ರಾಘವೇಂದ್ರ ರಾಜ್‌ಕುಮಾರ್ ಕನ್ನಡ ಚಿತ್ರರಂಗದ ಪ್ರಮುಖ ನಟ, ಗಾಯಕ ಹಾಗೂ ನಿರ್ಮಾಪಕ. ಡಾ.ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ಅವರ ಎರಡನೇ ಪುತ್ರನಾದ ಇವರು, 1965ರ ಆಗಸ್ಟ 15ರಂದು ಚೈನೈನಲ್ಲಿ ಜನಿಸಿದರು. ಶ್ರೀನಿವಾಸ ಕಲ್ಯಾಣ, ದಾರಿ ತಪ್ಪಿದ ಮಗ ಸಿನಿಮಾಗಳಲ್ಲಿ ಬಾಲನಟನಾಗಿ ಅಭಿನಯಿಸಿದ್ದ ಇವರು, 1989ರಲ್ಲಿ ತೆರೆಕಂಡ ನಂಜುಂಡಿ ಕಲ್ಯಾಣ ಸಿನಿಮಾದಲ್ಲಿ ನಾಯಕನಾಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು.
ಈ ಸಿನಿಮಾ ಸೂಪರ್ ಹಿಟ್ ಆಗುವುದರೊಂದಿಗೆ ಮೊದಲ ಚಿತ್ರದಲ್ಲೇ ಸಾಕಷ್ಟು ಯಶಸ್ಸು ಗಳಿಸಿದರು. ನಂತರ ಗಜಪತಿ ಗರ್ವಭಂಗ, ಆಸೆಗೊಬ್ಬ ಮೀಸೆಗೊಬ್ಬ, ಅನುಕೂಲಕ್ಕೊಬ್ಬ ಗಂಡ, ಕಲ್ಯಾಣ ಮಂಟಪ, ಭರ್ಜರಿ ಗಂಡು, ಅನುರಾಗದ ಅಲೆಗಳು, ನಾವಿಬ್ಬರೂ ನಮಗಿಬ್ಬರು, ಸಾಗರ ದೀಪ, ಆಟ ಹುಡುಗಾಟ, ಇಬ್ಬರ ನಡುವೆ ಮುದ್ದಿನ ಆಟ, ಶ್ರೀಮತಿ ಕಲ್ಯಾಣ, ಗೆಲುವಿನ ಸರದಾರ, ಸೂತ್ರಧಾರ, ಸ್ವಸ್ತಿಕ್, ಟುವ್ವಿ ಟುವ್ವಿ, ಪಕ್ಕದ್ಮನೆ ಹುಡುಗಿ, ಅಮ್ಮನ ಮನೆ ಮುಂತಾದ ಸಿನಿಮಾಗಳಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ.
ನಿರ್ಮಾಪಕ
ರಾಘವೇಂದ್ರ ರಾಜ್‌ಕುಮಾರ್ ನಾಯಕನಾಗಿ ಯಶಸ್ಸಿನ ಅಲೆಯಿಲ್ಲಿದ್ದಾಗಲೇ ತಮ್ಮ ಹೋಮ್ ಬ್ಯಾನರ್ ವಜ್ರೇಶ್ವರಿ ಕಂಬೈನ್ಸ್ ನಿರ್ವಹಣೆಯಲ್ಲಿ ತಾಯಿಗೆ ಸಹಾಯ ಮಾಡಲು ನಟನೆಯಿಂದ ನಿಧಾನವಾಗಿ ದೂರವಾದರು. ಇವರು ಶ್ರುತಿ ಸೇರಿದಾಗ, ಜಾಕಿ, ಅಣ್ಣಬಾಂಡ್, ಯಾರೇ ಕೂಗಾಡಲಿ, ರನ್ ಆಂಟೋನಿ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಜೊತೆಗೆ ಮರಳಿ ಬಂದಳು ಸೀತೆ, ಜೀವ ಹೂವಾಗಿದೆ ಎಂಬ ಧಾರವಾಹಿಗಳನ್ನು ನಿರ್ಮಿಸಿದ್ದಾರೆ.
ಗಾಯಕ
ರಾಘವೇಂದ್ರ ರಾಜ್‌ಕುಮಾರ್ ಕೇವಲ ನಟ, ನಿರ್ಮಾಪಕ ಮಾತ್ರವಲ್ಲದೇ ಗಾಯಕರಾಗಿಯೂ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದಾರೆ. ಇವರು ನಂಜುಂಡಿ ಕಲ್ಯಾಣ, ಗಜಪತಿ ಗರ್ವಭಂಗ, ಅನುಕೂಕ್ಕೊಬ್ಬ ಗಂಡ, ಕಲ್ಯಾಣ ಮಂಟಪ, ಅನುರಾಗದ ಅಲೆಗಳು, ಆಟ ಹುಡುಗಾಟ, ಅಮ್ಮನ ಮನೆ ಚಿತ್ರಗಳ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ ಅವರ ಪುತ್ರ ವಿನಯ್ ರಾಜ್‌ಕುಮಾರ್ ಸಹ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ.