದು ಮೊದಲಾರ್ಧದ ನಂತರ. ಏನಿದು ಲಿಂಕ್ ತಪ್ಪುತ್ತಿದೆಯಲ್ಲಾ ಎಂದು ಎದುರಿಗಿದ್ದವರು ಹಣೆಗೆ ಕೈಯಿಂದ ಮುತ್ತಿಡುವ ಹೊತ್ತಿಗೆ ಇನ್ನೊಂದು, ಮತ್ತೊಂದು ಹಾಡು... ಹಾಡು, ಹಾಡಿಗೆ ತಕ್ಕ ನೃತ್ಯ ನೋಡು, ನೋಡು ನೋಡು ಕಣ್ಣಾರ ನಿಂತಿಹನು, ನಮ್ಮ ಲೂಸ್ ಮಾದ ನಿಂತಲ್ಲೇ ನಲಿಯುತಿಹನು.

ನಿರ್ದೇಶಕ ಗಜ' ಮಾದೇಶ್ ಇಲ್ಲಿ ಏನು ಹೇಳುತ್ತಿದ್ದಾರೆ ಎಂದು ಗೊತ್ತಾಗಲು ಕ್ಲೈಮ್ಯಾಕ್ಸ್ ಬರಬೇಕು. ಅದು ಬರುವ ಹೊತ್ತಿಗೆ ಎದುರಿಗಿದ್ದವರ ಹೊಟ್ಟೆಯಲ್ಲಿ ಗೊರ ಗೊರ ಗೊರ ಗೊರ ರೀಲು ಸುತ್ತಿದ ಅನುಭವ. ಕತೆ ಬಗ್ಗೆ ನಾಲ್ಕು ಸಾಲು ಓದಿ...

*ಸ್ಲಮ್ ಹುಡುಗನನ್ನು ತಂದು ಸಾಕುವ ಶಾಲೆ ಮೇಷ್ಟ್ರು ದಂಪತಿ.
*ಹುಡುಗನಿಗೆ ತಂದೆ ತಾಯಿ ಪ್ರೀತಿ ಸಿಗದೆ ಸೈಕೊ'ಪಾತ್ ಥರ ಆಗಿಬಿಡುತ್ತಾನೆ.
*ಮೀಸೆ ಚಿಗುರುತ್ತದೆ. ಕಾಲೇಜು ಬಾ ಬಾ ಎನ್ನುತ್ತದೆ. ಅಲ್ಲಿ ಏನಾಗುತ್ತದೆ?
*ನಿಮ್ಮ ಊಹೆ ಸರಿಯಾಗಿದೆ. ಹುಡುಗಿ ಮುಂದೆ ಮುಂದೆ, ಹುಡುಗ ಹಿಂದೆ ಹಿಂದೆ...
*ಇದೇ ತಾನೇ ಪ್ರೀತಿ ಪ್ರೇಮ ಪ್ರಣಯದ ಪರಮಾವಧಿ ಎಂದುಕೊಳ್ಳುವಷ್ಟರಲ್ಲಿ ಢಂಕಣಕ ಢಂಕಣಕ ಹಾಡು...
*ಅದು ಮುಗಿಯುವಷ್ಟರಲ್ಲಿ ಹುಡುಗನ ಅತ್ತೆ ಮಗಳ ಎಂಟ್ರಿ. ಅವಳು ತ್ವರಿತವಾಗಿ ಇವನೊಂದಿಗೆ ಶಂಕುಸ್ಥಾಪನೆಯಾಗುತ್ತಾಳೆ.
*ಅತ್ತ ಆ ಹುಡುಗಿಗೆ ಇನ್ನೊಂದು ಮದುವೆಗೆ ನಿಶ್ಚಿತಾರ್ಥ ನಡೆಯುತ್ತದೆ. ಇಲ್ಲಿ ಈ ಮಾದ ಲೂಸ್' ಆಗುತ್ತಾನೆ.

ಮತ್ತೆ ಪ್ರೇಕ್ಷಕರು ಎಮೋಷನ್'ಗೆ ಹೋಗಲು ಸಿದ್ಧರಾಗುತ್ತಾರೆ...ಅಲ್ಲಿಗೆ ಉದಯವಾಯಿತು ನಮ್ಮ ಸಿನಿಮಾಲೋಕ... ಈ ಥರದ ಲೂಸ್ ಕತೆ ಹೆಣೆಯುವ ಬದಲು ಮಾದೇಶ್ ಇನ್ನೊಂದು ರಿಮೇಕನ್ನೇ ಮಾಡಬಹುದಿತ್ತು. ಗಜದಲ್ಲಿ ಬಳಸಲಾದ ಕೆಲವು ಶಾಟ್ಸ್‌ಗಳನ್ನೇ ಇಲ್ಲಿ ಇಳಿಸಿದ್ದಾರೆ. ಚಿತ್ರಕತೆ ಹೆಣೆಯುವುದೆಂದರೆ ರಿಮೇಕ್ ಮಾಡಿದಷ್ಟು ಸುಲಭವಲ್ಲ ಎನ್ನುವುದು ನಿರ್ದೇಶಕರಿಗೆ ಗೊತ್ತಾದರೆ... ಯೋಗೀಶ್ ಇಲ್ಲಿ ನಿರ್ದೇಶಕರ ಬೇಬಿ. ಅವರು ಹೇಳಿದ್ದಕ್ಕೆಲ್ಲಾ ಬಸವನ ಹಾಗೆ ತಲೆ ಅಲ್ಲಾಡಿಸಿದ್ದಾನೆ. ಆದರೆ ಏನು ಮಾಡುತ್ತಿದ್ದಾನೆ? ಯಾಕೆಲ್ಲಾ ಹೀಗೆ ಮಾಡುತ್ತಿದ್ದಾನೆ? ಯಾವ ಪುರುಷಾರ್ಥಕ್ಕೆ ಈ ಬಿಲ್ಡಪ್ ಎನ್ನುವುದು ಗೊತ್ತಾಗೊಲ್ಲ, ಅದಕ್ಕೆ ಗೊತ್ತು ಗುರಿ ಇಲ್ಲ. ಪುಟ್ಟ ಬದಲಾವಣೆ ಎಂದರೆ ಇಲ್ಲಿ ಮಾದ ಹೆಚ್ಚು ಹೊತ್ತು ಸ್ಲಂ ಬಾಲನಾಗಿರುವುದಿಲ್ಲ. ಬದಲಾಗಿ ಬಣ್ಣ ಬಣ್ಣದ ಬಟ್ಟೆ, ಕೋಟಿ ರೂ. ಕಾರು, ಬಂಗ್ಲೆ, ಹಯಾ ಬುಸಾ ಬೈಕು... ಹೀಗೆ ಮಾದ ಈಗ ಆಕಾಶದೆತ್ತರಕ್ಕೆ ಹೋದ ಎಂಬಂತೆ ರಾರಾಜಿಸುತ್ತಾನೆ.

ನಾಯಕಿಯರಲ್ಲಿ ಉದಯತಾರಾ ಈಗಷ್ಟೇ ಉದಯಿಸಿದ ಕೆಂಪುಸೂರ್ಯನನ್ನೇ ಹೋಲುತ್ತಾರೆ. ಮುದ್ದಾದ ನಟನೆ, ನಟನೆ ಜತೆ ತಾಳ ಹಾಕುವ ನಗು, ನಗುವಿಗೆ ತಕ್ಕ ನೃತ್ಯ, ನೃತ್ಯಕ್ಕೆ ಹೊಂದಿಕೊಳ್ಳುವ ಹಾವಭಾವ... ದೂರದಲ್ಲಿ ನಿಂತು ನೋಡಿದರೆ ಥೇಟ್ ನಾಲ್ಕು ವರ್ಷದ ಹಿಂದೆ ನಟಿ ರಕ್ಷಿತಾ ಹೇಗಿದ್ದರೋ ಹಾಗೇ ಕಾಣುತ್ತಾರೆ! ಇನ್ನೊಬ್ಬ ನಾಯಕಿ ಪ್ರಜ್ಞಾ ತನ್ನ ಆಸ್ತಿ ಪಾಸ್ತಿಯನ್ನು ಹರಾಜಿಗೆ ಇಟ್ಟು ಚಂದ ನೋಡುತ್ತಾರೆ. ಮಾತಲ್ಲಿ ಹಿಡಿತವಿಲ್ಲ, ಭಾವದಲ್ಲಿ ತುಡಿತವಿಲ್ಲ.

ರಂಗಾಯಣ ರಘು ಮೂರು ಪಾತ್ರ ಮಾಡಿದ್ದಾರೆ. ಆದರೆ ಒಂದರಲ್ಲೂ ಜೀವವಿಲ್ಲ. ಅವರಿಂದ ಕೆಲಸ ತೆಗೆಸುವುದು ಸುಲಭವಲ್ಲ. ಮಾತೆತ್ತಿದರೆ ಶೇಕ್ಸ್‌ಪಿಯರ್, ರಂಗಾಯಣದ ಮಗು ಎನ್ನುತ್ತಾ ಕಪ್ಪುಚುಕ್ಕೆ. ಒಂದಕ್ಕೊಂದು ಸಂಬಂಧ ಇಲ್ಲ ಎಂಬಂತೆ ಸಾಗುವ ಕತೆಯನ್ನು ಎಲ್ಲಿ ಹಿಡಿದು ನಿಲ್ಲಿಸಬೇಕು ಎಂಬುದೇ ಸಂಕಲನಕಾರರಿಗೆ ಗೊತ್ತಾಗಿಲ್ಲ.

ವೀನಸ್ ಮೂರ್ತಿ ಛಾಯಾಗ್ರಹಣದಲ್ಲಿ ವಿಶೇಷತೆ ಇಲ್ಲ. ರೀ ರೆಕಾರ್ಡಿಂಗ್ ಮಹಿಮೆಯನ್ನು ಸಹಿಸಿಕೊಳ್ಳಲು ಎಂಟುಗುಂಡಿಗೆ ಬೇಕು. ಇಡೀ ಚಿತ್ರದಲ್ಲಿ ಶಬ್ದ ಮಾಲಿನ್ಯವನ್ನು ಹೊರತಾಗಿ ಇನ್ನೇನೂ ಇಲ್ಲ. ಹಿರಿಯ ನಿರ್ದೇಶಕ ಕೆ.ವಿ.ರಾಜು ಸಂಭಾಷಣೆಯಲ್ಲಿ ಸತ್ವವಿಲ್ಲ, ಆತ್ಮವಿಲ್ಲ, ತಾಕತ್ತಂತೂ ಇಲ್ಲವೇ ಇಲ್ಲ. ತಮ್ಮ ಹಳೇ ಕಾಲದ ಕೆಲವು ಪ್ರಾಸಗಳನ್ನು ಬಳಸಿ, ಜನರಿಗೆ ತ್ರಾಸು ನೀಡುತ್ತಾರೆ. ಉದಾಹರಣೆಗೆ ಜಡ ಅಲ್ಲ ಉಡ, ಚಡ್ಡಿ-ಬಡ್ಡಿ, ಮಾತು ಮಾತಿಗೆ ಈಜಿ ಈಜಿ ಎನ್ನುವ ಖಳನಾಯಕ, ವಿನ್ನಿಂಗ್ ವಿಕ್ಟರಿ ಕುಬೇರ... ಹೀಗೆ ಒಂದಕ್ಕೊಂದು ಸಂಬಂಧವಿಲ್ಲ.

ಪ್ರೀತ್ಸೇ ನೀ ಶಾಶ್ವತಾನಾ? ಇವಿಷ್ಟು ಓಕೆ...ಇಡೀ ಚಿತ್ರದಲ್ಲಿ ಗಮನ ಸೆಳೆಯುವುದು ಅನೂಪ್ ಸಿಳಿನ್ ಸಂಗೀತ. ಮೂರು ಹಾಡುಗಳು ಮನಮೋಹಕ. ನವಿಲೇ ನವಿಲೇ ಹಾಡಲ್ಲಿದೆ ಹೊಸ ಪುಳಕ. ಅನೂಪ್ ಮತ್ತೊಮ್ಮೆ ತನ್ನ ಕೈಚಳಕ ತೋರಿದ್ದಾರೆ. ಜೈ ಜಗದೀಶ್ ಹಾಗೂ ಸಂಗೀತಾ ಪಾತ್ರಕ್ಕೆ ಜೀವಕಳೆ ತುಂಬಿದ್ದಾರೆ. ರಮೇಶ್‌ಭಟ್, ಪಿ.ಎನ್.ಸತ್ಯಾ ತಮ್ಮ ಕೆಲಸಕ್ಕೆ ಮೋಸ ಮಾಡಿಲ್ಲ.

ಕೊನೆ ಹನಿ: ಮಿಸ್ಟರ್ ಮಾದ ಎಂಡ್ ಮಾದೇಶ್, ಜನ ಇಂದುಸುಲಭಕ್ಕೆ ಕಿವಿ ಮೇಲೆ ಫ್ಲವರ್ ಇಟ್ಟುಕೊಳ್ಳಲು ಇಚ್ಛಿಸುವುದಿಲ್ಲ. ಅದು ನಿಮಗೂ ಅರ್ಥವಾದರೆ ಮುಂದೆ ಇದೇ ಥರದ ತಪ್ಪು ಮರುಕಳಿಸುವುದಿಲ್ಲ!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada