ಶರತ್ ಬಾಬು ದಕ್ಷಿಣ ಚಿತ್ರರಂಗದ ಪ್ರಖ್ಯಾತ ನಟ. ಸುಮಾರು ನಾಲ್ಕು ದಶಕಗಳಿಂದ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಆಂಧ್ರಪ್ರದೇಶದ ಶ್ರೀಕಾಕುಲಂನ ಅಮಲದಲವಸಲದಲ್ಲಿ 1951ರಲ್ಲಿ ಶರತ್ ಬಾಬು ಜನಿಸಿದರು. ಅವರ ಮೂಲ ಹೆಸರು ಸತ್ಯಂಬಾಬು ದೀಕ್ಷಿತುಲು. 1973ರಲ್ಲಿ 'ರಾಮರಾಜ್ಯಂ' ಎನ್ನುವ ತೆಲುಗು ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದ್ದರು. ಮುಂದೆ ಕಮಲ್ ಹಾಸನ್ ನಟನೆಯ ತಮಿಳಿನ 'ನಿಳಲ್ ನಿಜಮಾಗಿರದು' ಚಿತ್ರದ ಪಾತ್ರ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಅಲ್ಲಿಂದ ಮುಂದೆ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸುತ್ತಾ ಹೋದರು. 'ತುಳಸಿದಳ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೂ ಬಂದರು. ಕನ್ನಡದಲ್ಲಿ ಸುಮಾರು 20ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಶರತ್ ಬಾಬು, ರಮೇಶ್ ಅರವಿಂದ್, ಸುಹಾಸಿನಿ ನಟಿಸಿದ್ದ 'ಅಮೃತ ವರ್ಷಿಣಿ' ಸಿನಿಮಾದಲ್ಲಿ ಹೇಮಂತ್ ಪಾತ್ರದಲ್ಲಿ ನಟಿಸಿ ಮನಗೆದ್ದಿದ್ದರು. ಕನ್ನಡದ ಪ್ರೀತಿಗಾಗಿ ಧಾರಾವಾಹಿಯಲ್ಲಿಯೂ ಶರತ್ ಬಾಬು ನಟಿಸಿದ್ದಾರೆ.
ವೈಯಕ್ತಿಕ ಜೀವನ: ತೆಲುಗಿನ ಹಾಸ್ಯನಟಿ ರಮಪ್ರಭಾ ಜೊತೆ 1974ರಲ್ಲಿ ಶರತ್ ಬಾಬು ಮದುವೆ ನಡೆದಿತ್ತು. ತನಗಿಂತ 6 ವರ್ಷ ದೊಡ್ಡವರಾದ ರಮಪ್ರಭಾನ ಪ್ರೀತಿಸಿ ಮದುವೆ ಆಗಿದ್ದರು. ಕೆಲ ಭಿನ್ನಾಭಿಪ್ರಾಯಗಳಿಂದ 1988ರಲ್ಲಿ ದಂಪತಿ ವಿಚ್ಛೇದನ ಪಡೆದು ದೂರಾಗಿದ್ದರು. ಆ ನಂತರ ಶರತ್ ಬಾಬು ನನಗೆ ಮೋಸ ಮಾಡಿ ನನ್ನ ಆಸ್ತಿಯನ್ನು ಬರೆಸಿಕೊಂಡಿದ್ದಾನೆ ಎಂದು ರಮಪ್ರಭಾ ಆರೋಪಿಸಿದ್ದರು. 1990ರಲ್ಲಿ ಸ್ನೇಹಾ ನಂಬಿಯಾರ್ ಎಂಬುವವರನ್ನು ಶರತ್ ಬಾಬು 2ನೇ ಮದುವೆ ಆಗಿದ್ದರು.
ಮರಣ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಶರತ್ ಬಾಬು (71) 2023ರ ಮೇ 22ರಂದು ಚಿಕಿತ್ಸೆ ಫಲಕಾರಿಯಾಗದೇ ಹೈದರಾಬಾದ್‌ನಲ್ಲಿ ಮೃತಪಟ್ಟಿದ್ದಾರೆ.