twitter
    X
    Home ಚಲನಚಿತ್ರಗಳ ಒಳನೋಟ

    ಲವ್ ಮಾಕ್ಟೇಲ್ ಟು ತ್ರಿಬಲ್ ರೈಡಿಂಗ್: 2022ರಲ್ಲಿ ಬಿಡುಗಡೆಯಾದ ಕನ್ನಡದ ಬೆಸ್ಟ್ ಲವ್ ಸಿನಿಮಾಗಳು

    Author Sowmya Bairappa | Published: Wednesday, December 14, 2022, 01:02 PM [IST]

    2022ರಲ್ಲಿ ಕನ್ನಡದಲ್ಲಿ ಅನೇಕ ವಿಭಿನ್ನ ಕಥೆ ಹಾಗೂ ತಿರುವುಳ್ಳ ಲವ್ ಸಿನಿಮಾಗಳು ಬಂದಿವೆ. ಪ್ರೀತಿ ಹಾಗೂ ಸಿನಿಮಾವನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಸಿನಿಮಾಗಳಲ್ಲಿ ಪ್ರೀತಿ, ಪ್ರೇಮ ಎಂಬುದು ಬಹಳ ಪ್ರಮುಖ ಅಂಶ. ಕನ್ನಡದಲ್ಲಿ ಅನೇಕ ಅದ್ಭುತ ಪ್ರೇಮ ಕಥೆಯುಳ್ಳ ಸಿನಿಮಾಗಳು ಬಂದು ಹೋಗಿವೆ. ಅದೇ ರೀತಿ 2022ರಲ್ಲಿ ಬಿಡುಗಡೆಯಾದ ಬೆಸ್ಟ್ ಲವ್ ಸಿನಿಮಾಗಳ ಪಟ್ಟಿ ಇಲ್ಲಿದೆ.

    cover image
    ಏಕ್ ಲವ್ ಯಾ

    ಏಕ್ ಲವ್ ಯಾ

    1

    ಜೋಗಿ ಪ್ರೇಮ್ ನಿರ್ದೇಶನದ `ಎಕ್ ಲವ್ ಯಾ' ಚಿತ್ರದಲ್ಲಿ ರಕ್ಷಿತಾರ ಸಹೋದರ ರಾಣಾ ನಾಯಕನಾಗಿ ನಟಿಸಿದ್ದಾರೆ. ರೀಷ್ಮಾ ನಾಣಯ್ಯ ಮತ್ತು ಅಂಕಿತಾ ನಾಯಕ್ ನಾಯಕಿಯರಾಗಿ ನಟಿಸಿದ್ದು, ರಚಿತಾ ಟಾಮ್ ಬಾಯ್ ಕ್ಯಾರೆಕ್ಟರ್ ನಲ್ಲಿ ಮಿಂಚಿದ್ದಾರೆ. ಚಿತ್ರದ ನಾಯಕ ಅಮರ್ ನಾಯಕಿ ಅನಿತಾಳನ್ನು ಪ್ರೀತಿಸಿದಾಗ ತಂದೆಯೇ ಅದಕ್ಕೆ ವಿಲನ್ ಆಗುತ್ತಾರೆ. ಇದು ತಿಳಿಯದೇ ನಾಯಕ ತನ್ನ ಪ್ರೀತಿಯನ್ನು ಪಡೆಯಲು ಒದ್ದಾಡುತ್ತಾನೆ. ಓದೋದ್ರಲ್ಲಿ ಕಾಲೇಜಿಗೆ ಫಸ್ಟ್ ಇದ್ದರು, ಬಿಟ್ಟು ಹೊದ ಪ್ರೇಮಿಯ ನೆನಪಲ್ಲಿ ಕುಡಿಯುತ್ತಾ, ಸಮಯ ದೂಡುತ್ತಾ ಇರುತ್ತಾನೆ. ಆದರೆ ಅಪ್ಪನ ಕಷ್ಟಕ್ಕೆ ಕರಗಿದ ನಾಯಕನಿಗೆ ಮನವರಿಕೆ ಆಗಿ, ಜೀವನದಲ್ಲಿ ಮುಂದುವರೆಯಲು ನಿರ್ಧರಿಸುತ್ತಾನೆ. ಆದರೆ ತನ್ನ ಪ್ರೀತಿಯಿಂದಲೇ ನಾಯಕನಿಗೆ ದೊಡ್ಡ ಕಂಟಕ ಬರುತ್ತದೆ. ನಾಯಕಿಯ ಅತ್ಯಾಚಾರವಾಗಿ, ಅದು ನಾಯಕನ ಮೇಲೆಯೇ ಬರುತ್ತದೆ. ಈ ಕಳಂಕವನ್ನು ನಾಯಕ ಹೇಗೆ ತಪ್ಪಿಸಿಕೊಳ್ಳುತ್ತಾನೆ ಎಂಬುದು ಚಿತ್ರದ ಮುಖ್ಯ ಕಥಾವಸ್ತು.

    ಓಲ್ಡ್ ಮಾಂಕ್

    ಓಲ್ಡ್ ಮಾಂಕ್

    2

    ಎಂ.ಜಿ. ಶ್ರೀನಿವಾಸ್ ನಿರ್ದೇಶನದಲ್ಲಿ ಮೂಡಿಬಂದಿರುವ ಓಲ್ಡ್ ಮಾಂಕ್ ಚಿತ್ರದಲ್ಲಿ ನಟ ಎಂ ಜಿ ಶ್ರೀನಿವಾಸ್ ಹಾಗೂ ಅದಿತಿ ಪ್ರಭುದೇವ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಕಥೆ ದೇವ ಲೋಕದಲ್ಲಿ ಆರಂಭವಾಗಲಿದೆ. ಈ ಸಿನಿಮಾದಲ್ಲಿ ನಾರದನಿಗೆ ಪ್ರೀತಿಯ ನೋವು ಎಷ್ಟಿರುತ್ತೆ ಎಂಬುದನ್ನು ಅರ್ಥ ಮಾಡಿಸಲು ಕೃಷ್ಣ (ಸುನೀಲ್ ರಾವ್) ನಾರದನಿಗೆ (ಶ್ರೀನಿವಾಸ್) ಒಂದು ಶಾಪ ನೀಡುತ್ತಾನೆ. ಅದುವೇ ಭೂ ಲೋಕಕ್ಕೆ ಹೋಗಿ ಒಂದು ಹುಡುಗಿಯನ್ನು ಲವ್ ಮಾಡಿ ಮದುವೆ ಆದರೆ ಮಾತ್ರ ನಿನಗೆ ದೇವಲೋಕ ಎಂಟ್ರಿ ಎಂದು. ಅಲ್ಲಿಂದ ಭೂಲೋಕಕ್ಕೆ ಬರುವ ಶ್ರೀನಿ ಹೇಗೆಲ್ಲಾ ಲೈಫ್ ಆರಂಭಿಸುತ್ತಾನೆ, ಮಿಡಲ್ ಕ್ಲಾಸ್‌ನಲ್ಲಿ ಹುಟ್ಟುವ ಶ್ರೀನಿಗೆ ಎದುರಾಗೊ ಸವಾಲುಗಳೇನು, ಅದನ್ನು ಆತ ಹೇಗೆಲ್ಲಾ ನಿಭಾಯಿಸುತ್ತಾನೆ, ಅದಿತಿ ಪ್ರಭುದೇವ ಅವರನ್ನು ಪ್ರೀತಿಸುವ ಶ್ರೀನಿ ಮದುವೆ ಆಗುತ್ತಾನಾ, ಮದುವೆಗೆ ಎದುರಾಗೋ ಸವಾಲುಗಳೇನು ಎಂಬುದು ಚಿತ್ರದ ಕಥೆ. 

    ಬೈಟು ಲವ್

    ಬೈಟು ಲವ್

    3

    ಹರಿ ಸಂತೋಷ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಬೈಟು to ಲವ್ ಚಿತ್ರದಲ್ಲಿ ಧನವೀರ್ ಮತ್ತು ಶ್ರೀಲೀಲಾ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ನಾಯಕ-ನಾಯಕಿ ಇಬ್ಬರಿಗೂ ಮನೆಯಲ್ಲಿ ಕೌಟುಂಬಿಕ ಸಮಸ್ಯೆ, ಇಬ್ಬರಿಗೂ ಪೋಷಕರ ಮೇಲೆ ಸಿಟ್ಟು. ಹಾಗಾಗಿ ಪ್ರೀತಿಸಲೇ ಬಾರದು, ಮದುವೆಯೇ ಆಗಬಾರದು ಎಂದುಕೊಂಡಿದ್ದಾರೆ. ಮದುವೆ ಖುಷಿಯನ್ನು ಕಿತ್ತುಕೊಳ್ಳುತ್ತದೆ, ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುತ್ತದೆ ಎಂಬ ಆತಂಕ ಅವರದ್ದು. ಅದಕ್ಕೆ ಅವರೊಂದು ಪ್ರಯೋಗಕ್ಕೆ ಮುಂದಾಗುತ್ತಾರೆ. ಪರಸ್ಪರ ಗಂಡ-ಹೆಂಡತಿಯರಂತೆ ಬಾಳಿ ಅದು ತಮಗೆ ಒಪ್ಪಿಗೆಯಾದರೆ ಮದುವೆಯ ತೀರ್ಮಾನ ಇಲ್ಲವಾದರೆ ಅವರವರ ದಾರಿ ಅವರಿಗೆ. ಇದಕ್ಕಾಗಿ ಮಗುವೊಂದನ್ನು ಸಹ 'ಅಡ್ಡದಾರಿಯಲ್ಲಿ' ಪಡೆದು ಸಾಕಲು ಆರಂಭಿಸುತ್ತಾರೆ.  ಮಗು ಅವರಿಬ್ಬರ ಜೀವನದಲ್ಲಿ ತರುವ ಬದಲಾವಣೆ ಏನು? ಪ್ರೀತಿ, ದಾಂಪತ್ಯದ ಬಗ್ಗೆ ಅವರಿಗಾಗುವ ಸಾಕ್ಷಾತ್ಕಾರವೇನು? ಎಂಬುದು ಚಿತ್ರದ ಮುಂದಿನ ಕಥೆ.

    ಲವ್ ಮಾಕಟೇಲ್ 2

    ಲವ್ ಮಾಕಟೇಲ್ 2

    4

    ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ ಮುಖ್ಯ ಪಾತ್ರದಲ್ಲಿ ನಟಿಸಿದ್ದ, ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದಿದ್ದ ಲವ್ ಮಾಕ್ಟೇಲ್ ಚಿತ್ರದ ಎರಡನೇ ಭಾಗವಾಗಿ ಈ ಚಿತ್ರ ಮೂಡಿಬಂದಿದೆ. ಈ ಸಿನಿಮಾದಲ್ಲಿ ನಾಯಕಿರಾಗಿ ರೇಚೆಲ್ ಡೇವಿಡ್, ಸುಶ್ಮಿತಾ ಗೌಡ, ಅಮೃತಾ ಅಯ್ಯಂಗಾರ್ ಮತ್ತು ರಚನಾ ನಟಿಸಿದ್ದಾರೆ. ಹಾಗೇ ಕೆಲ ಫ್ಲ್ಯಾಶಬ್ಯಾಕ್ ಸನ್ನಿವೇಶಗಳಲ್ಲಿ ಮಿಲನಾ ನಾಗರಾಜ್ ಕಾಣಿಸಿಕೊಂಡಿದ್ದಾರೆ. ಲವ್ ಮಾಕ್ಟೇಲ್ ಒಂದನೇ ಭಾಗ ನಿಧಿಯ ವಿಷಾದಕರ ನಿಧನದಲ್ಲಿ ಮುಕ್ತಾಯವಾಗುತ್ತದೆ. ಲವ್ ಮಾಕ್ಟೇಲ್ 2 ಚಿತ್ರದಲ್ಲಿ ನಿಧಿಯ ನೆನಪುಗಳ ದೋಣಿಯಲ್ಲಿ ಸಾಗುತ್ತಿರುವ ಆದಿಯ ಮುಂದಿನ ಜೀವನದ ಚಿತ್ರವಿದೆ.

    ವಿಂಡೋ ಸೀಟ್

    ವಿಂಡೋ ಸೀಟ್

    5

    ಶೀತಲ್ ಶೆಟ್ಟಿ ರಚಿಸಿ, ನಿರ್ದೇಶನ ಮಾಡಿರುವ ವಿಂಡೋ ಸೀಟ್ ಚಿತ್ರದಲ್ಲಿ ನಿರೂಪ್ ಭಂಡಾರಿ ನಾಯಕನಾಗಿ ನಟಿಸಿದ್ದರೆ, ಅಮೃತಾ ಅಯ್ಯಂಗಾರ್ ಮತ್ತು ಸಂಜನಾ ಆನಂದ್ ನಾಯಕಿಯರಾಗಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ರೋಮ್ಯಾಂಟಿಕ್ ರಘು ಒಂದು ನಿರ್ದಿಷ್ಟ ಕಾರಣಕ್ಕಾಗಿ ತಾನು ಓಡಾಡುವ ರೈಲಿನಲ್ಲಿ ವಿಂಡೋ ಸೀಟ್ ನಲ್ಲಿ ಕುಳಿತುಕೊಳ್ಳುವುದು ಅಂದರೆ ಇಷ್ಟ. ಈ ವಿಂಡೋ ಸೀಟ್ ನ ಪ್ರಯಾಣ ರಘು ಬಾಳಿನಲ್ಲಿ ಪ್ರೀತಿ ಮತ್ತು ನೋವು ತಂದು ಅವನನ್ನು ಭಯಂಕರ ರಹಸ್ಯಗಳತ್ತ ಕರೆದೊಯ್ಯುತ್ತದೆ.

     

    ಲವ್ 360

    ಲವ್ 360

    6

    ಶಶಾಂಕ್ ನಿರ್ದೇಶನದಲ್ಲಿ ಮೂಡಿಬಂದ ರೋಮ್ಯಾಂಟಿಕ್ ಡ್ರಾಮಾ 'ಲವ್ 360' ಚಿತ್ರದಲ್ಲಿ ಪ್ರವೀಣ್ ಕುಮಾರ್‌ ಮತ್ತು ರಚನಾ ಇಂದೆರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ರಾಮ್ (ಪ್ರವೀಣ್) ಮತ್ತು ಜಾನಕಿ (ರಚನಾ ಇಂದೆರ್) ಇಬ್ಬರು ಅನಾಥಾಶ್ರಮದಲ್ಲಿ ಜೊತೆಯಾಗುತ್ತಾರೆ. ಇವರಿಬ್ಬರು ಬಾಲ್ಯದಲ್ಲಿಯೇ ಜೊತೆಯಾಗುವ ಕನಸು ಕಾಣುತ್ತಾರೆ. ಜಾನಕಿಗೆ ನೆನಪಿನ ಕಾಯಿಲೆ ಇರುತ್ತದೆ. ಆದರೆ, ರಾಮ್ ಗೆ ಕಾಯಿಲೆಯನ್ನು ದೂರ ಮಾಡುವ ನಂಬಿಕೆ ಇರುತ್ತದೆ. ನನಗೆ ನೀನು, ನಿನಗೆ ಎಂದುಕೊಂಡಿದ್ದ ಈ ಜೋಡಿಯ ಬಾಳಿನಲ್ಲಿ ಅನೇಕ ತಿರುವುಗಳು ಎದುರಾಗುತ್ತವೆ. ಇಷ್ಕಲ್ಮಷ ಪ್ರೀತಿಯ ಈ ಕಥೆಯಲ್ಲಿ ನಂತರ ಕ್ರೈಮ್ ಹುಟ್ಟಿಕೊಳ್ಳುತ್ತದೆ. 

    ಗಾಳಿಪಟ 2

    ಗಾಳಿಪಟ 2

    7

    ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿಬಂದ ಗಾಳಿಪಟ 2 ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್ ಮತ್ತು ಪವನ್ ಕುಮಾರ್ ನಾಯಕರಾಗಿ ನಟಿಸಿದ್ದಾರೆ.ಈ ಚಿತ್ರಕ್ಕೆ ನಾಯಕಿಯರಾಗಿ ನಾಯಕಿಯರಾಗಿ ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ ಮತ್ತು ಸಂಯುಕ್ತಾ ಮೆನನ್ ನಟಿಸಿದ್ದಾರೆ. ಚಿತ್ರದ ಕಥೆ ಮೂವರು ಸ್ನೇಹಿತರ ಫೋನ್ ಕಾಲ್ ಮೂಲಕ ಆರಂಭವಾಗುತ್ತದೆ. ಶಿಕ್ಷಣ ಮುಗಿಸಿ ತಮ್ಮದೇ ಬೇರೆ ಜಗತ್ತು ಕಟ್ಟಿಕೊಂಡು ಬದುಕುತ್ತಿರುವ ಯುವಕರು, ತಮ್ಮ ಗುರುವಿಗಾಗಿ ಮತ್ತೆ ಒಂದಾಗುತ್ತಾರೆ. ಕಾಲೇಜು ಸಮಯದಲ್ಲಿ ಮೂವರು ಪ್ರೀತಿಯಲ್ಲಿ ತೇಲಾಡುತ್ತಿರುತ್ತಾರೆ. ಇದೇ ಕಾಲೇಜಿನಲ್ಲಿ ಕನ್ನಡದ ಕಂಪನ್ನು ಸಾರುವ ಕನ್ನಡ ಮೇಷ್ಟ್ರು ಅನಂತ ನಾಗ್. ಗಣೇಶ್ ಮತ್ತು ದಿಗಂತ್ ಗೆ ಕ್ಲಾಸ್ ಮೇಟ್ ಹುಡಗಿಯರ ಮೇಲೆ ಲವ್ ಆದರೆ, ಪವನ್ ಗೆ ಟೀಚರ್ ಮೇಲೆ ಲವ್ ಆಗುತ್ತದೆ. ಒಟ್ಟೊಟ್ಟಿಗೆ ಸಾಗುವ ಈ ಮೂರು ಪ್ರೇಮಕಥೆಗಳ ಸ್ವಲ್ಪ ಪ್ರೀತಿ ಮತ್ತು ಮುನಿಸು ನಂತರ ಮೊದಲಾರ್ಧದ ಅಂತ್ಯಕ್ಕೆ ದೂರವಾಗುತ್ತಾರೆ. ಇಲ್ಲಿಂದ ಈ ಮೂವರ ಪ್ರೀತಿ ಕಥೆಯೇನು , ಇವರ ಜೊತೆಜೊತೆಗೆ ಸಾಗುವ ಮೇಷ್ಟ್ರು ಕಥೆಯೇನು ಎಂಬುದು ಚಿತ್ರದ ಮುಂದಿನ ಸ್ಟೋರಿ.

    ಲಕ್ಕಿ ಮ್ಯಾನ್

    ಲಕ್ಕಿ ಮ್ಯಾನ್

    8

    ನಾಗೇಂದ್ರ ಪ್ರಸಾದ್ ನಿರ್ದೇಶನದ ಈ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್, ಡಾರ್ಲಿಂಗ್ ಕೃಷ್ಣ, ಸಂಗೀತ ಶೃಂಗೇರಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಪ್ರೀತಿ, ಪ್ರೇಮ, ಸ್ನೇಹ, ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳದ ಇಂದಿನ ಯುವಕರ ಒದ್ದಾಟ, ಪೀಕಲಾಟ, ತೊಳಲಾಟ, ಎಲ್ಲವನ್ನೂ ನಿರ್ದೇಶಕ ನಾಗೇಂದ್ರ ಪ್ರಸಾದ್ ಬ್ಯೂಟಿಫುಲ್ ಆಗಿ ತೆರೆ ಮೇಲೆ ಕಟ್ಟಿಕೊಟ್ಟಿದ್ದಾರೆ. ಇದು ತಮಿಳಿನ ರಿಮೇಕ್ ಸಿನಿಮಾ ಆದರೂ, ಕನ್ನಡದ ನೇಟಿವಿಟಿಗೆ ಹೇಗೆ ಬೇಕೋ ಹಾಗೆ ಚಿತ್ರಿಸಿದ್ದಾರೆ. 

    ಕಂಬ್ಳಿ ಹುಳ

    ಕಂಬ್ಳಿ ಹುಳ

    9

    ನವನ್ ಶ್ರೀನಿವಾಸ್ ಮೊದಲ ಬಾರಿಗೆ ನಿರ್ದೇಶಿಸಿರುವ 'ಕಂಬಳಿಹುಳ' ಸಿನಿಮಾದಲ್ಲಿ  ಅಂಜನ್ ನಾಗೇಂದ್ರ ಹಾಗೂ ಅಶ್ವಿತಾ ಹೆಗ್ಡೆ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಇದೊಂದು ಹೊಸಬರ ಸಿನಿಮಾವಾಗಿದ್ದರೂ ಕೂಡ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸಿನಿಮಾದಲ್ಲಿ ಹದಿಹರೆಯದ ಪ್ರೇಮ, ಇನ್ನಿತರ ಸವಾಲುಗಳು ಹಾಗೂ ಮಲೆನಾಡಿನ ಹಿನ್ನೆಲೆಯಿದೆ. 

    ತ್ರಿಬಲ್ ರೈಡಿಂಗ್

    ತ್ರಿಬಲ್ ರೈಡಿಂಗ್

    10

    ಗೋಲ್ಡನ್ ಸ್ಟಾರ್ ಗಣೇಶ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ತ್ರಿಬಲ್ ರೈಡಿಂಗ್ ಚಿತ್ರವನ್ನು ಶ್ರೀ ಮಹೇಶ್ ಗೌಡ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಗಣೇಶ್ ನಟಿ ಅದಿತಿ ಪ್ರಭುದೇವ್, ಮೇಘಾ ಶೆಟ್ಟಿ ಮತ್ತು ರಚನಾ ಇಂದೆರ್ ಜೊತೆ ಹೆಜ್ಜೆ ಹಾಕಿದ್ದಾರೆ. ಈ ಸಿನಿಮಾದಲ್ಲಿ ಮೂರು ಲವ್ ಸ್ಟೋರಿಗಳಿವೆ. ಎಲ್ಲದಕ್ಕೂ ನಾಯಕ ಒಬ್ಬ. ಆದ್ರೆ, ನಾಯಕಿಯರು ಮೂವರು. ಕೊನೆಗೆ ಒಂದಕ್ಕೊಂದು ಬೆಸೆದುಕೊಳ್ಳುತ್ತದೆ. ಇದು ನಾಯಕನಿಗೆ ಸಂಕಷ್ಟ ತಂದೊಡ್ಡಲಿದ್ದು, ಆತ ಎನು ಮಾಡಲಿದ್ದಾನೆ ಎಂಬುದು ಚಿತ್ರದ ಕಥೆ. 

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X