ಸಾಧು ಕೋಕಿಲ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟ, ನಿರ್ದೇಶಕ, ನಿರ್ಮಾಪಕ ಹಾಗೂ ಸಂಗೀತ ನಿರ್ದೇಶಕ. 1966ರ ಮಾರ್ಚ್ 24ರಂದು ಬೆಂಗಳೂರಿನಲ್ಲಿ ಜನಿಸಿದ ಇವರ ಮೊದಲ ಹೆಸರು ಸಹಾಯ ಶೀಲನ್. ತಂದೆ ನತೇಶ್ ಹಾಗೂ ತಾಯಿ ಮಂಗಳ. ಇವರ ತಂದೆ ಪೊಲೀಸ್ ಸಂಸ್ಥೆಯಲ್ಲಿ ಪಿಟೀಲು ವಾದಕರಾಗಿದ್ದರು. ತಾಯಿ ಮತ್ತು ಅಕ್ಕ ಹಿನ್ನಲೆ ಗಾಯಕರಗಿದ್ದರು. ಇವರ ಅಣ್ಣ ಲಯೇಂದ್ರ ಕೋಕಿಲ ಸಹ ನಟರಾಗಿದ್ದಾರೆ. ಸಾಧು ಕೋಕಿಲ ಬೆಂಗಳೂರಿನ ಸೆಂಟ್ ಜೋಸೆಫ್‌ನಲ್ಲಿ ವಿದ್ಯಾಭ್ಯಾಸ ಮಾಡಿದರು.
ವೃತ್ತಿಜೀವನ
1992ರಲ್ಲಿ ತೆರೆಕಂಡ ಉಪೇಂದ್ರ ನಿರ್ದೇಶನದ 'ಶ್' ಸಿನಿಮಾಗೆ ಸಂಗೀತ ನಿರ್ದೇಶಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ಈ ಸಂದರ್ಭ ಸಹಾಯ ಶೀಲನ್ ಹೆಸರನ್ನು ಉಪ್ಪಿಯವರು 'ಸಾಧು ಕೋಕಿಲ' ಅಂತ ಬದಲಿಸಿದರು. ನಂತರ ಹಲವು ಚಿತ್ರಗಳಿಗೆ ಸಂಗೀತ ನಿರ್ದೇಶಿಸಿದ ಅವರು, ಹಾಸ್ಯನಟರಾಗಿ ಎಂಟ್ರಿಕೊಟ್ಟರು. ಇವರು ನಟನಾಗಿ ನಿರ್ವಹಿಸಿದ ಹಾಸ್ಯ ಪಾತ್ರಗಳು ಸಾಕಷ್ಟು ಖ್ಯಾತಿ ನೀಡಿದವು. ಸದ್ಯ ತಮ್ಮ ಅದ್ಭುತ ಹಾಸ್ಯ ನಟನೆಯಿಂದ ಕನ್ನಡದಲ್ಲಿ ಕಾಮಿಡಿ ಕಿಂಗ್ ಎಂದೇ ಗುರುತಿಸಿಕೊಂಡಿದ್ದಾರೆ.
ನಿರ್ದೇಶನ
ಸಾಧು ಕೋಕಿಲ 2003ರಲ್ಲಿ ತೆರೆಕಂಡ 'ರಕ್ತ ಕಣ್ಣೀರು' ಸಿನಿಮಾ ಮೂಲಕ ನಿರ್ದೇಶನಕ್ಕಿಳಿದದರು. ತಮಿಳಿನ ರಿಮೇಕ್ ಆಗಿದ್ದ ಈ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿ ನಟಿಸಿದ್ದರು. ಕನ್ನಡ & ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ತಯಾರಾದ ಈ ಚಿತ್ರ ಅಭೂತಪೂರ್ವ ಯಶಸ್ಸನ್ನು ಕಂಡು 2003ರಲ್ಲಿ ಅತಿಹೆಚ್ಚು ಗಳಿಕೆ ಕಂಡ ಕನ್ನಡ ಚಿತ್ರವಾಯಿತು. ಆನಂತರ ಸುಂಟರಗಾಳಿ, ಅನಾಥರು, ಶೌರ್ಯ, ರಾಕ್ಷಸ, ದೇ್ವ್ರು, ಪೊಲೀಸ್ ಸ್ಟೋರಿ, ಸೂಪರ್ ರಂಗ ಮುಂತಾದ ಸಿನಿಮಾಗಳನ್ನು ಸಾಧು ಕೋಕಿಲ ನಿರ್ದೇಶನ ಮಾಡಿದರು.
ವಿವಾಹ
1993ರಲ್ಲಿ ಇವರು ಸಲೀನಾ ಎಂಬುವವರನ್ನು ಮದುವೆಯಾದ ಇವರಿಗೆ ಇಬ್ಬರು ಮಕ್ಕಳಿದ್ದಾರೆ.