For Quick Alerts
  ALLOW NOTIFICATIONS  
  For Daily Alerts

  ಕಿರುತೆರೆ ನಟಿ ಶ್ರೀಲತಾಗೆ ಪತಿಯಿಂದ ಅನ್ಯಾಯ

  By Staff
  |

  ಇಪ್ಪತ್ತೈದರ ಹರೆಯದ ಶ್ರೀಲತಾ ಒಬ್ಬ ಕಿರುತೆರೆ ನಟಿ. ಈಕೆ ಮಾನಸವೀಣೆ, ನೆಲಮುಗಿಲು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಹೊಂಗನಸು ಚಿತ್ರದ ಸಣ್ಣ್ಣ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಧಾರಾವಾಹಿ ಚಿತ್ರೀಕರಣಕ್ಕಾಗಿ ಮಂಗಳೂರು ಬೆಂಗಳೂರಿನ ನಡುವೆ ಅಲೆಯಬೇಕಾಗಿತ್ತು. ಈ ಸಂದರ್ಭದಲ್ಲೇ ಭಟ್ಕಳ ಬಳಿಯ ಹಾಡುವಹಳ್ಳಿಯ ಕೆಎಸ್ಸಾರ್ಟಿಸಿ ಚಾಲಕ ಭರತ್ ಚಂದ್ರ ಶೆಟ್ಟಿ ಪರಿಚಯವಾಯಿತು.

  ಭರತ್ ಶೆಟ್ಟಿ ಈಕೆಯನ್ನು ನಂಬಿಸಿ ಮದುವೆಯಾಗಿ ಮೂರು ತಿಂಗಳು ಗರ್ಭಿಣಿ ಮಾಡಿ ನಡು ನೀರಿನಲ್ಲಿ ಕೈಬಿಟ್ಟ. ಈ ಕುರಿತು ಶ್ರೀಲತಾ ಅವರು ಮಂಗಳವಾರ ಮಾಧ್ಯಮಗಳ ಮುಂದೆ ತಮಗಾದ ಅನ್ಯಾಯವನ್ನು ಹೇಳಿಕೊಂಡರು. ತನ್ನ ಗಂಡ ಭರತ್ ಶೆಟ್ಟಿ(32)ಮರಳಿ ದೊರಕದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಸತ್ಯಾಗ್ರಹ ಮಾಡುತ್ತೇನೆ ಎಂದರು.

  ತನ್ನ ಪತಿಯನ್ನು ಮುಂದಿನ ನಲವತ್ತೆಂಟು ಗಂಟೆಗಳ ಕಾಲವಧಿಯಲ್ಲಿ ದೊರಕುವಂತೆ ಮಾಡಿ ಎಂದು ಅವರು ಜಿಲ್ಲಾಧಿಕಾರಿಗಳಿಗೆ ಗಡುವು ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಶ್ರೀಲತಾ, ನ್ಯಾಯ ದೊರಕುವರೆಗೂ ಆಮರಣಾಂತ ಉಪವಾಸ ನಡೆಸುವುದಾಗಿ ಹೇಳಿದರು. ತಮಗಾದ ಅನ್ಯಾಯವನ್ನು ಅವರು ವಿವರಿಸಿದ್ದು ಹೀಗೆ.

  ''ಮೂಲತಃ ಮಂಗಳೂರಿನವರಾದ ತಾವು ಧಾರಾವಾಹಿ ಚಿತ್ರೀಕರಣಕ್ಕೆಂದು ಬೆಂಗಳೂರು ಮಂಗಳೂರು ನಡುವೆ ಪ್ರಯಾಣಿಸುತ್ತಿದ್ದೆ. ಆಗ ಕೆಎಸ್ಸಾರ್ಟಿಸಿ ಚಾಲಕ ಭರತ್ ಚಂದ್ರ ಶೆಟ್ಟಿ ಪರಿಚಯವಾಯಿತು. ನಮ್ಮಿಬ್ಬರ ನಡುವಿನ ಸ್ನೇಹ ಪ್ರೇಮಕ್ಕೆ ತಿರುಗಿತು.

  ಮದುವೆ ಮುನ್ನವೇ ಗರ್ಭಿಣಿಯಾಗಿದ್ದೆ. ನಂತರ ಭರತ್ ಚಂದ್ರ ಶೆಟ್ಟಿ ಮತ್ತು ನಾನು ಮಾರ್ಚ್ 20ರಂದು ಕುಂದಾಪುರದ ಕುಂದೇಶ್ವರ ದೇವಸ್ಥಾನದಲ್ಲಿ ಮದುವೆಯಾದೆವು. ಇಬ್ಬರೂ ಶಿರೂರಿನ ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದೆವು. ಆರಂಭದ ಮೂರು ತಿಂಗಳ ಕಾಲ ಭರತ್ ಮನೆಗೆ ಬರುತ್ತಿದ್ದ. ಆನಂತರ ಮನೆಗೆ ಬರುವುದನ್ನು ನಿಲ್ಲಿಸಿಬಿಟ್ಟ'' ಎಂದು ತಮ್ಮ ಜೀವನಗಾಥೆಯನ್ನು ಶ್ರೀಲತಾ ಬಿಚ್ಚಿಟ್ಟರು.

  ''ಭರತ್ ಕುಟುಂಬದರನ್ನು ಭೇಟಿಯಾಗಿ ವಿಷಯ ತಿಳಿಸಿದೆ. ಅವರು ರು.5 ಲಕ್ಷ ವರದಕ್ಷಿಣೆಗೆ ಕೊಡುವಂತೆ ಒತ್ತಾಯ ಮಾಡಿದರು. ಹಾಗೆಯೇ ಜೈನ ಧರ್ಮಕ್ಕೆ ಮತಾಂತರವಾಗಲು ಹೇಳಿದರು. ಇದೆಕ್ಕೆಲ್ಲಾ ನಾನು ಒಪ್ಪಲಿಲ್ಲ. ಹಾಗಾಗಿ ಅವರು ನನ್ನ ಗಂಡ ಭರತ್ ರಿಂದ ನನ್ನನ್ನು ದೂರ ಮಾಡಿದ್ದಾರೆ. ಭರತ್ ಸಹ ನನ್ನ ಯಾವುದೇ ಕರೆಗಳನ್ನು ಸ್ವೀಕರಿಸುತ್ತಿಲ್ಲ'' ಎಂದು ಶ್ರೀಲತಾ ಅವರು ಮಾಧ್ಯಮಗಳ ಮುಂದೆ ಅಲವತ್ತುಕೊಂಡರು.

  ಈ ಮದುವೆಗೆ ಶ್ರೀಲತಾ ಅವರ ಕುಟುಂಬಿಕರ ವಿರೋಧವೂ ಇತ್ತಂತೆ. ಹಾಗಾಗಿ ಭರತ್ ಮತ್ತು ಶ್ರೀಲತಾ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಗಂಡ ಮನೆಗೆ ಬರುವುದನ್ನು ನಿಲ್ಲಿಸಿದ ನಂತರ ಉಡುಪಿ ಜಿಲ್ಲೆಯ ಕೆದೂರಿನ ಸ್ಫೂರ್ತಿಧಾಮ ಆಶ್ರಮದಲ್ಲಿ ಉಳಿದುಕೊಂಡಿದ್ದೆ. ಈಗ ಎಂಟೂವರೆ ತಿಂಗಳ ಗರ್ಭಿಣಿ ನಾನು. ಕಿರುತೆರೆಯಲ್ಲೂ ನಟಿಸುತ್ತಿಲ್ಲ. ಬಂಧುಬಳಗ, ಮನೆಯವರು ದೂರವಾಗಿದ್ದಾರೆ. ಈಗಲೂ ನನ್ನ ಗಂಡನನ್ನು ನಾನು ಪ್ರೀತಿಸುತ್ತಿದ್ದೇನೆ. ನನಗೆ ನನ್ನ ಗಂಡ ಬೇಕು ಅಷ್ಟೇ'' ಎಂದು ಶ್ರೀಲತಾ ವಿವರ ನೀಡಿದರು.

  ಮಹಿಳಾ ಸಂಘಟನೆಯ ಸಹಾಯದಿಂದ ಬೆಂಗಳೂರು ಹಲಸೂರು ಗೇಟ್ ಮಹಿಳಾ ಪೊಲೀಸ್ ಠಾಣೆಯಲ್ಲಿ ಜೂ.15ರಂದು ದೂರು ದಾಖಲಿಸಿದ್ದೇನೆ. ಗೃಹ ಸಚಿವ ವಿ.ಎಸ್.ಆಚಾರ್ಯ ಹಾಗೂ ಪೊಲೀಸ್ ಕಮೀಷನರ್ ಶಂಕರ ಬಿದರಿ ಅವರನ್ನು ಜು.13ರಂದು ಭೇಟಿಯಾಗಿದ್ದೇನೆ. ಈ ಪ್ರಕರಣದ ಬಗ್ಗೆ ಕಟ್ಟುನಿಟ್ಟಿನ ತನಿಖೆ ನಡೆಸುವಂತೆ ಭಟ್ಕಳ ಡಿವೈಎಸ್ ಪಿ ಅವರಿಗೆ ಲಿಖಿತ ಸೂಚನೆಯನ್ನು ಅವರು ನೀಡಿದ್ದಾರೆ. ಆದರೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದರು.

  ಭಟ್ಕಳ ಪೊಲೀಸರೊಂದಿಗೆ ನಾನು ಹಾಡುವಳ್ಳಿಗೆ ಹೋದರೆ ಅಲ್ಲಿ ನನಗೆ ಅವಮಾನವಾಯಿತು. ನಂತರ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ.ಇದೀಗ ತನಗೆ ನ್ಯಾಯ ದೊರಕಿಸಿ ಕೊಡಿ ಎಂದು ಮಾಧ್ಯಮಗಳ ಮುಂದೆ ಬಂದಿದ್ದೇನೆ ಎಂದು ಶ್ರೀಲತಾ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸ್ಫೂರ್ತಿಧಾಮ ಆಶ್ರಮದ ಕಾರ್ಯದರ್ಶಿ ಕೇಶವ ಕೋಟೇಶ್ವರ ಸೇರಿದಂತೆ ಮಾನಸ ಯುವತಿ ಮಂಡಳಿಯ ಬಿ.ಸವಿತಾ ಉಪಸ್ಥಿತರಿದ್ದರು.

  (ದಟ್ಸ್ ಕನ್ನಡ ಚಿತ್ರವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X