ಹುಣಸೂರು ಕೃಷ್ಣಮೂರ್ತಿ ಕನ್ನಡ ಚಿತ್ರರಂಗದ ದಿಗ್ಗಜ ಚಿತ್ರಸಾಹಿತಿ, ನಿರ್ಮಾಪಕ ಮತ್ತು ನಿರ್ದೇಶಕ. ಬಾಲ್ಯದಲ್ಲಿಯೇ ಸಾಹಿತ್ಯ ಮತ್ತು ನಾಟಕಗಳ ಆಸಕ್ತರಾಗಿದ್ದ ಇವರು ಹತ್ತು ವರ್ಷದವರಿದ್ದಾಗಲೆ ನಾಟಕದಲ್ಲಿ ಅಭಿನಯಿಸತೊಡಗಿದರು. ಒಮ್ಮೆ ಇವರ ಅಭಿನಯ ನೋಡಿ ಮೆಚ್ಚಿದ ಕಪಾಡಿಯವರು ಇವರನ್ನು ಮುಂಬೈಗೆ ಕರೆದೊಯ್ದು `ಸಿಂಹಳ ಸುಂದರಿ' ಮೂಕಿ ಚಿತ್ರದಲ್ಲಿ ನಟಿಸುವ ಅವಕಾಶ ನೀಡಿದರು. ನಂತರ ಮರಳಿದ ಇವರು ಕೆಲಕಾಲದ ನಂತರ ಮತ್ತೇ ಮುಂಬೈಗೆ ಮರಳಿದ ಇವರು `ಮುಂಬೈಗೆ ಟಾಕೀಸ್' ಸೇರಿದರು. ನಂತರ ಕರ್ನಾಟಕಕ್ಕೆ ಮರಳಿದ ಇವರು ಗುಬ್ಬಿ ವೀರಣ್ಣ ಕಂಪನಿಯಲ್ಲಿ ಸೇರಿ ಹಲವಾರು ನಾಟಕಗಳನ್ನು ರಚಿಸಿದರು. `ಹೇಮರೆಡ್ಡಿ ಮಲ್ಲಮ್ಮ' ಚಿತ್ರ ಇವರು ಸಂಭಾಷಣೆ ಬರೆದ ಮೊದಲ ಚಿತ್ರ. ನಂತರ ಸಾಕಷ್ಟು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. 1958 ರಲ್ಲಿ ತೆರೆಕಂಡ `ಶ್ರೀ ಕೃಷ್ಣ ಗಾರುಡಿ' ಚಿತ್ರದ ಮೂಲಕ ನಿರ್ದೇಶಕರಾದರು. ನಂತರ `ಭಕ್ತ ಸಿರಿಯಾಳ',`ಬಬ್ರುವಾಹನ',`ಭಕ್ತ ಕುಂಬಾರ' ಮುಂತಾದ ಅದ್ಭುತ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.