»   »  ಟಿವಿ ವರ್ತಮಾನಕ್ಕೊಂದು ವೆಬ್ಸೈಟ್ ಕರ್ನಾಟಕ.ಕಾಮ್

ಟಿವಿ ವರ್ತಮಾನಕ್ಕೊಂದು ವೆಬ್ಸೈಟ್ ಕರ್ನಾಟಕ.ಕಾಮ್

Subscribe to Filmibeat Kannada

ಕರ್ನಾಟಕದ ಕಿರುತೆರೆಯಲ್ಲಿಯ ಆಗುಹೋಗುಗಳ ಕುರಿತಾದ ಹಾಗೂ ಕರ್ನಾಟಕದ ಕಿರುತೆರೆ ಕುರಿತಂತೆ ಸಮಗ್ರ ಮಾಹಿತಿಯಿರುವ ಕನ್ನಡದ ಅಂತರ್ಜಾಲ ತಾಣವೊಂದು ಸದ್ಯದಲ್ಲೇ ಕಣ್ಣುತೆರೆಯಲಿದೆ. ತಾಣಕ್ಕೆ ಟಿವಿ ಕರ್ನಾಟಕ.ಕಾಮ್ ಎಂದು ನಾಮಕರಣ ಮಾಡಲು ನಿರ್ಧರಿಸಲಾಗಿದೆ. ಇತ್ತೀಚೆಗೆ ಪ್ರಾರಂಭವಾಗಿರುವ ದಿಗಂತ ಮೀಡಿಯಾ ಸಲ್ಯೂಷನ್ಸ್ ಈ ತಾಣವನ್ನು ಹುಟ್ಟು ಹಾಕುತ್ತಿದ್ದು ವಿವಿಧ ವಾಹಿನಿಗಳು ಹಾಗೂ ನಿರ್ಮಾಣ ಸಂಸ್ಥೆಗಳನ್ನು ಭೇಟಿ ಮಾಡಿ ಮಾಹಿತಿ ಕಲೆಹಾಕುವ ಕಾರ್ಯ ಪ್ರಾರಂಭವಾಗಿದೆ.

ಟಿವಿ ಕರ್ನಾಟಕ.ಕಾಮ್, ಕರ್ನಾಟಕದ ಕಿರುತೆರೆಯ ಸಂಪೂರ್ಣ ಮಾಹಿತಿಯನ್ನು ಹಾಗೂ ಪ್ರತಿದಿನದ ಬೆಳವಣಿಗೆ, ಆಗುಹೋಗುಗಳನ್ನು ಅಂತರ್ ಜಾಲ ತಾಣದಲ್ಲಿ ನೀಡಲಿದೆ. ಕರ್ನಾಟಕದ ವಿವಿಧ ವಾಹಿನಿಗಳಲ್ಲಿನ ಧಾರಾವಾಹಿ, ರಿಯಾಲಿಟಿಶೋ, ಕಿರುತೆರೆಯಲ್ಲಿ ಪ್ರಸಾರವಾಗುವ ಸಿನೆಮಾ, ಕಿರುತೆರೆಯ ಕುರಿತಾದ ಗಾಸಿಪ್ ಹಾಗೂ ಉದ್ಯಮದ ಕುರಿತು ಇಲ್ಲಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವವರಿಂದ ಕಾಯಂ ಅಂಕಣಗಳನ್ನು ಪ್ರಕಟಿಸುವ ಗುರಿ ಹೊಂದಿದೆ.

ಕಿರುತೆರೆಯ ಹಲವು ವಿಭಾಗಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನಿರ್ಮಾಪಕರು, ನಿರ್ಮಾಣ ಸಂಸ್ಥೆಗಳು, ಕಲಾವಿದರು, ತಂತ್ರಜ್ಞರು ಮುಂತಾದವರನ್ನು ಕುರಿತಾದ ಸಂಪೂರ್ಣ ಮಾಹಿತಿಯನ್ನು ತಾಣದಲ್ಲಿ ಪ್ರಕಟಿಸಲಾಗುವುದು. ಸಿನೆಮಾ ಕುರಿತಂತೆ ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರ ಮಾಹಿತಿಗಳನ್ನು ಸಿನೆಮಾ ಪತ್ರಿಕೆಗಳು, ಪುರವಣಿಗಳು ಕಿರುತೆರೆಯ ಕಾರ್ಯಕ್ರಮಗಳಲ್ಲಿ ಆಗಿಂದಾಗ್ಗೆ ಪ್ರಕಟಿಸುತ್ತಿರುತ್ತದೆ. ಬೆಳೆಯುತ್ತಿರುವ ಉದ್ಯಮವಾಗಿರುವ ಕಿರುತೆರೆಗೆ ಈ ರೀತಿಯ ಒಂದು ಪ್ರತ್ಯೇಕ ವೇದಿಕೆ ಈವರೆಗೆ ಲಭ್ಯವಾಗಿಲ್ಲ.

ಕರ್ನಾಟಕದ ಚಲನಚಿತ್ರ ಉದ್ಯಮದ ಮಾಹಿತಿಯನ್ನು ನೀಡಲು ಹಲವಾರು ಅಂತರ್ಜಾಲ ತಾಣಗಳು ಹಾಗೂ ಪತ್ರಿಕೆಗಳಿದ್ದು ಬೆಳೆಯುತ್ತಿರುವ ಉದ್ಯಮವಾಗಿರುವ ಕಿರುತೆರೆಯ ಚಟುವಟಿಕೆಗಳ ಕುರಿತು ಸಕಾಲಿಕ ಮಾಹಿತಿಯನ್ನು ತಕ್ಕಮಟ್ಟಿಗೆ ಪತ್ರಿಕೆಗಳು ನೀಡುತ್ತಿದ್ದು ಅವುಗಳನ್ನು ತತ್‌ಕ್ಷಣ ನಿಡುವಂತಹ ಅಂತರ್ಜಾಲ ತಾಣಗಳಿಲ್ಲ. ಅಲ್ಲದೆ ಪತ್ರಿಕೆಗಳಿಗೂ ಕೂಡ ಇವುಗಳ ಕುರಿತಾದ ಸರಿಯಾದ ಮಾಹಿತಿ ಲಭ್ಯವಾಗುತ್ತಿಲ್ಲ. ಈ ಸಮಸ್ಯೆಗೆ ಪರಿಹಾರ ಟಿವಿ ಕರ್ನಾಟಕ.ಕಾಮ್. ಮುದ್ರಣ ಮಾಧ್ಯಮಗಳೂ ಕೂಡ ನಮ್ಮ ಅಂತರ್ಜಾಲ ತಾಣದಲ್ಲಿಯ ಮಾಹಿತಿಯನ್ನು ಬಳಸಿಕೊಳ್ಳಬಹುದು. ಈ ಕಾರ್ಯಕ್ಕೆ ಕಿರುತೆರೆಯ ಎಲ್ಲ ಕಲಾವಿದರ ತಂತ್ರಜ್ಞರ ಹಾಗೂ ನಿರ್ಮಾಣ ಸಂಸ್ಥೆಗಳ ಸಹಕಾರ ಅಗತ್ಯ ಎಂದು ದಿಗಂತ ಮೀಡಿಯಾ ಸಲ್ಯೂಷನ್ಸ್‌ನ ಮುಖ್ಯಸ್ಥ ದಿನೇಶ್ ಮಡಗಾಂವಕರ್ ದಟ್ಸ್ ಕನ್ನಡಕ್ಕೆ ತಿಳಿಸಿದರು.

ಟಿವಿ ಕರ್ನಾಟಕಕ್ಕೆ ಕರ್ನಾಟಕದ ವಿವಿಧ ವಾಹಿನಿಗಳು, ನಿರ್ಮಾಣ ಸಂಸ್ಥೆಗಳು ತಮ್ಮ ಹೊಸ ಯೋಜನೆ, ಕಾರ್ಯಕ್ರಮಗಳ ಕುರಿತು ನಿಯಮಿತವಾಗಿ ಮಾಹಿತಿಯನ್ನು tvkarnataka@gmail.com ಗೆ ಮೇಲ್ ಮಾಡಬಹುದು ಅಥವಾ ದಿಗಂತ ಮೀಡಿಯಾ ಸಲ್ಯೂಷನ್ಸ್ ,ನಂ 43/4, 3 ನೇ ಮುಖ್ಯ ರಸ್ತೆ, 22ನೇ ಕ್ರಾಸ್, ಗೋವಿಂದರಾಜ ನಗರ, ಬೆಂಗಳೂರು-40 ಈ ವಿಳಾಸಕ್ಕೆ ಕಳುಹಿಸಬಹುದಾಗಿದೆ.

ಈ ಹಿಂದೆ ಜೀ ಕನ್ನಡದ ಸಾರ್ವಜನಿಕ ಸಂಪರ್ಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ದಿನೇಶ್ ಮಡಗಾಂವಕರ್ ಹಾಗೂ ಗೂಗಲ್ ಇಂಡಿಯಾದ ಕನ್ನಡ ಭಾಷಾ ತಜ್ಞರಾಗಿರುವ ರಾಘವೇಂದ್ರ ಎಂ ಅವರ ತಂಡವು ಟಿವಿ ಕರ್ನಾಟಕ.ಕಾಮ್ ಅಂತರ್ಜಾಲ ತಾಣವನ್ನು ನಿರ್ಮಿಸಲು ನಿರ್ಧರಿಸಿದೆ. ಹೆಚ್ಚಿನ ಮಾಹಿತಿಗಳಿಗಾಗಿ: 0-98440-49489 ಕರೆಮಾಡಿ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada