For Quick Alerts
  ALLOW NOTIFICATIONS  
  For Daily Alerts

  ಚಿತ್ರ ವಿಮರ್ಶೆ: ಮಂಜುನಾಥ ಬಿಎ ಎಲ್ಎಲ್ ಬಿ

  |

  Rating:
  3.0/5
  ನವರಸನಾಯಕ ಜಗ್ಗೇಶ್ ನಾಯಕತ್ವದ 'ಮಂಜುನಾಥ ಬಿಎ ಎಲ್ಎಲ್ ಬಿ' ಚಿತ್ರವು ಪ್ರೇಕ್ಷಕರನ್ನು ಖುಷಿಪಡಿಸುವಂತಿದೆ. ಎಸ್ ಮೋಹನ್ ಕಥೆ-ಸಂಭಾಷಣೆ ಹಾಗೂ ನಿರ್ದೇಶನದ ಈ ಚಿತ್ರ, ಆದಿಯಿಂದ ಅಂತ್ಯದವರೆಗೂ ಎಲ್ಲೂ ಬೋರು ಹೊಡೆಸುವುದಿಲ್ಲ. ಕೆಲ ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಜಗ್ಗೇಶ್ ಅಭಿನಯದ 'ಎದ್ದೇಳು ಮಂಜುನಾಥ' ಚಿತ್ರ ಸೂಪರ್ ಹಿಟ್ ಆಗಿದ್ದ ಹಿನ್ನೆಲೆಯಲ್ಲಿ ಅದೇ ಹೆಸರನ್ನು ಹೋಲುವ ಈ 'ಮಂಜುನಾಥ ಬಿಎ ಎಲ್ಎಲ್ ಬಿ' ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಮನೆಮಾಡಿತ್ತು.

  ನಿರ್ದೇಶನದ ಬಗ್ಗೆ: ಪ್ರೇಕ್ಷಕರ ನಿರೀಕ್ಷೆ ಈ ಚಿತ್ರದ ಮೂಲಕ ಸಂಪೂರ್ಣವಾಗಿ ನೆರವೇರುವಂತೆ ಚಿತ್ರ ಮೂಡಿ ಬಂದಿಲ್ಲವಾದರೂ ನಿರಾಸೆ ಕಾಡದಷ್ಟು ಚಿತ್ರವನ್ನು ಚೆನ್ನಾಗಿ ಮಾಡಿದ್ದಾರೆ ನಿರ್ದೇಶಕ ಮೋಹನ್. 'ಮಂಜುನಾಥ, ಬಿಎ ಎಲ್‌ಎಲ್‌ ಬಿ' ಚಿತ್ರವು 2007 ರಲ್ಲಿ ಬಿಡುಗಡೆಯಾಗಿದ್ದ ಮಲಯಾಳಂನ 'ಹಲೋ' ಚಿತ್ರದ ರೀಮೇಕ್. ಇಲ್ಲಿಯ ನೆಟಿವಿಟಿಗೆ ತಕ್ಕಂತಿರುವ ಲೊಕೇಶನ್ ಆಯ್ಕೆ ಮಾಡಿಕೊಂಡಿರುವ ನಿರ್ದೇಶಕರು ಚಿತ್ರಕಥೆ ಹಾಗೂ ನಿರೂಪಣೆ ಜವಾಬ್ಧಾರಿಯನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಸಂಭಾಷಣೆ ಚಿತ್ರದ ಹೈಲೈಟ್ ಗಳಲ್ಲೊಂದು.

  ಅಂದಹಾಗೆ, ಈ 'ಮಂಜುನಾಥ, ಬಿಎ ಎಲ್ಎಲ್ ಬಿ' ಚಿತ್ರದ ಟ್ಯಾಗ್ ಲೈನ್ 'ಬನ್ನಿ ನಿಮಗೂ ಹಾಕಸ್ತೀನಿ...!' ಎಂದಿದೆ. ಆದರೆ ಚಿತ್ರದ ನಿರೂಪಣೆ ಸೊಗಸಾಗಿರುವುದರಿಂದ ಜನರಿಗೆ ಥಿಯೇಟರಿನಲ್ಲಿ 'ಅದರ' ನೆನಪಾಗುವುದು ಅಪರೂಪ. ಚಿತ್ರ ನೋಡಿ ರಾತ್ರಿ 'ಅದನ್ನು' ಹಾಕಿದರೆ ಜಗ್ಗೇಶ್ ಹಾಗೂ ತಬಲಾ ನಾಣಿ ನೆನಪಾದರೆ ಅದು ಸ್ವಾಭಾವಿಕ. ಚಿತ್ರದಲ್ಲಿ 'ಬಾಟಲಿ' ಬಹಳಷ್ಟು ಸದ್ದು ಮಾಡಿದ್ದರೂ ಎಲ್ಲೂ ಅದು ಕಥೆಗೆ ಅನಗತ್ಯ ಎನಿಸಿ ಮನಸ್ಸಿಗೆ ಕಿರಿಕಿರಿ ಕೊಡುವುದಿಲ್ಲ, ಹಾಗೆಂದು ಚಿತ್ರಕ್ಕೆ ಅಷ್ಟೊಂದು 'ಬಾಟಲಿ ಬಳಕೆ'ಯ ಅಗತ್ಯವೂ ಇರಲಿಲ್ಲ ಎಂದರೂ ತಪ್ಪೇನೂ ಇಲ್ಲ.

  ಜಗ್ಗೇಶ್ ಚಿತ್ರವೆಂದರೆ ಅದರಲ್ಲಿ ಕಾಮಿಡಿ ಇದ್ದೇ ಇರುತ್ತದೆ ಎಂದುಕೊಂಡು ಹೋಗುವ ಜಗ್ಗೇಶ್ ಅಭಿಮಾನಿ ಪ್ರೇಕ್ಷಕರಿಗೂ ಚಿತ್ರ ಮೋಸ ಮಾಡುವುದಿಲ್ಲ. ಕಚಗುಳಿಯಿಡುವ ಹಾಸ್ಯದ ಜೊತೆಗೆ ಥ್ರಿಲ್ಲಿಂಗ್, ಸಸ್ಪೆನ್ಸ್, ಸೆಂಟಿಮೆಂಟ್, ಲವ್ ಹಾಗೂ ಸಮಾಜಕ್ಕೆ ಅಗತ್ಯವಿರುವ ಸಂದೇಶಗಳೂ ಚಿತ್ರದಲ್ಲಿವೆ. ಈ ಎಲ್ಲವನ್ನು ಚಿತ್ರದಲ್ಲಿ ಪ್ರೇಕ್ಷಕರಿಗೆ ಇಷ್ಟವಾಗುವಂತೆ ಮಿಕ್ಸ್ ಮಾಡಿ ಹೀಗೊಂದು ಸದಭಿರುಚಿ ಚಿತ್ರವನ್ನು ನೀಡಿ ಜಗ್ಗೇಶ್ ಅಭಿಮಾನಿಗಳನ್ನು ಮೆಚ್ಚಿಸಿರುವ ಮೋಹನ್ ಕೆಲಸ ಮೆಚ್ಚುವಂತಿದೆ.

  ಈ ಚಿತ್ರದಲ್ಲಿ ನಾಯಕನ (ಜಗ್ಗೇಶ್) 'ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದನ್ನು 'ಲಾಯರ್' ಪಾತ್ರ ಎನ್ನುವುದಕ್ಕಿಂತ ಕ್ರಿಮಿನಲ್ ಹಾಗೂ ಬುದ್ಧಿವಂತಿಕೆ ಎರಡರ ಮಿಶ್ರಣದಂತಿರುವ ಪಾತ್ರ ಎನ್ನುವುದೇ ಹೆಚ್ಚು ಸೂಕ್ತ. ನಾಯಕ ಪ್ರೀತಿಸಿದವಳನ್ನು ಮನೆತುಂಬಿಸಿಕೊಳ್ಳಲು ಮನಸ್ಸು ಮಾಡದೇ ಅವಳ ಸಾವಿಗೆ ಕಾರಣವಾದ ಮನೆಯವರನ್ನು ದ್ವೇಷಿಸುತ್ತಾ ಕುಡುಕನಾಗುವ ಪಾತ್ರ ನಾಯಕನದು. ಆದರೆ ಕುಡುಕನಾಗಿಯೇ ಅಂತ್ಯ ಕಾಣುವ ಪಾತ್ರವಾಗಿರದೇ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿ ಮಾನವೀಯತೆ ಮೆರೆಯುವುದರ ಜೊತೆ ಸ್ವತಃ ನಾಯಕನ ಜೀವನವೂ ಬಂಗಾರವಾಗುವ ಕಥೆ ಚಿತ್ರದ್ದು.

  ಕಲಾವಿದರು ಹಾಗೂ ತಂತ್ರಜ್ಞರ ಬಗ್ಗೆ: ಮಲಯಾಳಂ ಮೂಲ ಚಿತ್ರದಲ್ಲಿ ಮಮ್ಮುಟ್ಟಿ ಹಾಗೂ ಪಾರ್ವತಿ ಮೆಲ್ಟನ್ ಮಾಡಿದ್ದ ಪಾತ್ರವನ್ನು ಇಲ್ಲಿ ಜಗ್ಗೇಶ್ ಹಾಗೂ ರೀಮಾ ವೋರಾ ನಿರ್ವಹಿಸಿದ್ದಾರೆ. ಈ ಚಿತ್ರದ ನಾಯಕರಾಗಿ ಅಭಿನಯಿಸಿರುವ ನವರಸನಾಯಕ ಜಗ್ಗೇಶ್ ಅವರದು ಎಂದಿನಂತೆ ಮನಮುಟ್ಟುವ ಅಭಿನಯ. ಚಿತ್ರವು ಸಂಪೂರ್ಣವಾಗಿ ಹಾಸ್ಯಕ್ಕೇ ಮೀಸಲಾಗಿರದಿದ್ದರೂ ಪಾತ್ರಕ್ಕೆ ಪೂರಕವಾಗಿ ಅಭಿನಯಿಸುವ ಮೂಲಕ ಎಲ್ಲಾ ದೃಶ್ಯಗಳನ್ನೂ ಚೆನ್ನಾಗಿಯೇ ನಿರ್ವಿಹಿಸಿದ್ದಾರೆ ಜಗ್ಗೇಶ್. ಜಗ್ಗೇಶ್ ಪಾತ್ರದ ಜೊತೆಜೊತೆಯಲ್ಲೇ ಸಾಗುವ 'ಕುಂಟ' ಪಾತ್ರಧಾರಿ ತಬಲಾ ನಾಣಿ ಜಗ್ಗೇಶ್ ಅವರಿಗೆ ಸರಿಸಮವಾಗಿ ಮಿಂಚಿದ್ದಾರೆ.

  ಆದರೆ ನಾಯಕಿಯಾಗಿ ನಟಿಸಿರುವ ರೀಮಾ ವೋರಾ ಅಭಿನಯಿಸಲು ಪ್ರಯತ್ನಿಸಿ ಫಲಿತಾಂಶವನ್ನು ಪೂರ್ತಿಯಾಗಿ ಬಿಟ್ಟುಕೊಟ್ಟಿಲ್ಲ. ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸ್ಪೂರ್ತಿ ಅವರದು ಪಾತ್ರಕ್ಕೆ ತಕ್ಕ ಅಭಿನಯ. ಪೋಷಕ ಪಾತ್ರಧಾರಿಗಳಾದ ಶ್ರೀನಿವಾಸಮೂರ್ತಿ, ಗಿರಿಜಾ ಲೋಕೇಶ್, ಕರಿಬಸವಯ್ಯ, ಸ್ವಸ್ತಿಕ್ ಶಂಕರ್, ಶಂಕರ್ ಪಾಟೀಲ್, ಚಿದಾನಂದ್ ಮುಂತಾದವರು ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

  ಗೌರಮ್ಮ ಪ್ರೊಡಕ್ಷನ್ ಲಾಂಛನದಲ್ಲಿ ಎ ಸುರೇಶ್ ನಿರ್ಮಿಸಿರುವ ಈ ಚಿತ್ರಕ್ಕೆ ವಿನಯ್ ಚಂದ್ರ ಸಂಗೀತ ನೀಡಿದ್ದಾರೆ. ಅವರ ಸಂಗೀತದಲ್ಲಾಗಲೀ ಅಥವಾ ಹಾಡುಗಳಲ್ಲಾಗಲೀ ಯಾವುದೇ ವಿಶೇಷತೆ ಇಲ್ಲವಾದರೂ ಅದು ಚಿತ್ರಕ್ಕೆ ಪೂರಕವಾಗಿದೆ ಎಂದಷ್ಟೇ ಹೇಳಬಹುದು. ಅಶೋಕ್ ಅವರ ಛಾಯಾಗ್ರಹಣ ನಾಟ್ ಬ್ಯಾಡ್. ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಸನತ್ ಸಂಕಲನ ಬಾಬುಖಾನ್ ಕಲಾ ನಿರ್ದೇಶನವೂ ಓಕೆ. ಒಟ್ಟಿನಲ್ಲಿ ಜಗ್ಗೇಶ್ ಅಭಿಮಾನಿಗಳಿಗೆ ಎದ್ದೇಳು ಮಂಜನಾಥ (ವಿಮರ್ಶೆ ಓದಿರಿ) ಚಿತ್ರದ ಕಿಕ್ ಕೊಡದಿದ್ದರೂ ಅದನ್ನು ನೆನಪಿಸಿಕೊಳ್ಳಲು ಯಾವುದೇ ಅಭ್ಯಂತರವಿಲ್ಲ.

  English summary
  Navarasanayaka Jaggesh acted 'Manjunatha BA.., LLB', is a Comedy and Thriller based movie. This movie directed by actor-turned-director Mohan. The film is a remake of 2007 Malayalam hit 'Hallo' which starred Mohanlal and Parvati Melton. Read this Movie Review for the more...
 
  Friday, April 26, 2013, 17:49
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X