»   » ಇಂದಿನಿಂದ ಫ್ಯಾಶನ್ ಟಿವಿ ಪ್ರಸಾರಕ್ಕೆ ಬ್ರೇಕ್!

ಇಂದಿನಿಂದ ಫ್ಯಾಶನ್ ಟಿವಿ ಪ್ರಸಾರಕ್ಕೆ ಬ್ರೇಕ್!

Posted By:
Subscribe to Filmibeat Kannada

'ಸಭ್ಯತೆ ಮತ್ತು ಸದಭಿರುಚಿ' ಎರಡನ್ನೂ ಗಾಳಿಗೆ ತೂರುತ್ತಿರುವ ಫ್ಯಾಶನ್ ಟಿವಿ ಪ್ರಸಾರಕ್ಕೆ ಕೇಂದ್ರ ಸರಕಾರ ಒಂಭತ್ತು ದಿನಗಳ ಕಾಲ ನಿಷೇಧ ಹೇರಿದೆ. ಮಹಿಳೆಯರನ್ನು ಅರೆಬೆತ್ತಲಾಗಿ ತೋರಿಸುತ್ತಿರುವ ಫ್ಯಾಶನ್ ಟಿವಿಯನ್ನು ಹದ್ದುಬಸ್ತಿಗೆ ತರಲು ಕೇಂದ್ರ ಸರಕಾರ ಈ ಕ್ರಮಕ್ಕೆ ಮುಂದಾಗಿದೆ.

ನಿಷೇಧದ ಕಾರಣ ಭಾರತದಲ್ಲಿ ಮಾರ್ಚ್ 12ರ ರಾತ್ರಿ 7ಗಂಟೆಯಿಂದ ಮಾರ್ಚ್ 21ರವರೆಗೂ ಫ್ಯಾಶನ್ ಟಿವಿ ಪ್ರಸಾರವಾಗುವುದಿಲ್ಲ. ಕೇಬಲ್ ನೆಟ್ ವರ್ಕ್ ಮೂಲಕವಾಗಲಿ ಅಥವಾ ಇನ್ಯಾವುದೇ ನೆಟ್ ವರ್ಕ್ ಗಳ ಮೂಲಕವಾಗಲಿ ಭಾರತದಲ್ಲಿ ಫ್ಯಾಶನ್ ಟಿವಿಯನ್ನು ಪ್ರಸಾರ ಮಾಡುವಂತಿಲ್ಲ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಾಕೀತು ಮಾಡಿದೆ.

ಸೆಪ್ಟೆಂಬರ್ 4, 2009ರಂದು ಫ್ಯಾಶನ್ ಟಿವಿಯಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ ರೂಪದರ್ಶಿಯರ ಎದೆಯ ಭಾಗವನ್ನು ಸಂಪೂರ್ಣ ಬೆತ್ತಲಾಗಿ ತೋರಿಸಲಾಗಿತ್ತು. ಈ ರೀತಿಯ ಕಾರ್ಯಕ್ರಮಗಳು ಸಭ್ಯತೆ ಮತ್ತುಸದಭಿರುಚಿಯನ್ನು ಬಿಂಬಿಸುವುದಿಲ್ಲ ಎಂದು ಕೇಂದ್ರ ಸರಕಾರ ಪ್ರಕಟನೆಯಲ್ಲಿ ಖಂಡಿಸಿದೆ.

1994ರ ಕೇಬಲ್ ಟೆಲಿವಿಷನ್ ನೆಟ್ ವರ್ಕ್ ನಿಯಮಗಳನ್ನು ಫ್ಯಾಶನ್ ಟಿವಿ ಗಾಳಿಗೆ ತೂರಿದೆ ಎಂದು ಕೇಂದ್ರ ಆರೋಪಿಸಿದೆ. ಈ ಚಾನಲ್ ವಿರುದ್ಧ ಕೇಂದ್ರ ಸರಕಾರ ಕ್ರಮ ಕೈಗೊಳ್ಳುತ್ತಿರುವುದು ಇದೇ ಮೊದಲಲ್ಲ. 'ಮಿಡ್ ನೈಟ್ ಹಾಟ್' ಎಂಬ ಕಾರ್ಯಕ್ರಮದಲ್ಲಿ ರೂಪದರ್ಶಿಯರನ್ನು ಅರೆಬೆತ್ತಲಾಗಿ ತೋರಿಸಿದ ಕಾರಣ 2007ರಲ್ಲೊಮ್ಮೆ ನಿಷೇಧ ಹೇರಿತ್ತು.

ಈ ರೀತಿಯ ಅಸಭ್ಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದಕ್ಕೆ ಕ್ಷಮೆ ಕೋರಿದ್ದ ಫ್ಯಾಶನ್ ಟಿವಿ ಇನ್ನು ಮುಂದೆ ಈ ರೀತಿಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದಿಲ್ಲ, ದಮ್ಮಯ್ಯ ಪ್ರಸಾರ ಮಾಡಲು ಅವಕಾಶ ಮಾಡಿಕೊಡೆ ಎಂದು ಕೇಂದ್ರ ಸರಕಾರವನ್ನು ಅಂಗಲಾಚಿತ್ತು. ಆಗ ಕೇಂದ್ರ ಸರಕಾರ ಫ್ಯಾಶನ್ ಟಿವಿಯನ್ನು ಕ್ಷಮಿಸಿತ್ತು. ಆದರೆ ಈಗ ಮತ್ತೆ ತನ್ನ ಹಳೆಯ ಚಾಳಿಯನ್ನು ಮುಂದಿವರಿಸಿದ ಫ್ಯಾಶನ್ ಟಿವಿ ಕೇಂದ್ರ ಸರಕಾರದ ಕೆಂಗಣ್ಣಿಗೆ ಗುರಿಯಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada