»   » ಟ್ವಿಟ್ಟರ್ ಗೆ ಅಮಿತಾಬ್ ಬಚ್ಚನ್ ಲಗ್ಗೆ

ಟ್ವಿಟ್ಟರ್ ಗೆ ಅಮಿತಾಬ್ ಬಚ್ಚನ್ ಲಗ್ಗೆ

Posted By:
Subscribe to Filmibeat Kannada

ಬಿಗ್ ಬಿ ಅಮಿತಾಬ್ ಬಚ್ಚನ್ ಚಿತ್ರರಂಗದಲ್ಲಿ ಏನೆಲ್ಲಾ ಸಾಧಿಸಿದ್ದರೂ ಇನ್ನೂ ಏನೋ ಮಾಡಬೇಕೆಂಬ ತವಕ ಅವರನ್ನು ಕಾಡುತ್ತಿದೆ. ಹೊಸ ಹೊಸ ಸಂಗತಿಗಳನ್ನು ತಿಳಿದುಕೊಳ್ಳಲು ಮುಂದಾಗಿರುವ ಬಿಗ್ ಬಿ ಇದಕ್ಕಾಗಿ ತಮ್ಮ ಅಮೂಲ್ಯ ಸಮಯದಲ್ಲಿ ಕೊಂಚ ಭಾಗವನ್ನು ಮೀಸಲಿಟ್ಟಿದ್ದಾರೆ.

ಕೆಲ ದಿನಗಳ ಹಿಂದೆ ನನಗೆ ಉಡುಗೊರೆಯಾಗಿ ಪಿಯಾನೊ ಕೊಟ್ಟಿದ್ದರು. ಒಂಟಿಯಾಗಿದ್ದಾಗ ನಾನು ಅದನ್ನು ನುಡಿಸುತ್ತಿದ್ದೆ. ಆದರೆ ಸ್ವರಗಳನ್ನು ನುಡಿಸಲು ಆಗುತ್ತ್ತಿರಲಿಲ್ಲ. ಪಿಯಾನೊ ನುಡಿಸುವುದು ಹೇಗೆ ಎಂಬ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಕಾಡುತಿತ್ತು. ಮನೆಯಲ್ಲಿ ಅದನ್ನು ನೋಡಿದಾಗಲೆಲ್ಲಾ ನಾನು ಅದನ್ನು ನುಡಿಸಿದಂತೆ ಭಾಸವಾಗುತ್ತಿತ್ತು. ದೇವರ ಆಶೀರ್ವಾದಿಂದ ಶೀಘ್ರದಲ್ಲೆ ಪಿಯಾನೋ ವಾದ್ಯವನ್ನು ನುಡಿಸಲಿದ್ದೇನೆ ಎಂಬ ವಿಶ್ವಾಸವನ್ನು ಬಿಗ್ ಬಿ ವ್ಯಕ್ತಪಡಿಸಿದ್ದಾರೆ.

ಯಾವುದಾರೊಂದು ಸಂಗೀತ ವಾದ್ಯವನ್ನು ಕಲಿಯಬೇಕೆಂಬ ವಾಂಛೆ ಬಹಳ ಹಿಂದಿನಿಂದಲೂ ಇತ್ತು. ಬಹಳ ಹಿಂದೆ ಪಂಡಿತ್ ರವಿಶಂಕರ್ ಅವರ ಸಿತಾರ್ ವಾದನವನ್ನು ತದೇಕಚಿತ್ತದಿಂದ ಕೇಳುತ್ತಿದ್ದೆ.ಆಗೆಲ್ಲಾ ಸಿತಾರ್ ಕಲಿಯಲು ಪ್ರಯತ್ನಿಸಿದ್ದು ಉಂಟು. ಆದರೆ ಅದು ಸಾಧ್ಯವಾಗಲಿಲ್ಲ. ಈಗ ನನ್ನ ಕನಸು ನನಸಾಗುವ ಸಮಯ ಕೂಡಿಬಂದಿದೆ ಎನ್ನುತ್ತಾರೆ ಬಿಗ್ ಬಿ.

ಇದಷ್ಟೆ ಅಲ್ಲದೆ ಬಿಗ್ ಬಿ ವಿವಿಧ ಭಾಷೆಗಳನ್ನು ಕಲಿಯುವತ್ತಲೂ ಚಿತ್ತ ಹರಿಸಿದ್ದಾರೆ. ಫ್ರೆಂಚ್ ಮತ್ತು ಸ್ಪಾನಿಶ್ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬೇಕೆಂಬುದು ನನ್ನ ಕೋರಿಕೆ. ಈಗ ಕಲಿಯಲು ಆರಂಭಿಸದಿದ್ದರೆ ನನ್ನ ಜೀವನದಲ್ಲಿ ಇನ್ನೆಂದಿಗೂ ಇದು ಸಾಧ್ಯವಾಗುವುದಿಲ್ಲ. ಮಲೆಯಾಳಂ ಭಾಷೆಯನ್ನು ಕಲಿಯಬೇಕೆಂದಿದ್ದೇನೆ. ಇದೊಂದು ತೀರಾ ಕ್ಲಿಷ್ಟಕರ ಭಾಷೆಯಾಗಿದ್ದು ಕಲಿತೇ ತೀರುತ್ತೇನೆ ಎಂಬ ಆಸೆ ಬಿಗ್ ಅವರದು.

ಅಮಿತಾಬ್ ರ ಕಲಿಕೆ ಇಷ್ಟಕ್ಕೆ ಸೀಮಿತವಾಗಿಲ್ಲ. ಈಗಾಗಲೆ ಅಮಿತಾಬ್ ನಿಯಮಿತವಾಗಿ ತಮ್ಮ ಬ್ಲಾಗ್ ಗೆ ಬರೆಯುತ್ತಿರುವುದು ಗೊತ್ತೆ ಇದೆ. ಇದೀಗ ಸಾಮಾಜಿಕ ಸಂಪರ್ಕ ತಾಣ ಟ್ವಿಟ್ಟರ್ ಕಡೆಗೆ ದಾಪುಗಾಲು ಹಾಕಿದ್ದಾರೆ. ಕೆಲದಿನಗಳ ಹಿಂದಷ್ಟೆ ತಮ್ಮ ಹೆಸರನ್ನು ಟ್ವಿಟ್ಟರ್ ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಅರ್ಜಿ ತುಂಬಿ ಹೆಸರನ್ನು ನೋಂದಾಯಿಸಿಕೊಂಡಿದ್ದೇನೆ ಅಷ್ಟೆ. ಇನ್ನೂ ಟ್ವೀಟ್ ಮಾಡಲು ಆರಂಭಿಸಿಲ್ಲ ಎಂದು ಬಿಗ್ ಬಿ ತಿಳಿಸಿದ್ದಾರೆ. ಅರವತ್ತೆಂಟು ವರ್ಷದ ಇಳಿ ವಯಸ್ಸಿನಲ್ಲೂ ಅಮಿತಾಬ್ ರ ಹುಮ್ಮಸ್ಸು ಹದಿಹರೆಯದ ಯುವಕರನ್ನು ಕಂಗೆಡಿಸುವಂತಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada