»   » ಜೀ ಕನ್ನಡದಲ್ಲೊಂದು ವಿನೂತನ ಗೇಮ್ ಶೋ

ಜೀ ಕನ್ನಡದಲ್ಲೊಂದು ವಿನೂತನ ಗೇಮ್ ಶೋ

Posted By:
Subscribe to Filmibeat Kannada

ಕನ್ನಡ ಕಿರುತೆರೆಯ ಗೇಮ್ ಶೋಗಳಲ್ಲಿ ಹೊಸತನ ಮೂಡಿಸಿದ ಜೀ ಕನ್ನಡ ಈಗ ಮತ್ತೊಂದು ನೂತನ ವಿನೂತನ ಗೇಮ್ ಶೋ ಮೂಲಕ ಕರ್ನಾಟಕದ ವೀಕ್ಷಕರನ್ನು ತಲುಪಲು ಸಜ್ಜಾಗಿದೆ. 'ಆಡು ಆಟ ಆಡು' ಎಂಬ ಹೊಸ ಕಾರ್ಯಕ್ರಮ ಜೀ ಕನ್ನಡದಲ್ಲಿ ಸಿದ್ಧಗೊಂಡಿದ್ದು ಶ್ರೀಘ್ರದಲ್ಲಿಯೇ ತನ್ನ ವೀಕ್ಷಕರಿಗೆ ತಲುಪಿಸಲು ವಾಹಿನಿ ಸಿದ್ದತೆ ನಡೆಸಿದೆ.

'ಆಡು ಆಟ ಆಡು' ಯುವ ದಂಪತಿಗಳನ್ನು ದೃಷ್ಟಿಯಲ್ಲಿರಿಸಿಕೊಂಡು ನಿರ್ಮಿಸಿರುವ ಕಾರ್ಯಕ್ರಮವಾಗಿದ್ದು ಇಲ್ಲಿ ನೂತನ ದಂಪತಿಗಳು ಗೇಮ್ ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಗೇಮ್ ಶೋಗಾಗಿ ರಾಜ್ಯದಾದ್ಯಂತ ಆಯ್ಕೆ ಪ್ರಕ್ರಿಯೆ ನಡೆಸಲಾಗಿದ್ದು ಆಯ್ಕೆಯಾದ ದಂಪತಿಗಳಿಗೆ ಸರಳ ಹಾಗೂ ಹಾಸ್ಯ ಪ್ರಧಾನ ಆಟಗಳನ್ನು ಆಡಿಸಲಾಗುತ್ತದೆ.

ಯುವ ದಂಪತಿಗಳ ಹೊಂದಾಣಿಕೆ, ಪರಸ್ಪರ ಆತ್ಮೀಯತೆ, ಅವರ ಜೀವನ ವಿಧಾನಗಳಿಗೆ ಅನುಗುಣವಾಗಿ ಆಟಗಳನ್ನು ರೂಪಿಸಲಾಗಿದ್ದು ಈ ಆಟಗಳು ನೋಡುಗರಿಗೆ ಅತೀವವಾದ ಮನರಂಜನೆ ಒದಗಿಸಲಿವೆ ಎಂದು ಝಿ ಕನ್ನಡದ ವ್ಯವಹಾರಗಳ ಮುಖ್ಯಸ್ಥರಾದ ಜೆ. ಶೇಖರ್ ತಿಳಿಸಿದರು.

ಇದು ಶುದ್ಧ ಮನರಂಜನೆಯ ಕೌಟುಂಬಿಕ ಕಾರ್ಯಕ್ರಮವಾಗಿದ್ದು ಈ ಸ್ಪರ್ಧೆಗೆ ಬಂದವರೆಲ್ಲರೂ ಬಹುಮಾನಗಳಿಸುವ ಅವಕಾಶವಿದೆ. ಯಾವುದೇ ಸ್ಪರ್ಧಾರ್ಥಿ ಬರಿಗೈಯಲ್ಲಿ ಹೋಗುವ ಪ್ರಶ್ನೆಯೇ ಇಲ್ಲ. ನೂತನ ದಂಪತಿಗಳ ಸಂಸಾರಕ್ಕೆ ಅನುಕೂಲವಾಗಲೆಂಬ ದೃಷ್ಟಿಯಿಂದ ವಿಜೇತರಿಗೆ ಗೃಹ ಉಪಯೋಗಿ ವಸ್ತುಗಳನ್ನು ಬಹುಮಾನವಾಗಿ ನೀಡಲಾಗುತ್ತಿದೆ.

ಟಿವಿ, ರೇಡಿಯೋ, ಟೇಪ್ ರೆಕಾರ್ಡರ್, ಡಿವಿಡಿ ಪ್ಲೇಯರ್, ವಾಷಿಂಗ್ ಮಿಷನ್, ರೆಫ್ರಿಜರೇಟರ್, ಪೀಠೋಪಕರಣ ಹಾಗೂ ಇದೇ ಮಾಧರಿಯ ವಿವಿಧ ಗೃಹ ಉಪಯೋಗಿ ವಸ್ತುಗಳು ಬಹುಮಾನಗಳ ಪಟ್ಟಿಯಲ್ಲಿವೆ ಎಂದು ಝಿ ಕನ್ನಡದ ನಾನ್ ಫಿಕ್ಷನ್ ಮುಖ್ಯಸ್ಥೆ ವೈಷ್ಣವಿ ರಾಜೇಶ್ ತಿಳಿಸಿದರು.

ಕಾರ್ಯಕ್ರಮ ಕುರಿತಾದ ವಿಶೇಷಗಳನ್ನು ಪರಿಣಾಮಕಾರಿಯಾಗಿ ತಿಳಿಸುವ ಉದ್ದೇಶದಿಂದ ಗೋಷ್ಠಿಯಲ್ಲಿ ವರದಿಗಾರರು ಹಾಗೂ ಛಾಯಾಗ್ರಾಹಕರಿಗಾಗಿ ವಿಶೇಷ ಹಾಗೂ ಸ್ವಾರಸ್ಯಕರ ಆಟಗಳನ್ನು ಆಡಿಸಲಾಯಿತು. ಕೆಲ ವಿಶೇಷತೆಯಿಂದ ಕೂಡಿದ್ದ ಪತ್ರಿಕಾ ಗೋಷ್ಠಿಗೆ ಮಾಧ್ಯಮ ಮಿತ್ರರು ದಂಪತಿ ಹಾಗೂ ಮಕ್ಕಳ ಸಮೇತರಾಗಿ ಆಗಮಿಸಿದ್ದುದು ಮೆರುಗು ನೀಡಿತು.

ಈಗಾಗಲೇ ವಿವಿಧ ಸಂಚಿಕೆಗಳೊಂದಿಗೆ ಸಿದ್ದಗೊಂಡಿರುವ ಡಿಷ್ ಟಿವಿ 'ಆಡು ಆಟ ಆಡು' ಇದೇ ಮೇ ತಿಂಗಳ 31 ರಿಂದ ಪ್ರತಿ ಸೋಮವಾರ, ಮಂಗಳವಾರ ಹಾಗೂ ಬುಧವಾರ ರಾತ್ರಿ 9 ಗಂಟೆಗೆ ಝಿ ಕನ್ನಡದಲ್ಲಿ ಮೂಡಿಬರಲಿದೆ. ಈ ವಿನೂತನ ಕಾರ್ಯಕ್ರಮವನ್ನು ಖ್ಯಾತ ಚಿತ್ರನಟ ರಾಜೇಶ್ ನಿರೂಪಿಸಲಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada