»   »  ಪಡ್ಡೆಗಳ ಹುಚ್ಚೆಬ್ಬಿಸುವ ಹಾಡಿಗೆ ದೀಪಿಕಾ ಹೆಜ್ಜೆ!

ಪಡ್ಡೆಗಳ ಹುಚ್ಚೆಬ್ಬಿಸುವ ಹಾಡಿಗೆ ದೀಪಿಕಾ ಹೆಜ್ಜೆ!

Posted By:
Subscribe to Filmibeat Kannada

ಬಾಲಿವುಡ್ ನಲ್ಲಿ 'ಓಂ ಶಾಂತಿ ಓಂ' ಎಂದು ಶಾಂತಿ ಮಂತ್ರ ಜಪಿಸಿದ್ದದೀಪಿಕಾ ಪಡುಕೋಣೆ ಇದೀಗ ಪಡ್ಡೆಗಳನ್ನು ಹುಚ್ಚೆಬ್ಬಿಸಲು ದಕ್ಷಿಣ ಭಾರತಕ್ಕೆ ಲಗ್ಗೆ ಹಾಕಿದ್ದಾರೆ. 'Love 4 Ever' ಎಂಬ ಚಿತ್ರ ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದೆ. ಈ ಚಿತ್ರದ ಐಟಂ ಹಾಡಿನಲ್ಲಿ ದೀಪಿಕಾ ಮೈ ಚಳಿಬಿಟ್ಟು ಕುಣಿದ್ದಿದ್ದಾರಂತೆ.

ಇತ್ತ ದಕ್ಷಿಣದನಟಿಯರೇನೋ ಬಾಲಿವುಡ್ ನ ಐಟಂ ಸಾಂಗ್ ಗಳಲ್ಲಿ ಅವಕಾಶ ಸಿಕ್ಕರೆ ಸಾಕು ಎಂದು ಮನಸಿನಲ್ಲೇ ಮಂಡಿಗೆ ತಿನ್ನುತ್ತಿದ್ದಾರೆ.ಆದರೆ ದೀಪಿಕಾ ಮಾತ್ರ ಸಿಕ್ಕಿದ್ದೇ ಸೀರುಂಡೆ ಎಂದು ಮತ್ತೆ ದಕ್ಷಿಣದ ಚಿತ್ರದಲ್ಲಿ ಕುಣಿಯಲು ಒಪ್ಪಿಕೊಂಡಿದ್ದಾರೆ. ಅಸಿನ್, ಜೆನಿಲಿಯಾ ಡಿಸೋಜಾ, ಶ್ರೇಯಾ ಸರನ್, ತ್ರಿಶಾ ಮುಂತಾದ ಬೆಡಗಿಯರು ಬಾಲಿವುಡ್ ಚಿತ್ರಗಳನ್ನು ಕಣ್ಣಿಗೊತ್ತಿಕೊಂಡು ನಟಿಸಲು ತವಕಿಸುತ್ತಿದ್ದಾರೆ.ಅವಕಾಶಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.ಆದರೆ ದೀಪಿಕಾ ಮಾತ್ರ ಇದಕ್ಕೆ ತದ್ವಿರುದ್ಧ.

ಕನ್ನಡದ 'ಐಶ್ವರ್ಯ' ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟ ದೀಪಿಕಾ ನಂತರ ಬಾಲಿವುಡ್ ನ ಓಂ ಶಾಂತಿ ಓಂ ಚಿತ್ರದಲ್ಲಿ ದಿನಬೆಳಗಾಗುವುದರಲ್ಲಿ ಮನೆಮಾತಾದರು. ಹಿಂದಿಯ 'ಬಚ್ ನಾ ಏ ಹಸೀನೊ'ಚಿತ್ರದ ಮೂಲಕ ಬಾಲಿವುಡ್ ನಲ್ಲಿ ಭದ್ರ ಸ್ಥಾನ ಕಲ್ಪಿಸಿಕೊಂಡರು. ನಂತರ ಬಂದ 'ಚಾಂದಿನಿ ಚೌಕ್ ಟು ಚೈನಾ' ಮುಗ್ಗರಿಸಿತು. ಸೈಫ್ ಆಲಿ ಖಾನ್ ಜತೆ ನಟಿಸಿದ 'ಲವ್ ಆಜ್ ಕಲ್' ಈ ಸೋಲನ್ನು ಅಳಿಸಿಹಾಕುವ ನಿರೀಕ್ಷೆಯಲ್ಲಿದೆ.

ಬಾಲಿವುಡ್ ನಲ್ಲಿ ತಮ್ಮ ವೃತ್ತಿಜೀವನ ಒಂದು ಹದಕ್ಕೆ ಬರುತ್ತಿರುವ ಸನ್ನಿವೇಶದಲ್ಲೇ ದೀಪಿಕಾ ದಕ್ಷಿಣದ ಕಡೆ ಮುಖ ಮಾಡಿರುವುದು ಹಲವರ ಹುಬ್ಬೇರಿಸಿದೆ. ಬಾಲಿವುಡ್ ನ ಬಿಡುವಿಲ್ಲದ ಚಟುವಟಿಕೆಗಳಲ್ಲೂ 'Love 4 Ever' ಚಿತ್ರದ ಐಟಂ ಹಾಡೊಂದರಲ್ಲಿ ಕುಣಿದಿದ್ದಾರೆ. ರಣದೀಪ್ ಮತ್ತು ಮೃದುಲಾ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಚಿತ್ರವನ್ನು ತೆಲುಗು ನಿರ್ಮಾಪಕ ಜಯಂತ್ ಸಿ ನಿರ್ಮಿಸಿದ್ದಾರೆ. ತೆಲುಗು ಮತ್ತು ಹಿಂದಿ ಚಿತ್ರಗಳೆರಡು ಒಟ್ಟಿಗೆ ಚಿತ್ರೀಕೃತವಾಗುತ್ತಿವೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada