Don't Miss!
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- Sports
IND vs NZ 2nd T20: ಭಾರತಕ್ಕೆ ಸಾಧಾರಣ ಗುರಿ ನೀಡಿದ ನ್ಯೂಜಿಲೆಂಡ್
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಖತರ್ನಾಕ್' ವಿಮರ್ಶೆ: ದುರ್ಬಲ ಹೃದಯಗಳಿಗಲ್ಲ
ಚಲನಚಿತ್ರ ಸಂಭಾಷಣೆ ಹಾಗೂ ಸಾಹಿತ್ಯದಲ್ಲಿ ತಮ್ಮದೇ ಆದಂತಹ ಕೃಷಿ ಮಾಡಿದವರು 'ಮಳವಳ್ಳಿ ಮಾಣಿಕ್ಯ' ಬಿರುದಾಂಕಿತ ಮಳವಳ್ಳಿ ಸಾಯಿಕೃಷ್ಣ. ಇದೇ ಮೊದಲ ಬಾರಿಗೆ ಆಕ್ಷನ್, ಕಟ್ ಹೇಳಿದ್ದಾರೆ. ಚೊಚ್ಚಲ ನಿರ್ದೇಶನದಲ್ಲಿ ಸಾಯಿಕೃಷ್ಣ ಬಹುತೇಕ ಗೆದ್ದಿದ್ದಾರೆ.
'ದಂಡುಪಾಳ್ಯ' ಚಿತ್ರದ ಯಶಸ್ಸಿನ ನಂತರ ಅದೇ ರೀತಿಯ ಕ್ರೈಂ ಸ್ಟೋರಿಗಳು ಸಿನಿಮಾಗಳಾಗಿ ಪ್ರೇಕ್ಷಕರ ಮುಂದೆ ಬರುತ್ತಿರುವು ವಿಶೇಷ. ಇಲ್ಲೂ ಅಷ್ಟೇ ಹಸಿಬಿಸಿ ದೃಶ್ಯಗಳು, ರಕ್ತಸಿಕ್ತ ಸನ್ನಿವೇಶಗಳು ಧಾರಾಳವಾಗಿವೆ. ಇದರ ಜೊತೆಗೆ ಲೈಂಗಿಕ ಶಿಕ್ಷಣದ ಮಹತ್ವದ ಬಗ್ಗೆಯೂ ಪ್ರಸ್ತಾಪವಿದೆ. ಮಕ್ಕಳಿಗೆ ಲೈಂಗಿಕ ಶಿಕ್ಷಣ ಕೊಟ್ಟರೆ ಈ ರೀತಿ ವಿಕೃತಗಳನ್ನು ತಡೆಯಬಹುದೇನೋ ಎಂಬ ದೂರಾಲೋಚನೆಯೂ ಇದೆ.
ಒಬ್ಬ ಸೈಕೋ ಕುರಿತ ಕಥೆಯಾದ ಕಾರಣ ಇವೆಲ್ಲಾ ಅನಿವಾರ್ಯವೋ, ಔಚಿತ್ಯವೋ ಎಂಬುದು ನಿರ್ದೇಶಕರಿಗೆ ಬಿಟ್ಟ ವಿಚಾರ. ಆದರೆ ಮನೆಮಂದಿಯಲ್ಲಾ ನೋಡಬೇಕೆ ಬೇಡವೆ ಎಂಬ ನಿರ್ಧಾರ ಮಾತ್ರ ಪ್ರೇಕ್ಷಕನಿಗೆ ಬಿಟ್ಟದ್ದು.
ಚಿತ್ರ: ಖತರ್ನಾಕ್
ನಿರ್ಮಾಣ: ಆದಿತ್ಯ ರಮೇಶ್ ಮೂವೀಸ್
ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ: ಮಳವಳ್ಳಿ ಸಾಯಿಕೃಷ್ಣ
ಸಂಗೀತ: ಸಾಧು ಕೋಕಿಲ
ಛಾಯಾಗ್ರಹಣ: ಎಂ.ಆರ್.ಸೀನು
ಸಾಹಸ ನಿರ್ದೇಶನ: ರವಿವರ್ಮ
ಪಾತ್ರವರ್ಗ: ರವಿಕಾಳೆ, ರವಿವರ್ಮ, ರೂಪಿಕಾ, ಶೋಭಿನಾ, ಸಾಧು ಕೋಕಿಲ, ಬುಲೆಟ್ ಪ್ರಕಾಶ್, ಮುರಳಿ ಮೋಹನ್, ತುಳಸಿ ಶಿವಮಣಿ, ರವೀಂದ್ರನಾಥ್, ತುಮಕೂರು ಮೋಹನ್, ಶೋಭಾ ರಾಘವೇಂದ್ರ ಮುಂತಾದವರು.

ಚಿತ್ರದಲ್ಲಿ ಒಂದು ಒಳ್ಳೆಯ ಸಂದೇಶವಿದೆ
ಚಿತ್ರದ ಕಥಾವಸ್ತುವೇ ಒಬ್ಬ ವಿಕೃತಕಾಮಿ ಕುರಿತದ್ದಾದ ಕಾರಣ ಈ ರೀತಿಯ ವಿಕೃತಗಳನ್ನು ನಿರೀಕ್ಷಿಸದಿರಲು ಸಾಧ್ಯವೇ? ಹಾಗಂತ ಚಿತ್ರ ಕೇವಲ ಅದೇ ರೀತಿಯ ಸನ್ನಿವೇಶಗಳಿವೆ ಮಾತ್ರ ಸೀಮಿತ ಎಂದು ಭಾವಿಸುವಂತಿಲ್ಲ. ಚಿತ್ರದಲ್ಲಿ ಒಂದು ಒಳ್ಳೆಯ ಸಂದೇಶವಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಹಿತವಚನವನ್ನು ಸಾಯಿಕೃಷ್ಣ ಮತ್ತೆ ನೆನಪಿಸಿದ್ದಾರೆ.

ಎಲ್ಲವೂ ನೂರಕ್ಕೆ ನೂರರಷ್ಟು ಕಾಲ್ಪನಿಕ
ತಾಯಿ ಕೆಟ್ಟವಳಾಗಿದ್ದರೆ ಮಗ ಏನೆಲ್ಲಾ ಆಗುತ್ತಾನೆ ಎಂಬುದನ್ನು ಸಾಯಿಕೃಷ್ಣ 'ಖತರ್ನಾಕ್' ಸನ್ನಿವೇಶಗಳಲ್ಲೇ ಕಣ್ಣುನೆಟ್ಟ ಪ್ರೇಕ್ಷಕನ ಕಣ್ಣು ತೆರೆಸುತ್ತಾರೆ. ಚಿತ್ರದಲ್ಲಿನ ಪಾತ್ರಗಳು, ಸನ್ನಿವೇಶಗಳು ಎಲ್ಲವೂ ನೂರಕ್ಕೆ ನೂರರಷ್ಟು ಕಾಲ್ಪನಿಕ ಎಂದು ಆರಂಭದಲ್ಲೇ ಹೇಳಲಾಗಿದೆ. ಆದರೂ ಇದು ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ವಿಕೃತಕಾಮಿಯೊಬ್ಬನ ಕುರಿತ ಚಿತ್ರ ಎಂಬುದು ಪ್ರೇಕ್ಷಕರ ಅರಿವಿಗೆ ಬಾರದೆ ಇರದು.

ಮನಃಶಾಸ್ತ್ರದ ವಿದ್ಯಾರ್ಥಿನಿಯಾಗಿ ರೂಪಿಕಾ
ಇದು ಅವನದೇ ಕಥೆ ಎಂಬ ಕಾರಣಕ್ಕೆ ತಾನೆ ಪ್ರೇಕ್ಷಕರು ಅಷ್ಟೊಂದು ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಬರಲು ಸಾಧ್ಯವಾಗಿರುವುದು. ಚಿತ್ರದಲ್ಲಿ ರೂಪಿಕಾ ಅವರು ಮನಃಶಾಸ್ತ್ರದ ವಿದ್ಯಾರ್ಥಿನಿ ಅಪೂರ್ವ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ವಿಕೃತಕಾಮಿಯ ಬಗ್ಗೆ ಅಧ್ಯಯನ ಮಾಡುತ್ತಾ ಹೋದಂತೆಲ್ಲಾ ಅವನ ಒಂದೊಂದೇ ವಿಕೃತಗಳು ತೆರೆಯ ಮೇಲೆ ಮೂಡಿಬರುತ್ತವೆ.

ಉಮೇಶನ ಪಾತ್ರಕ್ಕೆ ರವಿಕಾಳೆ ಸಂಪೂರ್ಣ ನ್ಯಾಯ
ಉಮೇಶನ ಪಾತ್ರಕ್ಕೆ ರವಿಕಾಳೆ ಸಂಪೂರ್ಣ ನ್ಯಾಯ ನೀತಿ ಧರ್ಮ ಸಲ್ಲಿಸಿದ್ದಾರೆ. ಹೆಂಗಸರ ಬಟ್ಟೆಗಳ ಜೊತೆಗಿನ ಅವನ ನಂಟು, ವಿಕೃತ ಚೇಷ್ಟೆಗಳು, ಕೊಲೆ, ಅತ್ಯಾಚಾರದಂತಹ ಸನ್ನಿವೇಶಗಳು ಪರದೆ ಮೇಲೆ ಸಾಕಷ್ಟು ಸರಿದಾಡಿದರೂ ಅವೆಲ್ಲವೂ ಸಹ್ಯವಾಗುವಂತೆ ಜಾಗ್ರತೆ ವಹಿಸಿದ್ದಾರೆ.

ಕೆಟ್ಟ ತಾಯಿಯಾಗಿ ನೆನಪಿನಲ್ಲಿ ಉಳಿಯುವ ಶೋಭಾ
ಚಿತ್ರದಲ್ಲಿನ ಮತ್ತೊಂದು ಗಮನಾರ್ಹ ಪಾತ್ರ ಎಂದರೆ ಉಮೇಶನ ತಾಯಿ ಪಾತ್ರ. ಈ ಪಾತ್ರದಲ್ಲಿ ಲೀನವಾಗಿ ಅಭಿನಯಿಸಿದ್ದಾರೆ ಶೋಭಾ ರಾಘವೇಂದ್ರ. ಚಿತ್ರದುರ್ಗದ ಹಳ್ಳಿಯೊಂದರಿಂದ ಸಾಗುವ (ಹಳ್ಳಿ ಹೆಸರು ಮ್ಯೂಟ್ ಮಾಡಲಾಗಿದೆ) ಕಥೆಯ ಆದಿಯಿಂದ ಅಂತ್ಯದವರೆಗೂ ಶೋಭಾ ಅವರು ಕೆಟ್ಟ ತಾಯಿಯಾಗಿ ನೆನಪಿನಲ್ಲಿ ಉಳಿಯುತ್ತಾರೆ.

ಕಾಮಿಡಿಗೆ ಅಷ್ಟಾಗಿ ಮಹತ್ವ ನೀಡಿಲ್ಲ
ಇನ್ನು ಚಿತ್ರಕ್ಕೆ ಸಂಗೀತದ ಜೊತೆಗೆ ಕಾಮಿಡಿ ಪಾತ್ರವನ್ನೂ ಮಾಡಿರುವ ಸಾಧು ಕೋಕಿಲಾ ಅವರಿಗೆ ತೆರೆಯ ಮೇಲೆ ಅಷ್ಟಾಗಿ ಚಾನ್ಸ್ ಸಿಕ್ಕಿಲ್ಲ. ಅವರ ಪಾತ್ರವಿದೆ ಆದರೆ ಕಾಮಿಡಿ ಇಲ್ಲ. ಬುಲೆಟ್ ಪ್ರಕಾಶ್ ಸಹ ಇದ್ದಾರೆ ಎಂಬುದನ್ನು ಬಿಟ್ಟರೆ ಅಲ್ಲೂ ಅಷ್ಟೇ. ಗಂಭೀರ ದಾಟಿಯಲ್ಲೇ ಸಾಗುವ ಕಥೆಯೋ ಎಂಬ ಕಾರಣಕ್ಕೆ ಚಿತ್ರದಲ್ಲಿ ಕಾಮಿಡಿಗೆ ಅಷ್ಟಾಗಿ ಮಹತ್ವ ನೀಡಿಲ್ಲ.

ಚಿತ್ರದಲ್ಲಿ ತಾಂತ್ರಿಕ ಸನ್ನಿವೇಶಗಳ ಬಗ್ಗೆ
ಇನ್ನು ಎಂ.ಆರ್.ಸೀನು ಅವರ ಛಾಯಾಗ್ರಹಣ ಕಥೆಗೆ ಪೂರಕವಾಗಿ ಸಾಗಿದೆ. ರವಿವರ್ಮ ಅವರ ಸಾಹಸ, ಸಾಧು ಕೋಕಿಲ ಅವರ ಸಂಗೀತವೂ ಅಷ್ಟೇ ಕಥೆಯ ಇತಿಮಿತಿಯೊಳಗೆ ಸಾಗುತ್ತದೆ. ಚಿತ್ರದ ಕೊನೆಗೆ ಉಮೇಶನಿಗೆ ಗಲ್ಲು ಶಿಕ್ಷೆಯಾಗಿ ನೇಣುಗಂಬ ಹತ್ತುತ್ತಾನೆ.

ಸಂದರ್ಭೋಚಿತವಾಗಿ ಮೂಡಿಬಂದಿರುವ ಪಾತ್ರಗಳು
ಇನ್ನು ಪೊಲೀಸ್ ಪಾತ್ರಗಳಲ್ಲಿ ಶರತ್ ಲೋಹಿತಾಶ್ವ, ರವಿವರ್ಮ, ಊರಿನ ಮುಖಂಡನಾಗಿ ರವೀಂದ್ರನಾಥ್ ಹಾಗೂ ಶೋಭಿನಾ, ಮುರಳಿ ಮೋಹನ್, ತುಳಸಿ ಶಿವಮಣಿ, ತುಮಕೂರು ಮೋಹನ್ ಪಾತ್ರಗಳು ಸಂದರ್ಭೋಚಿತವಾಗಿ ಮೂಡಿಬಂದಿವೆ.

ಇದು ದುರ್ಬಲ ಹೃದಯದವರಿಗಲ್ಲ
ಸಾಯಿಕೃಷ್ಣ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನವನ್ನು ಒಟ್ಟಾಗಿ ನಿಭಾಯಿಸಿರುವ ಕಾರಣ ಎಲ್ಲೂ ತಮ್ಮ ಬಿಗಿ ನಿರೂಪಣೆಯನ್ನು ಬಿಟ್ಟಿಲ್ಲ. ಕಥೆಯ ಚೌಕಟ್ಟು ಬಿಟ್ಟು ಹೋಗಬಾರದು ಎಂಬ ಕಾರಣಕ್ಕೋ ಏನೋ ಹಾಡುಗಳನ್ನೂ ಕೈಬಿಟ್ಟಿದ್ದಾರೆ ಸಾಯಿಕೃಷ್ಣ. ಒಟ್ಟಾರೆಯಾಗಿ ಇದು ದುರ್ಬಲ ಹೃದಯಗಳಿಗಲ್ಲ.