»   » ಕೋಮಲ್ 'ಗೋವಿಂದಾಯ ನಮಃ' ಚಿತ್ರ ವಿಮರ್ಶೆ

ಕೋಮಲ್ 'ಗೋವಿಂದಾಯ ನಮಃ' ಚಿತ್ರ ವಿಮರ್ಶೆ

By: * ಉದಯರವಿ
Subscribe to Filmibeat Kannada

'ಗೋವಿಂದಾಯ ನಮಃ' ಎಂಬ ಶೀರ್ಷಿಕೆ ಆರ್ಡಿನರಿ ಅನ್ನಿಸಿದರೂ ಚಿತ್ರ ಮಾತ್ರ ಎಕ್ಸ್‌ಟ್ರಾ ಆರ್ಡಿನರಿಯಾಗಿದೆ. ಬಹಳಷ್ಟು ಮಂದಿ ಉರಿಬಿಸಿಲನ್ನೂ ಲೆಕ್ಕಿಸದೆ ಬಿರಬಿರನೆ ಚಿತ್ರಮಂದಿರಕ್ಕೆ ಬರಲು ಕಾರಣವಾಗಿರುವುದು ನಿಸ್ಸಂದೇಹವಾಗಿ "ಪ್ಯಾರ್‌ಗೆ ಆಗ್ಬಿಟ್ಟೈತೆ" ಎಂಬ ಹಾಡು. ಆದರೆ ಹಾಡಿನಷ್ಟೇ ಪ್ಯಾರ್ ಚಿತ್ರದ ಮೇಲೂ ಉಕ್ಕಿಬರುವಂತಿದೆ. ತಮ್ಮ ಚೊಚ್ಚಲ ನಿರ್ದೇಶನದಲ್ಲೇ ಪವನ್ ಒಡೆಯರ್ ಯಾವುದೇ ಮುಲಾಜಿಗೆ ಬೀಳದೆ ಎಲ್ಲರ ಕೈಯಲ್ಲೂ ನೀಟಾಗಿ ಕೆಲಸ ತೆಗೆಸಿದ್ದಾರೆ.

ಎರಡು ಗಂಟೆ ಆಹ್ಲಾದಕರ ನಗುವಿನೊಂದಿಗೆ ಮನಸ್ಸನ್ನು ರಿಲ್ಯಾಕ್ಸ್ ಮಾಡುತ್ತಾನೆ 'ಗೋವಿಂದ' (ಕೋಮಲ್). ಗೋವಿಂದನ ಗುಣಗಾನದ ಹಾಡಿನ ಮೂಲಕ ಚಿತ್ರ ಆರಂಭವಾಗುತ್ತದೆ. ಆತ್ಮಹತ್ಯೆಗೆ ಪ್ರಯತ್ನಿಸುವ ಗೋವಿಂದನಿಗೆ ಸಾಫ್ಟ್‌ವೇರ್ ಟೆಕ್ಕಿಯೊಬ್ಬ (ಜಂಪಿಂಗ್ ಸ್ಟಾರ್ ಹರೀಶ್ ರಾಜ್) ಸಿಗುತ್ತಾನೆ. ಅವನೂ ಲವ್ ಫೈಲೂರ್ ಆಗಿ ಆತ್ಮಹತ್ಯೆಗೆ ಮಾಡಿಕೊಳ್ಳಲು ಬಂದಿರುತ್ತಾನೆ. ಆದರೆ ಬಹುಮಹಡಿ ಕಟ್ಟಡದಿಂದ ಕೆಳಗೆ ಜಿಗಿಯಲು ಧೈರ್ಯ ಸಾಲದೆ ಕುಸಿದು ಬೀಳುತ್ತಾನೆ.

ಗೋವಿಂದ ತನ್ನ 'ಸಾಮೂಹಿಕ' ಲವ್ ಸ್ಟೋರಿಯನ್ನು ಟೆಕ್ಕಿಯೊಂದಿಗೆ ಹಂಚಿಕೊಳ್ಳುತ್ತಾನೆ. ಮಧ್ಯಂತರದ ವೇಳೆಗೆ ಗೋವಿಂದ ರಕ್ತಕಾರಿಕೊಂಡು ಬೀಳುತ್ತಾನೆ. ಆಗಲೇ ಟೆಕ್ಕಿಗೆ ಗೊತ್ತಾಗುವುದು ಗೋವಿಂದನೂ ಇಲಿ ಪಾಷಾಣ ಸೇವಿಸಿದ್ದಾನೆಂದು. ಅಲ್ಲಿಂದ ಕಥೆ ಕುತೂಹಲ ಘಟ್ಟಕ್ಕೆ ಹೊರಳಿಕೊಳ್ಳುತ್ತದೆ. ಪ್ರೇಕ್ಷಕರು ಕೂಡ ರಿಲ್ಯಾಕ್ಸ್ ಆಗಿ ಮುಂದೇನು ಎಂಬಂತೆ ನಿರೀಕ್ಷಿಸುತ್ತಾರೆ.

ನಾಲ್ಕು ಮಂದಿ ಹುಡುಗಿಯರ ಜೊತೆ ಐತಲಕಡಿ ಆಡಿದ ಗೋವಿಂದ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೂ ಏಕೆ? ಗೋವಿಂದ ಮೊದಲೇ 'ಕಳ್ ಮಂಜ', ಇಂಥಹವನು ಆತ್ಮಹತ್ಯೆ ಮಾಡಿಕೊಳ್ಳುತ್ತಾನಾ? ಏನಪ್ಪಾ ಇದು ಗೋವಿಂದಾ ಎಂಬಂತೆ ಕಥೆ ಅಚ್ಚರಿ, ಕುತೂಹಲಕರ ರೀತಿಯಲ್ಲಿ ಸಾಗುತ್ತದೆ. ಚಿತ್ರದ ಆದಿಯಿಂದ ಅಂತ್ಯದವರೆಗೆ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಪವನ್ ಒಡೆಯರ್ ಕಥೆ, ನಿರ್ದೇಶನ ಗೆಲ್ಲುತ್ತದೆ.

ಚಿತ್ರದಲ್ಲಿರುವ ಐದು ಹಾಡುಗಳು ಚಂಕಾಯ್ಸಿ ಚಿಂದಿ ಉಡಾಯಿಸಿವೆ. ಅದರಲ್ಲೂ "ಪ್ಯಾರ್‌ಗೆ ಆಗ್ಬಿಟ್ಟೈತೆ" ಹಾಡಂತೂ ಚಿತ್ರದ ಪ್ರಮುಖ ಆಕರ್ಷಣೆ. ಗುರುಕಿರಣ್ ಸಂಗೀತ ಚಿತ್ರದ ಉದ್ದಕ್ಕೂ ಪಲ್ಲವಿಸಿದೆ. ಕೋಮಲ್ ಸಂಭಾಷಣೆಯಲ್ಲಿ ದ್ವಂದ್ವಾರ್ಥಗಳಿದ್ದರೂ ಕೀಳುಮಟ್ಟಕ್ಕೆ ಇಳಿಯದಂತೆ ಸಂಭಾಳಿಸಿದ್ದಾರೆ. ಕತೆ ಎಲ್ಲೂ ಲಾಜಿಕ್ ಬಿಟ್ಟು ಹೋಗಿಲ್ಲ. ಎಂಟರ್‌ಟೈನ್‌ಮೆಂಟ್ ಜೊತೆಗೆ ಫೈಟ್‌ಗಳು ಚಿತ್ರದಲ್ಲಿ ಮೈನವಿರೇಳಿಸುವಂತಿವೆ. ಪ್ರೇಕ್ಷಕ ಕೊಟ್ಟ ಕಾಸಿಗೆ ಮೋಸ ಮಾಡಲ್ಲ ಗೋವಿಂದ.

ಇನ್ನು ಚಿತ್ರದ ನಾಯಕಿಯರಲ್ಲಿ ಒಬ್ಬರಾದ ಜಾರ್ಜಿಯಾ ಸುಂದರಿ ಆನಾ ದಂತದ ಗೊಂಬೆ. ಮುಂಬೈ ಬೆಡಗಿ ಪಾರುಲ್ ಅಭಿನಯ ನೋಡ ನೋಡುತ್ತಾ ಪ್ಯಾರ್‌ಗೆ ಆಗ್ಬುಡ್ತತೈ. 'ಜಿಂಕೆಮರಿ' ರೇಖಾ ವಿಧವೆಯ ಪಾತ್ರದಲ್ಲಿ (ವೇಶ್ಯೆಯ ಪಾತ್ರವಲ್ಲ) ಗಮನಸೆಳೆಯುತ್ತಾರೆ. ಇನ್ನು ಮಧುಲಿಕಾ ಚೆಲ್ಲು ಚೆಲ್ಲು ಅಭಿನಯ ಇಷ್ಟವಾಗುತ್ತದೆ. ದತ್ತಣ್ಣ, ಹರೀಶ್ ರಾಜ್, ಮುಖ್ಯಮಂತ್ರಿ ಚಂದ್ರು ಪಾತ್ರಗಳು ಸಂದರ್ಭೋಚಿತವಾಗಿವೆ.

ಯೋಗರಾಜ್ ಭಟ್ ಬಳಿ ಕೆಲಸ ಮಾಡಿರುವ ಪವನ್ ಒಡೆಯರ್ ತಮ್ಮ ಚೊಚ್ಚಲ ಚಿತ್ರದ ಮೂಲಕ ಭರವಸೆ ಮೂಡಿಸಿದ್ದಾರೆ. ಚಿತ್ರದಲ್ಲಿ ನಾಲ್ಕು ಮಂದಿ ನಾಯಕಿಯರಿದ್ದರೂ ಎಲ್ಲೂ ಗೊಂದಲ ಮೂಡದಂತೆ ತೆರೆಗೆ ತಂದಿದ್ದಾರೆ. ವಿಶೇಷ ಎಂದರೆ ಕೋಮಲ್ ಚಿತ್ರ ಇದೇ ಮೊದಲ ಬಾರಿಗೆ ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿರುವುದು.

English summary
Read Kannada movie Govindaya Namaha review. Comedy Star Komal Kumar, Parul Yadav, Rekha Vedavyas, Anna Georgia and Madhulika are in lead. Director Pawan Wadeyar has narrated gripping tale with less of comedy and action, but makes it engaging and entertaining. At finally the hero falls in love with a Muslim girl.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada