CelebsbredcrumbDarshanbredcrumbBiography

  ದರ್ಶನ್ ಜೀವನಚರಿತ್ರೆ

  ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ಎಂದೇ ಬಿರುದಾಂಕಿತರಾಗಿರುವ ದರ್ಶನ್ ಕನ್ನಡ ಚಿತ್ರರಂಗದ ಪ್ರಮುಖ ನಟ ಮತ್ತು ನಿರ್ಮಾಪಕ. `ಬಾಕ್ಸ್‌ಆಫೀಸ್ ಸುಲ್ತಾನ',`ದಾಸ' ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಯಿಸಿಕೊಳ್ಳುವ ದರ್ಶನ್ ಕನ್ನಡ ಚಿತ್ರರಂಗದ ಹೆಸರಾಂತ ಪ್ರತಿಭೆ ತೂಗುದೀಪ ಶ್ರೀನಿವಾಸ್‌ರ ಹಿರಿಯ ಪುತ್ರ. ಸುಮಾರು ಎರಡು ದಶಕಗಳ ತಮ್ಮ ಸಿನಿಜೀವನದಲ್ಲಿ ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಕನ್ನಡ ಸಿನಿಪ್ರಿಯರ ನೆಚ್ಚಿನ ನಟನಾಗಿ ಗುರುತಿಸಿಕೊಂಡಿದ್ದಾರೆ.

  ಬಾಲ್ಯ

  1977, ಫೆಬ್ರವರಿ 16 ಶಿವರಾತ್ರಿಯ ದಿನದಂದು ಮಧ್ಯಾಹ್ನ ಪೊನ್ನಂಪೇಟೆಯ ರಾಮಕೃಷ್ಣ ಸೇವಾಶ್ರಮದಲ್ಲಿ ತೂಗುದೀಪ ಶ್ರೀನಿವಾಸ್ ಮತ್ತು ಮೀನಾ ದಂಪತಿಗಳ ಹಿರಿಯ ಪುತ್ರನಾಗಿ ಜನಿಸಿದರು.ಇವರ ಜನ್ಮನಾಮ ಹೇಮಂತ್ ಕುಮಾರ್.ಬಾಲ್ಯದ ವಿಧ್ಯಾಭ್ಯಾಸ ಮುಗಿಸಿದ್ದೆಲ್ಲಾ ಮೈಸೂರಿನಲ್ಲಿಯೇ....


  ಸಹೋದರಿ ದಿವ್ಯಾ ಮತ್ತು ಸಹೋದರ ದಿನಕರ್ ತೂಗುದೀಪ. 2003 ರಲ್ಲಿ ಧರ್ಮಸ್ಥಳದಲ್ಲಿ ಕೆಮಿಕಲ್ ಇಂಜಿನಿಯರಿಂಗ್ ವಿಧ್ಯಾರ್ಥಿ ವಿಜಯಲಕ್ಷ್ಮಿಯವರನ್ನು ಕೈಹಿಡಿದರು. ಈ ದಂಪತಿಗಳಿಗೆ ವಿನೀಶ್ ಎಂಬ ಪುತ್ರನಿದ್ದಾನೆ.


  ಕಷ್ಟದ ದಿನಗಳು

  ತಮ್ಮ ಕಲಾಜೀವನದ ಮೂಲಕ ಕುಟುಂಬವನ್ನು ಸೊಗಸಾಗಿ ಪೋಷಿಸುತ್ತಿದ್ದ ತೂಗುದೀಪರು ಕಿಡ್ನಿ ವೈಪಲ್ಯದಿಂದ ಹಾಸಿಗೆ ಹಿಡಿದರು.ಮೀನಾರವರು ಪತಿಯ ಚಿಕಿತ್ಸೆಗಾಗಿ ಮನೆಯೊಂದನ್ನು ಹೊರತುಪಡಿಸಿ ತಮ್ಮ ಎಲ್ಲಾ ಹಣವನ್ನು ವ್ಯಯಿಸಿದರು.ಕಡೆಗೆ ದಿನನಿತ್ಯದ ಊಟಕ್ಕೂ ಕಷ್ಟಪಡುವ ಪರಿಸ್ಥಿತಿ ಬಂದಿತು.


  ಈ ಸಮಯದಲ್ಲಿ ಜೆ.ಎಸ್.ಎಸ್ ಆಸ್ಪತ್ರೆ ಆರ್ಥಿಕವಾಗಿ ಸಹಾಯ ಮಾಡಿತು. ಮೀನಾರವರೇ ಪತಿಗೆ ಕಿಡ್ನಿ ನೀಡಿದರು. ಜೆ.ಎಸ್.ಎಸ್‌ನಲ್ಲಿ ಪಾಲಿಟೆಕ್ನಿಕಲ್ ಡಿಪ್ಲೋಮಾವನ್ನು ಓದುತ್ತಿದ್ದ ದರ್ಶನ್ ಅದನ್ನು ಅರ್ಧಕ್ಕೆ ಬಿಟ್ಟು ಶಿವಮೊಗ್ಗದ ಖ್ಯಾತ ರಂಗತಂಡ `ನೀನಾಸಂ'ಗೆ ಸೇರಿ ಅಭಿನಯ ತರಬೇತಿ ಪಡೆಯಲು ಪ್ರಾರಂಭಿಸಿದರು.


  1995 ರಲ್ಲಿ ಇವರು ಶಿವಮೊಗ್ಗದಲ್ಲಿದ್ದಾಗ ತೂಗುದೀಪರು ತಮ್ಮ 52 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು.

  ನಂತರ ಸಂಸಾರ ಸಾಕಾಣಿಕೆಗೆ ಮೀನಾರವರು ಕೆಲಕಾಲ ಊಟದ `ಮೆಸ್'ನ್ನು ನೆಡೆಸಿದರೆ, ದರ್ಶನರವರು ಒಂದು ಹಸು ಸಾಕಿ ಹಾಲು ಮಾರುತ್ತಿದ್ದರು.


  ಕಲಾಪ್ರವೇಶ

  ದರ್ಶನ್ ಚಿತ್ರರಂಗಕ್ಕೆ ಹೋಗುವುದು ತೂಗುದೀಪರಿಗೆ ಸುತಾರಾಂ ಇಷ್ಟವಿರಲಿಲ್ಲ. ಆದರೂ ಹಠ ಮಾಡಿ ತಾಯಿಯ ಪ್ರೋತ್ಸಾಹದಿಂದ `ನೀನಾಸಂ' ಸೇರಿದರು. ಅಲ್ಲಿ ಇವರ ಮೊದಲ ರಂಗಪ್ರವೇಶಕ್ಕೆ ಅಲಂಕಾರ ಮಾಡಿದ್ದವರು ಮಂಡ್ಯ ರಮೇಶ್. ಇದಕ್ಕೂ ಮೊದಲು ಮೈಸೂರಿನ ಜಗನಮೋಹನ ಪ್ಯಾಲೇಸ್‌ನಲ್ಲಿ ನಾಲ್ಕೈದು ಸಾರಿ ಮಾಡೆಲಿಂಗ್ ಕೂಡ ಮಾಡಿದ್ದರು.


  ನೀನಾಸಂ ನಂತರ ಅಭಿನಯದ ಅವಕಾಶಗಳನ್ನು ಅರಸಿ ಬೆಂಗಳೂರಿಗೆ ಬಂದ ದರ್ಶನ್‌ಗೆ ಬೇಗನೆ ನಿರಾಶೆಯಾಯಿತು. ಕೊನೆಗೆ ಲೈಟ್ ಬಾಯ್ ಆಗಿ ಸಿನಿ ಇಂಡಸ್ಟ್ರಿಯಲ್ಲಿ ಪಯಣ ಆರಂಭಿಸಿದರು. ಹಲವು ಅಪಮಾನಗಳನ್ನು ಎದುರಿಸಿ ಮುಂದೆವರೆದ ಇವರಿಗೆ ಇಲ್ಲಿ ಅಣಜಿ ನಾಗರಾಜರ ಪರಿಚಯವಾಯಿತು. ಅಣಿಜಿವರು ಖ್ಯಾತ ಸಿನಿಮ್ಯಾಟೋಗ್ರಾಫರ್ ಬಿ.ಸಿ.ಗೌರಿಶಂಕರ್ (ನಟಿ ರಕ್ಷಿತಾ ಪ್ರೇಮ್ ತಂದೆ) ಸಹಾಯಕರಾಗಿದ್ದರು.ದರ್ಶನ್ ಕೂಡ ಗೌರಿಶಂಕರ್ ಅವರ ಸಹಾಯಕರಾಗಿ ಅಸಿಸ್ಟಂಟ್ ಕ್ಯಾಮೆರಾಮೆನ್ ಆಗಿ ಕೆಲಸ ಮಾಡಿದರು.


  1997 ರಲ್ಲಿ ಎಸ್ ನಾರಾಯಣರವರು ತಮ್ಮ `ಮಹಾಭಾರತ' ಸಿನಿಮಾದಲ್ಲಿ ಅವಕಾಶ ಕೊಟ್ಟರು. ನಂತರ `ಡಿಟೆಕ್ಟಿವ್ ಚಂದ್ರಕಾಂತ' ಎಂಬ ಸೀರಿಯಲ್‌ನಲ್ಲಿ ನಟಿಸಿದರು. ಆದರೆ ದರ್ಶನ್‌ರವರು ಹೆಚ್ಚಾಗಿ ಗುರುತಿಸಿಕೊಂಡಿದ್ದು ಎಸ್ ನಾರಾಯಣ್‌ರವರ `ಅಂಬಿಕಾ' ಧಾರಾವಾಹಿಯಲ್ಲಿ ನಟಿಸಿದ ಮೇಲೆ.ಹಾಗೆಯೇ ಮೂರು ಕಾರ್ಟೂನ್‌ಗಳಲ್ಲಿ ಕೆಲವು ಪಾತ್ರಗಳಿಗೆ ಧ್ವನಿ ನೀಡಿ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೂಡ ಕೆಲಸ ಮಾಡಿದ್ದಾರೆ.ಒಟ್ಟಾರೆಯಾಗಿ ದರ್ಶನ್ ಒಂದು ತಮಿಳು ಮತ್ತು ಐದು ಕನ್ನಡ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.


  ಮೆಜೆಸ್ಟಿಕ್ - ಚಾಲೆಂಜಿಂಗ್ ಸ್ಟಾರ್


  2002 ರಲ್ಲಿ ಪಿ.ಎನ್ ಸತ್ಯ ನಿರ್ದೇಶನದ `ಮೆಜೆಸ್ಟಿಕ್' ಚಿತ್ರದ ಮೂಲಕ ದರ್ಶನ್ ನಾಯಕನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಈ ಚಿತ್ರ ಅದ್ಭುತ ಪ್ರತಿಕ್ರಿಯೆ ಪಡೆದು ಕರ್ನಾಟಕದ ಹಲವು ಸಿನಿಮಾ ಮಂದಿರಗಳಲ್ಲಿ ಶತದಿನ ಪೂರೈಸಿತು, 2003 ರಲ್ಲಿ ತೆರೆಕಂಡ ಪ್ರೇಮ್ ನಿರ್ದೇಶನದ `ಕರಿಯ' ಚಿತ್ರ ಕೂಡ ಉತ್ತಮ ಪ್ರತಿಕ್ರಿಯೆ ಪಡೆದು ಕರ್ನಾಟಕದಲ್ಲಿ ಸುಮಾರು 800 ದಿನಗಳಿಗೂ ಹೆಚ್ಚು ದಿನ ಪ್ರದರ್ಶನ ಕಂಡು ದಾಖಲೆ ಬರೆಯಿತು.


  ನಂತರ ಬಂದ ಕೆಲ ಚಿತ್ರಗಳು ಯಶಸ್ವಿಯಾಗಲಿಲ್ಲ. ಆ ಸಮಯದಲ್ಲಿ ತೆರೆಗೆ ಬಂದ ಕಲಾಸಿಪಾಳ್ಯ 250 ಕ್ಕೂ ಹೆಚ್ಚು ದಿನಗಳು ಪ್ರದರ್ಶನ ಕಂಡಿತು. ಇಲ್ಲಿಂದ ದರ್ಶನ್ -ರಕ್ಷಿತಾ ಜೋಡಿ ಕನ್ನಡದಲ್ಲಿ ಹಲವು ಯಶಸ್ವಿ ಚಿತ್ರಗಳನ್ನು ನೀಡಿತು.


  2007 ರಲ್ಲಿ ಉಪೇಂದರ ಜೊತೆ `ಅನಾಥರು' ಚಿತ್ರದಲ್ಲಿ ನಟಿಸಿದರು. ಅದೇ ವರ್ಷ `ಈ ಬಂಧನ' ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಪುತ್ರನ ಪಾತ್ರದಲ್ಲಿ ನಟಿಸಿದರು. ಕುಚಿಕು ಗೆಳಯರಾದ `ಅಂಬಿ-ವಿಷ್ಣು'ರ ಪುತ್ರನ ಪಾತ್ರದಲ್ಲಿ ನಟಿಸಿದ ಕನ್ನಡದ ಏಕೈಕ ನಾಯಕನಟ ದರ್ಶನ ಎನ್ನಬಹುದು.


   `ಅಯ್ಯ',`ಮಂಡ್ಯ',`ಗಜ'`ಸಾರಥಿ'`ಬುಲ್‌ಬುಲ್',`ಬೃಂದಾವನ',`ಅಂಬರೀಶ್' ಹೀಗೆ ಮುಂತಾದ ಚಿತ್ರಗಳಲ್ಲಿ ನಟಿಸಿದ ದರ್ಶನ್ 2012 ರಲ್ಲಿ ಐತಿಹಾಸಿಕ ಚಿತ್ರ `ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದಲ್ಲಿ ರಾಯಣ್ಣನಾಗಿ ಆರ್ಭಟಿಸಿದರು. ಈ ಚಿತ್ರಕ್ಕೆ ಉತ್ತಮ ನಾಯಕ ಫಿಲ್ಮಫೇರ್ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದರು. ದರ್ಶನರ 50 ನೇ ಚಿತ್ರ `ಕುರುಕ್ಷೇತ್ರ'ದಲ್ಲಿ ಧುರ್ಯೋಧನನ ಪಾತ್ರದಲ್ಲಿ ಮಿಂಚಿದ್ದಾರೆ.


  ತೂಗುದೀಪ ಪ್ರೊಡಕ್ಷನ್ಸ್

  2006 ರಲ್ಲಿ ಸಹೋದರ ದಿನಕರ ಜೊತೆ ಸೇರಿ `ತೂಗುದೀಪ ಪ್ರೊಡಕ್ಷನ್ಸ್' ಆರಂಭಿಸಿ `ಜೊತೆ ಜೊತೆಯಲಿ' ಚಿತ್ರ ನಿರ್ಮಿಸಿದರು. ದಿನಕರ ತೂಗುದೀಪ ಮುನ್ನೆಡೆಸುವ ಈ ಸಂಸ್ಥೆ `ಬುಲ್‌ಬುಲ್',`ನವಗ್ರಹ',`ಮದುವೆಯ ಮಮತೆಯ ಕರೆಯೋಲೆ' ಚಿತ್ರಗಳನ್ನು ನಿರ್ಮಿಸಿದೆ.ನಂತರ ತೂಗುದೀಪ ಡಿಸ್ಟ್ರಿಬ್ಯೂಷನ್ ವಿತರಣೆ ಸಂಸ್ಥೆ ಆರಂಭಿಸಿ `ಬೃಂದಾವನ',`ಒಗ್ಗರಣೆ',`ಜೈಲಲಿತಾ',`ಉಗ್ರಂ' ಮುಂತಾದ ಚಿತ್ರಗಳನ್ನು ಕೂಡ ಈ ಸಂಸ್ಥೆ ವಿತರಿಸಿದೆ.


  ಪ್ರಾಣಿಪ್ರಿಯ

  ದರ್ಶನ್ ಬಾಲ್ಯದಿಂದಲೂ ಪ್ರಾಣಿಪ್ರಿಯ. ಕೆಲವು ಬಾರಿ ಅಮ್ಮನ ದುಡ್ಡು ಕದ್ದು ಪಾರಿವಾಳ ಮತ್ತು ಮೀನುಗಳನ್ನು ಸಾಕಲು ಮನೆಗೆ ತರುತ್ತಿದ್ದರು. ಹಾಗೇಯೇ ಬೀದಿನಾಯಿಗಳನ್ನು ತಂದು ಅವುಗಳಿಗೆ ಮಲಗಲು ರಟ್ಟಿನ ಮನೆ ಮಾಡಿ ಮಲಗಿಸುತ್ತಿದ್ದರು. ಒಮ್ಮೆ ಎರಡನೇ ತರಗತಿಯಲ್ಲಿದ್ದಾಗ ಕುದರೆ ನೋಡಿ ಅದನ್ನು ಹಿಡಿದು ತಂದು ಸಾಕಬೇಕೆಂದು ಶಾಲೆಗೆ ಚಕ್ಕರ್ ಹಾಕಿ ಹೋಗಿದ್ದರು.


  ರಜಾದಿನಗಳಲ್ಲಿ ಮೈಸೂರಿನ ಮೃಗಾಲಯಕ್ಕೆ ಹೋಗುತ್ತಿದ್ದ ದರ್ಶನ್‌ಗೆ ಅಲ್ಲಿನ ನಿರ್ವಾಹಕ ಪುಂಡಲೀಕರು ಒಂದು ಹುಲಿಯನ್ನು ನೋಡಿಕೊಳ್ಳಲು ಕೊಡುತ್ತಿದ್ದರು.ಅಲ್ಲಿಂದಲೇ ಪ್ರಾಣಿಗಳ ಮೇಲೆ ನಂಟು ಮತ್ತು ಪ್ರಾಣಿಗಳ ಬಗ್ಗೆ ಅಪಾರವಾದ ಜ್ಞಾನವನ್ನು ಹೊಂದಿದರು.ಈಗಲೂ ಮೈಸೂರಿನ ಮೃಗಾಲಯದಲ್ಲಿನ ಹಲವು ಪ್ರಾಣಿಗಳನ್ನು ದತ್ತು ತೆಗೆದು ಕೊಂಡಿದ್ದಾರೆ.


  ಮೈಸೂರಿನ ಟಿ.ನರಸೀಪುರದ ಹತ್ತಿರ ಒಂದು ಮಿನಿ ಫಾರ್ಮ್ ಹೌಸ್ ಹೊಂದಿರುವ ದರ್ಶನ್ ಅಲ್ಲಿ ಕುದರೆ,ಹಸು ಸೇರಿದಂತೆ ಮುಂತಾದ ಸುಮಾರು 120 ಕ್ಕೂ ಹೆಚ್ಚು ಪ್ರಾಣಿಗಳನ್ನು ಸಾಕಿದ್ದಾರೆ.
  ಸಂಗೊಳ್ಳಿ ರಾಯಣ್ಣ ,ಸಾರಥಿ ಮುಂತಾದ ಚಿತ್ರಗಳಲ್ಲಿ ತಮ್ಮ ಫಾರ್ಮ್‌ನ ಸಾಕು ಕುದುರೆ `ಬಾದಲ್' ಮೇಲೆ ಸವಾರಿ ಮಾಡಿದ್ದು ವಿಶೇಷ. ದರ್ಶನ್‌ರ ವಿಶೇಷ ಪ್ರೀತಿಪಾತ್ರ ಕುದುರೆ `ಸ್ಟಾನ್‌ಲೀ' ಪಾಂಡಿಚೆರಿಯಲ್ಲಿ ಮಡಿದಾಗ ಅಪಾರವಾಗಿ ನೊಂದಿದ್ದ ದರ್ಶನ್ ಅದರ ಚಿತ್ರವನ್ನು ತಮ್ಮ ಬಲತೋಳಲ್ಲಿ ಹಾಕಿಸಿಕೊಂಡಿದ್ದರು.

   

  2018 ರಲ್ಲಿ ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.

  ತೂಗುದೀಪ ಶ್ರೀನಿವಾಸ                     ದಿನಕರ್ ತೂಗುದೀಪ        

   

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X