twitter
    For Quick Alerts
    ALLOW NOTIFICATIONS  
    For Daily Alerts

    ಶೇರ್ಷಾ: ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿದ್ದ ಯೋಧ ವಿಕ್ರಂ ಭಾತ್ರಾ ಕತೆ

    |

    ಸಿದ್ಧಾರ್ಥ್ ಮಲ್ಹೋತ್ರಾ ನಟಿಸಿರುವ ಹಿಂದಿ ಸಿನಿಮಾ 'ಶೇರ್ಷಾ' ಅಮೆಜಾನ್ ಪ್ರೈಂನಲ್ಲಿ ಇಂದು (ಆಗಸ್ಟ್ 12) ಬಿಡುಗಡೆ ಆಗಿದ್ದು ಮೆಚ್ಚುಗೆಗಳಿಸಿದೆ.

    ಭಾರತೀಯ ಸೈನ್ಯ, ಸೈನಿಕರಿಗೆ ಸಂಬಂಧಿಸಿದಂತೆ ಹಿಂದಿಯಲ್ಲಿ ಈಗಾಗಲೇ ಹಲವಾರು ಸಿನಿಮಾಗಳು ಬಂದಿವೆ. ಆದರೆ ಈಗ ಬಿಡಗುಡೆ ಆಗಿರುವ 'ಶೇರ್ಷಾ' ಸಿನಿಮಾ ನಿಜ ಯೋಧನೊಬ್ಬನ ನಿಜ ಸಾಹಸದ ಕತೆ.

    ಭಾರತೀಯ ಸೇನೆಯು ಲಕ್ಷಾಂತರ ವೀರ ಯೋಧರನ್ನು ಹೊಂದಿದೆ. ಸಾವಿರಾರು ವೀರ ಯೋಧರು ದೇಶದ ಗಡಿ ಕಾಯುವ ವೇಳೆ ವೀರ ಮರಣ ಅಪ್ಪಿದ್ದಾರೆ. ಅಂಥಹಾ ವೀರ ಯೋಧರ ಸಾಲಿಗೆ ಸೇರಿರುವ ವಿಕ್ರಂ ಭಾತ್ರಾ ಎಂಬುವರ ಕತೆ ಆಧರಿಸಿ 'ಶೇರ್ಷಾ' ಸಿನಿಮಾ ಮಾಡಲಾಗಿದೆ. ಯಾರು ಈ ವಿಕ್ರಂ ಭಾತ್ರಾ? ಅವರ ಸಾಹಸ ಎಂಥಹದ್ದು?

    ವಿಕ್ರಂ ಭಾತ್ರಾ 1974ರಲ್ಲಿ ಹಿಮಾಚಲ ಪ್ರದೇಶದ ಪಲಮ್‌ಪುರ್‌ನಲ್ಲಿ ಜನಿಸಿದರು. ಅವರ ತಂದೆ ಶಾಲೆ ಮುಖ್ಯೊಪಾಧ್ಯಾಯರಾಗಿದ್ದರು. ವಿಕ್ರಂ ಭಾತ್ರಾಗೆ ವಿಶಾಲ್ ಭಾಟ್ರಾ ಹೆಸರಿನ ಅವಳಿ ಸಹೋದರ ಇದ್ದಾರೆ. ಎಳವೆಯಲ್ಲಿಯೇ ಕ್ರೀಡೆಯಲ್ಲಿ ಆಸಕ್ತಿವಹಿಸಿದ್ದ ವಿಕ್ರಂಗೆ ಸೈನ್ಯಕ್ಕೆ ಸೇರುವ ಆಸೆ ಮೊದಲಿನಿಂದಲೂ ಇತ್ತು.

    ಪಲಮ್‌ಪುರ್‌ನಲ್ಲಿಯೇ ವಿಧ್ಯಾಭ್ಯಾಸ ಮುಗಿಸಿದ ವಿಕ್ರಂ ಕರಾಟೆಯಲ್ಲಿ ರಾಷ್ಟ್ರೀಯ ಮಟ್ಟದ ಆಟಗಾರರಾಗಿಯೂ ಹೆಸರು ಪಡೆದುಕೊಂಡಿದ್ದರು. ಪಂಜಾಬ್‌ ವಿವಿಯಲ್ಲಿ ಇಂಗ್ಲೀಷ್‌ ಪದವಿಗೆ ಸೇರಿದ ವಿಕ್ರಂ ಅದೇ ಸಮಯದಲ್ಲಿ ಸಿಡಿಎಸ್ (ಕೊಂಬೈನ್ಡ್ ಡಿಫೆನ್ಸ್ ಸರ್ವೀಸ್) ಪರೀಕ್ಷೆ ಎದುರಿಸಿ ಪಾಸಾಗಿ ಅಲಹಾಬಾದ್‌ನ ಸರ್ವೀಸ್ ಸೆಲೆಕ್ಷನ್‌ ಬೋರ್ಡ್‌ಗೆ ಆಯ್ಕೆಯಾದರು. ನಂತರ ಡೆಹರಾಡೂನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿ ಸೇರಿಕೊಂಡರು.

    ಬೆಳಗಾವಿಯಲ್ಲಿ ಕಮಾಂಡೊ ಟ್ರೈನಿಂಗ್

    ಬೆಳಗಾವಿಯಲ್ಲಿ ಕಮಾಂಡೊ ಟ್ರೈನಿಂಗ್

    1997ರಲ್ಲಿ ಜಮ್ಮು ಕಾಶ್ಮೀರ್ ರೈಫಲ್ಸ್‌ನ 13ನೇ ಬೆಟಾಲಿಯನ್‌ಗೆ ಲೆಫ್ಟಿನೆಂಟ್ ಆದ ವಿಕ್ರಂ 1998 ಹಾಗೂ 99ರ ವೇಳೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳು ಅತಿಯಾಗಿದ್ದ ಬಾರಾಮುಲ್ಲಾ, ಜಮ್ಮು ಕಾಶ್ಮೀರ, ಮಧ್ಯ ಪ್ರದೇಶದ ಮುವಾನಲ್ಲಿ ಸೇವೆ ಸಲ್ಲಿಸಿದರು. 1999ರ ಜನವರಿಯಲ್ಲಿ ಕರ್ನಾಟಕದ ಬೆಳಗಾವಿಯ ಕಮಾಂಡೊ ಕೋರ್ಸ್ ಮುಗಿಸಿದ ವಿಕ್ರಂ ಆ ಬ್ಯಾಚ್‌ನ ಅತ್ಯುತ್ತಮ ವಿಧ್ಯಾರ್ಥಿ ಗೌರವಕ್ಕೆ ಭಾಜನರಾದರು. ಅದೇ ಸಮಯಕ್ಕೆ ಗಡಿಯಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಕಾರ್ಗಿಲ್ ಯುದ್ಧ ಆರಂಭವಾಯ್ತು.

    'ಏ ದಿಲ್ ಮಾಂಗೆ ಮೋರ್' ಎಂದ ವಿಕ್ರಂ

    'ಏ ದಿಲ್ ಮಾಂಗೆ ಮೋರ್' ಎಂದ ವಿಕ್ರಂ

    ಜೂನ್ 19, 1999ರಂದು ವಿಕ್ರಂ ನಾಯಕತ್ವದಲ್ಲಿ ಭಾರತೀಯ ಸೇನೆಯು ಪಾಕಿಸ್ತಾನದ ವಶದಲ್ಲಿದ್ದ ಪಾಯಿಂಟ್ 5140 ಅನ್ನು ವಶಪಡಿಸಿಕೊಂಡಿತು. ಅದೊಂದು ಅದ್ಭುತ ಕಾದಾಟವಾಗಿತ್ತು. ಬಹಳ ಚಾಕಚಕ್ಯತೆಯಿಂದ ಮುಂದೆ ನಿಂತು ಕಾದಾಡಿದ ವಿಕ್ರಂ ಸೇನೆಗೆ ಜಯ ತಂದಿತ್ತರು. ಪಾಯಿಂಟ್ 5140 ಅನ್ನು ವಶಪಡಿಸಿಕೊಂಡ ಕೂಡಲೇ ವಿಕ್ರಂ ಬಾಯಿಂದ 'ಏ ದಿಲ್ ಮಾಂಗೇ ಮೋರ್' (ಈ ಹೃದಯ ಇನ್ನಷ್ಟು ಬಯಸುತ್ತದೆ) ಎಂಬ ವಾಕ್ಯ ಹೊರಟಿತ್ತು. ಈ ಆಪರೇಷನ್‌ನಲ್ಲಿ ವಿಕ್ರಂರ ಗುಪ್ತನಾಮ ಶೇರ್ಷಾ ಆಗಿತ್ತು.

    ಕ್ಯಾಪ್ಟನ್ ಹುದ್ದೆ ನೀಡಲಾಯ್ತು ವಿಕ್ರಂಗೆ

    ಕ್ಯಾಪ್ಟನ್ ಹುದ್ದೆ ನೀಡಲಾಯ್ತು ವಿಕ್ರಂಗೆ

    ಈ ಜಯದ ಬಳಿಕ ವಿಕ್ರಂಗೆ ಕ್ಯಾಪ್ಟನ್ ಗೌರವ ನೀಡಲಾಯ್ತು. ಅದೇ ವೇಳೆಗೆ ಪಾಯಿಂಟ್ 4875 ಅನ್ನು ವಶಪಡಿಸಿಕೊಳ್ಳಲು ಭಾರತೀಯ ಸೇನೆಯ ತುಕಡಿಯೊಂದು ಕಾಳಗದಲ್ಲಿ ನಿರತವಾಗಿತ್ತು. ಗಾಯಗೊಂಡಿದ್ದರೂ ಸಹ ವಿಕ್ರಂ ತಾವೇ ಸ್ವತಃ ಉನ್ನತ ಅಧಿಕಾರಿಗಳಲ್ಲಿ ಮನವಿ ಮಾಡಿ ಪಾಯಿಂಟ್ 4875ಗೆ ಹೋದರು. ಅಲ್ಲಿಯೂ ಬಹಳ ಹತ್ತಿರದ ಕಾದಾಟ ಭಾರತೀಯ ಸೇನೆ ಹಾಗೂ ಪಾಕಿಸ್ತಾನ ಸೇನೆಯ ನಡುವೆ ನಡೆಯಿತು. ಕೊನೆಗೆ ಭಾರತೀಯ ಸೇನೆ ಆ ಭೂ ಭಾಗವನ್ನೂ ತನ್ನ ವಶಕ್ಕೆ ಪಡೆದುಕೊಂಡಿತು. ಆದರೆ ಆ ಕಾಳಗದಲ್ಲಿ ವಿಕ್ರಂ ಅಸುನೀಗಿದರು. ಅವರ ಕೆಚ್ಚೆದಯ ಹೋರಾಟದ ಗುರುತಾಗಿ ಪಾಯಿಂಟ್ 4875ಗೆ ಭಾಟ್ರಾ ಪಾಯಿಂಟ್ ಎಂದೇ ಹೆಸರಿಡಲಾಗಿದೆ.

    ಪಾಕ್ ಸೈನಿಕರಿಂದ ಸವಾಲು

    ಪಾಕ್ ಸೈನಿಕರಿಂದ ಸವಾಲು

    ಸಾಯುವ ಕೆಲವು ದಿನಗಳ ಮುಂಚೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ವಿಕ್ರಂ, ''ನನ್ನ ಗುಪ್ತನಾಮ ಹೇಗೋ ಪಾಕಿಸ್ತಾನದ ಸೈನಿಕರಿಗೆ ತಿಳುದುಬಿಟ್ಟಿತು. ಅವರು ನಮ್ಮ ರೇಡಿಯೊ ಫ್ರೀಕ್ವೆನ್ಸಿಯಲ್ಲಿ ಮಾತನಾಡುತ್ತಾ, 'ಶೇರ್ಷಾ ಬಾ ಬಂದಿದ್ದೀಯಾ? ಮೇಲೆ ಬರಲು ಪ್ರಯತ್ನ ಮಾಡಬೇಡ ಬಹಳ ಕಷ್ಟಪಡಬೇಕಾಗುತ್ತದೆ ಎಂದು ನಮಗೆ ಸವಾಲು ಹಾಕಿದರು. ಇದರಿಂದ ನಮ್ಮ ಸೈನಿಕರು ಇನ್ನಷ್ಟು ಹುರುಪು ತುಂಬಿಕೊಂಡು ಹೋರಾಡಿದರು'' ಎಂದಿದ್ದರು ವಿಕ್ರಂ.

    ಇಂದಿಗೂ ಮದುವೆಯಾಗಿದ್ದ ಡಿಂಪಲ್ ಚೀಮಾ

    ಇಂದಿಗೂ ಮದುವೆಯಾಗಿದ್ದ ಡಿಂಪಲ್ ಚೀಮಾ

    1999 ರಲ್ಲಿ ಕಾರ್ಗಿಲ್ ಯುದ್ಧ ಆರಂಭವಾಗುವುದಕ್ಕೆ ತುಸು ಸಮಯ ಮುಂಚೆ ವಿಕ್ರಂ ಕೊನೆಯ ಬಾರಿಗೆ ತಮ್ಮ ಮನೆಗೆ ಹೋಳಿ ಹಬ್ಬಕ್ಕೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ತಾವು ಮದುವೆ ಆಗಲಿದ್ದ ಶಿಕ್ಷಕಿ ಡಿಂಪಲ್ ಚೀಮಾ ಅವರನ್ನು ವಿಕ್ರಂ ನೌಗೆಲ್ ಕಫೆ ಎಂಬಲ್ಲಿ ಭೇಟಿ ಮಾಡಿ ಬಹಳ ಸಮಯ ಒಟ್ಟಿಗೆ ಕಳೆದಿದ್ದರು. ಮದುವೆ ಮಾತುಕತೆ ನಡೆಯುವಾಗಲೇ ಯುದ್ಧ ಪ್ರಾರಂಭವಾಗಿತ್ತು. ವಿಕ್ರಂ ಯುದ್ಧದಲ್ಲಿ ವೀರ ಮರಣ ಅಪ್ಪಿದ ಬಳಿಕ ಡಿಂಪಲ್ ಚೀಮಾ ಮದುವೆ ಆಗಲೇ ಇಲ್ಲ. ವಿಕ್ರಂ ನೆನಪಿನಲ್ಲಿ ಈಗಲೂ ಒಬ್ಬರೇ ಜೀವನ ಸಾಗಿಸುತ್ತಿದ್ದಾರೆ. ಈಗ ಬಿಡುಗಡೆ ಆಗಿರುವ 'ಶೇರ್ಷಾ' ಸಿನಿಮಾದಲ್ಲಿ ಡಿಂಪಲ್ ಚೀಮಾ ಪಾತ್ರವನ್ನು ಕಿಯಾರಾ ಅಡ್ವಾಣಿ ನಿರ್ವಹಿಸಿದ್ದಾರೆ.

    ಸಿನಿಮಾದ ಬಗ್ಗೆ ಒಂದಿಷ್ಟು

    ಸಿನಿಮಾದ ಬಗ್ಗೆ ಒಂದಿಷ್ಟು

    'ಶೇರ್ಷಾ' ಸಿನಿಮಾದಲ್ಲಿ ವಿಕ್ರಂ ಭಾತ್ರಾ ಪಾತ್ರವನ್ನು ನಟ ಸಿದ್ಧಾರ್ಥ್ ಮಲ್ಹೋತ್ರಾ ನಿರ್ವಹಿಸಿದ್ದಾರೆ. ಡಿಂಪಲ್ ಚೀಮಾ ಪಾತ್ರವನ್ನು ಕಿಯಾರಾ ಅಡ್ವಾಣಿ ನಿರ್ವಹಿಸಿದ್ದಾರೆ. ಸಿನಿಮಾದಲ್ಲಿ ವಿಕ್ರಂ ತಂಡದಲ್ಲಿದ್ದ ಹಲವರ ಪಾತ್ರಗಳು ಇದ್ದು ನಟರಾದ ಶಿವ ಪಂಡಿತ್, ನಿಖಿತ್ ಧೀರ್, ಹಿಮಾಂಶು ಮಲ್ಹೋತ್ರಾ, ಅನಿಲ್ ಚರನ್‌ಜೀತ್, ಶತಾಫ್ ಫಿಗರ್, ಸಾಹಿಲ್ ವಾಹಿದ್, ರಾಜ್ ಅರ್ಜುನ್ ಇನ್ನೂ ಮುಂತಾದವರು ನಟಿಸಿದ್ದಾರೆ. ಸಿನಿಮಾವನ್ನು ತಮಿಳಿನ ನಿರ್ದೇಶಕ ವಿಷ್ಣುವರ್ಧನ್ ನಿರ್ದೇಶಿಸಿದ್ದಾರೆ. ಇದು ಇವರ ಮೊದಲ ಹಿಂದಿ ಸಿನಿಮಾ. ಈ ಮುಂಚೆ ಅಜಿತ್ ನಟನೆಯ 'ಬಿಲ್ಲಾ', ಪವನ್ ಕಲ್ಯಾಣ್ ನಟನೆಯ 'ಪಂಜಾ' ಸೇರಿದಂತೆ ಇನ್ನೂ ಹಲವು ಸ್ಟಾರ್ ನಟರ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಹೀರೂ ಯಶ್ ಜೋಹರ್, ಕರಣ್ ಜೋಹರ್, ಅಪೂರ್ವಾ ಮೆಹ್ತಾ, ಶಬ್ಬೀರ್‌ ಬೋಕ್ಸ್‌ವಾಲಾ, ಅಜಯ್ ಶಾ, ಹಿಮಾಂಶು ಗಾಂಧಿ ಒಟ್ಟಿಗೆ ಬಂಡವಾಳ ಹೂಡಿದ್ದಾರೆ. ಸಿನಿಮಾವು ಅಮೆಜಾನ್ ಪ್ರೈಂನಲ್ಲಿ ನೇರವಾಗಿ ಬಿಡುಗಡೆ ಆಗಿದ್ದು, ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ.

    English summary
    Shershaah movie is based on war hero Vikram Barta. He was captain in Indian Army. He died in Kargil war. He was awarded Param Veer Chakra.
    Thursday, August 12, 2021, 22:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X