»   » ಸೈಕೊ ಚಿತ್ರವನ್ನು ಕರುಣದಿ ಕಾಯೋ ಮಹದೇಶ್ವರ

ಸೈಕೊ ಚಿತ್ರವನ್ನು ಕರುಣದಿ ಕಾಯೋ ಮಹದೇಶ್ವರ

Posted By:
Subscribe to Filmibeat Kannada
Music director Raghu Dixit
ಕೇವಲ ಒಂದೇ ಒಂದು ಹಾಡಿಗೆ ಬರೀ ಪ್ರಚಾರದಿಂದಲೇ ಆಕಾಶದೆತ್ತರಕ್ಕೆ ಏರಿಸಿದ ಚಿತ್ರವನ್ನು ಕೆಳಕ್ಕೆ ಬೀಳಿಸದಂತೆ ಹಿಡಿದೆತ್ತುವ ತಾಕತ್ತಿದ್ದರೆ ಮತ್ತು ಅಂಥ ಚಿತ್ರವನ್ನು ಪ್ರೇಕ್ಷಕರು ಪ್ರೋತ್ಸಾಹಿಸಿದರೆ ಅದಕ್ಕಿಂತ ದೊಡ್ಡ ಪವಾಡ ಮತ್ತೊಂದು ಇರಲಾರದು. ಅಂಥದೊಂದು ಪವಾಡದ ನಿರೀಕ್ಷೆಯಿಂದ 'ಸೈಕೊ' ಚಿತ್ರದ ಮೂಲಕ ಚಿತ್ರ ನಿರ್ದೇಶನದ ಮೊದಲ ಹೆಜ್ಜೆ ಇಟ್ಟಿರುವ ದೇವದತ್ ಅವರಿಗೆ ಶಭಾಸಗಿರಿ ನೀಡಬೇಕು.

* ಪ್ರಸಾದ ನಾಯಿಕ

ಚಿತ್ರ ಬಿಡುಗಡೆಗೆ ಮುನ್ನ ಚಿತ್ರದ ನಾಯಕ ಮತ್ತು ನಾಯಕಿ ಯಾರೆಂದು ಬಾಯಿಬಿಟ್ಟಿರಲಿಲ್ಲ, 'ಸೈಕೊ' ಹೆಸರೇ ಚಿತ್ರದ ಹೂರಣ ಏನಿರಬಹುದೆಂದು ಅಂದಾಜಿಸಬಹುದಾದರೂ ಚಿತ್ರಕಥೆ ಏನೆಂದು ಬಿಟ್ಟುಕೊಟ್ಟಿರಲಿಲ್ಲ, ಚಿತ್ರದ ತಾರಾಗಣದಲ್ಲಿ ಯಾರ್ಯಾರಿದ್ದಾರೆಂದೂ ಬಹಿರಂಗಪಡಿಸಿರಲಿಲ್ಲ. ಬಹಿರಂಗಪಡಿಸಿದ್ದು ಸೈಕೊ ಚಿತ್ರದ ಸಂಗೀತ ನಿರ್ದೇಶನ ಮಾಡಿರುವ ರಘು ದೀಕ್ಷಿತ್ ಹಾಡಿರುವ 'ನಿನ್ನ ಪೂಜೆಗೆ ಬಂದೆ ಮಹದೇಶ್ವರ..' ಹಾಡೊಂದನ್ನು ಮಾತ್ರ. ಚಿತ್ರದ ತುಣುಕೊಂದರಲ್ಲಿ ಬಂದಿರುವ ರಾಜಕುಮಾರ್ ಅಭಿನಯದ 'ನನಗಾಗಿ ನೀನು ನಿನಗಾಗಿ ನಾನು' ಹಾಡಿಗೆ ಬಿದ್ದಷ್ಟೇ ಶಿಳ್ಳೆಗಳು 'ನಿನ್ನ ಪೂಜೆಗೆ ಬಂದೆ ಮಹದೇಶ್ವರ' ಹಾಡಿಗೂ ಬಿದ್ದಿರುವುದು ಆ ಹಾಡು ಮಾಡಿರುವ ಮೋಡಿಗೆ ಸಾಕ್ಷಿ.

ಅಸಲಿಗೆ ಚಿತ್ರದ ನಾಯಕ, ಜೀವಾಳ ಆ ಹಾಡೆ. ಆ ಹಾಡು ಗುಡುಗುಡಿಸಿದ ಸುಮಧುರ ಝೇಂಕಾರ ರಘು ದೀಕ್ಷಿತ್ ರನ್ನು ಕರ್ನಾಟಕದ ಮನೆಮಾತಾಗಿಸಿದೆ. ಆ ಹಾಡಿಗಾಗಿ ರಘು ದೀಕ್ಷಿತ್ ಗೆ ಹ್ಯಾಟ್ಸಾಫ್! ನಾಯಕ ಧನುಷ್ ಮತ್ತು ನಾಯಕಿ ಅನಿತಾ ಅವರನ್ನು ಮಾಧ್ಯಮದ ದೃಷ್ಟಿಯಿಂದ ಮುಚ್ಚಿಡುವುದರ ಜೊತೆಗೆ 'ನಿನ್ನ ಪೂಜೆಗೆ...' ಹಾಡನ್ನೂ ನಿರ್ದೇಶಕರು ಮುಚ್ಚಿಟ್ಟಿದ್ದರೆ ಚಿತ್ರದ ಕಥೆಯೂ 'ಹರೋಹರ'ವಾಗುತ್ತಿತ್ತು. 'ನಿನ್ನ ಪೂಜೆಗೆ ಬಂದೆ' ಹಾಡೊಂದಿಲ್ಲದಿದ್ದರೆ ರಘು ದೀಕ್ಷಿತ್ ನೀಡಿದ ಸಂಗೀತವೂ ಹರೋಹರವಾಗುತ್ತಿತ್ತು ಅನ್ನುವುದು ನಿಜಕ್ಕೂ ವಿಪರ್ಯಾಸದ ಸಂಗತಿ. ಅಂಥದೊಂದು ಅಪಾಯದಿಂದ ಚಿತ್ರ ಪಾರಾಗಿದೆ. ರಘು ನೀಡಿರುವ ಉಳಿದ ಹಾಡುಗಳಿಗೆ ಮಾಂತ್ರಿಕ ಸ್ಪರ್ಶವಿಲ್ಲ, ಮಾಧುರ್ಯದ ಹಾಡಿಗೂ ನೀಡಿರುವುದು ರಾಕ್ ಸ್ಪರ್ಶ.

ಯಾವುದನ್ನೂ ಪೂರ್ತಿಯಾಗಿ ಹೇಳದೆ, ಹೇಳಬೇಕಾಗಿರುವುದನ್ನು ಕ್ಯಾಮೆರಾ ಮತ್ತು ಹಿನ್ನೆಲೆ ಸಂಗೀತದ ಮುಖಾಂತರ ಹೇಳುತ್ತ ಹೆಜ್ಜೆ ಹೆಜ್ಜೆಗೂ 'ಸಸ್ಪೆನ್ಸ್' ಕಾಯ್ದುಕೊಳ್ಳುವಲ್ಲಿ ದೇವದತ್ ತುಸುಮಟ್ಟಿಗೆ ಯಶಸ್ವಿಯೂ ಆಗಿದ್ದಾರೆ. 1960ರಲ್ಲಿ ಬಿಡುಗಡೆಯಾದ ಆಲ್ಫ್ರೆಡ್ ಹಿಚ್ ಕಾಕ್ ನಿರ್ದೇಶನದ 'ಸೈಕೊ' ಹೆಸರಿನ ಚಿತ್ರದ ಛಾಯೆ, ಪ್ರಭಾವ ಕನ್ನಡ 'ಸೈಕೊ' ಮೇಲೂ ಇದೆ. ಇದನ್ನು ನಿರ್ದೇಶಕರು ಕೂಡ ಒಪ್ಪಿಕೊಂಡಿದ್ದಾರೆ. ಆದರೆ, ಮಾನಸಿಕ ಅಸ್ವಸ್ಥ ಪ್ರೇಮಿಯೊಬ್ಬನ ಕಥನಕ್ಕೆ ಭಯಾನಕತೆಯನ್ನು ಬೆರೆಸಿ ದೇವದತ್ ಗೋಜಲೆಬ್ಬಿಸಿದ್ದಾರೆ. ನಾಯಕ ವಾಸದಲ್ಲಿರುವ ಮನೆಯನ್ನು ತೋರಿಸುವಾಗ, ಆತನ ಮನಸ್ಥಿತಿಯನ್ನು ಬಿಂಬಿಸುವಾಗ ಬಳಸಲಾಗಿರುವ ಹಿನ್ನೆಲೆ ಸಂಗೀತ ನಿಜಕ್ಕೂ ಭೀಭತ್ಸ. ಚಿತ್ರದುದ್ದಕ್ಕೂ ಸಾಗಿಬರುವ ಹಿನ್ನಲೆ ಸಂಗೀತ ಎಲ್ಲ ತಾಂತ್ರಿಕ ನೈಪುಣ್ಯತೆಗಳನ್ನೂ ನುಂಗಿಹಾಕುತ್ತದೆ. ನಿಶ್ಶಬ್ದದ ಮುಖಾಂತರವೂ ಭಯಾನಕತೆಯನ್ನು ತೋರಿಸಬಹುದಾದ ಅವಕಾಶವನ್ನು ನಿರ್ದೇಶಕ ತಪ್ಪಿಸಿಕೊಂಡಿದ್ದಾರೆ. ಇದನ್ನು ಹಾರರ್ ಚಿತ್ರವೆಂಬಂತೆ ಬಿಂಬಿಸುವ ಅಗತ್ಯವೂ ಇರಲಿಲ್ಲ.

ಹಿನ್ನೆಲೆ ಸಂಗೀತ ಹೊರತುಪಡಿಸಿದರೆ, ತಾಂತ್ರಿಕತೆಯ ದೃಷ್ಟಿಕೋನದಿಂದ ನೋಡಿದರೆ ಚಿತ್ರ ನಿಜಕ್ಕೂ ಶ್ರೀಮಂತವಾಗಿದೆ. ಬಳಸಲಾಗಿರುವ ಪರಿಕರಗಳು ಚಿತ್ರಕಥೆಗೆ ಪೂರಕವಾಗಿವೆ. ಸಭಾ ಕುಮಾರ್ ನೀಡಿರುವ ಫೋಟೋಗ್ರಫಿ ತಾಂತ್ರಿಕವಾಗಿ ಅದ್ಭುತವಾಗಿದೆ. ನಾಯಕ ಮತ್ತು ನಾಯಕಿಯನ್ನು ಮಾಧ್ಯಮದವರಿಂದ ಮುಚ್ಚಿಟ್ಟಿದ್ದರಿಂದ ಚಿತ್ರಕ್ಕಾಗಲಿ ಮತ್ತು ನಾಯಕ, ನಾಯಕಿಗಾಗಲಿ ಯಾವುದೇ ಲಾಭವಾಗಿಲ್ಲ. ಅದರಿಂದ ನಿರ್ದೇಶಕರು ಏನನ್ನೂ ಸಾಧಿಸಿಲ್ಲ. ನಟನೆಯಲ್ಲಿ ನಾಯಕ ಧನುಷ್ ಇನ್ನೂ ಪಳಗಬೇಕು. ಮಾನಸಿಕ ಅಸ್ವಸ್ಥನ ಪಾತ್ರ ಮಾಡುವಲ್ಲಿ ಮಿದುಳಿಗೆ ಇನ್ನೂ ಕೆಲಸ ನೀಡಬೇಕು. ನಾಯಕಿ ಅನಿತಾ ನೋಟದಲ್ಲಿ ಅಲ್ಲದಿದ್ದರೂ ನಟನೆಯಲ್ಲಿ ಸೈಯಾರೆಸೈ. ನೀಡಿರುವ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡಿದ್ದಾರೆ.

ಒಟ್ಟಾರೆ ಇದು ಅಪ್ಪಟ ನಿರ್ದೇಶಕನ ಚಿತ್ರ. ದೇವದತ್ ಭರವಸೆಯ ನಿರ್ದೇಶಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಚಿತ್ರಕಥೆಗೆ ಇನ್ನಷ್ಟು ನಾವೀನ್ಯತೆ ನೀಡಿದ್ದರೆ ಹಾರರ್ ಕಥೆಯಾಗುವ ಬದಲು ಒಳ್ಳೆಯ ಪ್ರೇಮಕಥೆಯಾಗುತ್ತಿತ್ತು. ಸಸ್ಪೆನ್ಸ್ ಥ್ರಿಲ್ಲರ್ ನೀಡುವ ಭರದಲ್ಲಿ ಪ್ರೇಕ್ಷಕರ ಹೃದಯಕ್ಕೆ ಲಗ್ಗೆ ಹಾಕುವ ಬದಲು ದೇವದತ್ ನೇರವಾಗಿ ಪ್ರೇಕ್ಷಕರ ಮಿದುಳಿಗೇ ಕೈಹಾಕಿದ್ದಾರೆ.

ಸೈಕೋ ಚಿತ್ರದ ನಾಯಕ, ನಾಯಕಿ ಬಹಿರಂಗ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada