ಚಂದನ್ ಶೆಟ್ಟಿ ಕನ್ನಡ ಚಿತ್ರರಂಗದ ಪ್ರಸಿದ್ಧ ಗಾಯಕ, ಸಂಗೀತ ನಿರ್ದೇಶಕ ಮತ್ತು ಗೀತಾರಚನಾಕಾರ. ಗೀತರಚನಾಕಾರವಾಗಿ ಸಿನಿಪಯಣ ಆರಂಭಿಸಿದ ಇವರು, ಅರ್ಜುನ ಜನ್ಯ ಕೈಕೆಳಗೆ ಸಹಾಯಕ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ವೈಯಕ್ತಿಕ ಜೀವನ
ಹಾಸನದ ಶಾಂತಿನಗರದಲ್ಲಿ ಜನಿಸಿದ ಚಂದನ್ ಶೆಟ್ಟಿಯವರ ತಂದೆ ಪರಮೇಶ ಒಬ್ಬ ವ್ಯಾಪಾರಿ ಮತ್ತು ತಾಯಿ ಪ್ರೇಮಾ ಗೃಹಿಣಿ. ಸಕಲೇಶಪುರದ ರೋಟರಿ ಶಾಲೆಯಲ್ಲಿ ಪ್ರಾಥಮಿಕ ಶಾಲೆ ಮುಗಿಸಿದ ಇವರು, ಪಿಯುಸಿಯನ್ನು ಪುತ್ತೂರಿನಲ್ಲಿ ಪೂರ್ಣಗೊಳಿಸಿದರು. ಮೈಸೂರಿನಲ್ಲಿ BBM ಪದವಿ ಪಡೆದ ಚಂದನ್, ಒಂದು ವರ್ಷ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡಿದ್ದರು.
ಸಿನಿಮಾರಂಗಕ್ಕೆ ಎಂಟ್ರಿ
2012ರಲ್ಲಿ `ಅಲೆಮಾರಿ' ಚಿತ್ರದಲ್ಲಿ ಚಿತ್ರಸಾಹಿತಿಯಾಗಿ ಮತ್ತು ಸಹಾಯಕ ಸಂಗೀತ ನಿರ್ದೇಶಕರಾಗಿ ಅರ್ಜುನ ಜನ್ಯ ಕೈಕೆಳಗೆ ಕೆಲಸ ಮಾಡಿದರು. ಅರ್ಜುನ ಜನ್ಯ ಅವರಿಗೆ ಚಂದನ್ ಅವರನ್ನು ಅರ್ಜುನ ಜನ್ಯರಿಗೆ ಪರಿಚಯಿಸಿದ್ದು ನಟ ಚೀರಂಜೀವಿ ಸರ್ಜಾ. ನಂತರ ವರದನಾಯಕ, ಪವರ್, ಚಕ್ರವ್ಯೂಹ, ಭಜರಂಗಿ ಮುಂತಾದ ಚಿತ್ರಗಳ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ನಂತರ ತಮ್ಮ ರಾಪ್ ಮ್ಯೂಸಿಕ್ ಆಲ್ಬಂಗಳಿಂದ ಮನೆಮಾತಾದ ಚಂದನ್, ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು.
ಬಿಗಬಾಸ್ ಸೀಜನ್ 5ರ ವಿಜೇತ
ಚಂದನ್ ಶೆಟ್ಟಿ ಅವರು ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗಬಾಸ್ ಸೀಜನ್ 5ರ ಸ್ಪರ್ಧಿಯಾಗಿದ್ದರು. ತುಂಬಾ ಹುಮ್ಮಸ್ಸಿನಿಂದ ಎಲ್ಲಾ ಚಟಿವಟಿಕೆಗಳಲ್ಲೂ ಭಾಗವಹಿಸಿದ್ದ ಅವರು ಟ್ರೋಫಿ ಗೆದ್ದಿದ್ದರು.
ಮದುವೆ: ಬಿಗ್‌ಬಾಸ್ ಮನೆಯಲ್ಲಿದ್ದಾಗ ಆತ್ಮೀಯ ಸ್ನೇಹಿತರಾಗಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮಧ್ಯೆ ಪ್ರೀತಿ ಮೂಡಿತ್ತು. ದೊಡ್ಮನೆಯಿಂದ ಹೊರಬಂದ ಬಳಿಕ ಯುವ ದಸರಾ ಕಾರ್ಯಕ್ರಮದಲ್ಲಿ ಮೈಸೂರು ಜನತೆಯ ಮುಂದೆಯೇ ನಿವೇದಿತಾ ಕೈಬೆರಳಿಗೆ ಉಂಗುರ ತೊಡಿಸಿ ಚಂದನ್ ಶೆಟ್ಟಿ ಪ್ರೇಮ ನಿವೇದನೆ ಮಾಡಿದ್ದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಬಳಿಕ 2020 ಫೆಬ್ರವರಿ 26ರಂದು ಪ್ರೀತಿಸಿ ಮದುವೆಯಾಗಿತ್ತು.
ವಿಚ್ಛೇದನ: ನಾಲ್ಕು ವರ್ಷಗಳ ಕಾಲ ಸಹಜೀವನ ನಡೆಸಿದ್ದ ಚಂದನ್ ಹಾಗೂ ನಿವೇದಿತಾ, 2024ರ ಜೂನ್ 7ರಂದು ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆದುಕೊಂಡಿದ್ದಾರೆ.