Just In
Don't Miss!
- News
45 ಲಕ್ಷ ಟನ್ ಭತ್ತ ಖರೀದಿಸುವಂತೆ ಕೇಂದ್ರಕ್ಕೆ ಮನವಿ: ಗೋಪಾಲಯ್ಯ
- Finance
ಮೈಂಡ್ ಟ್ರೀ ಕಂಪೆನಿ ನಿವ್ವಳ ಲಾಭ 66% ಹೆಚ್ಚಳ
- Sports
ಐಪಿಎಲ್ ಆಟಗಾರರ ಹರಾಜಿಗೆ ಅರ್ಜುನ್ ತೆಂಡೂಲ್ಕರ್ ಸೇರ್ಪಡೆ?
- Automobiles
ಅನಾವರಣವಾಯ್ತು 2021ರ ಮೋಟೋ ಗುಜಿ ವಿ85 ಟಿಟಿ ಬೈಕ್
- Lifestyle
ಸ್ಟ್ರಾಬೆರ್ರಿ ಮಿಲ್ಕ್ ಶೇಕ್ ತುಂಬಾ ರುಚಿಯಾಗಿ ಮಾಡುವುದು ಹೇಗೆ
- Education
ECIL Recruitment 2021: 19 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬೆಳ್ಳಿ ವಿಮರ್ಶೆ: ಮರೆಯಲಾಗದ 'ಲಾಂಗ್' ಸ್ಟೋರಿ
'ಕಡ್ಡಿಪುಡಿ' ಚಿತ್ರದ ಬಳಿಕ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತೆ ಲಾಂಗ್ ಹಿಡಿದು ಪ್ರೇಕ್ಷಕರ ಮುಂದೆ ಬಂದಿರುವ ಚಿತ್ರವಿದು. ಇಲ್ಲೂ ತಾಯಿ ಸೆಂಟಿಮೆಂಟು, ರೌಡಿಯಿಸಂ, ಪಾತಕಲೋಕದ ಛಾಯೆ, ಲಾಂಗು ಮಚ್ಚುಗಳ ಅಬ್ಬರವಿದ್ದರೂ ಅವರ ವಿಭಿನ್ನ ಗೆಟಪ್, ವಿಲಕ್ಷಣ ಶೈಲಿಯಿಂದಾಗಿ ಚಿತ್ರ ಗಮನಸೆಳೆಯುತ್ತದೆ.
ಶಿವರಾಜ್ ಕುಮಾರ್ ಅಭಿಮಾನಿಗಳ ನಿರೀಕ್ಷೆಗೆ ಎಳ್ಳಷ್ಟೂ ಧಕ್ಕೆ ಬಾರದಂತೆ ತೆರೆಗೆ ತಂದಿದ್ದಾರೆ ನಿರ್ದೇಶಕ ಮಹೇಶ್ (ಮುಸ್ಸಂಜೆ ಮಾತು). ಚಿತ್ರದಲ್ಲಿ ಭರ್ಜರಿ ತಾರಾಗಣವಿದ್ದರೂ ಬಸವರಾಜ್ ಯಾನೆ ಬೆಳ್ಳಿ ಪಾತ್ರ ಸಂಪೂರ್ಣ ಬೆಳ್ಳಿತೆರೆಯನ್ನು ಆವರಿಸುವಂತೆ ನಿರ್ದೇಶಕರು ಜಾಗ್ರತೆ ವಹಿಸಿರುವುದನ್ನು ಕಾಣಬಹುದು.
ಇಲ್ಲೂ ಚಿತ್ರದ ನಾಯಕ ಬೆಳ್ಳಿ (ಶಿವರಾಜ್ ಕುಮಾರ್) ಹಳ್ಳಿಯಿಂದ ಬೆಂಗಳೂರಿಗೆ ಬರುತ್ತಾನೆ. ಆದರೆ ಜೋಗಿ ಚಿತ್ರದಂತೆ ಓಡಿಬರಲ್ಲ. ತಾಯಿಗೆ ಹೇಳಿಯೇ ಬರುತ್ತಾನೆ. ಇನ್ನೊಂದು ವಿಶೇಷ ಎಂದರೆ ಬೆಳ್ಳಿ ಗ್ರಾಜ್ಯುಯೇಟ್ ಎಂಬುದು. ಉದ್ಯೋಗ ಅರಸಿ ಬರುವ ಬೆಳ್ಳಿ ಪಾತಕಲೋಕಕ್ಕೆ ಅಡಿಯಿಡುವಂತಾಗುತ್ತದೆ.

ಸಂಪೂರ್ಣವಾಗಿ ಆವರಿಸಿಕೊಳ್ಳುವ ಶಿವಣ್ಣ ಪಾತ್ರ
ಕಥೆ ತುಂಬಾ ಸರಳ ಹಾಗೂ ಊಹೆಗೆ ನಿಲುಕುವಂತಿದ್ದರೂ ನಿರ್ದೇಶಕರು ಬೆಳ್ಳಿ ಪಾತ್ರಕ್ಕೆ ಹುಚ್ಚನ ರೂಪ ನೀಡಿ ಪ್ರೇಕ್ಷಕರನ್ನು ಹಿಡಿದಿಡುವಂತೆ ಮಾಡಿದ್ದಾರೆ. ಇಲ್ಲದಿದ್ದರೆ ಇದೂ ಒಂದು ಸೀದಾಸಾದಾ ಕಥೆಯಾಗುತ್ತಿತ್ತು. ಬೆಳ್ಳಿ ಪಾತ್ರಕ್ಕೆ ಶಿವಣ್ಣ ಕಸುವು ತುಂಬಿರುವುದು ಗಮನಾರ್ಹ ಸಂಗತಿ.

ಜೋಗಿ, ಓಂ ಚಿತ್ರಗಳ ಛಾಯೆ
ಪೊಲೀಸರ ಪ್ರಕಾರ ಯಾವಾಗಲೋ ಸತ್ತು ಹೋಗಿರುವ ಬೆಳ್ಳಿ ಯಾಕೆ ಹುಚ್ಚನಾದ, ಇದರ ಹಿಂದಿನ ಕಥೆ ಏನು ಎಂಬುದೇ ಚಿತ್ರದ ಕಥಾಹಂದರ. ಚಿತ್ರದ ನೋಡಿದ ಮೇಲೆ ಜೋಗಿ, ಓಂ ಹಾಗೂ ಹುಚ್ಚ ಚಿತ್ರಗಳ ಛಾಯೆ ನಿಮ್ಮ ಮನಸ್ಸಿನ ಪರದೆ ಮೇಲೆ ಮೂಡಿದರೂ ಅಚ್ಚರಿಯಿಲ್ಲ. ಒಟ್ಟಾರೆಯಾಗಿ ಬೆಳ್ಳಿ ಪಾತ್ರಕ್ಕೆ ಶಿವಣ್ಣ ಸಂಪೂರ್ಣ ನ್ಯಾಯ ಸಲ್ಲಿಸಿದ್ದಾರೆ.

ಕಣ್ಣೀರಿನಲ್ಲೇ ಕಳೆದುಹೋಗುವ ತಾಯಿ ಪಾತ್ರ
ಬೆಳ್ಳಿ ತಾಯಿಯಾಗಿ ಪದ್ಮಾವಾಸಂತಿ ಅವರದು ಇನ್ನೊಂದು ಪ್ರಮುಖ ಪಾತ್ರ. ಅವರ ಪಾತ್ರ ಬಹುತೇಕ ಮಗನ ಹುಡುಕಾಟ, ಕಣ್ಣೀರಿನಲ್ಲೇ ಕಳೆದುಹೋಗಿದೆ. ಬೆಳ್ಳಿ ಕಥೆಯನ್ನು ಹುಡುಕುತ್ತಾ ಸಾಗುವ ಕಥೆಗಾತಿ ಪಾತ್ರದಲ್ಲಿ ಸುಧಾರಾಣಿ ಅವರು ಕಾಣಿಸುತ್ತಾರೆ.

ಬೆಳ್ಳಿಯ ಜೊತೆ ಬಳುಕುವ ಬಳ್ಳಿ ಕೃತಿ ಕರಬಂಧ
ಚಿತ್ರದಲ್ಲಿ ಶಿವಣ್ಣ ಬೆಳ್ಳಿಯಾಗಿ ಮಿಂಚಿದರೆ ಕೃತಿ ಕರಬಂಧ ಬಳುಕುವ ಬಳ್ಳಿ ಎನ್ನಬಹುದು. ಬೆಳ್ಳಿಯ ಹಿಂದೆ ಸುತ್ತವ ಸ್ನೇಹಾ ಆಗಿಯಷ್ಟೇ ಅವರ ಪಾತ್ರ ಉಳಿದುಹೋಗಿದೆ. ಗ್ಲಾಮರ್ ಗೊಂಬೆಯಂತೆ ಅಲ್ಲದೆ ಲಕ್ಷಣವಾದ ಗೊಂಬೆಯಂತೆ ಅವರ ಪಾತ್ರ ಮೂಡಿಬಂದಿದೆ.

ನೆನಪಿನಲ್ಲಿ ಉಳಿಯುವ ಪಾತ್ರಗಳು
ವಿನೋದ್ ಪ್ರಭಾಕರ್, ದೀಪಕ್, ಒರಟ ಪ್ರಶಾಂತ್, ವೆಂಕಟೇಶ್ ಪ್ರಸಾದ್ ಅವರ ಪಾತ್ರಗಳನ್ನು ಸಮಪ್ರಮಾಣದಲ್ಲಿ ತೂಗಿಸಿಕೊಂಡು ಬಂದಿದ್ದಾರೆ ನಿರ್ದೇಶಕರು. ವೆಂಕಟೇಶ್ ಪ್ರಸಾದ್, ಆದಿ ಲೋಕೇಶ್ ಪಾತ್ರಗಳು ನೆನಪಿನಲ್ಲಿ ಉಳಿಯುತ್ತವೆ.

ಕಾಮಿಡಿ ಇಲ್ಲದಿರುವುದು ದೊಡ್ಡ ಕೊರತೆ
ಕೆ.ಎಸ್.ಚಂದ್ರಶೇಖರ್ ಅವರ ಛಾಯಾಗ್ರಹಣ ಕಣ್ಣಿಗೆ ಹಿತಮಿತವಾಗಿದೆ. ವಿ ಶ್ರೀಧರ್ ಅವರ ಸಂಗೀತದ ಎರಡು ಹಾಡುಗಳ ಮೇಕಿಂಗ್ ಗಮನಸೆಳೆಯುತ್ತದೆ. ವಿಶೇಷ ಎಂದರೆ ಚಿತ್ರದಲ್ಲಿ ಕಾಮಿಡಿ ಇಲ್ಲದಿರುವುದು ಒಂದು ದೊಡ್ಡ ಕೊರತೆ ಎನ್ನಬಹುದು.

ಮರೆಯಲಾಗದ 'ಲಾಂಗ್' ಸ್ಟೋರಿ
ಆರಂಭದಲ್ಲೆ 'ಬೆಳ್ಳಿ' ಶೀರ್ಷಿಕೆಯನ್ನು 'ಓಂ'ನಂತೆ ತೋರಿಸಿರುವ ನಿರ್ದೇಶಕರು ಇನ್ನೊಂದು ಓಂ ಚಿತ್ರದಂತೆ ಬಿಂಬಿಸಿದ್ದಾರೆ. ಆದರೆ ಕಥೆ ಸಾಗುತ್ತಿದ್ದಂತೆ ಜೋಗಿ, ಹುಚ್ಚ ಚಿತ್ರಗಳ ಛಾಯೆ ಕಾಣುತ್ತದೆ. ಒಟ್ಟಾರೆಯಾಗಿ ಶಿವಣ್ಣನ ಅಭಿಮಾನಿಗಳಿಗೆ ಇದೊಂದು ಮರೆಯಲಾಗದ 'ಲಾಂಗ್' ಸ್ಟೋರಿ.