twitter
    For Quick Alerts
    ALLOW NOTIFICATIONS  
    For Daily Alerts

    ನಿಮಗೆ ಶ್ರೀಮಂಜುನಾಥ ಚಿತ್ರ ಮೆಚ್ಚುಗೆ

    By Super
    |

    ಚಿತ್ರ : ಶ್ರೀ ಮಂಜುನಾಥ ನಿರ್ದೇಶನ : ಕೆ. ರಾಘವೇಂದ್ರ ರಾವ್‌ತಾರಾಗಣ : ಚಿರಂಜೀವಿ, ಸೌಂದರ್ಯ, ಮೀನಾ, ಅರ್ಜುನ್‌ ಸರ್ಜಾ, ಸುಧಾರಾಣಿ, ಅಭಿಜಿತ್‌, ಅಂಬರೀಶ್‌, ಸುಮಲತಾ.

    ತೆಲುಗು ಚಿತ್ರಗಳ ಪ್ರಭಾವ ಕನ್ನಡ ಚಿತ್ರರಂಗದ ಮೇಲೆ ಎಷ್ಟರ ಮಟ್ಟಿಗೆ ಆಗಿದೆ ಅನ್ನುವುದಕ್ಕೆ ಸಾಕ್ಷಿಯೇ ಈ ವಾರ ಬಿಡುಗಡೆಯಾಗಿರುವ ಶ್ರೀಮಂಜುನಾಥ. ವಂದೇ ಮಾತರಂ ಖ್ಯಾತಿಯ ಜಯಶ್ರೀ ದೇವಿ ಈ ಚಿತ್ರದ ನಿರ್ಮಾಪಕಿ. ಕತೆ ಬರೆದಿರುವವರು ಜಯಶ್ರೀ ದೇವಿ ಅವರ ಮಾನಸಪುತ್ರ ಜೆ.ಕೆ. ಭಾರವಿ.

    ಶ್ರೀ ಮಂಜುನಾಥ ಪೌರಾಣಿಕದ ಮುಖವಾಡ ತೊಟ್ಟ ಸಾಮಾಜಿಕ ಚಿತ್ರ. ಇದಕ್ಕೋಸ್ಕರ ಜಯಶ್ರೀದೇವಿ ಏಳು ಕೋಟಿ ರುಪಾಯಿ ಖರ್ಚು ಮಾಡಿದ್ದಾರಂತೆ. ಏಳೆಂಟು ಸೂಪರ್‌ ಸ್ಟಾರ್‌ಗಳನ್ನು ಕಲೆ ಹಾಕಿದ್ದಾರೆ. ಶಿವನಾಗಿ ಚಿರಂಜೀವಿ, ಪಾರ್ವತಿಯಾಗಿ ಮೀನಾ, ಭಕ್ತನಾಗಿ ಅರ್ಜುನ್‌ ಸರ್ಜಾ, ಭಕ್ತೆಯಾಗಿ ಸೌಂದರ್ಯ, ಭೂದೇವಿಯಾಗಿ ಸುಧಾರಾಣಿ, ಭಕ್ತನ ಅಭಿಮಾನಿಗಳಾಗಿ ಕುಮಾರ್‌ ಗೋವಿಂದು, ಅಭಿಜಿತ್‌, ವಿನೋದ್‌ರಾಜ್‌ ಮುಂತಾದ ಗಣಗಳು... ಹೀಗೆ.. ಅಷ್ಟಾದಶಲೋಕಗಳ ಎಲ್ಲಾ ಕಲಾವಿದರಿಗೂ ದೇವಿ ಜಾಗ ಕೊಟ್ಟಿದ್ದಾರೆ.

    ಜೊತೆಗೆ ಗ್ರಾಫಿಕ್‌ ಪವಾಡವೂ ಇದೆ. ಶಿವ ಡಿಸ್ಕೋ ಡ್ಯಾನ್ಸ್‌ ಮಾಡುತ್ತಾನೆ. ತಾವೇನು ಕಮ್ಮಿ ಅಂತ ಶಿವಲಿಂಗಗಳೂ ಕುಣಿಯುತ್ತವೆ. ಶಿವ ಜೋಗಪ್ಪನಾಗುತ್ತಾನೆ. ಯಮರಾಜನಾಗುತ್ತಾನೆ. ಏನಾದರೂ ಆಗು ಮೊದಲು ಮಾನವವಾಗು ಅಂತ ಮಾನವನೂ ಮುದುಕನೂ ಆಗುತ್ತಾನೆ.

    ಕತೆಗಾರ ಭಾರವಿ ಶಿವನ ಕೈಯಿಂದ ಏನೆಲ್ಲ ಕೆಲಸ ತೆಗೆಸಿದ್ದಾರೆ. ಸಂಭಾಷಣೆ ಬರೆಸಿಲ್ಲ ಅನ್ನೋದನ್ನು ಬಿಟ್ಟರೆ ಇನ್ನೆಲ್ಲವನ್ನೂ ಶಿವ ಮಾಡಿದ್ದಾನೆ.

    ಚಿತ್ರದ ಕಥೆ ಇದು : ನಿರುದ್ಯೋಗಿ ಶಿವಪಾರ್ವತಿಯರು ಕೈಲಾಸದಲ್ಲಿ ಕೂತು ಭೂಮಂಡಲದಲ್ಲಿ ನಡೆಯೋದನ್ನೆಲ್ಲಾ ಟೀವಿಯಲ್ಲಿ ನೋಡುತ್ತಿದ್ದಾರೆ. ಇದ್ದಕ್ಕಿದ್ದ ಹಾಗೆ ಭೂಮಿಯಲ್ಲಿ ಒಳ್ಳೆಯವರಾರು ಎಂಬ ಪ್ರಶ್ನೆ ಶಿವನ ಕಣ್ಣುಮುಂದೆ ತಾಂಡವನೃತ್ಯ ಮಾಡುತ್ತದೆ. ಇದ್ದಕ್ಕಿದ್ದ ಹಾಗೆ ಪಾರ್ವತಿಯೂ ಆ ಪ್ರಶ್ನೆಗೆ ಜೋತು ಬೀಳುತ್ತಾಳೆ. ತಕ್ಷಣ ಶಿವ ನಾಸ್ತಿಕನೊಬ್ಬನನ್ನು ತೋರಿಸಿ ಆತ ತನ್ನ ಭಕ್ತ ಎನ್ನುತ್ತಾನೆ. ಅವನೇ ಮಂಜುನಾಥ. ಈ ನಾಸ್ತಿಕ ವೀರ, ಶೂರ, ಧರ್ಮಾತ್ಮ (ಅರ್ಜುನ್‌ ಸರ್ಜಾ) ಹೇಗೆ ಆಸ್ತಿಕನಾಗಿ ಪರಿವರ್ತನೆ ಹೊಂದುತ್ತಾನೆ ಮತ್ತು ಶಿವೈಕ್ಯನಾಗುತ್ತಾನೆ ಅನ್ನೋದನ್ನು ಕೆ. ರಾಘವೇಂದ್ರರಾವ್‌ ಮೂರು ಗಂಟೆಯ ಕಾಲ ವಿವರಿಸಿದ್ದಾರೆ. ಸಿನಿಮಾ ಪ್ರಿಯರಿಗೆ ಶಿವರಾತ್ರಿ ಜಾಗರಣೆಯ ನೆನಪು ತಂದುಕೊಡುವ ಚಿತ್ರದಲ್ಲಿ ಶಂಕರ್‌ ಮಹಾದೇವನ್‌ ಹಾಡಿದ ಬ್ರೆಥ್‌ಲೆಸ್‌ ಹಾಡಿದೆ. ಹಂಸಲೇಖ ಸಂಗೀತವಿದೆ. ಸೌಂದರ್ಯ, ಸೌಂದರ್ಯವನ್ನೆಲ್ಲ ಬಚ್ಚಿಟ್ಟು ಭಕ್ತೆಯಾಗಿದ್ದಾಳೆ. ಅಲ್ಲೊಮ್ಮೆ ಇಲ್ಲೊಮ್ಮೆ ಭಕ್ತ ಪ್ರಹ್ಲಾದನ ನೆನಪು ತಂದರೂ ಆ ಆಹ್ಲಾದ ಇಲ್ಲಿಲ್ಲ. ಸತ್ಯವಾನ ಸಾವಿತ್ರಯರ ಕಥೆ ನೆನಪಿಗೆ ಬಂದರೂ ಇಲ್ಲಿ ಯಾವುದೂ ಸತ್ಯವಲ್ಲ. ಮಂಜುನಾಥನಿಗೆ ಸಾವ್‌ ಇತ್ರಿ ಅಂತ ನೀವು ನಂಬಿದರೆ, ಶಿವ ಸಾವಿಲ್ಲದಂತೆ ಮಾಡುತ್ತಾನೆ.

    ತಂತ್ರಜ್ಞಾನ ಮುಂದುವರಿಯುತ್ತಿದ್ದಂತೆ ಮನಸ್ಸು ಹಿಂದಕ್ಕೋಡುತ್ತದೆ. ಹೀಗಾಗಿ ನಾವು ಆಧುನಿಕ ಡಿಟಿಎಸ್‌ ಮತ್ತು ಗ್ರಾಫಿಕ್‌ ತಂತ್ರಜ್ಞಾನ ಬಳಕೆಯಾದ ಓಬಿರಾಯನ ಅಜ್ಜನ ಕಾಲದ ಸಿನಿಮಾ ನೋಡಬೇಕಾಗಿ ಬಂದಿದೆ. ಬಾಹು ಬಾನಿಗೆ ಚಾಚಿದರೂ ಕಾಲು ನೆಲದಲ್ಲಿ ಹೂತ ಸ್ಥಿತಿ ಇದು. ಕಲ್ಪನೆಯ ಕೊರತೆ ಕಾಡಿದಾಗ ಈ ಥರದ ಕಥಾ ಹೀನತೆ ಪ್ರಾಪ್ತಿಯಾಗುತ್ತದೆ.

    ಇದು ಸಿನಿಮೀಯಕ್ಕಿಂತಲೂ ಅಪಾಯಕಾರಿ

    English summary
    Telugu influence on kannada manjunatha
    Wednesday, March 13, 2013, 17:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X