»   » ಚಿತ್ರ ವಿಮರ್ಶೆ: ಪುರುಸೊತ್ತಾದರೆ ನೋಡಿ ಪರಮಶಿವ

ಚಿತ್ರ ವಿಮರ್ಶೆ: ಪುರುಸೊತ್ತಾದರೆ ನೋಡಿ ಪರಮಶಿವ

By: ಉದಯರವಿ
Subscribe to Filmibeat Kannada

ಈ ರೀತಿಯ ಕೌಟುಂಬಿಕ ಕಥಾಹಂದರದ ಚಿತ್ರಗಳು ತೆಲುಗು, ತಮಿಳಿನಲ್ಲಿ ಒಂದು ಕಾಲದಲ್ಲಿ ಸಾಕಷ್ಟು ಸದ್ದು ಮಾಡಿ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ್ದಂತಹವು. ತೆಲುಗಿನ ಪೆದರಾಯುಡು, ತಮಿಳಿನ ಪಡಯಪ್ಪದಂತಹ ಚಿತ್ರಗಳು ಬಾಕ್ಸ್ ಆಫೀಸನ್ನು ಚಿಂದಿ ಚಿತ್ರಾನ್ನ ಮಾಡಿದ್ದವು. ಅದೇ ರೀತಿಯ ವರಸೆಯ ಚಿತ್ರ ತಮಿಳಿನ 'ಸಮುಧಿರಂ'.

2001ರಲ್ಲಿ ತೆರೆಕಂಡ ಈ ಚಿತ್ರದ ಪಡಿಯಚ್ಚೇ 'ಪರಮಶಿವ'. ಚಿತ್ರ ಹಳಸಾದರೂ ಕಮರ್ಷಿಯಲ್ ಅಂಶಗಳಿಂದ ಈಗಲೂ ಪ್ರಸ್ತುತ ಅನ್ನಿಸುತ್ತದೆ. ಇಂದು ಅಣ್ಣತಂಗಿ, ಅಣ್ಣತಮ್ಮಂದಿರ ಸಂಬಂಧಗಳಿಗೆ ಅರ್ಥವೇ ಇಲ್ಲದಂತಾಗಿದೆ. ಅಣ್ಣ-ತಂಗಿ-ತಮ್ಮಂದಿರ ಅನುಬಂಧದ ಮಹತ್ವವನ್ನು ಪರಿಣಾಮಕಾರಿಯಾಗಿ ತೆರೆದಿಡುವ ಚಿತ್ರ ಇದು. 'ಯಜಮಾನ' ಹಾಗೂ 'ಅಣ್ಣತಂಗಿ' ಚಿತ್ರದ ಛಾಯೆಯನ್ನು ಚಿತ್ರದುದ್ದಕ್ಕೂ ಕಾಣಬಹುದು.

ಚಿತ್ರದಲ್ಲಿ ರವಿಚಂದ್ರನ್ ಅವರದು ದ್ವಿಪಾತ್ರಾಭಿನಯ. ಫ್ಲ್ಯಾಶ್ ಬ್ಯಾಕ್ ನಲ್ಲಿ ಪರಮಶಿವನಾದರೆ, ಫ್ಲ್ಯಾಶ್ ಪಾರ್ವರ್ಡ್ ನಲ್ಲಿ ಶಿವ. ಪ್ರಾಣಹೋದರೂ ಪರ್ವಾಗಿಲ್ಲ, ಕೊಟ್ಟ ಮಾತು ತಪ್ಪುವವನಲ್ಲ ಈ ಪರಮಶಿವ. ಇಂತಹ ವಂಶದ ಪರಮಶಿವನ ಕುಡಿಯೇ ಶಿವ. ತಲೆಬೇಕು ಎಂದು ಕೇಳಿದವನಿಗೆ ತನ್ನ ತಲೆಯನ್ನೇ ಕೊಟ್ಟಿರುತ್ತಾನೆ ಪರಮಶಿವ.

Rating:
3.0/5

ಚಿತ್ರ: ಪರಮಶಿವ
ಸೆನ್ಸಾರ್ ಸರ್ಟಿಫಿಕೇಟ್: ಯು/ಎ
ನಿರ್ಮಾಪಕ ಹಾಗೂ ಛಾಯಾಗ್ರಾಹಕ: ಅಣಜಿ ನಾಗರಾಜ್
ನಿರ್ದೇಶನ: ಮಹೇಶ್ ಬಾಬು
ಸಂಗೀತ: ಅರ್ಜುನ್ ಜನ್ಯ
ಸಂಭಾಷಣೆ: ಎಂ.ಎಸ್.ರಮೇಶ್
ಸಂಕಲನ: ವಿನೋದ್ ಮನೋಹರ್
ತಾರಾಗಣ: ರವಿಚಂದ್ರನ್, ಸಾಕ್ಷಿ ಶಿವಾನಂದ್, ಶರಣ್ಯಾ, ವಿಜಯ್ ರಾಘವೇಂದ್ರ, ಸೃಜನ್ ಲೋಕೇಶ್, ಯಶಸ್, ರೇಖಾ, ಸಾಧು ಕೋಕಿಲ, ರಮೇಶ್ ಭಟ್ ಮುಂತಾದವರು.

ಅಣ್ಣನ ಮಾತೇ ಮಾಣಿಕ್ಯ

ಇನ್ನು ಶಿವನೂ ಅಷ್ಟೇ ತನ್ನ ತಮ್ಮಂದಿರಿಗೆ ವಿಷ ಕುಡಿ ಎಂದರೆ ಹಿಂದೆಮುಂದೆ ನೋಡದೆ ವಿಷವನ್ನೂ ಕುಡಿಯುತ್ತಾರೆ. ತನ್ನ ತಂಗಿಗಾಗಿ ಸಮಸ್ತ ಆಸ್ತಿಯನ್ನೂ ಬರೆದುಕೊಡುತ್ತಾರೆ ಅಣ್ಣಂದಿರು. ಆ ತಂಗಿಯೋ ಅಣ್ಣಂದಿರೇ ನನ್ನ ಆಸ್ತಿ ಎಂದು ನಂಬಿರುತ್ತಾಳೆ. ಒಟ್ಟಾರೆಯಾಗಿ ಪ್ರೇಕ್ಷಕರ ಕೈಗೆ ಕಣ್ಣೀರೊರೆಸಿಕೊಳ್ಳಲು ಈ ಬಾರಿ ರವಿಚಂದ್ರನ್ ಕರ್ಚೀಫ್ ಕೊಟ್ಟಿದ್ದಾರೆ.

ಕನ್ನಡಕ್ಕೆ ಹೊಸ ತಂಗೆವ್ವ ಶರಣ್ಯಾ

ಕನ್ನಡ ಚಿತ್ರರಂಗದಲ್ಲಿ ತಂಗಿ ಪಾತ್ರಕ್ಕೆ ಹೊಸ ಮುಖವಾಗಿ ಶರಣ್ಯಾ ಅವರು ಹೊರಹೊಮ್ಮಿದ್ದಾರೆ. ಸಾಕಷ್ಟು ಕಣ್ಣೀರು ಹರಿಸುವಂತಹ ಪಾತ್ರ ಅವರದು. ತಮ್ಮಂದಿರಾಗಿ ವಿಜಯ ರಾಘವೇಂದ್ರ, ಯಶಸ್ ಜೊತೆಗಿದ್ದಾರೆ. ರಾಘು, ಶಂಕ್ರು ಪಾತ್ರಗಳಲ್ಲಿ ಅವರದು ಮನಮಿಡಿಯುವ ಅಭಿನಯ.

ರವಿಮಾಮ ಡೈಲಾಗ್ ಗಳ ಅಬ್ಬರ

ಇನ್ನು ಚಿತ್ರದ ಪ್ಲಸ್ ಪಾಯಿಂಟ್ ಎಂದರೆ ಡೈಲಾಗ್ ಗಳು. ಚಿತ್ರಕ್ಕೆ ಎಂ.ಎಸ್. ರಮೇಶ್ ಅವರ ಸಂಭಾಷಣೆ ಮತ್ತೊಂದು ಆಯಾಮವನ್ನು ತಂದುಕೊಟ್ಟಿದೆ. ರವಿಮಾಮನ ಡೈಲಾಗ್ ಗೆ ಪ್ರೇಕ್ಷಕರು ಪರವಶರಾಗುತ್ತಾರೆ. ಶಿಳ್ಳೆ ಮೇಲೆ ಶಿಳ್ಳೆಗಳು ಬೀಳುತ್ತವೆ.

ಒಟ್ಟಾರೆ ಚಿತ್ರದ ಆಶಯ ನೆರವೇರಿದೆ

ತನ್ನ ತಂಗಿಗಾಗಿ ಅಣ್ಣಂದಿರು ಏನೆಲ್ಲಾ ತ್ಯಾಗ ಮಾಡುತ್ತಾರೆ, ಅಣ್ಣಂದಿರಿಗಾಗಿ ಎಂಥಹ ತ್ಯಾಗಕ್ಕೂ ಸಿದ್ಧವಿರುವ ತಂಗಿ ಕಡೆಗೆ ತಾಳಿಯನ್ನೇ ಕಿತ್ತೆಸೆಯುತ್ತಾಳೆ. ಚಿತ್ರದಲ್ಲಿ ಅಲ್ಲಲ್ಲಿ ಅತಿಶಯೋಕ್ತಿ ಎಂಬಂತೆ ಕೆಲವು ಸನ್ನಿವೇಶಗಳಿದ್ದರೂ ಕಮರ್ಷಿಯಲ್ ಚಿತ್ರವಾದ ಕಾರಣ ಪ್ರೇಕ್ಷಕರು ಅದನ್ನು ಗಂಭೀರವಾಗಿ ಪರಿಗಣಿಸಬಾರದು. ಒಟ್ಟಾರೆ ಚಿತ್ರದ ಆಶಯ ನೆರವೇರಿದೆ.

ಡ್ಯೂಯೆಟ್ ನಲ್ಲಿ ಇಣುಕುವ ಡೊಳ್ಳು ಹೊಟ್ಟೆ

ಅಣ್ಣ ಹಾಗೂ ತಂದೆಯ ಪಾತ್ರದಲ್ಲಿ ರವಿಚಂದ್ರನ್ ಅವರು ಎಂದಿನ ಅಭಿನಯ ನೀಡಿದ್ದಾರೆ. ಆದರೆ ಡ್ಯೂಯೆಟ್ ಸಾಂಗ್ ನಲ್ಲಿ ಮಾತ್ರ ಅವರ ಡೊಳ್ಳು ಹೊಟ್ಟೆಯೇ ಕಾಣುತ್ತದೆ. ಕಾವೇರಿಯಾಗಿ ಸಾಕ್ಷಿ ಶಿವಾನಂದ್ ಅವರು ಔಟ್ ಡೇಟೆಟ್ ಅನ್ನಿಸುತ್ತಾರೆ.

ಪ್ರೇಕ್ಷಕರ ಸಹನೆ ಕೆಣಕುವ ಫ್ಲ್ಯಾಶ್ ಬ್ಯಾಕ್

ಎರಡು ಸಲ ಚಿತ್ರ ಫ್ಲ್ಯಾಶ್ ಬ್ಯಾಕ್ ಗೆ ಹೊರಳುವ ಕಾರಣ ಕಥೆ ಟ್ರ್ಯಾಕ್ ಬದಲಾಯಿಸುತ್ತದೆ. ಪ್ರೇಕ್ಷಕರ ಸಹನೆಯನ್ನೂ ಕೆಣಕುತ್ತದೆ. ಸಾಧು ಕೋಕಿಲ ಅವರ ಕಾಮಿಡಿ ಗಂಭೀರವಾಗಿ ಮೂಡಿಬಂದಿದೆ. ಸೃಜನ್ ಲೋಕೇಶ್, ರೇಖಾ, ರಮೇಶ್ ಭಟ್ ಪಾತ್ರಗಳು ಕಥೆಗೆ ಪೂರಕವಾಗಿ ಮೂಡಿಬಂದಿವೆ.

ರಕ್ತ ಸಂಬಂಧಕ್ಕಿಂತ ದೊಡ್ಡದು ಯಾವುದೂ ಇಲ್ಲ

"ರಕ್ತ ಸಂಬಂಧಕ್ಕಿಂತ ದೊಡ್ಡದು ಯಾವುದೂ ಇಲ್ಲ. ಅಣ್ಣತಮ್ಮಂದಿರ ಸಬಂಧ ಚೆನ್ನಾಗಿದ್ದರೆ ಒಂದು ಕುಟುಂಬ ಚೆನ್ನಾಗಿರುತ್ತದೆ. ಒಂದು ಕುಟುಂಬ ಚೆನ್ನಾಗಿದ್ದರೆ ಒಂದು ಊರು ಚೆನ್ನಾಗಿರುತ್ತದೆ..." ಎಂಬ ಡೈಲಾಗ್ ಚಿತ್ರದ ಒಟ್ಟಾರೆ ಆಶಯಕ್ಕೆ ಕನ್ನಡಿ ಹಿಡಿಯುತ್ತದೆ.

ಸೆಂಟಿಮೆಂಟ್ ಪ್ರಿಯರಿಗೆ ಒಂದೆರಡು ಹನಿ ಕಣ್ಣೀರು

ಅರ್ಜುನ್ ಜನ್ಯ ಅವರ ಸಂಗೀತದ ಹಾಡುಗಳು ಕಥೆಯ ಓಟದಲ್ಲಿ ಗೊತ್ತೇ ಆಗದಂತೆ ಮೂಡಿಬಂದಿವೆ. ಚಿತ್ರದ ನಿರ್ಮಾಪಕ ಅಣಜಿ ನಾಗರಾಜ್ ಅವರೇ ಕ್ಯಾಮೆರಾ ಹಿಡಿದಿರುವುದು ವಿಶೇಷ. ಛಾಯಾಗ್ರಾಹಕರಾಗಿ ಅವರು ಬಹುತೇಕ ಗೆದ್ದಿದ್ದಾರೆ. ಸೆಂಟಿಮೆಂಟ್ ಪ್ರಿಯರಿಗೆ ಒಂದೆರಡು ಹನಿ ಕಣ್ಣೀರು, ಎಲ್ಲ ಅಣ್ಣ-ತಂಗಿ-ತಮ್ಮಂದಿರಿಗೆ ಒಂದು ಹಿಡಿ ಸಂದೇಶವನ್ನು ಚಿತ್ರ ಕೊಡುವಲ್ಲಿ ಯಶಸ್ವಿಯಾಗಿದೆ.

English summary
Crazy Star Ravichandran lead Kannada movie Paramashiva review. The story is simple and family oriented. it is usually repetitive and may fail to evoke any laughter. Movie has been made for family audience.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada