ನವೀನ್ ಶಂಕರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟ. ನವೀನ್ ಶಂಕರ್ ಮೂಲತಃ ಬಾಲಗಕೋಟೆ ಜಿಲ್ಲೆಯ ಇಳಕಲ್ ಮೂಲದವರು. ಮೊದಲಿಗೆ ಪತ್ರಿಕೋದ್ಯಮನ್ನು ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡು ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ರಿಪೋರ್ಟ್ ಆಗಿದ್ದರು. ಬಳಿಕ ರಾಜಮಾರ್ಗ್ ಕಲೆ, ಸಂಸ್ಕೃತಿ ಮತ್ತು ನಾಟಕ ಅಕಾಡೆಮಿ ಅಡಿಯಲ್ಲಿ 2010ರಿಂದ ಮೂರು ವರ್ಷಗಳ ಕಾಲ ರಂಗಭೂಮಿಯಲ್ಲಿದ್ದರು. ಈ ಮೂರು ವರ್ಷಗಳಲ್ಲಿ 45ಕ್ಕೂ ಹೆಚ್ಚು ಸ್ಟೇಜ್ ಶೋಗಳಲ್ಲಿ ಮತ್ತು ಎಂಟು ವಿಭಿನ್ನ ನಿರ್ಮಾಣ ಬ್ಯಾನರ್‌ಗಳನ್ನೊಳಗೊಂಡ ಸಾಮಾಜಿಕ ಜಾಗೃತಿಯ 200 ಬೀದಿ ನಾಟಕಗಳಲ್ಲಿ ನಟಿಸಿದ್ದಾರೆ.
ಇವರು 2018ರಲ್ಲಿ ತೆರೆಕಂಡ ಜನಾರ್ಧನ್ ಚಿಕ್ಕಣ್ಣ ನಿರ್ದೇಶನದ ಗುಳ್ಟೂ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸುವ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದರು. 2018ರಲ್ಲಿ ತೆರೆಕಂಡಿದ್ದ ಈ ಚಿತ್ರ ಆಗಿನ ಸಮಯಕ್ಕೆ ಸಿನಿ ಪ್ರೇಕ್ಷಕರಿಂದ 'ಕನ್ನಡದಲ್ಲಿ ಒಳ್ಳೆ ಪ್ರಯೋಗಾತ್ಮಕ ಸಿನಿಮಾ ಬರಲ್ಲ ಅಂತೀರಲ್ಲ ಬಂದಿದೆ ನೋಡಿ' ಎಂಬ ಒಳ್ಳೆಯ ವಿಮರ್ಶೆ ಪಡೆದುಕೊಂಡಿತ್ತು.
ಬಳಿಕ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿದ್ದರು, ಇದು ಅವರ ಎರಡನೇ ಸಿನಿಮಾ. ಚಿತ್ರದಲ್ಲಿ ನವೀನ್ ಶಂಕರ್ ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಕ್ರೈಮ್ ಥ್ರಿಲ್ಲರ್‌ನಲ್ಲಿ ನವೀನ್ ಶಂಕರ್‌ಗೆ ನಟಿಯಾಗಿ ಐಶಾನಿ ಶೆಟ್ಟಿ ಕಾಣಿಸಿಕೊಂಡಿದ್ದರು. ಇದಾದ ನಂತರ ಬಹುತಾರಾಗಣವಿರುವ ಹೊಂದಿಸಿ ಬರೆಯಿರಿ ಚಿತ್ರದಲ್ಲಿ ನಟಿಸಿದ್ದರು. ಸದ್ಯ ಡಾಲಿ ಧನಂಜಯ್ ಅಭಿನಯದ 125ನೇ ಸಿನಿಮಾ 'ಗುರುದೇವ್ ಹೊಯ್ಸಳ' ಸಿನಿಮಾದಲ್ಲಿ ಖಳನಟನಾಗಿ ಅದ್ಭುತವಾಗಿ ನಟಿಸುವ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ.