ಧನಂಜಯ್ ಅತ್ರೆ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ಮತ್ತು ನಿರ್ಮಾಪಕ. 2000 ರಲ್ಲಿ ಸ್ಟಿಲ್ ಮಾಡೆಲಿಂಗ್ ಮೂಲಕ ತಮ್ಮ ವೃತ್ತಿಜೀವನ ಆರಂಭಿಸಿದ ಇವರು ನಂತರ ಕಿಂಗ್ ಫಿಷರ್ ಮತ್ತು ರೇಮಂಡ್ಸ್ ಜಾಹೀರಾತುಗಳಲ್ಲಿ ಕಾಣಿಸಿಕೊಂಡರು. ಹಾಗೇ ಕೆಲ ಕಿರುತೆರೆ ಧಾರಾವಾಹಿಗಳಲ್ಲಿ ಮತ್ತು ಚಿತ್ರಗಳಲ್ಲಿ ಅಭಿನಯಿಸಿದರು.
2007 ರಲ್ಲಿ ಉಪೇಂದ್ರರವರ ಬುದ್ಧಿವಂತ ಚಿತ್ರದಲ್ಲಿ ಚಿಕ್ಕ ಪಾತ್ರದ ಮೂಲಕ ಸಿನಿಪಯಣ ಆರಂಭಿಸಿದರು. ಇದೇ ಸಮಯದಲ್ಲಾದ ರಾಕಲೈನ್ ವೆಂಕಟೇಶ್ ರವರ ಪರಿಚಯದಿಂದ ಬೊಂಬಾಟ್, ದೇವ್ರು, ಯೋಧ ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ನಟಿಸಲು ಅವಕಾಶ ಪಡೆದರು.
2009 ರಲ್ಲಿ ಕೆಲವು ಕನ್ನಡ ಸೀರಿಯಲ್ ಗಳಿಗೆ ಆಡಿಷನ್ ನೀಡಿದ ಧನಂಜಯ `ಪರಿಣೀತಾ' ಸೀರಿಯಲ್ ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದರು. ಈ ಧಾರಾವಾಹಿಯಲ್ಲಿ ಬಿ.ಜಯಶ್ರೀ ಮತ್ತು ಎಂ.ಪಿ.ಪ್ರಕಾಶ್ ಕೂಡ ನಟಿಸಿದ್ದು ವಿಶೇಷ. ಜೀ ಕನ್ನಡದಲ್ಲಿ ಪ್ರಸಾರವಾಗಬೇಕಿದ್ದ ಈ ಧಾರಾವಾಹಿ ಕೆಲ ಕಾರಣಗಳಿಂದ ಪ್ರಸಾರವಾಗದೇ ಉಳಿಯಿತು. ನಂತರ 2010 ರಲ್ಲಿ ಪ್ರಸಾರವಾದ ಮುಂಜಾವು ಧಾರಾವಾಹಿಯಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸಿದರು. ನಂತರ 5 ವರ್ಷ ತಮ್ಮ ಉದ್ಯಮದಲ್ಲಿ ತೊಡಗಿಸಿಕೊಂಡರು.
2017 ರಲ್ಲಿ ಧನಂಜಯ ತಮ್ಮ ಪತ್ನಿ ಗೌರಿ ಜೊತೆ ಸೇರಿ ತಾವೇ ಒಂದು ಚಿತ್ರ ನಿರ್ಮಾಣ ಮಾಡಿ, ನಾಯಕನಾಗಿ ನಟಿಸಲು ನಿರ್ಧರಿಸಿದರು. ಮಹಾಭಾರತ ಧಾರಾವಾಹಿ ಖ್ಯಾತಿ ಶರವಣ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರ 2018 ರಲ್ಲಿ `ಕರ್ಷಣಂ' ಎಂಬ ಹೆಸರಿನಿಂದ ತೆರೆಕಂಡಿತು.