»   » 'ಜಸ್ಟ್ ಪಾಸ್' ಫಸ್ಟ್ ಕ್ಲಾಸ್

'ಜಸ್ಟ್ ಪಾಸ್' ಫಸ್ಟ್ ಕ್ಲಾಸ್

Posted By: * ದೇವಶೆಟ್ಟಿ ಮಹೇಶ್
Subscribe to Filmibeat Kannada

ಕಾಳಜಿ, ಪ್ರೀತಿ ಇಟ್ಟು ಸಿನಿಮಾ ಮಾಡಿದರೆ ಅಲ್ಲಿ ಜೀವಂತಿಕೆ ತೋರಬಹುದು ಎಂಬುದನ್ನು 35/100' ಚಿತ್ರ ನಿರೂಪಿಸಿದೆ. ನಮ್ಮಲ್ಲಿ ಕೆಲ ಚಿತ್ರಗಳಲ್ಲಿ ಒಂದು ಫಾರ್ಮುಲಾ ಇದೆ... ಒಂದು ಹಾಡು, ಎರಡು ಫೈಟು, ಮತ್ತೆ ಲವ್ವು;ಸಾವು...

ಈ ಥರದ ಸಿದ್ಧ ಸೂತ್ರಕ್ಕೆ ಗೋಲಿ ಹೊಡೆದಿದ್ದಾರೆ ನಿರ್ದೇಶಕ ದೀಪಕ್. ಇದು ಪಕ್ಕಾ ಹೊಸಬರ ಚಿತ್ರ. ಒಂದೇ ಹುಡುಗಿಯ ಹಿಂದೆ ಬಿದ್ದ ಹಲವು ಹುಡುಗರು ಕೊನೆಗೆ ಏನಾಗುತ್ತಾರೆ? ಒಂದೇ ಚಾಪೆ ಮೇಲೆ ಅವರು ಕಾಣುವ ನಾನಾ ಥರದ ಕನಸು ಹೇಗಿರುತ್ತದೆ ಎನ್ನುವುದನ್ನು ಇಲ್ಲಿ ನವಿರಾಗಿ ಚಿತ್ರಿಸಲಾಗಿದೆ. ದೃಶ್ಯಗಳು ನೈಜತೆಗೆ ಹತ್ತಿರವಾಗಿವೆ. ಒಬ್ಬನೇ ಒಬ್ಬ ನಾಯಕನ ಹಿಂದೆ ಕ್ಯಾಮೆರಾ ಸುತ್ತುವುದಿಲ್ಲ. ತೆಲುಗು ತಮಿಳಿನಲ್ಲಿ ಇಂಥ ಟ್ರೆಂಡ್ ಚಿತ್ರಗಳು ಗೆದ್ದಿವೆ. ನಮ್ಮಲ್ಲಿ ಇಂಥ ಪ್ರಯತ್ನ ಮಾಡಿರುವುದು ಕಡಿಮೆ. ದೀಪಕ್ ತಂಡ ಹಾಗೊಂದು ಯತ್ನ ಮಾಡಿದೆ...

ನಾಯಕಿ ಶ್ವೇತಾ ಮುದ್ದಾಗಿ ಕಾಣುತ್ತಾರೆ. ಮೊದಲ ಯತ್ನವಾದರೂ ಅಭಿನಯಕ್ಕೆ ಕೊರತೆ ಕಾಣುವುದಿಲ್ಲ. ರಘು, ಮನೋಜವಾ, ವಿಕ್ರಮ್ ಜೋಶಿ ಎಲ್ಲ ಹೊಸ ಮುಖಗಳು. ಯಾರೊಬ್ಬರೂ ನಟಿಸಬೇಕು ಎಂಬ ಉದ್ದೇಶದಿಂದ ನಟಿಸಿಲ್ಲ. ಎಲ್ಲ ತಮ್ಮ ಪಾಡಿಗೆ ಪಾತ್ರಪೋಷಣೆ ಮಾಡುತ್ತಾ ಹೋಗುತ್ತಾರೆ. ಅಲ್ಲಲ್ಲಿ ನಮ್ಮ ಕಾಲೇಜ್ ದಿನಗಳು ನೆನಪಾಗುತ್ತವೆ.

ಹಾಡುಗಳ ತುಣುಕನ್ನು ಸಂದರ್ಭಕ್ಕೆ ತಕ್ಕಂತೆ ಬಳಸಿರುವುದು ಇಷ್ಟವಾಗುತ್ತದೆ. ಅಭಿಜಿತ್ ಹಾಡಿರುವ ಮೆಲೋಡಿ ಹಾಡು ಒಂದಷ್ಟು ಹೊತ್ತು ಕಾಡುತ್ತದೆ. ಸಂಭಾಷಣೆಯಲ್ಲಿ ಕೆಲವೊಂದಂತೂ ನಗಿಸದೇ ಬಿಡುವುದಿಲ್ಲ. ಕೆಲ ದೃಶ್ಯಗಳು ಮರುಕಳಿಸುತ್ತವೆ. ಕತ್ತಲಲ್ಲೇ ಹೆಚ್ಚು ದೃಶ್ಯ ತೆರೆದಿರುವುದರಿಂದ ಕೆಲವು ಕಡೆ ಮಬ್ಬು ಆವರಿಸಿದಂತೆ ಭಾಸವಾಗುತ್ತದೆ. ಚಿತ್ರಕತೆಯಲ್ಲಿ ಕೊಂಚ ಬದಲಾವಣೆ ಬೇಕಿತ್ತು. ಸಣ್ಣಪುಟ್ಟ ತಪ್ಪುಗಳ ಹೊರತಾಗಿ, ಹೊಸಬರನ್ನೇ ಬಳಸಿ, ತಾಜಾತನ ತೋರಲು ಮುಂದಾಗಿರುವ ನಿರ್ದೇಶಕರಿಗೆ ಉತ್ತಮ ಭವಿಷ್ಯವಿದೆ.

ಇತ್ತೀಚೆಗೆ ಬರುತ್ತಿರುವ ಹೊಸಬರ ಜುಗಾರಿ, ದಿಲ್ದಾರ ಮೊದಲಾದ ಚಿತ್ರಗಳಲ್ಲಿ ಒಂದಷ್ಟು ಲವಲವಿಕೆ, ಕೆಲಸ ಕಾಣುತ್ತಿದೆ. ಜಸ್ಟ್ ಪಾಸ್ ಕೂಡ ಅದೇ ಸಾಲಿಗೆ ಸೇರುತ್ತದೆ...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada