»   » 'ಮಫ್ತಿ' ವಿಮರ್ಶೆ : ಹಿತವನು ಬಯಸುವ ಕಡು ರಾಕ್ಷಸನ ಕಥೆ !

'ಮಫ್ತಿ' ವಿಮರ್ಶೆ : ಹಿತವನು ಬಯಸುವ ಕಡು ರಾಕ್ಷಸನ ಕಥೆ !

Posted By:
Subscribe to Filmibeat Kannada

'ಮಫ್ತಿ' ಸಿನಿಮಾ ಇಂದು ರಾಜ್ಯಾದ್ಯಂತ ಅದ್ದೂರಿ ಒಪನಿಂಗ್ ಪಡೆದುಕೊಂಡಿದೆ. ಶ್ರೀ ಮುರಳಿ ಅವರ 'ಉಗ್ರಂ' ಮತ್ತು 'ರಥಾವಾರ' ಸಿನಿಮಾ ಇಷ್ಟ ಪಟ್ಟು 'ಮಫ್ತಿ' ನೋಡುವುದಕ್ಕೆ ಬರುವ ಪ್ರೇಕ್ಷಕರನ್ನು ಈ ಸಿನಿಮಾ ನಿರಾಸೆ ಮಾಡುವುದಿಲ್ಲ. ಪಕ್ಕಾ ಮಾಸ್ ಆಗಿರುವ 'ಮಫ್ತಿ' ಚಿತ್ರದಲ್ಲಿ ಸಿಂಪಲ್ ಕಥೆ ಇದ್ದರೂ ಅದನ್ನು ಸೋಗಸಾಗಿ ತೋರಿಸಿದ್ದಾರೆ. ಚಿತ್ರದಲ್ಲಿ ಶ್ರೀ ಮುರಳಿ ನಾಯಕನಾಗಿದ್ದರು, ಶಿವಣ್ಣ ಪಾತ್ರಕ್ಕೆ ಇರುವ ತಾಕತ್ತು ಜೋರಾಗಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಆಕ್ಷನ್ ಪ್ರಿಯರಿಗೆ 'ಮಫ್ತಿ' ಹೇಳಿ ಮಾಡಿಸಿದ ಸಿನಿಮಾ.

Rating:
4.0/5

ಸಿನಿಮಾ : ಮಫ್ತಿ

ನಿರ್ಮಾಣ: ಜಯಣ್ಣ ಬೋಗೇಂದ್ರ

ನಿರ್ದೇಶನ: ನರ್ತನ್

ಛಾಯಾಗ್ರಹಣ : ನವೀನ್ ಕುಮಾರ್

ಸಂಕಲನ : ಹರೀಶ್ ಕೊಮ್ಮೆ

ಸಂಗೀತ: ರವಿ ಬಸೂರ್

ತಾರಾಗಣ: ಶಿವರಾಜ್ ಕುಮಾರ್, ಶ್ರೀ ಮುರಳಿ, ಶಾನ್ವಿ ಶ್ರೀವತ್ಸವ, ಛಾಯ ಸಿಂಗ್, ವಸಿಷ್ಟ ಸಿಂಹ, ದೇವರಾಜ್, ಪ್ರಕಾಶ್ ಬೆಳವಾಡಿ, ಸಾಧುಕೋಕಿಲ, ಚಿಕ್ಕಣ್ಣ ಮತ್ತಿತರರು.

ಬಿಡುಗಡೆ: ಡಿಸೆಂಬರ್ 1, 2017

ರಾಕ್ಷಸನು ನೀನೇನಾ.. ರಕ್ಷಕನು ನೀನೇನಾ..

'ಮಫ್ತಿ' ಚಿತ್ರದ ಕಥೆ ನಿಂತಿರುವುದು ''ರಾಕ್ಷಸನು ನೀನೇನಾ.. ರಕ್ಷಕನು ನೀನೇನಾ..'' ಎಂಬ ಈ ಒಂದು ಹಾಡಿನ ಸಾಲಿನಲ್ಲಿ. ಶಿವಣ್ಣ ಪ್ಲೇ ಮಾಡಿರುವ ಭೈರತಿ ರಣಗಲ್ಲು ಪಾತ್ರ ಸಿನಿಮಾದ ದೊಡ್ಡ ಹೈಲೆಟ್. ಆ ಪಾತ್ರ ಒಳ್ಳೆಯದೋ.. ಕೆಟ್ಟದೋ... ಅವನು ರಾಕ್ಷಸನೋ... ರಕ್ಷಕನೋ... ಎನ್ನುವುದು ಚಿತ್ರದ ಕುತೂಹಲಕಾರಿ ಅಂಶ.

ಪೊಲೀಸ್ ಮತ್ತು ಗ್ಯಾಂಗ್ ಸ್ಟರ್‌

ರೋಣಾಪುರ ಎನ್ನುವ ಒಂದು ಊರು. ಅಲ್ಲಿ ನಡೆಯುವ ಹಿಂಸೆ, ಅವ್ಯವಹಾರ, ಕೊಲೆ ಎಲ್ಲವನ್ನು ತಡೆಯಲು ಅಲ್ಲಿಗೆ ಮಫ್ತಿ ಪೊಲೀಸ್ ಆಗಿರುವ ಗಣ (ಶ್ರೀಮುರಳಿ) ಬರುತ್ತಾನೆ. ಈ ರೀತಿ ಚಿತ್ರದ ಕಥೆ ಶುರುವಾಗುತ್ತದೆ. ಆ ಊರಿನಲ್ಲಿ ನಡೆಯುವ ಎಲ್ಲ ಘಟನೆಗಳಿಗೆ ಅಲ್ಲಿನ ಗ್ಯಾಂಗ್ ಸ್ಟರ್‌ ಭೈರವ ರಣಗಲ್ಲು (ಶಿವರಾಜ್ ಕುಮಾರ್) ಕಾರಣ ಎಂದು ಆತನನ್ನು ಹಿಡಿಯಲು ಗಣ (ಶ್ರೀ ಮುರಳಿ)ನನ್ನು ಪೊಲೀಸ್ ಅಧಿಕಾರಿಗಳು ಕಳುಹಿಸುತ್ತಾರೆ.

ಸರ್ಕಾರಕ್ಕೆ ಕೆಟ್ಟವನು.. ಸಮಾಜಕ್ಕೆ ಒಳ್ಳೆಯವನು..

ಬೈರತಿ ರಣಗಲ್ಲು (ಶಿವರಾಜ್ ಕುಮಾರ್) ಗ್ಯಾಂಗ್ ಸೇರುವ ಗಣ (ಶ್ರೀಮುರಳಿ) ಅವರ ಜೊತೆ ಇದ್ದೇ ಅವರ ಎಲ್ಲ ಮಾಹಿತಿಯನ್ನು ಪೊಲೀಸ್ ಗೆ ಮುಟ್ಟಿಸುತ್ತಿರುತ್ತಾನೆ. ಹೀಗೆ ಇರುವಾಗ ಭೈರವ ರಣಗಲ್ಲುವಿನ ಒಳ್ಳೆಯ ಗುಣ.. ಆತನ ಒಳ್ಳೆಯ ಕೆಲಸ.. ಗಣನಿಗೆ ಅರ್ಥವಾಗುತ್ತದೆ. ಬಳಿಕ ಭೈರವ ರಣಗಲ್ಲು ಒಳ್ಳೆಯವನೋ..? ಕೆಟ್ಟವನ್ನೋ..? ಎನ್ನುವ ದ್ವಂದ್ವ ಗಣನಿಗೆ ಮೂಡುತ್ತದೆ. ಕೊನೆಗೆ ಗ್ಯಾಂಗ್ ಸ್ಟರ್ ಭೈರವ ರಣಗಲ್ಲುವಿಗೆ ಮಫ್ತಿ ಪೊಲೀಸ್ ಗಣ ಶಿಕ್ಷೆ ಆಗುವಂತೆ ಮಾಡುತ್ತಾನಾ.. ಇಲ್ವಾ.. ಎನ್ನುವುದು ಚಿತ್ರದ ಕಥೆ.

ನಟನೆಗೆ ಫುಲ್ ಮಾರ್ಕ್ಸ್

ನಟನೆಗೆ ಬಂದರೆ ಚಿತ್ರದಲ್ಲಿನ ಎಲ್ಲ ಪಾತ್ರಗಳು ಚೆನ್ನಾಗಿದೆ. ಶ್ರೀ ಮುರಳಿ ಮಾಸ್ ಅವತಾರದಲ್ಲಿ 'ಉಗ್ರಂ' ಶೈಲಿಯಲ್ಲಿಯೇ ಇಲ್ಲಿಯೂ ಪರಾಕ್ರಮ ಮೆರೆದಿದ್ದಾರೆ. ಶಿವಣ್ಣ ಈ ಸಿನಿಮಾದ ಆಸ್ತಿ. ಅವರ ಲುಕ್... ಆ ಖದರ್... ವಾವ್.. ಅದನ್ನು ಹೇಳುವುದಕ್ಕಿಂತ ನೋಡಿ ಅನುಭವಿಸಬೇಕು. ಆಕಸ್ಮಾತ್, ಶಿವಣ್ಣ ಈ ಚಿತ್ರದಲ್ಲಿ ಆ ಪಾತ್ರ ಮಾಡದಿದ್ದರೆ 'ಮಫ್ತಿ'ಗೆ ದೊಡ್ಡ ನಷ್ಟವಾಗುತ್ತಿತ್ತು.

ಉಳಿದವರ ಪಾತ್ರ

ಚಿತ್ರದಲ್ಲಿ ರಾಜಕಾರಣಿ ಆಗಿರುವ ದೇವರಾಜ್ ಮತ್ತು ಪರಿಸರವಾದಿ ಆಗಿರುವ ಪ್ರಕಾಶ್ ಬೆಳವಾಡಿ ಎಂದಿನಂತೆ ತಮ್ಮ ಮಾಗಿದ ಅಭಿನಯದ ಮೂಲಕ ಗಮನ ಸೆಳೆಯುತ್ತಾರೆ. ನೋಡುಗರಿಗೆ ಬೋರ್ ಆಗದೆ ಇರುವ ರೀತಿ ಚಿಕ್ಕಣ್ಣ, ಸಾಧು ಕೋಕಿಲ ಆಗಾಗ ಬಂದು ನಗಿಸುತ್ತಾರೆ. ನಾಯಕಿ ಶಾನ್ವಿಶ್ರೀವತ್ಸವ ಜಾಸ್ತಿ ಹೊತ್ತು ತೆರೆ ಮೇಲೆ ಇರುವುದಿಲ್ಲ. ಇನ್ನು ಛಾಯಾ ಸಿಂಗ್ ಶಿವಣ್ಣನ ತಂಗಿ ಆಗಿದ್ದಾರೆ.

ನೀಟಾದ ಸಿನಿಮಾ

'ಮಫ್ತಿ' ಒಂದು ನೀಟಾದ ಸಿನಿಮಾ. ಸರಳ ಕಥೆಯನ್ನು ಸುಂದರವಾಗಿ ಪರದೆ ಮೇಲೆ ಪ್ರೆಸೆಂಟ್ ಮಾಡಿದ್ದಾರೆ. ಕಥೆಗೆ ತಕ್ಕನಾದ ಎರಡು ಹಾಡು, ಆಗಾಗ ಬರುವ ಕಾಮಿಡಿ ದೃಶ್ಯ, ಮಾಸ್ ಪ್ರೇಕ್ಷಕರಿಗಾಗಿ ಒಂದಷ್ಟು ಆಕ್ಷನ್ ಹೊಡೆದಾಟದ ದೃಶ್ಯಗಳು... ಇದನ್ನು ಬಿಟ್ಟು ಬೇಡದ ವಿಷಯವನ್ನು ಸುಮ್ಮನೆ ತುರುಕಿಲ್ಲ.

ಮೇಕಿಂಗ್ ಮತ್ತು ಮ್ಯೂಸಿಕ್

ಸಿನಿಮಾದ ಮೇಕಿಂಗ್ ಅದ್ಬುತ. ಛಾಯಾಗ್ರಾಹಕ ನವೀನ್ ಕುಮಾರ್ ತೆಗೆದಿರುವ ಒಂದೊಂದು ಶಾಟ್ ಕೂಡ ನೋಡುಗರ ಕಣ್ಣು ಅರಳಿಸುತ್ತದೆ. ರವಿಬಸೂರ್ ಸಂಗೀತ ಥ್ರಿಲ್ ನೀಡುತ್ತದೆ. ಈ ಎರಡು ವಿಭಾಗದ ಕೆಲಸ ಸಿನಿಮಾವನ್ನು ಇನ್ನೊಂದು ಮಟ್ಟಕ್ಕೆ ಕರೆದುಕೊಂಡು ಹೋಗಿದೆ.

ನಿರ್ದೇಶನ

ಮೊದಲ ಸಿನಿಮಾವಾದರೂ ನಿರ್ದೇಶಕ ನರ್ತನ್ ಶ್ರಮ ಎದ್ದು ಕಾಣಿಸುತ್ತದೆ. ಅವರು ಎಲ್ಲಿಯೂ ಹಾದಿ ತಪ್ಪದೆ ತಮ್ಮ ಕಥೆಗೆ ತಕ್ಕಂತೆ ಪಾತ್ರಗಳ ಆಯ್ಕೆ ಮತ್ತು ದೃಶ್ಯಗಳನ್ನು ಹೆಣೆದಿದ್ದಾರೆ. ಜೊತೆಗೆ ಚಿತ್ರದ ಡೈಲಾಗ್ ಕಿಕ್ ನೀಡುತ್ತದೆ.

ನಿರೀಕ್ಷೆ ಇಲ್ಲದೆ ನೋಡಿ ಇಷ್ಟ ಆಗುತ್ತದೆ

'ಮಫ್ತಿ' ಅದ್ಬುತ ಸಿನಿಮಾ ಅಲ್ಲ.. ಆದರೆ ಒಂದು ಒಳ್ಳೆಯ ಸಿನಿಮಾ. ಜಾಸ್ತಿ ನಿರೀಕ್ಷೆ ಇಟ್ಟುಕೊಳ್ಳದೇ ಚಿತ್ರಮಂದಿರಕ್ಕೆ ಹೋಗುವ ಪ್ರೇಕ್ಷಕರನ್ನು ಸಿನಿಮಾ ನಿರಾಸೆ ಮಾಡಿ ಕಳುಹಿಸುವುದಿಲ್ಲ.. ಎರಡುವರೆ ಗಂಟೆ ಬೋರ್ ಆಗದೆ ನೋಡಬಹುದು.

English summary
Srimurali and Shiva Rajkumar starrer kannada movie 'Mufti' review. The story of 'Mufti' revolves around a gangster. it is an action entertainer and is a treat for Srimurali and Shiva Rajkumar Fans.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada