twitter
    For Quick Alerts
    ALLOW NOTIFICATIONS  
    For Daily Alerts

    ಸುಧಾರಾಣಿಯಂತಹ ಅಭಿಜಾತ ಕಲಾವಿದೆಗೆ ಇಲ್ಲೇನೂ ಕೆಲಸ ಇಲ್ಲ

    By Super
    |

    ನಿರ್ಮಾಪಕ ನಿರ್ದೇಶಕರ ಪ್ರಕಾರ ಇದು ಮಕ್ಕಳ ಚಿತ್ರ. ಆದರೆ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್‌ ಸತ್ಯು ಪ್ರಕಾರ ಇದು ಮಕ್ಕಳ ಚಿತ್ರವೇ ಅಲ್ಲ. ಇವೆರಡರಲ್ಲಿ ಯಾವುದೇ ಸತ್ಯ ಅನ್ನುವುದನ್ನು ನಿರ್ಧರಿಸುವ ಅವಕಾಶ ಈಗ ಪ್ರೇಕ್ಷಕರಿಗೆ ಒದಗಿದೆ.

    ಚಂದನ ಚಿಗುರು ಚಿತ್ರದಲ್ಲಿ ಮಕ್ಕಳಿದ್ದಾರೆ, ದೊಡ್ಡವರೂ ಇದ್ದಾರೆ. ಪೋಷಕರಿದ್ದಾರೆ, ಪಾಲಕರಿದ್ದಾರೆ. ಹೇಳಿಕೆಗಳಿವೆ, ಸಂದೇಶಗಳೂ ಇವೆ. ನೆಪಕ್ಕೊಂದು ಕತೆ ಇದೆ. ಕತೆಗೊಂದು ನೆಪವಿದೆ. ರಂಜನೆ ಕಡಿಮೆ, ಬೋಧನೆ ಜಾಸ್ತಿ. ಯಾಕೆಂದರೆ ಇದು ಮಕ್ಕಳ ಚಿತ್ರ ! ಮಕ್ಕಳು ನಟಿಸಿದ ಮಾತ್ರಕ್ಕೆ ಅದು ಮಕ್ಕಳ ಚಿತ್ರವಾಗಲಾರದು ಅನ್ನುವ ಸತ್ಯು ಟೀಕೆಗೆ ಇಲ್ಲಿ ಸಾಕಷ್ಟು ಸಮರ್ಥನೆಗಳು, ಪುರಾವೆಗಳು ಸಿಗುತ್ತವೆ. ಹಾಗಿದ್ದೂ, ನಿರ್ದೇಶಕರು ಎತ್ತಿಕೊಂಡಿರುವ ಇಶ್ಯೂವನ್ನು ಗಮನಿಸಬಹುದಿತ್ತು. ಅದುವೇ ಪ್ರಾಥಮಿಕ ಶಿಕ್ಷಣದ ಮಹತ್ವ. ಅದನ್ನು ಮಕ್ಕಳಿಗೆ ಒದಗಿಸುವಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ.

    ನಿಮ್ಮ ನಿರೀಕ್ಷೆಗಳು ಸುಳ್ಳಾಗುವುದಿಲ್ಲ
    ಮಕ್ಕಳ ಚಿತ್ರ ಅಂದಕೂಡಲೇ ನಿಮ್ಮ ಮನಸ್ಸಿನಲ್ಲಿ ಮೂಡುವ ಎಲ್ಲಾ ಚಿತ್ರಗಳನ್ನು ನಿರ್ದೇಶಕರು ನಿಷ್ಠೆಯಿಂದ ಇಲ್ಲಿ ತುಂಬುತ್ತಾ ಹೋಗುತ್ತಾರೆ. ಒಳ್ಳೇ ಮಕ್ಕಳು, ತರಲೆ ಮಕ್ಕಳು, ಮಾದಕದ್ರವ್ಯಕ್ಕೆ ದಾಸರಾದವರು, ಅವರು ಹಾಗಾಗುವುದಕ್ಕೆ ಕಾರಣರಾದ ಅಪ್ಪ ಅಮ್ಮಂದಿರು, ಮಾದರಿ ಶಾಲೆಗೊಬ್ಬ ಮಾದರಿ ಟೀಚರ್‌, ಆಕೆಗೊಬ್ಬ ಪ್ರೇಮಿ.

    ಕೇಂದ್ರ ಪಾತ್ರ ಭಾರತಿ ಟೀಚರ್‌. ಭಾರತಿ ಅನ್ನುವ ಹೆಸರು ಸಾಂಕೇತಿಕ ಅನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆಕೆಯನ್ನು ಮದುವೆಯಾಗುವ ಕನಸು ಕಾಣುವಾತ ಒಬ್ಬ ಸಾಫ್ಟ್‌ವೇರ್‌ ಇಂಜಿನಿಯರ್‌. ಆತನಿಗೆ ಅಮೆರಿಕಾ ಹುಚ್ಚು. ಆದರೆ ಭಾರತಿ ಹೆಸರಿಗೆ ತಕ್ಕಂತೆ ಭಾರತ ಪ್ರೇಮಿ. ಇದೇ ಕಾರಣಕ್ಕೆ ಇಬ್ಬರ ನಡುವೆ ಬಿರುಕು. ಈ ಅವಕಾಶವನ್ನು ಬಳಸಿಕೊಂಡು ನಿರ್ದೇಶಕರು ಭಾರತಿಯಿಂದ ಭಾರತದ ಸಂಸ್ಕೃತಿಯ ಗರಿಮೆ ಹಿರಿಮೆಗಳ ಬಗ್ಗೆ ಭಾಷಣ ಮಾಡಿಸುತ್ತಾರೆ. ಇದು ಚಿತ್ರಕ್ಕಿರುವ ಇನ್ನೊಂದು ಆ್ಯಂಗಲ್‌ ಅಂದುಕೊಳ್ಳಬಹುದು. ಪ್ರೇಮಭಂಗದ ನಂತರ ಭಾರತಿಯ ಜೀವನ ಮಕ್ಕಳಿಗಾಗಿ ಮುಡಿಪು. ಅವರೆಲ್ಲರೂ ಜಾಣರಾಗಿ ಏಳನೇ ತರಗತಿಯಲ್ಲಿ ನೂರಕ್ಕೆ ನೂರು ಫಲಿತಾಂಶ ತಂದುಕೊಡುವಲ್ಲಿಗೆ ಶುಭಂ.

    ಸಿನಿಮಾ ಸಾಧ್ಯತೆಗಳ ಬಳಸಿಕೊಳ್ಳದಿರುವ ಪಾಶಾ
    ಮಕ್ಕಳು ನಟಿಸಬಾರದು ಅನ್ನುವ ಮಾತು ಚಂದನ ಚಿಗುರು ಚಿತ್ರಕ್ಕೂ ಅನ್ವಯವಾಗುತ್ತದೆ. ಸಿನಿಮಾ ಮಾಧ್ಯಮದ ಸಾಧ್ಯತೆಗಳನ್ನು ಬಳಸಿಕೊಳ್ಳುವಲ್ಲಿ ನಿರ್ದೇಶಕ ಅಬ್ದುಲ್‌ ರೆಹಮಾನ್‌ ಪಾಶಾ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಅವರು ಮೂಲತಃ ರೇಡಿಯೋ ನಾಟಕಗಳ ಕತೃ ಆಗಿರುವುದೂ ಇದಕ್ಕೆ ಕಾರಣ ಆಗಿರಬಹುದು. ಸುಧಾರಾಣಿಯಂತಹ ಅಭಿಜಾತ ಕಲಾವಿದೆಗೆ ಇಲ್ಲಿ ಏನೇನೂ ಕೆಲಸ ಇಲ್ಲ. ಕುಮಾರ್‌ ಗೋವಿಂದು ನಾಲ್ಕು ದೃಶ್ಯಗಳಲ್ಲಿ ಬಂದುಹೋಗುತ್ತಾರಾದರೂ ಅಷ್ಟರಲ್ಲೇ ತಮ್ಮ ಪ್ರತಿಭೆ(?)ಯನ್ನು ಪ್ರದರ್ಶಿಸಿದ್ದಾರೆ. ಚಿತ್ರದ ಏಕೈಕ ಹೈ ಲೈಟ್‌ ಅಂದ್ರೆ ದಾಸ್‌ ಛಾಯಾಗ್ರಹಣ. ದುಷ್ಟ ಶಿಕ್ಷಕನ ಪಾತ್ರದಲ್ಲಿ ನಿರ್ದೇಶಕ ಪಾಶಾ ಅವರೇ ಕಾಣಿಸಿಕೊಂಡಿದ್ದಾರೆ. ಅವರ ನಿರ್ದೇಶನಕ್ಕಿಂತ ನಟನೆಯೇ ಹೆಚ್ಚು ಇಷ್ಟವಾಗುತ್ತದೆ. ಭಾರತಿಯಲ್ಲಿ ಧೈರ್ಯ ತುಂಬುವ ತಂದೆಯಾಗಿ ದತ್ತಾತ್ರೇಯ ಹಿತಮಿತನಾಗಿ ನಟಿಸಿದ್ದಾರೆ.

    ಚಂದನ ಚಿಗುರು ಚಿತ್ರದ ಒಟ್ಟಾರೆ ಉದ್ದೇಶವೇನೇ ಇರಬಹುದು. ಇದು ಮಕ್ಕಳು ನೋಡುವ ಮಕ್ಕಳ ಚಿತ್ರವಂತೂ ಅಲ್ಲ. ದೊಡ್ಡವರು ನೋಡುವ ಮಕ್ಕಳ ಚಿತ್ರ ಅನ್ನಬಹುದು. ಮಕ್ಕಳನ್ನು ತನ್ಮಯಗೊಳಿಸಬೇಕಾದರೆ, ಇನ್ನೊಂದಿಷ್ಟು ರಂಜನಾತ್ಮಕ ಮತ್ತು ಲವಲವಿಕೆಯ ಅಂಶಗಳು ಇರಬೇಕಾಗಿತ್ತು. ಆದರೆ ನಿರ್ಮಾಪಕರ ಕಣ್ಣು ಪ್ರಶಸ್ತಿಯತ್ತ ಇದ್ದುದರಿಂದ ಇಲ್ಲಿ ಸಮಸ್ಯೆಗಳಿಗೇ ಹೆಚ್ಚಿನ ಒತ್ತು ಸಿಕ್ಕಿದೆ. ಹಾಗಿದ್ದೂ ಚಿತ್ರಕ್ಕೆ ಪ್ರಶಸ್ತಿ ಸಿಗದೇ ಇರುವುದು ದುರಂತ.

    Read more about: karnataka kannada sudharani chandana
    English summary
    chandana chiguru : Abdul Rehaman pasha has more concentrated towards the award
    Friday, August 30, 2013, 15:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X