ಕನ್ನಡ ಚಿತ್ರರಂಗದಲ್ಲಿ ರೋರಿಂಗ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ಶ್ರೀಮುರಳಿ ಕನ್ನಡ ಚಿತ್ರರಂಗದ ಖ್ಯಾತ ನಾಯಕ ನಟ. 1981 ಡಿಸೆಂಬರ್ 17ರಂದು ಬೆಂಗಳೂರಿನಲ್ಲಿ ಮುರಳಿ ಜನಿಸಿದರು. ತಂದೆ ಚಿನ್ನೇಗೌಡರು ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಪಕರು ಮತ್ತು ಪಾರ್ವತಮ್ಮ ರಾಜಕುಮಾರ್‌ರ ಸಹೋದರರು. ಅಣ್ಣ ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ.
ಸಿನಿಜೀವನ
ತುಂಬು ಕಲಾ ಕುಟುಂಬದಲ್ಲಿ ಜನಿಸಿದ ಮುರಳಿಗೆ ಬಾಲ್ಯದಿಂದಲೂ ಚಿತ್ರರಂಗದ ಪರಿಚಯವಿತ್ತು. 2003ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ನಿರ್ಮಾಣದ ಹಾಗೂ ಎಸ್.ನಾರಾಯಣ ನಿರ್ದೇಶನದ `ಚಂದ್ರ ಚಕೋರಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಈ ಚಿತ್ರ 500ದಿನಕ್ಕೂ ಹೆಚ್ಚು ಓಡಿ ಕನ್ನಡ ಸಿನಿ ಇತಿಹಾಸದಲ್ಲಿ ದಾಖಲೆ ಬರೆಯಿತು. ನಂತರ ಬಂದ `ಕಂಠಿ' ಚಿತ್ರವೂ ಬ್ಲಾಕ್ ಬಸ್ಟರ್ ಆಯಿತು. ನಂತರ ಬಂದ ಚಿತ್ರಗಳು ಬಾಕ್ಸಾಫೀಸಿನಲ್ಲಿ ಅಷ್ಟಾಗಿ ಯಶಸ್ಸು ಕಾಣಲಿಲ್ಲ. 2008ರಲ್ಲಿ ಸಹೋದರ ವಿಜಯ್ ಜೊತೆ `ಮಿಂಚಿನ ಓಟ' ಚಿತ್ರದಲ್ಲಿ ನಟಿಸಿದರು. ಈ ನಡುವೆ ತಮ್ಮ ಹೋಮ್ ಬ್ಯಾನರ್ ಜವಾಬ್ದಾರಿ ಕೂಡ ನಿಭಾಯಿಸುತ್ತಿದ್ದರು.
2014ರಲ್ಲಿ ತೆರೆಕಂಡ `ಉಗ್ರಂ' ಚಿತ್ರ ಮುರಳಿ ಸಿನಿಜೀವನದ ಕಳಸಪ್ರಾಯ ಚಿತ್ರ. ಈ ಸಿನಮಾ ಅದ್ಭುತ ಯಶಸ್ಸು ಕಂಡಿತು. ಈ ಚಿತ್ರದ ನಂತರ ಮುರಳಿ ಸುಮಾರು 67 ಚಿತ್ರದ ಆಫರ್ ಗಳನ್ನು ನಿರಾಕರಿಸಿದರು. ನಂತರ `ರಥಾವರ' ಮತ್ತು `ಮಫ್ತಿ' ಚಿತ್ರ ಮಾಡಿದರು. ಈ ಎರಡು ಚಿತ್ರಗಳು ಕೂಡ ಬಾಕ್ಸಾಫೀಸಿನಲ್ಲಿ ಒಳ್ಳೆ ಕಲೆಕ್ಷನ್ ಮಾಡಿದವು. ಮಫ್ತಿಯಲ್ಲಿ ಶಿವರಾಜಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದರು. ಮುರಳಿ ಒಂದೆರೆಡು ಮಲಯಾಳಂ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. ನಂತರ ಭರಾಟೆ, ಮದಗಜ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾಗಳು ಹಿಟ್ ಆದವು. ಸದ್ಯ ಡಾ.ಸೂರಿ ನಿರ್ದೇಶಿಸುತ್ತಿರುವ ಬಘೀರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ವೈಯಕ್ತಿಕ ಜೀವನ: ವಿದ್ಯಾಶ್ರೀಯವರನ್ನು ಕೈಹಿಡಿದಿರುವ ಇವರಿಗೆ ಒಬ್ಬ ಪುತ್ರ ಮತ್ತು ಪುತ್ರಿ ಇದ್ದಾರೆ. ಪುತ್ರನಿಗೆ `ಉಗ್ರಂ' ಚಿತ್ರದ ಅಗಸ್ತ್ಯ ಹೆಸರನ್ನಿಟ್ಟಿದ್ದಾರೆ. ಶ್ರೀಮುರಳಿ ಉದಯ ಟಿವಿಯ `ಸದಾ ನಿಮ್ಮೊಂದಿಗೆ' ಎಂಬ ಚಾರಿಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ರೈತನ ಕುಟುಂಬವೊಂದಕ್ಕೆ ಆಸರೆಯಾಗಲು ಮುರಳಿ ಸಾಮಾನ್ಯ ಜನರಂತೆ ರಸ್ತೆ ಪಕ್ಕದಲ್ಲಿ ಕಬ್ಬಿನ ಹಾಲು ಮಾರಾಟ ಮಾಡಿದ್ದರು.