Don't Miss!
- Sports
ಭಾರತ vs ಆಸ್ಟ್ರೇಲಿಯಾ: ಅದುವೇ ನನ್ನ ಜೀವನದ ಅತ್ಯಂತ ಶ್ರೇಷ್ಠ ಸರಣಿ ಎಂದ ಚೇತೇಶ್ವರ್ ಪೂಜಾರ
- News
ರಾಯಚೂರು: ನೇಣುಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ, ಕಾಲೇಜು ಪ್ರಾಂಶುಪಾಲರ ವಿರುದ್ಧ ಅತ್ಯಾಚಾರ, ಕೊಲೆ ಪ್ರಕರಣ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಮತ್ತೆ ಮನ್ವಂತರ' ತರುತ್ತಿದ್ದಾರೆ ಟಿ.ಎನ್.ಸೀತಾರಾಮ್: ಚಿತ್ರೀಕರಣ ಆರಂಭ
ಕನ್ನಡ ಧಾರಾವಾಹಿಗಳಿಗೆ ಹೊಸ ರೂಪ ನೀಡಿದ, ಸೃಜನಶೀಲ, ಸುಂದರ ಧಾರಾವಾಹಿಗಳ ಮೂಲಕ ಮನೆ ಮಾತಾಗಿರುವ ಟಿ.ಎನ್.ಸೀತಾರಾಮ್ ಹೊಸ ಧಾರಾವಾಹಿ ಮೂಲಕ ಮತ್ತೆ ಬರುತ್ತಿದ್ದಾರೆ.
'ಮತ್ತೆ ಮನ್ವಂತರ' ಹೆಸರಿನ ಹೊಸ ಧಾರಾವಾಹಿಯನ್ನು ಟಿ.ಎನ್.ಸೀತಾರಾಮ್ ನಿರ್ದೇಶನ ಮಾಡಲಿದ್ದು, ಇತ್ತೀಚೆಗಷ್ಟೆ ಧಾರಾವಾಹಿಯ ಮುಹೂರ್ತವನ್ನು ಸರಳವಾಗಿ ಮಾಡಿ ಮುಗಿಸಿದ್ದಾರೆ.
ಸೀತಾರಾಮ್ ನಿರ್ದೇಶನದ 'ಮಗಳು ಜಾನಕಿ' ಧಾರಾವಾಹಿ ಪ್ರಸಾರವಾಗುತ್ತಿತ್ತು, ಆದರೆ ಕೊರೊನಾ ಸಮಯದಲ್ಲಿ ಚಿತ್ರೀಕರಣ ಸ್ಥಗಿತವಾಯ್ತು. ಆ ನಂತರ ಧಾರವಾಹಿಯನ್ನು ನಿಲ್ಲಿಸುತ್ತಿರುವುದಾಗಿ ಟಿ.ಎನ್.ಸೀತಾರಾಮ್ ಘೋಷಿಸಿದರು. ಹೊಸ ಧಾರಾವಾಹಿಯೊಂದಿಗೆ ಮತ್ತೆ ಬರುವುದಾಗಿಯೂ ಅವರು ಭರವಸೆ ನೀಡಿದ್ದರು. ಅಂತೆಯೇ ಈಗ 'ಮತ್ತೆ ಮನ್ವಂತರ' ತರುತ್ತಿದ್ದಾರೆ.
''ಮಗಳು ಜಾನಕಿ' ಧಾರಾವಾಹಿ ಪಾತ್ರಗಳು ನಿರ್ದೇಶಕನಾದ ನನ್ನ ಹಿಡಿತ ಮೀರಿ ವರ್ತಿಸುತ್ತಿವೆ. ಧಾರಾವಾಹಿಯ ಪಾತ್ರಗಳ ಮೂಲಕ ನಾನು ಆಲೋಚಿಸಿದ್ದನ್ನು ಹೇಳಲಾಗುತ್ತಿಲ್ಲ. ಪಾತ್ರಗಳು ಸ್ವಯಂ ಆಗಿ ವರ್ತಿಸುತ್ತಿವೆ, ಪಾತ್ರಗಳ ಭಾಷೆಯನ್ನೇ ನಾನು ಮಾತನಾಡುತ್ತಿದ್ದೇನೆ' ಎಂದು ಬೇಸರ ವ್ಯಕ್ತಪಡಿಸಿದ್ದರು ಸೀತಾರಾಮ್. ಹಾಗಾಗಿಯೇ ಆ ಧಾರವಾಹಿಯನ್ನು ಅಲ್ಲಿಗೆ ಕೈ ಬಿಟ್ಟು ಹೊಸ ಧಾರಾವಾಹಿಯನ್ನು ತರುತ್ತಿದ್ದಾರೆ.
2001ರಲ್ಲಿ ಈಟಿವಿ ಕನ್ನಡಕ್ಕಾಗಿ 'ಮನ್ವಂತರ' ಹೆಸರಿನ ಧಾರಾವಾಹಿಯನ್ನು ಟಿ.ಎನ್.ಸೀತಾರಾಮ್ ಅವರೇ ನಿರ್ದೇಶನ ಮಾಡಿದ್ದರು. ಆ ಧಾರಾವಾಹಿ ಭಾರಿ ಜನಮೆಚ್ಚುಗೆ ಗಳಿಸಿತ್ತು. ಆ ಧಾರವಾಹಿಯಲ್ಲಿ ಮಾಳವಿಕ ಸೇರಿದಂತೆ ಹಲವು ಪ್ರಮುಖ ನಟ-ನಟಿಯರು ನಟಿಸಿದ್ದರು. ಈಗ ನಿರ್ದೇಶಿಸುತ್ತಿರುವ 'ಮತ್ತೆ ಮನ್ವಂತರ' ಅದೇ ಧಾರಾವಾಹಿಯ ಮುಂದುವರೆದ ಭಾಗವಾ? ಕಾದು ನೋಡಬೇಕಿದೆ.

ಕಿರುತೆರೆಗೆ ಮರಳುತ್ತಿರುವ ಮಾಳವಿಕಾ
'ಮತ್ತೆ ಮನ್ವಂತರ' ಧಾರಾವಾಹಿ ಮೂಲಕ ಮಾಳವಿಕ ಅವಿನಾಶ್ ಮತ್ತೆ ಕಿರುತೆರೆಗೆ ಮರಳುತ್ತಿದ್ದಾರೆ. ಜೊತೆಗೆ ಅಜಿತ್ ಹಂದೆ, ನಿರಂಜನ ದೇಶಪಾಂಡೆ, ಮೇಧ ವಿದ್ಯಾಭೂಷಣ್, ಮೇಘಾ ನಾಡಿಗೇರ್, ಸುಂದರ್, ಚಂದನ್ ಶಂಕರ್, ಪ್ರಶಾಂತ್ ಶೆಟ್ಟಿ ಇನ್ನೂ ಕೆಲವರು ಮುಖ್ಯ ಭೂಮಿಕೆಯಲ್ಲಿರಲಿದ್ದಾರೆ.

ಶೀರ್ಷಿಕೆ ಗೀತೆ ರಚಿಸಿದ್ದಾರೆ ಎಚ್.ಎಸ್.ವೆಂಕಟೇಶ್‌ಮೂರ್ತಿ
'ಮತ್ತೆ ಮನ್ವಂತರ' ಧಾರಾವಾಹಿಯ ಶೀರ್ಷಿಕೆ ಗೀತೆಯನ್ನು ಕವಿ ಎಚ್.ಎಸ್.ವೆಂಕಟೇಶಮೂರ್ತಿ ರಚಿಸಲಿದ್ದು, ಪ್ರವೀಣ್ ಡಿ ರಾವ್ ರಾಗ ಸಂಯೋಜನೆ ಮಾಡಿದ್ದು ವಿಜಯ್‌ಪ್ರಕಾಶ್ ಹಾಡಿದ್ದಾರೆ. ಧಾರಾವಾಹಿಯ ಕತೆಯನ್ನು ಪರಮೇಶ್ವರ್ ಗುಂಡ್ಕಲ್ ಮತ್ತು ಟಿ.ಎನ್.ಸೀತಾರಾಮ್ ಜಂಟಿಯಾಗಿ ರಚಿಸಲಿದ್ದಾರೆ. ಟಿ.ಎನ್.ಸೀತಾರಾಮ್ ಜೊತೆಗೆ ಅಶ್ವಿನಿ ಅನೀಶ್, ಸೌಮ್ಯಾ ಸಾಲಿಮಠ್ ಸಂಭಾಷಣೆ ಬರೆಯಲಿದ್ದಾರೆ. ಟಿ.ಎನ್.ಸೀತಾರಾಮ್ ಅವರ ಧಾರಾವಾಹಿ ಶೀರ್ಷಿಕೆ ಹಾಡುಗಳು ಸಿನಿಮಾ ಹಾಡುಗಳಿಗಿಂತಲೂ ಹೆಚ್ಚಾಗಿ ಜನಪ್ರಿಯವಾಗುತ್ತವೆ. ಅವರು ತಮ್ಮ ಧಾರಾವಾಹಿಯ ಶೀರ್ಷಿಕೆ ಹಾಡುಗಳಿಗೆ ಬಹಳ ಮಹತ್ವ ನೀಡುತ್ತಾರೆ. ಹಾಗಾಗಿ 'ಮತ್ತೆ ಮನ್ವಂತರ'ದ ಹಾಡು ಹೇಗಿರುತ್ತದೆ ಎಂಬ ಕುತೂಹಲವೂ ಅವರ ಅಭಿಮಾನಿಗಳಲ್ಲಿ ಇದೆ.

'ಮಾಯಾಮೃಗ' ಮರುಪ್ರಸಾರಕ್ಕೆ ಒಳ್ಳೆಯ ಪ್ರತಿಕ್ರಿಯೆ
ಟಿ.ಎನ್.ಸೀತಾರಾಮ್ ತಮ್ಮ 'ಮಗಳು ಜಾನಕಿ' ಧಾರಾವಾಹಿಯನ್ನು ಅರ್ಧಕ್ಕೆ ನಿಲ್ಲಿಸಿದಾಗ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಮಂದಿ ಅಸಮಾಧಾನ ವ್ಯಕ್ತಪಡಿಸಿದ್ದರು. ಲಾಕ್‌ಡೌನ್ ಸಮಯದಲ್ಲಿ ಟಿ.ಎನ್.ಸೀತಾರಾಮ್ ಅವರ ಮತ್ತೊಂದು ಜನಪ್ರಿಯ ಧಾರಾವಾಹಿ 'ಮಾಯಾಮೃಗ'ವನ್ನು ಯೂಟ್ಯೂಬ್‌ನಲ್ಲಿ ಮತ್ತೆ ಪ್ರಸಾರ ಮಾಡಲಾಗಿತ್ತು, ಆ ಧಾರಾವಾಹಿಗೆ ಭಾರಿ ಜನಮನ್ನಣೆ ಸಿಕ್ಕಿತು. ಅದೇ ಪ್ರೇರಣೆಯಿಂದ ಟಿ.ಎನ್.ಸೀತಾರಾಮ್ ಈಗ 'ಮತ್ತೆ ಮನ್ವಂತರ' ಆರಂಭಿಸಿದ್ದಾರೆ. ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು ಕಲರ್ಸ್ ಚಾನೆಲ್‌ನಲ್ಲಿ ಧಾರಾವಾಹಿ ಪ್ರಸಾರವಾಗಲಿದೆ.

ಅಮೂಲ್ಯ ಧಾರಾವಾಹಿಗಳನ್ನು ಟಿ.ಎನ್.ಸೀತಾರಾಮ್ ನೀಡಿದ್ದಾರೆ
ಟಿ.ಎನ್.ಸೀತಾರಾಮ್ ಕನ್ನಡದ ಬಹಳ ಪ್ರಮುಖ ಧಾರಾವಾಹಿ ನಿರ್ದೇಶಕ, ಕನ್ನಡಕ್ಕೆ ಬಹಳ ಅಮೂಲ್ಯವಾದ ಧಾರಾವಾಹಿಗಳನ್ನು ಅವರು ನೀಡಿದ್ದಾರೆ. 1998ರಲ್ಲಿ 'ಮಾಯಾಮೃಗ' ಮೂಲಕ ಧಾರಾವಾಹಿ ನಿರ್ದೇಶನ ಆರಂಭಿಸಿದ ಟಿ.ಎನ್.ಸೀತಾರಾಮ್, ಆ ನಂತರ 'ಜ್ವಾಲಾಮುಖಿ', 2001ರಲ್ಲಿ 'ಮನ್ವಂತರ', 2003ರಲ್ಲಿ 'ದಶಾವತಾರ', 2004ರಲ್ಲಿ 'ಮುಕ್ತ', 2008 ರಲ್ಲಿ 'ಮುಕ್ತ-ಮುಕ್ತ', 2013 ರಲ್ಲಿ 'ಮಹಾ ಪರ್ವ', 2018 ರಲ್ಲಿ 'ಮಗಳು ಜಾನಕಿ' ಧಾರಾವಾಹಿಗಳನ್ನು ನಿರ್ದೇಶನ ಮಾಡಿದ್ದಾರೆ. ಇದರ ನಡುವೆ ರಮ್ಯಾ ನಟಿಸಿದ್ದ 'ಮೀರಾ ಮಾಧವ ರಾಘವ' ಮತ್ತು 'ಕಾಫಿ ತೋಟ' ಹೆಸರಿನ ಸಿನಿಮಾಗಳನ್ನು ಸಹ ನಿರ್ದೇಶನ ಮಾಡಿದ್ದಾರೆ. ಡ್ರಾಮಾ ಜ್ಯೂನಿಯರ್ಸ್ ರಿಯಾಲಿಟಿ ಶೋಗೆ ಜಡ್ಜ್ ಆಗಿ ಸಹ ಸೀತಾರಾಮ್ ಕಾರ್ಯನಿರ್ವಹಿಸಿದ್ದಾರೆ.