»   »  ಟೆಲಿ ಧಾರಾವಾಹಿಗಳ ತುಂಬ ಅಬದ್ಧ,ಅಪದ್ಧ

ಟೆಲಿ ಧಾರಾವಾಹಿಗಳ ತುಂಬ ಅಬದ್ಧ,ಅಪದ್ಧ

By: *ಎಚ್. ಆನಂದರಾಮ ಶಾಸ್ತ್ರಿ
Subscribe to Filmibeat Kannada

ದೂರದರ್ಶನ ಮಾಧ್ಯಮದ ವಿವಿಧ ವಾಹಿನಿಗಳಲ್ಲಿ ಪ್ರಸಾರವಾಗುವ ಧಾರಾವಾಹಿಗಳ ಪೈಕಿ ಹಲವು ಧಾರಾವಾಹಿಗಳಲ್ಲಿ ಯಾವುದಾದರೊಂದು ಧರ್ಮದ ಅಥವಾ ಜಾತಿಯ ಹಣೆಪಟ್ಟಿಯೊಂದಿಗೆ ಅಬದ್ಧ ಪದ್ಧತಿ ಮತ್ತು ಮೌಢ್ಯದ ಆಚರಣೆಗಳನ್ನು ತೋರಿಸುವ ಮೂಲಕ ಆ ಧರ್ಮದ ಅಥವಾ ಜಾತಿಯ ಬಗ್ಗೆ ಸಮಾಜದಲ್ಲಿ ತಪ್ಪು ಕಲ್ಪನೆ ಮೂಡುವಂತೆ ಮಾಡಲಾಗುತ್ತಿದೆಯೆಂಬ ಆಕ್ಷೇಪವು ಆಗಾಗ ಕೇಳಿಬರುತ್ತಿರುತ್ತದೆ.

ಅಬದ್ಧ ಪದ್ಧತಿ, ಮೌಢ್ಯ, ಕುಟಿಲ ಇವು ಎಲ್ಲ ಧರ್ಮಗಳಲ್ಲೂ ಎಲ್ಲ ಜಾತಿಗಳಲ್ಲೂ ಮತ್ತು ಬಹುತೇಕ ಎಲ್ಲ ಸಂಸಾರಗಳಲ್ಲೂ ಒಂದು ಪ್ರಮಾಣದಲ್ಲಿ ಇರುವಂಥವೇ. ಪುಸ್ತಕ, ನಾಟಕ, ಸಿನೆಮಾ ಮತ್ತು ಟಿವಿ ಧಾರಾವಾಹಿಗಳಲ್ಲಿ ಇವುಗಳನ್ನು ಖಂಡಿಸುವುದು ತಪ್ಪೇನಲ್ಲ. ಆದರೆ ಜನಾಕರ್ಷಣೆಯ ಉದ್ದೇಶದಿಂದ ಇವುಗಳನ್ನು ವೈಭವೀಕರಿಸುವುದು, ಉತ್ಪ್ರೇಕ್ಷಿಸುವುದು, ತಿರುಚುವುದು, ಅಸತ್ಯಗಳನ್ನು ಸೇರಿಸುವುದು, ಕಥಾಕುತೂಹಲದ ದೃಷ್ಟಿಯಿಂದ ಇಂಥ ಎಲ್ಲ ಅಪಸವ್ಯಗಳನ್ನೂ ಒಂದೇ ಚೌಕಟ್ಟಿನೊಳಗೆ ತುರುಕುವುದು ಮತ್ತು ಒಂದು ಜಾತಿವರ್ಗಕ್ಕೆ ಆರೋಪಿಸುವುದು ಸರಿಯಲ್ಲ.ಇದರಿಂದ ಸಮಾಜದಲ್ಲಿ ಇನ್ನಷ್ಟು,ಮತ್ತಷ್ಟು ತಪ್ಪು ಕಲ್ಪನೆಗಳುಂಟಾಗುತ್ತವೆ.

ಅದೇವೇಳೆ, ಸಮಾಜವೂ ಕಥೆಯನ್ನು ಕೇವಲ ಕಥೆಯಾಗಿ ಪರಿಗಣಿಸದೆ ವಾಸ್ತವವೆಂದು ಪರಿಗಣಿಸುವ ಮತ್ತು ಕಲೆಯನ್ನು ಕಲೆಯಾಗಿ ನೋಡದೆ ಸತ್ಯಕಥನವೆಂದು ಭ್ರಮಿಸುವ ವಿಪರ್ಯಾಸವೂ ನಡೆಯುತ್ತಿರುವುದು ಚೋದ್ಯವೇ ಸರಿ!ಇತ್ಯಾತ್ಮಕ ಗುಣಗಳನ್ನು ಹೊಂದಿದ್ದೂ ಒಂದು ಕಲಾಪ್ರಕಾರವು ಸಮಾಜದ ಒಂದು ವರ್ಗದ ಬೇಸರಕ್ಕೆ ಹೇತುವಾಗುತ್ತದೆಂದರೆ ಇದರಲ್ಲಿ ಕಲಾವಿದ ಮತ್ತು ಕಲಾರಸಿಕ ಇಬ್ಬರದೂ ದೋಷಗಳಿವೆ.

ಜನಪ್ರಿಯತೆಗಾಗಿ ಅಬದ್ಧಗಳ ವೈಭವೀಕರಣ, ಉತ್ಪ್ರೇಕ್ಷೆ, ತಿರುಚುವಿಕೆ, ತುರುಕುವಿಕೆ ಮತ್ತು ಅಸತ್ಯಗಳ ಸೇರ್ಪಡೆ ಇವು ಸಾಹಿತಿ-ನಿರ್ದೇಶಕನ ತಪ್ಪಾದರೆ, ಒಂದು ಪುಸ್ತಕವನ್ನೋ ನಾಟಕವನ್ನೋ ಚಲನಚಿತ್ರವನ್ನೋ ಗಮನಿಸಿ, "ಸಮಾಜ ಅಕ್ಷರಶಃ ಹೀಗೇ ಇದೆ" ಎಂದು ಪರಿಭಾವಿಸುವುದು ಕಲಾರಸಿಕನ ದೋಷ. ಹೀಗೆಲ್ಲ ಅಪಸವ್ಯಗಳನ್ನು ಬಿಂಬಿಸಿದಾಗ ಸಮಾಜದ ಬಹುಭಾಗವು ಅದನ್ನು ಅಕ್ಷರಶಃ ವಾಸ್ತವವೆಂದು ನಂಬುವುದರಿಂದಾಗಿ (ಮತ್ತು ಹಲವೊಮ್ಮೆ, ಕೆಲವು ಆಷಾಢಭೂತಿಗಳು ಹಾಗೂ ತಥಾಕಥಿತ ಬುದ್ಧಿಜೀವಿಗಳು ತಾವು ನಂಬಿದಂತೆ ನಟಿಸಿ ಮುಗ್ಧರನ್ನು ದಾರಿತಪ್ಪಿಸುವುದರಿಂದಾಗಿ) ಸಮಾಜದಲ್ಲಿ ಸಾಮರಸ್ಯಕ್ಕೆ ಧಕ್ಕೆಯುಂಟಾಗುವ ಅಪಾಯ ಅಧಿಕ. ಸಂಬಂಧಿತ ಧರ್ಮ ಅಥವಾ ಜಾತಿಯು ವೃಥಾ ಗೇಲಿಗೀಡಾಗಲೂ ಇದು ಕಾರಣವಾಗುತ್ತದೆ.

ಆದ್ದರಿಂದ, ಸಾಹಿತ್ಯ ಮತ್ತು ಕಲೆಗಳ ಪ್ರಸಾರದ ಸಂದರ್ಭದಲ್ಲಿ, ಕಲಾಕೌಶಲ ಮತ್ತು ಸಮಾಜದ ಸ್ವಾಸ್ಥ್ಯ ಎರಡರ ಬಗ್ಗೆಯೂ ಗಮನ ಅಗತ್ಯ. ಇಲ್ಲದಿದ್ದರೆ, ಕಲೆಯೆಂಬ ಸೊಗಸಾದ ಬಣ್ಣವನ್ನು ಅನಾರೋಗ್ಯಕರ ಸಂದೇಶವೆಂಬ ಮಸಿಯು ನುಂಗಿಬಿಡುತ್ತದೆ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada