»   » ಸ್ವಯಂವರವೆಂಬ ದೊಡ್ಡವರ ಮಕ್ಕಳಾಟ!

ಸ್ವಯಂವರವೆಂಬ ದೊಡ್ಡವರ ಮಕ್ಕಳಾಟ!

By: * ಯಶ್
Subscribe to Filmibeat Kannada

ಮದುವೆಗೆ ಸಿದ್ಧವಾಗಿರುವ ಹುಡುಗಿ ಇನ್ನೇನು ತನ್ನನ್ನೇ ಆಯ್ದುಬಿಡುತ್ತಾಳೆ ಎಂದು ಕಾತುರದಿಂದ ಕಾಯ್ದ ಒಬ್ಬ ಹುಡುಗ. ಆದರೆ, ಆ ಚೆಲುವೆ ಅವನನ್ನು ಬಾಳ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಳ್ಳದೆ ಇನ್ನೊಬ್ಬನನ್ನು ವರಿಸಲು ಸಿದ್ಧಳಾಗುತ್ತಾಳೆ. ಆದರೆ ಆ ಇನ್ನೊಬ್ಬ ಆ ಹುಡುಗಿಯನ್ನೇ ತಿರಸ್ಕರಿಸಿಬಿಡುತ್ತಾನೆ!

ತ್ರಿಕೋನ ಪ್ರೇಮಕಥೆಯಿರುವ ಯಾವುದೇ ಕನ್ನಡ ಚಿತ್ರದ ಕಥೆಯಲ್ಲ ಇದು. ಸುವರ್ಣ ಕನ್ನಡ ಟಿವಿ ಚಾನಲ್ಲಿನಲ್ಲಿ ಸ್ವಯಂವರ ಮದುವೆ ಬ್ರೋಕರಿಂಗ್ ಕಾರ್ಯಕ್ರಮದ ಕಳೆದ ವಾರದ ತಾಜಾ ತಾಜಾ ನಮೂನೆ. ಚಿತ್ರನಟಿ ರಕ್ಷಿತಾ ನಡೆಸಿಕೊಡುತ್ತಿರುವ ಈ ರಿಯಾಲಿಟಿ ಶೋದಲ್ಲಿ ರಿಯಾಲಿಟಿ ಎಂಬುದೊಂದು ಬಿಟ್ಟು ಎಲ್ಲಾ ಇದೆ.

ಅಂತಿಮ ಹಂತದಲ್ಲಿ ವಧು ಸ್ಥಾನದಲ್ಲಿ ನಿಂತಿದ್ದ ಉತ್ತರ ಕರ್ನಾಟಕದ ಹುಡುಗಿ ಪ್ರಣತಿ ಎಂಬವಳ ಎದುರು ಇದ್ದದ್ದು ಬಿಜಾಪುರ ಮೂಲದ ಬಸವರಾಜ್ ಬಾವಿಕಟ್ಟಿ ಮತ್ತು ಬೆಂಗಳೂರಿನ ಹೈಫೈ ಹುಡುಗ ಕಾರ್ತಿಕ್. ಪ್ರಣತಿ ಎಲ್ಲರ ನಿರೀಕ್ಷೆಯನ್ನು ಧೂಳಿಪಟ ಮಾಡಿ ಬಸವರಾಜ್ ನನ್ನು ಬಿಟ್ಟು ಕಾರ್ತಿಕ್ ನನ್ನು ತನ್ನ ಬಾಳ ಸಂಗಾತಿಯನ್ನಾಗಿ ಆಯ್ದುಕೊಳ್ಳುತ್ತಾಳೆ. ಕಾರ್ತಿಕ್ ಸ್ಟೇಜಿನ ಮಧ್ಯಭಾಗಕ್ಕೆ ಬಂದು ಈ ಹುಡುಗಿ ನನ್ನ ಸಂಗಾತಿಯಾಗಲು ಸಾಧ್ಯವಿಲ್ಲ ಎಂದು ಮಂಗಳ ಹಾಡುತ್ತಾನೆ.

ಈ ಸಂದರ್ಭದಲ್ಲಿ ಪ್ರಣತಿಯಿಂದ ತಿರಸ್ಕೃತನಾದ ಬಸವರಾಜ್, ಕಾರ್ತಿಕ್ ಗೆ ಬೇಡವಾದ ಪ್ರಣತಿ, ಜೀವಸಂಗಾತಿ ಹುಡುಕಲು ಯೋಜಿಸಿರುವ ಕಾರ್ಯಕ್ರಮಕ್ಕೆ ಬಂದು ಮದುವೆ ಆಹ್ವಾನವಿದ್ದರೂ ಮದುವೆ ಬೇಡವೆಂದ ಕಾರ್ತಿಕ್ ಮತ್ತು ಸ್ವಯಂವರದ ಕೇಂದ್ರಬಿಂದು ರಕ್ಷಿತಾ... ಇವರೆಲ್ಲಾ ಒಂದು ಕ್ಷಣ ಸ್ವಯಂವರವೆಂಬ ಪ್ರಹಸನದ ಸೂತ್ರದ ಗೊಂಬೆಗಳಿದ್ದಂತೆ ಭಾಸವಾಯಿತು.

ಇಲ್ಲಿಯವರೆಗೆ ನಡೆದ ಮೂರ್ನಾಲ್ಕು ವಾರಗಳ ಪ್ರಹಸನದಲ್ಲಿ ಯಾರೂ ಜೋಡಿಯಾಗಿಲ್ಲ. ಮೊದಲ ವಾರದಲ್ಲಿ ಜೋಡಿ ನಕ್ಕಿಯಾದರೂ ತೆರೆಯ ಹಿಂದೆ ಮದುವೆ ಕಾಂಟ್ರಾಕ್ಟನ್ನು ಹುಡುಗಿಯ ತಾಯಿಯೇ ಮುರಿದಿದ್ದಳು. ಮುಂದಿನ ವಾರದಲ್ಲಿ ಹುಡುಗಿ ಯಾರನ್ನೂ ಆಯ್ದುಕೊಳ್ಳಲಿಲ್ಲ. ಕಳೆದ ವಾರದಲ್ಲಿ ಹುಡುಗಿ ಆಯ್ದುಕೊಂಡರೂ ಹುಡುಗ ಬೇಡವೆಂದ.

ಕೇವಲ ಟಿ ಆರ್ ಪಿ ಏರಿಸುವ ಉದ್ದೇಶದಿಂದ ಮತ್ತು ಕೇವಲ ಪ್ರೇಕ್ಷಕರಿಗೆ ಮನರಂಜನೆ ನೀಡುವ ಉದ್ದೇಶದಿಂದ ಮಾತ್ರ ಈ ಸ್ವಯಂವರ ನಾಟಕವನ್ನು ಆಯೋಜಿಸಲಾಗಿದೆಯೆ? ಎರಡು ವಾರಗಳ ಹಿಂದೆ ರಕ್ಷಿತಾ ಕಣ್ಣೀರು ಸುರಿಸಿದ್ದೂ ಈ ನಾಟಕದ ಒಂದು ಭಾಗವೆ? ಟಿವಿ ಪರದೆಗೆ ಕಣ್ಣು ನೆಟ್ಟು ನೋಡುವ ಪ್ರೇಕ್ಷಕರ ಮೇಲೆ ಸವಾರಿ ಮಾಡಲಾಗುತ್ತಿದೆಯೆ? ಈ ಪ್ರಶ್ನೆಗಳಿಗೆ ಸುವರ್ಣ ಟಿವಿಯೇ ಉತ್ತರ ನೀಡಲಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada