ಶಿವರಾಮ್ ಕೆ.ಆರ್.ಪೇಟೆ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ಹಾಸ್ಯ ನಟ. ತಮ್ಮ ಹಾಸ್ಯ ಅಭಿನಯದಿಂದ ಚಿತ್ರಗಳಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ಇವರು ಕಾಮಿಡಿ ಕಿಲಾಡಿ ಕಾರ್ಯಕ್ರಮದಿಂಧ ಪ್ರಖ್ಯಾತಿ ಪಡೆದರು.
ಇವರ ತಂದೆ ರಾಮೇಗೌಡ್ರು ಮತ್ತು ತಾಯಿ ಸಾವಿತ್ರಮ್ಮ. ಒಟ್ಟು ಏಳು ಜನ ಮಕ್ಕಳು ಮನೆಯಲ್ಲಿ. ಮಕ್ಕಳಲ್ಲಿ ಶಿವರಾಜ್ ಕಿರಿಯರು, ತಂದೆ ನಾಟಕದ ಮೇಷ್ಟ್ರು. ತಂದೆಯ ಮಾರ್ಗದರ್ಶನದಲ್ಲಿ ಚಿಕ್ಕವರಿದ್ದಾಗ ನಾಟಕದಲ್ಲಿ ಅಭಿನಯಿಸಿದ್ದರು. ನಂತರ ಕಾಲೇಜು ದಿನಗಳಲ್ಲಿ ಮಿಮಿಕ್ರಿ, ಡ್ಯಾನ್ಸ್ ಕಾರ್ಯಕ್ರಮ ಕೊಡುತ್ತಿದ್ದರು.
ಹಾಸನ ಜಿಲ್ಲೆಯ ಗೋರೂರಿನಲ್ಲಿ ಬೆಳೆದ ಶಿವರಾಜ್ ವಿಧ್ಯಾಭ್ಯಾಸಕ್ಕಾಗಿ ಹಣ ಹೊಂದಿಸಲು ಸಗಣಿ ಎತ್ತುವುದು, ಬೆರಣಿ ತಟ್ಟುವುದು, ಸೌದೆ ತರುವುದು, ಹಾಲು ಕರೆಯುವುದು, ಹಾಲು ಮಾರುವುದು, ಮಾವಿನ ಹಣ್ಣು ಮಾರುವುದು, ಗಾರೆ ಕೆಲಸ ಹೀಗೆ ಸಾಕಷ್ಟು ಕೆಲಸಗಳನ್ನು ಮಾಡುತ್ತಲೇ ಬೆಳೆದರು. ತಂದೆಗೆ ತೊಂದರೆಯಾಗಬಾರದೆಂದು ಕೆಲಕಾಲ ಬಾಂಬೆಯ ಬಾರ್‌ನಲ್ಲಿ ಕೆಲಸ, ದೇವನಹಳ್ಳಿ ಡಾಬಾದಲ್ಲಿ ಕೆಲಸ ಮಾಡಿದ್ದರು. ಹೀಗೆ ಹಲವು ಕೆಲಸ ಮಾಡಿ ಬಿಎ ವರೆಗೂ ಓದಿದರು.
ನಂತರ ಅಣ್ಣನ ಜೊತೆ ಬೆಂಗಳೂರಿಗೆ ಬಂದರು. ಆದರೆ ನಂತರ ಅದೇ ಅಣ್ಣ ಡೆಂಫೀ ಮತ್ತು ಮಲೇರಿಯಾದಿಂದ ತೀರಿಕೊಂಡಿದ್ದು ದುರದೃಷ್ಟಕರ.
ಅಣ್ಣ ತೀರಿಕೊಂಡ ನಂತರ ಊಟ ಮಾಡೋಕೂ ಕಷ್ಟಪಡುತ್ತಿದ್ದ ಶಿವರಾಜರಿಗೆ ಕೆಲ ಸ್ನೇಹಿತರು ಸಹಾಯ ಮಾಡಿದರು . ನಂತರ ನಾಟಕ ಮಾಡಿಕೊಂಡು ಹಲವಾರು ಕಡೆ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದ ಇವರಿಗೆ ಜೀ ಕನ್ನಡದ `ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಿಂದ ಅದೃಷ್ಟದ ಬಾಗಿಲು ತೆರೆಯಿತು. ಈ ಶೋಗಾಗಿ ಮುಕ್ಕಾಲು ಗಂಟೆ ಅಡಿಷನ್ ಕೊಟ್ಟ ಶಿವರಾಜ್ ಆಯ್ಕೆಯಾದರು.
ಕಾಮಿಡಿ ಕಿಲಾಡಿಗಳಿಂದ ಮನೆಮಾತಾದ ಇವರು ಪ್ರಸ್ತುತ ಹಲವು ಚಿತ್ರಗಳಲ್ಲಿ ಹಾಸ್ಯನಟರಾಗಿ ಮಿಂಚುತ್ತಿದ್ದಾರೆ. `ನಾನು ಮತ್ತು ಗುಂಡ' ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ
ಶೃತಿ ಎಂಬುವವರನ್ನು ವಿವಾಹವಾಗಿರುವ ಶಿವರಾಜರಿಗೆ ವಂಶಿಕ್ ಗೌಡ ಎಂಬ ಪುತ್ರನಿದ್ದಾನೆ.