ಫೋಟೋ ಆಲ್ಬಂ: ಗಾಯಕ ನಿಕ್ ಜೊನಾಸ್ ಜೊತೆಗೆ ಪ್ರಿಯಾಂಕಾ ನಿಶ್ಚಿತಾರ್ಥ
ಇಷ್ಟು ದಿನಗಳ ಊಹಾಪೋಹಕ್ಕೆ ನಿನ್ನೆ ಅಧಿಕೃತವಾಗಿ ತೆರೆಬಿದ್ದಿದೆ. ಇಲ್ಲಿಯವರೆಗೂ ಕೇಳಿಬರುತ್ತಿದ್ದ ಅಂತೆ-ಕಂತೆ ಗಾಸಿಪ್ ಗಳಿಗೆ ನಿನ್ನೆ (ಆಗಸ್ಟ್ 18) ನಟಿ ಪ್ರಿಯಾಂಕಾ ಛೋಪ್ರಾ ಹಾಗೂ ನಿಕ್ ಜೊನಾಸ್ ಪೂರ್ಣ ವಿರಾಮ ಹಾಕಿದ್ದಾರೆ.
ನಿರೀಕ್ಷೆಯಂತೆ ನಿನ್ನೆ (ಆಗಸ್ಟ್ 18) ಪ್ರಿಯಾಂಕಾ ಛೋಪ್ರಾ-ನಿಕ್ ಜೊನಾಸ್ ನಿಶ್ಚಿತಾರ್ಥ ಸಮಾರಂಭ ಅದ್ಧೂರಿಯಾಗಿ ನಡೆದಿದೆ. ಭಾರತೀಯ ಸಂಸ್ಕೃತಿ-ಸಂಪ್ರದಾಯದಂತೆ ಪ್ರಿಯಾಂಕಾ ಛೋಪ್ರಾ-ನಿಕ್ ಜೊನಾಸ್ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.
ಜುಲೈ 18 ರಂದು ಪ್ರಿಯಾಂಕಾ ಛೋಪ್ರಾ ಕೈಬೆರಳಿಗೆ ನಿಕ್ ಜೊನಾಸ್ ಡೈಮಂಡ್ ರಿಂಗ್ ತೊಡಿಸಿದ್ದರು ಎಂದು ಸುದ್ದಿ ಆಗಿತ್ತು. ಆದ್ರೆ, ಭಾರತದಲ್ಲಿ ಸಂಪ್ರದಾಯ ಬದ್ಧವಾಗಿ ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುವುದು ಪ್ರಿಯಾಂಕಾ ಛೋಪ್ರಾ ಆಸೆ ಆಗಿತ್ತು. ಅದರಂತೆ ನಿನ್ನೆ ನಿಶ್ಚಿತಾರ್ಥ ಸಮಾರಂಭ ಮುಂಬೈನಲ್ಲಿ ನಡೆದಿದೆ. ಮುಂದೆ ಓದಿರಿ....

ಇದೀಗ ಅಧಿಕೃತ...
ನಿಕ್ ಜೊನಾಸ್-ಪ್ರಿಯಾಂಕಾ ಛೋಪ್ರಾ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆಯಂತೆ... ಇಬ್ಬರು ಪ್ರೇಮದ ಅಮಲಿನಲ್ಲಿ ತೇಲುತ್ತಿದ್ದಾರಂತೆ... ಸದ್ಯದಲ್ಲಿ ಮದುವೆ ಆಗ್ತಾರಂತೆ... ಎಂಬ ಅಂತೆ-ಕಂತೆ ಇಲ್ಲಿಯವರೆಗೂ ಕಿವಿಗೆ ಬಿದ್ದಿತ್ತು. ಆದ್ರೀಗ, ಪ್ರಿಯಾಂಕಾ ಛೋಪ್ರಾ ಭಾವಿ ಪತಿ ನಿಕ್ ಜೊನಾಸ್ ಎಂಬುದು ಅಧಿಕೃತವಾಗಿದೆ.

ಭಾರತೀಯ ಸಂಪ್ರದಾಯದಂತೆ ನಿಶ್ಚಿತಾರ್ಥ ಮಾಡಿಕೊಂಡ ಜೋಡಿ
ನಿಕ್ ಜೊನಾಸ್ ವಿದೇಶಿ ಯುವಕ. ಆದರೂ, ಭಾರತೀಯ ಸಂಸ್ಕೃತಿಗೆ ಗೌರವ ನೀಡಿ, ಸಂಪ್ರದಾಯಬದ್ಧವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಪೂಜಾ ಕೈಂಕರ್ಯಗಳಲ್ಲಿ ಆಸಕ್ತಿಯಿಂದ ನಿಕ್ ಪಾಲ್ಗೊಂಡಿದ್ದಾರೆ.

ನಿಕ್ ತಂದೆ-ತಾಯಿ
ನಿಶ್ಚಿತಾರ್ಥದ ಶಾಸ್ತ್ರಗಳಲ್ಲಿ ನಿಕ್ ಜೊನಾಸ್ ತಂದೆ ತಾಯಿ (ಕೆವಿನ್, ಡೆನಿಸ್) ಕೂಡ ಭಾಗವಹಿಸಿರುವುದನ್ನ ನೀವು ಈ ಚಿತ್ರದಲ್ಲಿ ಕಾಣಬಹುದು. ನಿಶ್ಚಿತಾರ್ಥ ಸಮಾರಂಭದಲ್ಲಿ ನಿಕ್ ತಾಯಿ ಸಲ್ವಾರ್ ಧರಿಸಿದ್ದರೆ, ನಿಕ್ ತಂದೆ ಕುರ್ತಾ ತೊಟ್ಟಿದ್ದರು.

ಫ್ಯಾಮಿಲಿ ಫೋಟೋ
ನಿಶ್ಚಿತಾರ್ಥ ಸಮಾರಂಭದ ಬಳಿಕ ಕ್ಲಿಕ್ ಆಗಿರುವ ಫ್ಯಾಮಿಲಿ ಫೋಟೋ ಇದು. ಈ ಚಿತ್ರದಲ್ಲಿ ನೀವು ಪ್ರಿಯಾಂಕಾ ಜೊತೆಗೆ ಭಾವಿ ಪತಿ ನಿಕ್ ಜೊನಾಸ್, ಭಾವಿ ಅತ್ತೆ-ಮಾವ (ಕೆವಿನ್, ಡೆನಿಸ್) ಹಾಗೂ ಪ್ರಿಯಾಂಕಾ ತಾಯಿಯನ್ನ ನೋಡಬಹುದು.

ಶಾಸ್ತ್ರೋಕ್ತವಾಗಿ ನಡೆದ ನಿಶ್ಚಿತಾರ್ಥ
ಪ್ರಿಯಾಂಕಾ ಛೋಪ್ರಾ-ನಿಕ್ ಜೊನಾಸ್ ನಿಶ್ಚಿತಾರ್ಥ ನಿನ್ನೆ ಶಾಸ್ತ್ರೋಕ್ತವಾಗಿ ನಡೆಯಿತು.

ಸಂತಸ ಹಂಚಿಕೊಂಡ ಜೋಡಿ
ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ಪ್ರಿಯಾಂಕಾ ಹಾಗೂ ನಿಕ್ ಜೊನಾಸ್ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳ ಸಮೇತ ಸಂತಸ ಹಂಚಿಕೊಂಡಿದ್ದಾರೆ.

ಪ್ರೀತಿ ಶುರುವಾಗಿದ್ದು ಕಳೆದ ವರ್ಷ
ಪ್ರಿಯಾಂಕಾ ಛೋಪ್ರಾ ಹಾಗೂ ನಿಕ್ ಜೊನಾಸ್ ಮೊಟ್ಟ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದು Met Gala 2017 ರಲ್ಲಿ. ರೆಡ್ ಕಾರ್ಪೆಟ್ ಮೇಲೆ ಇಬ್ಬರು ಒಟ್ಟಿಗೆ ಕ್ಯಾಟ್ ವಾಕ್ ಮಾಡಿದರು. ಇಲ್ಲಿಂದಲೇ, ಇಬ್ಬರ ಪ್ರೀತಿ ಮೊಳಕೆಯೊಡೆದಿದ್ದು ಎನ್ನಲಾಗಿದೆ.

ಎಲ್ಲೆಲ್ಲೂ ಒಟ್ಟಿಗೆ ಕಾಣಿಸಿಕೊಂಡ ಜೋಡಿ
US Memorial Day 2018 ರಂದು ಕೂಡ ಪ್ರಿಯಾಂಕಾ ಹಾಗೂ ನಿಕ್ ಒಟ್ಟಿಗೆ ಕಾಣಿಸಿಕೊಂಡಿದ್ದರು. ಜೊತೆಗೆ ಒಟ್ಟಿಗೆ ಬೇಸ್ ಬಾಲ್ ಗೇಮ್ ಕೂಡ ನೋಡಿದ್ದರು. ಪ್ರಿಯಾಂಕಾ-ನಿಕ್ ಮಧ್ಯೆ ಏನೋ ನಡೆಯುತ್ತಿದೆ ಎಂಬ ಗಾಸಿಪ್ ಆರಂಭವಾಗಿದ್ದು ಇಲ್ಲಿಂದಲೇ.

ಭಾರತಕ್ಕೆ ಬಂದಿದ್ದ ನಿಕ್
ಇಷ್ಟೆಲ್ಲಾ ಆದ್ಮೇಲೆ ನಿಕ್ ಜೊನಾಸ್ ಭಾರತಕ್ಕೂ ಬಂದಿದ್ದರು. ಪ್ರಿಯಾಂಕಾ ಛೋಪ್ರಾ ಹಾಗೂ ಕುಟುಂಬದ ಜೊತೆ ಗೋವಾದಲ್ಲಿ ಕಾಣಿಸಿಕೊಂಡಿದ್ದರು.

ಇದೀಗ ನಿಶ್ಚಿತಾರ್ಥ
ಪ್ರಿಯಾಂಕಾ-ನಿಕ್ ಪರಸ್ಪರ ಪ್ರೀತಿಸಿ, ದಾಂಪತ್ಯ ಜೀವನಕ್ಕೆ ಕಾಲಿಡಲು ಮನಸ್ಸು ಮಾಡಿದ್ದಾರೆ.

ಯಾರೀ ನಿಕ್ ಜೊನಾಸ್.?
25 ವರ್ಷದ ನಿಕ್ ಜೊನಾಸ್ ಅಮೇರಿಕಾದ ಗಾಯಕ ಹಾಗೂ ನಟ. 'ಕ್ಯಾಂಪ್ ರಾಕ್', 'ಮಿಸ್ಟರ್ ಸನ್ ಶೈನ್', 'ಸ್ಮ್ಯಾಶ್' ಮುಂತಾದ ಟೆಲಿವಿಷನ್ ಫಿಲ್ಮ್ ಗಳಲ್ಲಿ ನಿಕ್ ಜೋನಾಸ್ ಕಾಣಿಸಿಕೊಂಡಿದ್ದಾರೆ. ಗಾಯಕನಾಗಿ ಹಲವಾರು ಆಲ್ಬಂಗಳನ್ನು ನಿಕ್ ಜೋನಾಸ್ ಹೊರತಂದಿದ್ದಾರೆ. ನಟಿ ಪ್ರಿಯಾಂಕಾ ಛೋಪ್ರಾ ಹಾಗೂ ನಿಕ್ ಜೊನಾಸ್ ನಡುವೆ ಹತ್ತು ವರ್ಷಗಳ ಅಂತರವಿದೆ.


Click it and Unblock the Notifications










