ನಸ್ಸರ್ ಪ್ರಮುಖವಾಗಿ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಪ್ರಮುಖ ನಟ, ನಿರ್ದೇಶಕ, ಗಾಯಕ ಮತ್ತು ಗೀತರಚನೆಕಾರ. ತಮಿಳು ಮಾತ್ರವಲ್ಲದೇ ತೆಲಗು ,ಕನ್ನಡ,ಮಲಯಾಳಂ,ಹಿಂದಿ ಮತ್ತು ಕೆಲವು ಇಂಗ್ಲೀಷ್ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ.
1958 ರಲ್ಲಿ ತಮಿಳುನಾಡಿನ `ನತ್ತಂ'ನಲ್ಲಿ ಜನಿಸಿದ ಇವರು ಪಿಯುಸಿಯಲ್ಲಿಯೇ ಶಿಕ್ಷಣಕ್ಕೆ ವಿದಾಯ ಹೇಳಿದರು.ಕಲೆಯ ಕಡೆಗಿನ ಸೆಳೆತದಿಂದ ಚೆನ್ನೈನೆಡೆಗೆ ಹೋದ ಇವರು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಿಂದ ಸಸ್ಯಶಾಸ್ತ್ರದಲ್ಲಿ ಪದವಿ ಪಡೆದರು.
ರಂಗಭೂಮಿಯಲ್ಲಿ ನಟನೆ ಮಾಡುತ್ತಾ, ನಾಟಕ ಬರೆಯುತ್ತಾ ಚಿತ್ರಗಳಲ್ಲಿ ಅಭಿನಯಕ್ಕೆ ಪ್ರಯತ್ನಿಸಿದರು. ನಂತರ ಚೆನ್ನೈನ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ನಟನಾ ತರಬೇತಿ ಪಡೆದರು. 1985 ರಲ್ಲಿ ಕೆ.ಬಾಲಚಂದರ್‌ರವರ ಚಿತ್ರದಿಂದ ಸಿನಿಪಯಣ ಆರಂಭಿಸಿದರು. ನಂತರ ತಮಿಳು ಸೇರಿದಂತೆ ಉಳಿದೆಲ್ಲಾ ದಕ್ಷಿಣ ಭಾರತೀಯ ಚಿತ್ರಗಳಲ್ಲಿ ನಟಿಸಿ ತಮ್ಮ ಛಾಪು ಮೂಡಿಸಿದ್ದಾರೆ.
ಕನ್ನಡದಲ್ಲಿ `ಅಜಯ್',`ಬಿಂದಾಸ್',`ತಮಸ್ಸು',`ಬಚ್ಚನ್',`ಬ್ರಹ್ಮ',`ಕೋಟಿಗೊಬ್ಬ 2' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.