»   » ನಾ ನೋಡಿದ ಸಿನಿಮಾ ’ಯಾರೇ ಕೂಗಾಡಲಿ’

ನಾ ನೋಡಿದ ಸಿನಿಮಾ ’ಯಾರೇ ಕೂಗಾಡಲಿ’

By: *ಬಾಲರಾಜ್ ತಂತ್ರಿ
Subscribe to Filmibeat Kannada
Yaare Koogadali movie review
ಮೈನ್ ಥಿಯೇಟರ್ ನಲ್ಲಿ (ಸಂತೋಷ್, ಮೆಜೆಸ್ಟಿಕ್) ಸಿನಿಮಾ ನೋಡೋದೇ ಒಂದು ವಿಭಿನ್ನ ಅನುಭವ. ತುಂಬಿ ಕೂತಿರುವ ಚಿತ್ರಮಂದಿರದಲ್ಲಿ ಅಭಿಮಾನಿಗಳ ಶಿಳ್ಳೆ, ಚಪ್ಪಾಳೆ, ಕೂಗಾಟದ ನಡುವೆ ಸಿನಿಮಾ ವೀಕ್ಷಣೆ ಒನ್ ಥರಾ ಥ್ರಿಲ್ ನೀಡುತ್ತದೆ.

ತನ್ನ ಮೂಲ ಚಿತ್ರವನ್ನು ತಾನೇ ರಿಮೇಕ್ ಮಾಡುವುದು ಯಾವುದೇ ನಿರ್ದೇಶಕರಿಗೆ ಸವಾಲಿನ ಸಂಗತಿ. ಆದರೆ ನಿರ್ದೇಶಕ ಸಮುದ್ರಖಣಿ ಅಚ್ಚುಕಟ್ಟಾಗಿ ಚಿತ್ರವನ್ನು ಕನ್ನಡ ನೆಟಿವಿಟಿಗೆ ತಕ್ಕಂತೆ ತೆರೆಗೆ ತಂದಿದ್ದಾರೆ. ಪ್ರೇಕ್ಷಕರ ಭರಪೂರ ಮೆಚ್ಚುಗೆಯನ್ನು ಕೂಡಾ ಗಳಿಸಿದ್ದಾರೆ.

ಎರಡು ಕುದುರೆಯನ್ನೇರಿ ಪುನೀತ್ ವಿಭಿನ್ನ ಗೆಟಪ್ ನಲ್ಲಿ ತೆರೆಗೆ ಎಂಟ್ರಿ ಕೊಡುವ ದೃಶ್ಯ ಮತ್ತು ಅದಾದ ಕೂಡಲೇ ಪುನೀತ್, ಯೋಗಿ ಹುಚ್ಚಾಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದ ನಂತರ ಕಾಡಿನಲ್ಲಿ ನಡೆಯುವ ಸಾಹಸ ದೃಶ್ಯದಿಂದಲೇ ಚಿತ್ರ ಪ್ರೇಕ್ಷಕನನ್ನು ಸೀಟಿನಂಚಿನಲ್ಲಿ ಕೂರಿಸುತ್ತದೆ.

ಆದಿಯಿಂದ ಅಂತ್ಯದವರೆಗೂ ನಾಗಾಲೋಟದಲ್ಲಿ ಸಾಗುವ ಚಿತ್ರಕಥೆ, ಗುರುಪ್ರಸಾದ್ ಲವಲವಿಕೆಯ ಸಂಭಾಷಣೆ, ಅನವಶ್ಯಕವಾಗಿ ತೂರದ ಹಾಡುಗಳು ಪ್ರೇಕ್ಷಕರನ್ನು ಮುಂದೇನು ಆಗುತ್ತದೆ ಎನ್ನುವ ಕುತೂಹಲ ಕಾಯ್ದಿರಿಸುವಲ್ಲಿ ಯಶಸ್ವಿಯಾಗುತ್ತದೆ.

ಮೊದಲಾರ್ಧದಲ್ಲಿ ತುಸು ಹಾಸ್ಯದೊಂದಿಗೆ ಸಾಗುವ ಚಿತ್ರಕಥೆಗೆ ತಿರುವು ಸಿಗುವುದೇ ಇಂಟರ್ವಲ್ ಗಿಂತ ಸ್ವಲ್ಪ ಮುನ್ನ. ಆದರೂ ಇಂಟರ್ವಲ್ ನಂತರ ನಿರೂಪಣೆಯಲ್ಲಿ ನಿರ್ದೇಶಕರು ಇನ್ನಷ್ಟು ಹಿಡಿತ ಸಾಧಿಸಬಹುದಿತ್ತು.

ಪ್ರಮುಖವಾಗಿ ಚಿತ್ರದ ಜೀವಾಳವೆಂದರೆ ವಠಾರದ ದೃಶ್ಯಗಳು. ಚಿತ್ರದಲ್ಲಿ ಕಲಾವಿದರ ದಂಡೇ ಇದೆ, ಒಂದೊಂದು ಕಲಾವಿದರ ಅಮೋಘ ನಟನೆ ಕನ್ನಡ ಚಿತ್ರರಂಗದಲ್ಲಿ ಕಲಾವಿದರಲ್ಲಿರುವ ನಟನೆಯ ಆಳವನ್ನು ತೋರಿಸುತ್ತದೆ.

ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮಾಳವಿಕ, ಅಬ್ಬರದ ಪಾತ್ರದಲ್ಲಿ ಅಬ್ಬರಿಸುವ ರವಿಶಂಕರ್, ಇಂಗ್ಲಿಷ್ ವ್ಯಾಮೋಹದ ಅಚ್ಯುತ್ ಕುಮಾರ್, ಹುಚ್ಚಾಸ್ಪತ್ರೆಯ ಅಧಿಕಾರಿಯ ಪಾತ್ರದಲ್ಲಿ ಗಿರೀಶ್ ಕಾರ್ನಾಡ್, ಕುಡುಕನ ಪಾತ್ರದ ಶೋಭರಾಜ್, ರೂಮ್ ಮೇಟ್ ಪಾತ್ರದಲ್ಲಿ ನಟಿಸಿರುವ ಸಾಧು ಮಹಾರಾಜ್ ಮುಂತಾದವರು ತಮ್ಮೊಳಗಿರುವ ಕಲಾಶಕ್ತಿಯನ್ನು ಸಂಪೂರ್ಣವಾಗಿ ಧಾರೆ ಎರೆದಿದ್ದಾರೆ.

ವಿಮರ್ಶೆಯಲ್ಲಿ ಪ್ರತ್ಯೇಕವಾಗಿ ಹೇಳಲೇ ಬೇಕಾದದ್ದು ಚಿತ್ರದ ತಾಂತ್ರಿಕ ವಿಭಾಗ. ಸುಕುಮಾರ್ ಸಿನಿಮಾಟೊಗ್ರಫಿ, ರವಿ ವರ್ಮಾ ಸಾಹಸ ಮತ್ತು ಹರಿಕೃಷ್ಣ ಅವರ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಗಮನ ಸೆಳೆಯುತ್ತದೆ.

ಭಾಮಾ, ಸಿಂಧು ಲೋಕನಾಥ್, ನಿವೇದಿತಾ ಮತ್ತು ನಾಯಕಿ ಭಾವನಾ ನಟನೆಯ ಬಗ್ಗೆ ಕೆಮ್ಮಂಗಿಲ್ಲ, ಒಬ್ಬರಿಗಿಂತ ಒಬ್ಬರು ಸೂಪರ್.

ಪಾತ್ರಕ್ಕೆ, ಸನ್ನಿವೇಶಕ್ಕೆ ತಕ್ಕಂತೆ ಪಾದರಸದಂತೆ ಪುನೀತ್ ಅವರದ್ದು ಪಕ್ಕಾ ವೃತ್ತಿಪರ ನಟನೆ, ಎಷ್ಟಾದರೂ ರಕ್ತಗತವಾಗಿ ಬಂದಿರುವ ಕಲಾಕುಟುಂಬವಲ್ಲವೇ ಅವರದ್ದು.

ಇಂಗ್ಲಿಷ್ ವಿಮರ್ಶೆಗಳಲ್ಲಿ ಕೊನೆಯಲ್ಲಿ ಅದೇನೋ ಹೇಳ್ತಾರಲ್ಲಾ.. last but not least, he walks away with all the honors ಅಂತ "ಅದು ನಮ್ಮ ಲೂಸ್ ಮಾದ ಯಾನೆ ಯೋಗಿದ್ದು ನಟನೆ ಕಣ್ರೀ". ಹೋಡೀರಿ ಚಪ್ಪಾಳೆ. 

English summary
Puneet Rajkumar, Yogesh, Bhavana starer 'Yaare Koogadali' movie review by Balaraj Tantry. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada