»   » ವಿಮರ್ಶೆ: ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ 'ಆಕೆ'

ವಿಮರ್ಶೆ: ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ 'ಆಕೆ'

Posted By:
Subscribe to Filmibeat Kannada

'ಆಕೆ' ರಾಜ ಮನೆತನದ ಕುವರಿ.. ಸಿರಿ, ಸಂಪತ್ತು, ವೈಭೋಗದಲ್ಲಿಯೇ ಬೆಳೆದ 'ಆಕೆ'ಗೆ ಮದುವೆ ಆದ ಒಂದೇ ವರ್ಷದಲ್ಲಿ ಎರಡು ಆಘಾತ.. ಮಾನಸಿಕವಾಗಿ ಜರ್ಜರಿತಗೊಳ್ಳುವ 'ಆಕೆ' ತೀರಿಕೊಂಡ ಬಳಿಕ ಪ್ರೇತಾತ್ಮವಾಗುತ್ತಾಳೆ. 'ಆಕೆ'ಯ ಸಾವು ಆತ್ಮಹತ್ಯೆಯೋ.. ಕೊಲೆಯೋ.. ಬಲ್ಲವರಾರೂ ಇಲ್ಲ.! ಆದ್ರೆ, 'ಆಕೆ'ಯ ಉಂಗುರಕ್ಕೆ ಆಸೆ ಪಟ್ಟು ಪ್ರಾಣ ಬಿಟ್ಟವರ ಸಂಖ್ಯೆ ಮಾತ್ರ_ _ _

Rating:
3.0/5

ಅಸಲಿಗೆ 'ಆಕೆ' ಯಾರು.? 'ಆಕೆ'ಯಿಂದ ತೀರಿಕೊಂಡವರು ಎಷ್ಟು ಮಂದಿ.? 'ಆಕೆ'ಗೆ ಅಷ್ಟೊಂದು ಸಿಟ್ಟು ಯಾಕೆ.? ಎಂಬ ಪ್ರಶ್ನೆಗಳಿಗೆ ಉತ್ತರ ನೀಡುವ ಚಿತ್ರವೇ 'ಆಕೆ'. ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ಹಾರರ್ ಕೂಡ ಮಿಕ್ಸ್ ಆಗಿರುವ 'ಆಕೆ' ಪ್ರೇಕ್ಷಕರನ್ನ ಬೆಚ್ಚಿಬೀಳಿಸದಿದ್ದರೂ, ಸೀಟ್ ನ ತುದಿಗೆ ತಂದು ಕೂರಿಸುವಲ್ಲಿ ಯಶಸ್ವಿ ಆಗಿದೆ.

ಚಿತ್ರ: ಆಕೆ
ನಿರ್ದೇಶನ: ಕೆ.ಎಂ.ಚೈತನ್ಯ
ಸಂಗೀತ: ಗುರುಕಿರಣ್
ತಾರಾಗಣ: ಚಿರಂಜೀವಿ ಸರ್ಜಾ, ಶರ್ಮಿಳಾ ಮಾಂಡ್ರೆ, ಅಚ್ಯುತ್ ಕುಮಾರ್, ಪ್ರಕಾಶ್ ಬೆಳವಾಡಿ, ಸ್ನೇಹಾ ಆಚಾರ್ಯ ಮತ್ತು ಇತರರು
ಬಿಡುಗಡೆ: ಜೂನ್ 30, 2017

'ಆಕೆ'ಯನ್ನ ಹೊರತುಪಡಿಸಿ...

ಅರ್ಜುನ್ (ಚಿರಂಜೀವಿ ಸರ್ಜಾ) ಓರ್ವ ನಟ. ಲಂಡನ್ ನಲ್ಲಿ ಚಿತ್ರೀಕರಣಗೊಂಡಿರುವ 'ಅಡವಿ' ಎಂಬ ಚಿತ್ರದ ನಾಯಕ. ಇತ್ತ ಗಂಡನಿಂದ ದೂರವಾಗಿ ಬೆಂಗಳೂರಿನಲ್ಲಿ ಜೀವನ ನಡೆಸಲು ಕಷ್ಟ ಪಡುತ್ತಿರುವ ಒಂದು ಮಗುವಿನ ತಾಯಿ ಶರ್ಮಿಳಾ (ಶರ್ಮಿಳಾ ಮಾಂಡ್ರೆ). ಇಬ್ಬರು ಮುಖಾಮುಖಿ ಆಗುವುದು ಸ್ಮಶಾನದಲ್ಲಿ. ಅದಕ್ಕೆ ಕಾರಣವೇನು.? ಇವರಿಬ್ಬರಿಗೂ 'ಆಕೆ'ಗೂ ಏನು ಸಂಬಂಧ ಎಂಬುದೇ 'ಆಕೆ' ಚಿತ್ರದ ಕಥಾಹಂದರ.

ಚಿರಂಜೀವಿ ಸರ್ಜಾ ನಟನೆ ಹೇಗಿದೆ.?

ಸಿನಿಮಾದೊಳಗಿನ ಸಿನಿಮಾದ ನಾಯಕನಾಗಿ ಚಿರಂಜೀವಿ ಸರ್ಜಾ ನಟನೆ ಅಚ್ಚುಕಟ್ಟಾಗಿದೆ. ಸ್ಟಂಟ್, ಡ್ಯಾನ್ಸ್... ಇಲ್ಲದೇ ಇದ್ದರೂ ತಮ್ಮ ಪರ್ಫಾಮೆನ್ಸ್ ಮೂಲಕ ಚಿರಂಜೀವಿ ಸರ್ಜಾ ಗಮನ ಸೆಳೆಯುತ್ತಾರೆ.

ಗಂಭೀರ ಪಾತ್ರದಲ್ಲಿ ಶರ್ಮಿಳಾ ಮಾಂಡ್ರೆ

ಒಂದು ಮಗುವಿನ ತಾಯಿ ಆಗಿ ಶರ್ಮಿಳಾ ಮಾಂಡ್ರೆ ನಟನೆ ಗಂಭೀರವಾಗಿದೆ. ಹಿಂದಿನ ಚಿತ್ರಗಳಿಗೆ ಹೋಲಿಸಿದರೆ, 'ಆಕೆ' ಸಿನಿಮಾದಲ್ಲಿ ಶರ್ಮಿಳಾ ಅಭಿನಯ ಕೊಂಚ ಮಾಗಿದೆ.

ಉಳಿದವರು...

ಪ್ರಕಾಶ್ ಬೆಳವಾಡಿ, ಅಚ್ಯುತ್ ಕುಮಾರ್, ಸ್ನೇಹಾ ಆಚಾರ್ಯ, ಬಾಲಾಜಿ ಮನೋಹರ್... ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ರೀಮೇಕ್ ಸಿನಿಮಾ

ತಮಿಳಿನಲ್ಲಿ ಹಿಟ್ ಅಗಿದ್ದ 'ಮಾಯಾ' ಚಿತ್ರದ ರೀಮೇಕ್ ಈ 'ಆಕೆ'. ಚಿತ್ರಕಥೆಯನ್ನ ಯಥಾವತ್ತಾಗಿ ಬಳಸಿಕೊಂಡರೂ, ಅದಕ್ಕೆ ಸ್ಟೈಲಿಶ್ ಟಚ್ ಕೊಟ್ಟಿದ್ದಾರೆ ನಿರ್ದೇಶಕ ಕೆ.ಎಂ.ಚೈತನ್ಯ. 'ಆಕೆ' ಚಿತ್ರದ ಬಹುಭಾಗ ಲಂಡನ್ ನಲ್ಲಿ ನಡೆಯುವುದರಿಂದ, ಸಿನಿಮಾಗೆ ಅಲ್ಲಿನ ಫೀಲ್ ಇದೆ. ಹಾಲಿವುಡ್ ನ ನುರಿತ ತಂತ್ರಜ್ಞರು 'ಆಕೆ' ಚಿತ್ರಕ್ಕೆ ಕೆಲಸ ಮಾಡಿ ಹೊಸ ಮೆರುಗು ನೀಡಿದ್ದಾರೆ.

ಛಾಯಾಗ್ರಹಣ, ಹಿನ್ನಲೆ ಸಂಗೀತ ಪ್ಲಸ್ ಪಾಯಿಂಟ್

'ಆಕೆ' ಚಿತ್ರದ ಬಹುದೊಡ್ಡ ಪ್ಲಸ್ ಪಾಯಿಂಟ್ ಅಂದ್ರೆ ಛಾಯಾಗ್ರಹಣ ಮತ್ತು ಹಿನ್ನಲೆ ಸಂಗೀತ. ಇರುಳಿನಲ್ಲಿ ಲಂಡನ್ ನ ರೋಚಕವಾಗಿ ಸೆರೆಹಿಡಿದಿದ್ದಾರೆ ಯು.ಕೆ ಮೂಲದ ಛಾಯಾಗ್ರಾಹಕ Ian Howes. ಇನ್ನೂ ಗುರುಕಿರಣ್ ರವರ ಸಂಗೀತ ಕೂಡ ಚಿತ್ರಕಥೆಯ ವೇಗವನ್ನ ಹೆಚ್ಚಿಸುತ್ತೆ.

'ಮಾಯಾ' ದರ್ಶನ ಮಾಡದೆ ಇರುವವರು...

ತಮಿಳಿನಲ್ಲಿ 'ಮಾಯಾ' ಚಿತ್ರವನ್ನ ನೋಡದೇ ಇರುವವರಿಗೆ ಕನ್ನಡದ 'ಆಕೆ' ಸಿನಿಮಾ ಹೆಚ್ಚು ಥ್ರಿಲ್ ನೀಡುತ್ತದೆ. 'ಮಾಯಾ' ದರ್ಶನ ಮಾಡಿರುವವರಿಗೆ ಕಥೆಯಲ್ಲಿ ಯಾವುದೇ ವ್ಯತ್ಯಾಸ ಕಾಣುವುದಿಲ್ಲ.

ಈ ವೀಕೆಂಡ್ ನಲ್ಲಿ 'ಆಕೆ'ಯನ್ನ ನೋಡಿ....

ಖಾಲಿ ಪೋಲಿ ಲವ್ ಸ್ಟೋರಿ ಸಿನಿಮಾಗಳನ್ನ ನೋಡಿ ನೋಡಿ ಬೋರ್ ಆಗಿರುವವರು ಒಮ್ಮೆ 'ಆಕೆ' ಚಿತ್ರವನ್ನ ನೋಡಬಹುದು.

English summary
Kannada Actor Chiranjeevi Sarja and Sharmila Mandre starrer starrer 'Aake' has hit the screens today (June 30th). 'Aake' movie review is here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada