For Quick Alerts
  ALLOW NOTIFICATIONS  
  For Daily Alerts

  35 ವಸಂತಗಳ ಹೊಸ್ತಿಲಿನಲ್ಲಿ 'ಪ್ರೇಮಲೋಕ'ದಿಂದ ಬಂದ ಪ್ರೇಮದ ಕಾವ್ಯ

  By ರವೀಂದ್ರ ಕೊಟಕಿ
  |

  ಕೆಲವು ಸಿನಿಮಾಗಳೇ ಹಾಗೆ! ಜನ ಅದನ್ನು ಪ್ರೀತಿಯಿಂದ ಸ್ವೀಕರಿಸಿದರೆ, ದಶಕಗಳೇ ಕಳೆದು ಹೋದರು ಅದರ ಸೊಗಸು-ಸೊಬಗು ನಿತ್ಯ ವಸಂತದಂತೆ. 'ಬಂಗಾರದ ಮನುಷ್ಯ' 'ನಾಗರಹಾವು' "ಭೂತಯ್ಯನ ಮಗ ಅಯ್ಯು' 'ಶಂಕರ್ ಗುರು' ಇಂತಹ ದಶಕಗಳೇ ಕಳೆದರೂ ಜನಮಾನಸದಲ್ಲಿ ಹಚ್ಚಹಸಿರಾಗಿ ಉಸಿರಾಡುತ್ತಿರುವ ಚಿತ್ರಗಳ ಸಾಲಿಗೆ ಸೇರಿದ್ದೆ 'ಪ್ರೇಮಲೋಕ'. ಮುಂದಿನ ವರ್ಷಕ್ಕೆ ಪ್ರೇಮಲೋಕ ಬಿಡುಗಡೆಯಾಗಿ 35 ವರ್ಷ ಸಲ್ಲುತ್ತದೆ. ಬಿಡುಗಡೆಯಾಗಿ 34 ವರ್ಷ ಕಳೆದ ಮೇಲೂ ಕೂಡ ಇಂದಿಗೂ ಮಾಸ್ಟರ್ ಪೀಸ್ ಸಿನಿಮಾ ಅಂತಲೇ ಕರೆಸಿಕೊಂಡಿರುವ ಈ ಚಿತ್ರದ ಹಿನ್ನಲೆಯನ್ನು ನೋಡುವುದಾದರೆ, ಈ ಕಥೆ ಹುಟ್ಟಿದ್ದು, ಬಿಡುಗಡೆಯಾಗಿದ್ದು ಮತ್ತು ಇತಿಹಾಸ ಸೃಷ್ಟಿಸಿದ್ದು ಹೇಗೆ? ಇದೆಲ್ಲದರ ಒಂದು ವಿಶೇಷ ಲೇಖನ ಫಿಲ್ಮಿಬೀಟ್ ಕನ್ನಡ ನಿಮಗಾಗಿ ಇಲ್ಲಿ ಪ್ರಸ್ತುತ ಪಡಿಸುತ್ತಿದೆ.

  ಅವರು ವೀರಸ್ವಾಮಿ ರವಿಚಂದ್ರನ್...
  ವಿ. ರವಿಚಂದ್ರನ್ ಕನ್ನಡ ಸಿನಿಮಾರಂಗ ಕಂಡ ಅತಿ ದೊಡ್ಡ ಕನಸುಗಾರ. ಕನ್ನಡ ಸಿನಿಮಾರಂಗಕ್ಕೆ ತಾಂತ್ರಿಕ ಸ್ಪರ್ಶ ನೀಡಿದ ಮಾಂತ್ರಿಕ. ಕನ್ನಡ ಸಿನಿಮಾ ರಂಗದಲ್ಲಿ ಹಲವು ಪ್ರಥಮಗಳಿಗೆ ಕಾರಣೀಭೂತನಾದ ಕ್ರೇಜಿಸ್ಟಾರ್. ದುಬಾರಿ ವಿದೇಶಿ ಕ್ಯಾಮೆರಾಗಳನ್ನು ಕನ್ನಡ ಸಿನಿಮಾರಂಗಕ್ಕೆ ಮೊದಲು ಪರಿಚಯಿಸಿದವರು ರವಿಚಂದ್ರನ್. ಕನ್ನಡ ಸಿನಿಮಾಗಳಂದರೆ ಮೂಗು ಮುರಿಯುತ್ತಿದ್ದ ಕಾಲದಲ್ಲಿ ಇತರ ಚಿತ್ರರಂಗದವರು ಮೂಗಿನ ಮೇಲೆ ಬೆರಳಿಟ್ಟುಕೊಂಡು ನೋಡುವಂತೆ ಅದ್ದೂರಿ ಸೆಟ್ ಗಳನ್ನು ಹಾಕಿದವರು ರವಿಚಂದ್ರನ್. ಬಾಲಿವುಡ್ ನ ದುಬಾರಿ ನಾಯಕಿಯರನ್ನು ಕನ್ನಡ ಸಿನಿಮಾ ರಂಗಕ್ಕೆ ಕರೆತಂದ ಪ್ರೇಮಲೋಕದ ರವಿ ಇವರು. ಸಿನಿಮಾದ ಕ್ವಾಲಿಟಿ ವಿಷಯದಲ್ಲಿ ಎಂದಿಗೂ ಕಾಂಪ್ರಮೈಸ್ ಮಾಡಿಕೊಳ್ಳದ ರಣಧೀರ ಇವರು. ಕನ್ನಡೇತರರು ಕೂಡ ಕನ್ನಡ ಸಿನಿಮಾರಂಗದೆಡಗೆ ತಿರುಗಿ ನೋಡುವಂತೆ ಮಾಡಿದ ರವಿಮಾಮ ಇವರು. ಒಂದೇ ಮಾತಿನಲ್ಲಿ ಹೇಳುವುದಾದರೆ 'The Showman of Kannada Cinema' ವೀರಸ್ವಾಮಿ ರವಿಚಂದ್ರನ್.

  'ಪ್ರೇಮಲೋಕ' ಟೈಟಲ್ ಕ್ರೇಜಿಸ್ಟಾರ್ ರವಿಚಂದ್ರನ್ ಅವರದಲ್ಲವಂತೆ !'ಪ್ರೇಮಲೋಕ' ಟೈಟಲ್ ಕ್ರೇಜಿಸ್ಟಾರ್ ರವಿಚಂದ್ರನ್ ಅವರದಲ್ಲವಂತೆ !

  ಪ್ರೇಮಲೋಕಕ್ಕೆ 35, ರವಿಚಂದ್ರನ್‌ಗೆ 60

  ಪ್ರೇಮಲೋಕದ ಬಗ್ಗೆ ಮಾತನಾಡಬೇಕಾದರೆ ರವಿಚಂದ್ರನ್ ಅವರ ಬಗ್ಗೆ ಮಾತನಾಡಬೇಕಾಗುತ್ತದೆ. ರವಿಚಂದ್ರನ್ ಅವರ ಬಗ್ಗೆ ಮಾತನಾಡಬೇಕಾದರೆ ಪ್ರೇಮಲೋಕ ಉಲ್ಲೇಖಿಸಬೇಕಾಗುತ್ತದೆ. ರವಿಚಂದ್ರನ್-ಪ್ರೇಮಲೋಕ ಇವೆರಡನ್ನು ಬೇರೆ ಮಾಡಿ ನೋಡಲು ಸಾಧ್ಯವೇ ಇಲ್ಲ. ಪ್ರೇಮಲೋಕವೆಂದರೆ ಅದು ರವಿಚಂದ್ರನ್, ರವಿಚಂದ್ರನ್ ಎಂದರೆ ಪ್ರೇಮಲೋಕ. ರವಿಚಂದ್ರನ್ ಕೇವಲ ಒಬ್ಬ ನಟ-ನಿರ್ದೇಶಕ-ನಿರ್ಮಾಪಕ ಮಾತ್ರವಲ್ಲ ಬದಲಾಗಿ ಕಥೆಗಾರ, ಸಾಹಿತಿ- ಸಂಗೀತ ನಿರ್ದೇಶಕ ಇದೆಲ್ಲಕ್ಕಿಂತ ಹೆಚ್ಚಾಗಿ ಸಿನಿಮಾವನ್ನೇ ಉಸಿರಾಗಿಸಿಕೊಂಡು ಬದುಕುತ್ತಿರುವ ಸಿನಿಮಾ ಜೀವಿ. ಈಗ ಕನ್ನಡದ ಶೋ ಮ್ಯಾನ್ ಗೆ 60ರ ಸಂಭ್ರಮ. ಅದೇ ರೀತಿ ಮುಂಬರುವ ಜನವರಿಗೆ ಪ್ರೇಮಲೋಕ ಚಿತ್ರಕ್ಕೆ 35 ವರ್ಷಗಳ ಸಂಭ್ರಮ.

  ಮೇ 30, 1961 ರಂದು ಪಟ್ಟಮ್ಮಾಳ್-ರಾಮಸ್ವಾಮಿ ದಂಪತಿಯ ಹಿರಿಯ ಮಗನಾಗಿ ಜನಿಸಿದವರು ರವಿಚಂದ್ರನ್. ನಿರ್ಮಾಪಕ ನಾಗಪ್ಪ ರಾಮಸ್ವಾಮಿಯವರಿಗೆ ರವಿಚಂದ್ರನ್ ಸೇರಿದಂತೆ ಎರಡು ಗಂಡು ಸಂತಾನ (ಬಾಲಾಜಿ) ಮತ್ತು ಒಂದು ಹೆಣ್ಣು ಮಗಳು.

  ಶ್ರೀ ಈಶ್ವರಿ ಪ್ರೊಡಕ್ಷನ್ಸ್ ಸಿನಿಮಾಗಳು ಎಂದರೆ....

  ರವಿಚಂದ್ರನ್ ಅವರ ತಂದೆ ರಾಮಸ್ವಾಮಿಯವರು ಅತ್ಯಂತ ಶಿಸ್ತಿನ ಮನುಷ್ಯ ಜೊತೆಗೆ ಸದಾಭಿರುಚಿಯ ಚಿತ್ರಗಳನ್ನು ತಮ್ಮ ಈಶ್ವರಿ ಪ್ರೊಡಕ್ಷನ್ಸ್ ನಲ್ಲಿ ನಿರ್ಮಿಸಿದವರು. 1971ರಲ್ಲಿ ಅವರು ನಿರ್ಮಿಸಿದ ಮೊಟ್ಟ ಮೊದಲ ಚಿತ್ರ ರಾಜ್ ಕುಮಾರ್ ಅವರ ಅಭಿನಯದ 'ಕುಲಗೌರವ'. ನಂತರ ಅವರು ನಿರ್ಮಿಸಿದ ಎರಡು ದೊಡ್ಡ ಚಿತ್ರಗಳು ವಿಷ್ಣುವರ್ಧನ್ ಅಭಿನಯದ 'ನಾಗರಹಾವು' 'ಭೂತಯ್ಯನ ಮಗ ಅಯ್ಯು' ಇದರ ನಂತರ 'ನಾ ನಿನ್ನ ಮರೆಯಲಾರೆ' 'ಚಕ್ರವ್ಯೂಹ' ಸೇರಿದಂತೆ ಒಟ್ಟು 17 ಕನ್ನಡ ಮತ್ತು ಒಂದು ಹಿಂದಿ ಚಲನಚಿತ್ರವನ್ನು ಎನ್ ರಾಮಸ್ವಾಮಿ ಅವರು ತಮ್ಮ ಈಶ್ವರಿ ಪ್ರೊಡಕ್ಷನ್ಸ್ ನಲ್ಲಿ ನಿರ್ಮಿಸಿದ್ದಾರೆ.

  ರವಿಚಂದ್ರನ್ ಅವರ ಸಿನಿಮಾ ಎಂಟ್ರಿ ಸಾಧಾರಣವಾಗಿತ್ತು!

  ರವಿಚಂದ್ರನ್ ಅವರ ಸಿನಿಮಾ ಎಂಟ್ರಿ ಸಾಧಾರಣವಾಗಿತ್ತು!

  ತಂದೆ ದೊಡ್ಡ ನಿರ್ಮಾಪಕರು ಜೊತೆಗೆ ಶ್ರೀಮಂತ ಕುಟುಂಬದ ಹಿನ್ನಲೆ ಹೊಂದಿದ್ದರು ರವಿಚಂದ್ರನ್ ಅವರು ಸ್ಟಾರ್ ನಿರ್ಮಾಪಕನ ಪುತ್ರನಂತೆ ಅದ್ದೂರಿಯಾಗಿ ಸಿನಿಮಾರಂಗಕ್ಕೆ ಪ್ರವೇಶ ಮಾಡಲಿಲ್ಲ. ತಂದೆ ರಾಮಸ್ವಾಮಿಯವರಿಗೆ ತಮ್ಮ ಮಗ ಮೊದಲು ತನ್ನ ಸಾಮರ್ಥ್ಯವನ್ನು ನಿರೂಪಿಸಿಕೊಳ್ಳಬೇಕು ಆನಂತರವೇ ನಾಯಕನಟನಾಗಿ ಬೆಳೆಯಬೇಕೆಂಬ ನಿಲುವಾಗಿತ್ತು. ಇದಕ್ಕೆ ತಕ್ಕಂತೆ ರವಿಚಂದ್ರನ್ ಕೂಡ 1982ರಲ್ಲಿ 'ಖದಿಮ ಕಳ್ಳರು' ಚಿತ್ರದ ಮೂಲಕ ಖಳ್ಳ ನಾಯಕನಾಗಿ ಸಿನಿಮಾ ರಂಗ ಪ್ರವೇಶ ಮಾಡಿದರು (ಇದಕ್ಕೆ ಮೊದಲು 1971ರಲ್ಲಿ ಕುಲಗೌರವ ಚಿತ್ರದಲ್ಲಿ ಬಾಲನಟನಾಗಿ ನಟಿಸಿದ್ದರು) 'ಖದೀಮ ಕಳ್ಳರು' ಚಿತ್ರದ ನಂತರ ನಂತರ ಅವರು 'ಸಾವಿರಸುಳ್ಳು' 'ಪ್ರಳಯಾಂತಕ' 'ಸ್ವಾಭಿಮಾನ' 'ನಾನು ನನ್ನ ಹೆಂಡತಿ' ಸೇರಿದಂತೆ ಹತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸುವ ಮೂಲಕ ನಟನಾಗಿ ಸೈ ಎನಿಸಿಕೊಂಡರು. ನಂತರ ಬಂದಿದ್ದೆ ಕನ್ನಡ ಸಿನಿಮಾರಂಗದ ದಿಕ್ಕು ದೆಸೆ ಬದಲಾಯಿಸಿದ ಚಿತ್ರ.

  ಪ್ರೇಮಲೋಕದ ಕನಸು ಕಂಡರು

  ಪ್ರೇಮಲೋಕದ ಕನಸು ಕಂಡರು

  ಅದು 1986ರ ಸಮಯ. ವೀರಸ್ವಾಮಿ ಅವರಿಗೆ ತಮ್ಮ ಮಗ ಅದ್ದೂರಿ ಸಿನಿಮಾ ಮಾಡಿ ಗೆಲ್ಲಬಹುದು ಅಂತ ವಿಶ್ವಾಸ ಮೂಡಿತ್ತು. ಆಗಲೇ ರವಿಚಂದ್ರನ್ ಅವರು ಕನ್ನಡ ಸಿನಿಮಾರಂಗದಡಗೆ ಇಡೀ ಭಾರತೀಯ ಸಿನಿಮಾರಂಗ ತಿರುಗಿ ನೋಡುವಂತಹ ಅದ್ದೂರಿ ಸಿನಿಮಾ ಮಾಡಲು ನಿಶ್ಚಯಿಸಿದರು. ಅಲ್ಲದೆ ಅವರು ನೈಜತೆಗೆ ಹತ್ತಿರವಾಗಿರುವ ಒಂದು ರೊಮ್ಯಾಂಟಿಕ್ ಪ್ರೇಮಕಥೆಯನ್ನು ಮಾಡಬೇಕೆಂಬ ಆಸೆಯನ್ನು ಹೊಂದಿದ್ದರು. 1982ರಲ್ಲಿ ಬಿಡುಗಡೆಗೊಂಡು ಭಾರಿ ಯಶಸ್ಸನ್ನು ಕಂಡಿದ್ದ ಅಮೆರಿಕನ್ ಮ್ಯೂಸಿಕಲ್ ರೋಮ್ಯಾಂಟಿಕ್ ಕಾಮಿಡಿ 'ಗ್ರೀಸ್-2' ಚಿತ್ರದ ಒನ್ ಲೈನ್ ಆರ್ಡರ್ ತುಂಬಾನೇ ಆಕರ್ಷಿಸಿತ್ತು.

  ಇಂತಹ ಚಿತ್ರವನ್ನು ನಾವು ಯಾಕೆ ಮಾಡಬಾರದು? ಇಂತಹ ಚಿತ್ರ ಯಾಕೆ ಇದನ್ನೇ ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡಲು ನಿಶ್ಚಯಿಸಿದರು. ನಾಯಕನಟನಾಗಿ ಜೊತೆಗೆ ಮೊದಲ ಬಾರಿಗೆ ನಿರ್ದೇಶಕನಾಗಿ ಕೂಡ ಸಿನಿಮಾ ನಿರ್ಮಿಸಲು ಮುಂದಾದರು. ಹೀಗೆ ಹುಟ್ಟಿದ್ದೆ 'ಪ್ರೇಮಲೋಕ'. ಈ ಚಿತ್ರವನ್ನು ಕನ್ನಡದ ಜೊತೆಗೆ ತಮಿಳಿನಲ್ಲಿ ಕೂಡ ಈಶ್ವರಿ ಪ್ರೊಡಕ್ಷನ್ಸ್ ನಿರ್ಮಿಸಲು ಮುಂದಾಯಿತು.

  ಏಕಕಾಲಕ್ಕೆ ಎರಡು ಭಾಷೆಯಲ್ಲಿ ಚಿತ್ರೀಕರಣ

  ಏಕಕಾಲಕ್ಕೆ ಎರಡು ಭಾಷೆಯಲ್ಲಿ ಚಿತ್ರೀಕರಣ

  ದುಬಾರಿ ಬಜೆಟ್ ನ ಕಾರಣಕ್ಕಾಗಿ ಕನ್ನಡದ ಜೊತೆಗೆ ಮತ್ತೊಂದು ಭಾಷೆಯಲ್ಲಿ ಚಿತ್ರೀಕರಣ ಮಾಡಿ ಬಿಡುಗಡೆ ಮಾಡಿದರೆ ಅನುಕೂಲ ಅಂತ ಭಾವಿಸಿದ ಈಶ್ವರಿ ಪ್ರೊಡಕ್ಷನ್ಸ್ ಕನ್ನಡದ ಜೊತೆಗೆ ತಮಿಳಿನಲ್ಲೂ ಕೂಡ ಏಕಕಾಲಕ್ಕೆ ಆಯಾ ಭಾಷೆಯ ಪ್ರಮುಖ ಪೋಷಕನಟ ರೊಂದಿಗೆ ಚಿತ್ರೀಕರಣ ಮಾಡಲು ನಿರ್ಧರಿಸಿತು. ಕನ್ನಡದಲ್ಲಿ 'ಪ್ರೇಮಲೋಕ' ತಮಿಳಿನಲ್ಲಿ 'ಪರುವ ರಾಗಂ' ಜೊತೆಗೆ ಮೂಲ ಕನ್ನಡ ವರ್ಷನ್ ತೆಲುಗಿನಲ್ಲಿ 'ಪ್ರೇಮಲೋಕಂ' ಹೆಸರಿನಲ್ಲಿ ಡಬ್ ಮಾಡಲಾಯಿತು.

  ಹಂಸಲೇಖ ಎಂಬ ಸಂಗೀತ ಮಾಂತ್ರಿಕನ ಸ್ಪರ್ಶ

  ಹಂಸಲೇಖ ಎಂಬ ಸಂಗೀತ ಮಾಂತ್ರಿಕನ ಸ್ಪರ್ಶ

  ಪ್ರೇಮಲೋಕದ ಬಗ್ಗೆ ಮಾತನಾಡಬೇಕಾದರೆ ಮತ್ತೊಂದು ವ್ಯಕ್ತಿಯನ್ನು ಸ್ಮರಿಸಲೇಬೇಕು. ಹೌದು ಪ್ರೇಮಲೋಕವನ್ನು ಪ್ರೇಮ ಕಾವ್ಯವಾಗಿಸಿದ್ದು ಹಂಸಲೇಖ. ಪ್ರೇಮಲೋಕಕ್ಕೆ ಮೊದಲು ಹಂಸಲೇಖ ಕೆಲವೊಂದು ಚಿತ್ರಗಳಿಗೆ ಸಂಗೀತ ನೀಡಿದ್ದರು. ಈಶ್ವರಿ ಪ್ರೊಡಕ್ಷನ್ಸ್ ಅವರ 'ನಾನು ನನ್ನ ಹೆಂಡತಿ' ಚಿತ್ರಕ್ಕೆ ಶಂಕರ್-ಗಣೇಶ್ ಸಂಗೀತ ನೀಡಿದ್ದರು. ಆ ಚಿತ್ರದ ಎಲ್ಲಾ ಹಾಡುಗಳನ್ನು ಹಂಸಲೇಖ ಅವರೇ ಬರೆದಿದ್ದು. ಎಲ್ಲಾ ಹಾಡುಗಳು ಸೂಪರ್ ಹಿಟ್ ಆಯಿತು. ಹಂಸಲೇಖ ಅವರ ಪ್ರತಿಭೆಗೆ ಮನಸೋತ ರವಿಚಂದ್ರನ್, ಅಲ್ಲಿಂದ ಹಂಸಲೇಖ ಅವರನ್ನು ತಮ್ಮ ಆಸ್ಥಾನ ವಿದ್ವಾಂಸರಾಗಿ ನೇಮಿಸಿಕೊಂಡರು. ಹೀಗಾಗಿ ಹಂಸಲೇಖ ಅವರಿಗೂ ಕೂಡ ಇದೊಂದು ದೊಡ್ಡ ಪ್ರತಿಷ್ಠೆಯ ಸಿನಿಮಾವಾಗಿತ್ತು. ಸಂಗೀತ-ಸಾಹಿತ್ಯ ಎರಡರ ಹೊಣೆ ಕೂಡ ಅವರದೇ. ಹೊಸ ಪೀಳಿಗೆಗೆ ಹತ್ತಿರವಾಗುವಂತಹ ಪದಗಳಿಂದಲೇ ಸಾಹಿತ್ಯ ರಚಿಸಲು ಹಂಸಲೇಖ ನಿರ್ಧರಿಸಿದರು. ಹಂಸಲೇಖ ಅವರ ಸಂಗೀತ ಮತ್ತು ಸಾಹಿತ್ಯ ಪ್ರೇಮಲೋಕದ ಕ್ರಾಂತಿಗೆ ಮುನ್ನುಡಿ ಬರೆಯಿತು. ಹಂಸಲೇಖ ಅವರ ಸಾಹಿತ್ಯ ಮತ್ತು ಸಂಗೀತ ಪಡ್ಡೆ ಹುಡುಗರ ಪಾಲಿಗೆ ಪಂಚಾಮೃತವೇ ಆಯಿತು. ಇನ್ನು ನಾಯಕಿಯ ವಿಷಯದಲ್ಲಿ ಬಾಲಿವುಡ್ ನಿಂದ ಜೂಹಿ ಚಾವ್ಲಾ ಅವರನ್ನು ಕರೆತಂದು ಯುವಕರ ನಿದ್ದೆಗೆಡಿಸಿದ್ದರು ರವಿಚಂದ್ರನ್.

  ಹಿರಿಯ ನಾಯಕರುಗಳು ನೀಡಿದ ಸಾಥ್!

  ಹಿರಿಯ ನಾಯಕರುಗಳು ನೀಡಿದ ಸಾಥ್!

  ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ಚಿತ್ರೀಕರಣ. ಇತ್ತ ಲೀಲಾವತಿ ಅತ್ತ ಮನೋರಮ, ಇತ್ತ ಲೋಕೇಶ್ ಅತ್ತ ಜೈಶಂಕರ್, ಇತ್ತ ಶ್ರೀನಾಥ್ ಅತ್ತ ಡೆಲ್ಲಿ ಗಣೇಶ್ ಅಂತಹ ಹಿರಿಯ ಕಲಾವಿದರು ಅಭಿನಯಿಸಿದರು. ಇಷ್ಟಾಗಿಯೂ ಚಿತ್ರ ದೊಡ್ಡ ಕ್ಯಾನ್ವಾಸ್ ನಲ್ಲಿ ತಯಾರಾಗುತ್ತಿತ್ತು. ಅದು ಅಲ್ಲದೆ ಆ ದಿನಕ್ಕೆ ರವಿಚಂದ್ರನ್ ಸ್ಟಾರ್ ನಟನಾಗಿರಲಿಲ್ಲ. ಹೀಗಾಗಿ ಚಿತ್ರಕ್ಕೆ ಸ್ಟಾರ್ ವ್ಯಾಲ್ಯೂ ಆಡ್ ಮಾಡುವುದಕ್ಕಾಗಿಯೇ ಕೆಲವು ಹಿರಿಯ ನಟರನ್ನು ಸಂಪರ್ಕಿಸಲಾಯಿತು. ಕಾಲೇಜ್ ಪ್ರಿನ್ಸಿಪಾಲ್ ಪಾತ್ರಕ್ಕೆ ಕನ್ನಡದಲ್ಲಿ ಟೈಗರ್ ಪ್ರಭಾಕರ್, ತಮಿಳಿನಲ್ಲಿ ತುಘಲಕ್ ಪತ್ರಿಕೆಯ ಸಂಪಾದಕರು, ಸಿನಿ ಕ್ರಿಟಿಕ್ ಆಗಿದ್ದ ಚೋ. ರಾಮಸ್ವಾಮಿ (ಖ್ಯಾತ ನಟಿ ರಮ್ಯಾಕೃಷ್ಣ ಅವರ ತಾತ) ಬಂದರು. ಹೋಟೆಲ್ ಸಪ್ಲೇಯರ್ ಪಾತ್ರದಲ್ಲಿ ಅಂಬರೀಶ್ ಗೆಸ್ಟ್ ಪಿರಿಯನ್ಸ್ ಕೊಟ್ಟರು. ತಮಿಳಿನಲ್ಲಿ ತೆಂಗೈ ಶ್ರೀನಿವಾಸನ್ ಇದೇ ಪಾತ್ರದಲ್ಲಿ ನಡೆಸಿದರು. ಪ್ರೊಫೆಸರ್ ಮನೋಹರ್ ಪಾತ್ರದಲ್ಲಿ ವಿಷ್ಣುವರ್ಧನ್ ಅವರು ಎರಡು ಭಾಷೆಯಲ್ಲಿ ಕಾಣಿಸಿಕೊಂಡರು. ಊರ್ವಶಿ ಕೂಡ ರೋಹಿಣಿ ಪಾತ್ರದಲ್ಲಿ ಎರಡು ಭಾಷೆಯಲ್ಲಿ ನಟಿಸಿದರು. ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರು ಈಶ್ವರಿ ಪ್ರೊಡಕ್ಷನ್ಸ್ ಮೇಲಿನ ಗೌರವದಿಂದ ಗೆಸ್ಟ್ ಅಪಿಯರೆನ್ಸ್ ಪಾತ್ರಗಳಲ್ಲಿ ಅಭಿನಯಿಸಿದರು. ಈ ಪಾತ್ರಗಳು ಚಿತ್ರದ ಪ್ರಮೋಷನ್ ಅಲ್ಲಿ ಪ್ರಮುಖ ಪಾತ್ರವೇ ಆಯಿತು.

  ಆಡಿಯೋ ನಿರ್ಮಿಸಿದ ದಾಖಲೆ

  ಆಡಿಯೋ ನಿರ್ಮಿಸಿದ ದಾಖಲೆ

  'ಪ್ರೇಮಲೋಕ' ಎಂಬ ದೃಶ್ಯಕಾವ್ಯದ ಮಹೋನ್ನತಿಯನ್ನು ಹೆಚ್ಚಿಸಿದ್ದು ಅದರ ಸಂಗೀತ ಮತ್ತು ಸಾಹಿತ್ಯ. ಹಂಸಲೇಖ ಅವರು ಸಂಗೀತದ ಜೊತೆಗೆ ಕನ್ನಡ ವರ್ಷನ್ ಗೆ ಹಾಡುಗಳನ್ನು ಬರೆದರು. ತಮಿಳು ವರ್ಷನ್ ಗೆ ಖ್ಯಾತ ತಮಿಳು ಸಾಹಿತಿ ವೈರಮುತ್ತು ಸಾಹಿತ್ಯ ನೀಡಿದರು. 5,000- 10,000/- ಕೊಟ್ಟು ಆಡಿಯೋ ಹಕ್ಕುಗಳನ್ನು ಖರೀದಿಸುತ್ತಿದ್ದ ಆ ಕಾಲದಲ್ಲೇ ಬರೋಬ್ಬರಿ ಒಂದೂವರೆ ಲಕ್ಷ ಕೊಟ್ಟು ಆಡಿಯೋ ಹಕ್ಕುಗಳನ್ನು ಲಹರಿ ಸಂಸ್ಥೆ ಖರೀದಿಸಿತು. ಇಲ್ಲಿಂದಲೇ ಕನ್ನಡದಲ್ಲಿ ಲಕ್ಷಗಳಲ್ಲಿ ಆಡಿಯೋ ಹಕ್ಕುಗಳ ಖರೀದಿ ಆರಂಭವಾಗಿದ್ದು. ಬರೋಬ್ಬರಿ 3.8 ಮಿಲಿಯನ್ ಆಡಿಯೋ ಕ್ಯಾಸೆಟ್ ಗಳು ಮಾರಾಟವಾಗಿ ದಕ್ಷಿಣ ಭಾರತದ ಸಿನಿಮಾ ಇತಿಹಾಸದಲ್ಲೇ ಹೊಸ ಅಲೆಯನ್ನು ಸೃಷ್ಟಿಸಿತು ಪ್ರೇಮಲೋಕ.

  ಒಟ್ಟು 11 ಹಾಡುಗಳಲ್ಲಿ 3 ಇತರ ಭಾಷೆಯ ಹಾಡುಗಳು

  ಒಟ್ಟು 11 ಹಾಡುಗಳಲ್ಲಿ 3 ಇತರ ಭಾಷೆಯ ಹಾಡುಗಳು

  ಚಿತ್ರದಲ್ಲಿ ಒಟ್ಟು 11 ಹಾಡುಗಳಿದ್ದು ಇದರಲ್ಲಿ 2 ಹಾಡುಗಳನ್ನು ಮೂಲ ಚಿತ್ರ 'ಗ್ರೀಸ್-2' ನ back to school agian (ಬನ್ನಿ ನನ್ನ ಗೆಳೆಯರೇ, ಬನ್ನಿ ನನ್ನ ಗೆಳತಿಯರೇ.......ಹೋಗೋಣ ಕಾಲೇಜಿಗೆ) who's that guy ಯಾರಿವನು ಈ ಮನ್ಮಥನು) ಹಾಡುಗಳನ್ನು ಬಳಸಲಾಯಿತು. ಇದರೊಂದಿಗೆ 'ಪ್ರೇಮಲೋಕದಿಂದ ಬಂದ ಪ್ರೇಮದ ಸಂದೇಶ' ಹಾಡನ್ನು Taiwanese hokkien pop song Reflections in the cup ನಿಂದ ಸ್ಪೂರ್ತಿ ಪಡೆದು ಕಂಪೋಸ್ ಮಾಡಲಾಯಿತು.

  ಸಿನಿಮಾ ಫ್ಲಾಪ್ ಅಂದರು

  ಸಿನಿಮಾ ಫ್ಲಾಪ್ ಅಂದರು

  ಅದ್ದೂರಿಯಾಗಿ ನಿರ್ಮಿಸಿದ ಪ್ರೇಮಲೋಕ ಏಕಕಾಲಕ್ಕೆ ಕನ್ನಡ ಮತ್ತು ತಮಿಳಿನಲ್ಲಿ ಬಿಡುಗಡೆ ಮಾಡಲಾಯಿತು. ಮೊದಲ ದಿನ ಮೊದಲ ಶೋಗೆ ನೀರಸ ಪ್ರತಿಕ್ರಿಯೆ. ಒಂದು ವಾರ ಕಳೆದರೂ ಇದೆ ಟ್ರೆಂಡ್ ಮುಂದುವರಿಯಿತು. ಗಾಂಧಿನಗರದ ಗಲ್ಲಿ ಗಲ್ಲಿ ಸಿನಿಮಾ ಫ್ಲಾಪ್ ಅಂತ ಕೂಗಿ ಹೇಳಿತು. ರಾಮಸ್ವಾಮಿ ಮಗ ದೊಡ್ಡ ಮಟ್ಟದಲ್ಲೇ ದುಡ್ಡು ಕಳೆದು ಬಿಟ್ಟ ಅಂತ ಮಾತನಾಡಿಕೊಂಡರು.

  ನೋಡಮ್ಮಾ ಹುಡುಗಿ...

  ನೋಡಮ್ಮಾ ಹುಡುಗಿ...

  ನಟ-ನಿರ್ದೇಶಕ-ನಿರ್ಮಾಪಕ ಹೀಗೆ ಎಲ್ಲಾ ಹೊಣೆ ಹೊತ್ತಿದ್ದ ರವಿಚಂದ್ರನ್ ಅವರಿಗೆ ಈ ಸಿನಿಮಾದಲ್ಲಿ ಮ್ಯಾಜಿಕ್ ಇದೆ. ಆದರೆ ಅದನ್ನು ಅರ್ಥೈಸಲು ನಾವು ವಿಫಲರಾಗುತ್ತಿದ್ದೇವೆ ಅಂತ ಅರ್ಥವಾಯಿತು. ಆಗ ಅವರಿಗೆ ಅನಿಸಿದ್ದು ವಿಷ್ಣುವರ್ಧನ್, ಟೈಗರ್ ಪ್ರಭಾಕರ್ ಅಂತ ಹಿರಿಯರ ಜೊತೆಗೆ ಪಡ್ಡೆಗಳ ಜೊತೆಗೆ ಚಿತ್ರಿಸಿದ ಆ ಕಾಲೇಜು ಗೀತೆ. ಅದೇ ಪಡ್ಡೆ ಹುಡುಗರ ಹಾಟ್ ಫೇವರಿಟ್ "ನೋಡಮ್ಮಾ ಹುಡುಗಿ, ಕೇಳಮ್ಮಾ ಸರಿಯಾಗಿ..." ಈ ಹಾಡು. ಈ ಹಾಡನ್ನು ಸರಿಯಾಗಿ ಪ್ರಮೋಷನ್ ಮಾಡಿದರೆ ನೋಡಿದ ಟೀನೇಜ್ ಹುಡುಗರು ಖಂಡಿತ ಥಿಯೇಟರ್ ಕಡೆಗೆ ಬರ್ತಾರೆ ಅಂತ ಅವರಿಗೆ ಅನಿಸಿತು. ದೂರದರ್ಶನದಲ್ಲಿ ಆ ಹಾಡನ್ನು ಆಗಿನ ಕಾಲಕ್ಕೆ 25,000/- ಕೊಟ್ಟು ಪ್ರಮೋಷನ್ ಮಾಡಲು ಮುಂದಾದರು. ಅವರ ನಿರೀಕ್ಷೆ ಸುಳ್ಳಾಗಲಿಲ್ಲ ಟೀನೇಜ್, ಕಾಲೇಜು ಹುಡುಗ ಹುಡುಗಿಯರು ಮಾತ್ರವಲ್ಲ ಹಾಡು ನೋಡಿದ ಸಣ್ಣ ಮಕ್ಕಳು ಕೂಡ ಸಿನಿಮಾ ನೋಡಬೇಕೆಂದು ಹಠ ಹಿಡಿದರು. ಅದಕ್ಕೆ ಫ್ಯಾಮಿಲಿಗಳು ಕೂಡ ಥಿಯೇಟರ್ ಗಳ ಕಡೆಗೆ ಮುಖ ಮಾಡಿದರು.

  ಬಿದ್ದ ಹೌಸ್ ಫುಲ್ ಬೋರ್ಡ್ ಮತ್ತೆ ತೆಗೆಯಲಿಲ್ಲ

  ಬಿದ್ದ ಹೌಸ್ ಫುಲ್ ಬೋರ್ಡ್ ಮತ್ತೆ ತೆಗೆಯಲಿಲ್ಲ

  ದೂರದರ್ಶನದಲ್ಲಿ ಪ್ರೇಮಲೋಕ ಹಾಡು ನೋಡಿದವರು ಪ್ರೇಮಲೋಕ ಚಿತ್ರ ನೋಡಲು ಥಿಯೇಟರ್ ಕಡೆಗೆ ಮುಖ ಮಾಡಿದರು. ಎರಡನೇ ವಾರಕ್ಕೆ ಚಿತ್ರ ಆವರೇಜ್ ಹಂತಕ್ಕೆ ಬಂದು ತಲುಪಿತು. ಮೂರನೇ ವಾರ ಬಂತು, ಜನ ಮುಗಿದು ಬಿದ್ದು ನೋಡಲು ಮುಂದಾದರು. ಅಂದು ಬಿದ್ದ ಹೌಸ್ ಫುಲ್ ಬೋರ್ಡ್ 25 ವಾರ ಕಳೆದರೂ ತೆಗೆಯಲಿಲ್ಲ. ಬಿಡುಗಡೆಯಾದ ಪ್ರತಿ ಥಿಯೇಟರ್ ನ ಮುಂದೆ ಹೌಸ್ ಫುಲ್ ಬೋರ್ಡ್ ಮಾತ್ರವೇ ಕಾಣುತ್ತಿತ್ತು. ಹೊಸ ಇತಿಹಾಸ ಕನ್ನಡ ಸಿನಿಮಾರಂಗದಲ್ಲಿ ಪ್ರೇಮಲೋಕ ಬರೆಯಿತು. ಬರೋಬ್ಬರಿ 6 ಕೋಟಿ ಬಾಕ್ಸಾಫೀಸ್ ಕಲೆಕ್ಷನ್ ಮಾಡಿದ ಪ್ರೇಮಲೋಕ ಇಡೀ ಭಾರತೀಯ ಸಿನಿಮಾ ರಂಗ ಕನ್ನಡ ಸಿನಿಮಾರಂಗದೆಡೆಗೆ ತಿರುಗಿ ನೋಡುವಂತೆ ಮಾಡಿತು.

  ತಮಿಳಿನಲ್ಲಿ ಗೆಲ್ಲಲಿಲ್ಲ ಪ್ರೇಮಲೋಕ

  ತಮಿಳಿನಲ್ಲಿ ಗೆಲ್ಲಲಿಲ್ಲ ಪ್ರೇಮಲೋಕ

  ತಮಿಳಿನಲ್ಲಿ ಚಿತ್ರ ನಿರೀಕ್ಷಿತ ಯಶಸ್ಸು ಕಾಣದೆ ಹೋಗಲು ಮುಖ್ಯ ಕಾರಣ ಕನ್ನಡದಂತೆ ಆರಂಭದಲ್ಲಿ ತಮಿಳಿನಲ್ಲೂ ಕೂಡ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕನ್ನಡದಂತೆ ತಮಿಳಿನಲ್ಲೂ ಮೂರನೇ ವಾರದ ಹೊತ್ತಿಗೆ ಮೌತ್ ಟಾಕ್ ಶುರುವಾಗಿತ್ತು, ಆದರೆ ಅದೇ ಸಮಯದಲ್ಲಿ ಬಿಡುಗಡೆಯಾದ ತಮಿಳಿನ ಸ್ಟಾರ್ ನಟರ ಚಿತ್ರಗಳಿಗಾಗಿ ಚಿತ್ರಮಂದಿರವನ್ನು ಬಿಟ್ಟುಕೊಡಬೇಕಾದ ಪರಿಸ್ಥಿತಿ 'ಪರುವ ರಾಗಂ'ಗೆ ಒದಗಿ ಬಂತು. ಹೀಗಾಗಿ ಥಿಯೇಟರ್ ಗಳನ್ನು ಉಳಿಸಿಕೊಳ್ಳಲಾಗದೆ ಚಿತ್ರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗೆಲುವನ್ನು ದಾಖಲಿಸಲಾಗಲಿಲ್ಲ.

  ಸಿನಿಮಾರಂಗದ ಆಲೋಚನೆಗಳನ್ನು ಬದಲಾಯಿಸಿದ ಚಿತ್ರ

  ಸಿನಿಮಾರಂಗದ ಆಲೋಚನೆಗಳನ್ನು ಬದಲಾಯಿಸಿದ ಚಿತ್ರ

  ಪ್ರೇಮಲೋಕ ಕನ್ನಡ ಸಿನಿಮಾರಂಗದ ಆಲೋಚನಾಕ್ರಮವನ್ನು ಬದಲಾಯಿಸಿದ ಚಿತ್ರ. ಕೆಲವು ನಿರ್ದಿಷ್ಟ ಮಾನದಂಡಗಳಿಗೆ ಅಂಟಿಕೊಂಡಿದ್ದ ಕನ್ನಡ ಸಿನಿಮಾರಂಗವನ್ನು ಅದರಿಂದ ಮುಕ್ತಗೊಳಿಸಿದ ಚಿತ್ರವಿದು. ಅದು ಅಲ್ಲದೆ, ಕನ್ನಡ ಸಿನಿಮಾ ಅಂದರೆ ಕೆಲವೇ ಲಕ್ಷಗಳಲ್ಲಿ ನಿರ್ಮಿಸುತ್ತಿದ್ದ ಕಾಲದಲ್ಲಿ ಕೋಟಿಯಲ್ಲಿ ಸಿನಿಮಾ ಮಾಡಿ, ಕನ್ನಡ ಸಿನಿಮಾ ಮೇಲೆ ಇಷ್ಟು ಬಂಡವಾಳ ಹೂಡಬಹುದಾ? ಅಂತ ನಮ್ಮವರೇ ಪ್ರಶ್ನಿಸಿಕೊಂಡು ಚಿತ್ರದ ಕಲೆಕ್ಷನ್ ನೋಡಿ ಮೂರ್ಛೆ ಹೋದರು. ಈ ದಿನ ನಾವು 100ಕೋಟಿ ಚಿತ್ರಗಳು ಬಗ್ಗೆ ಮಾತನಾಡುತ್ತೇವೆ. ಆದರೆ ಅದರಲ್ಲಿ ಅರ್ಧ ಮಾತ್ರ ಸಿನಿಮಾ ಮೇಲೆ ಬಂಡವಾಳವಾದರೆ, ಉಳಿದ ಅರ್ಧ ಆರ್ಟಿಸ್ಟ್ಸ್, ಟೆಕ್ನೀಷಿಯನ್ ಗಳಿಗೆ ಮೀಸಲಾಗಿರುತ್ತದೆ. ಆದರೆ ರವಿಚಂದ್ರನ್ ಸಿನಿಮಾಗಳಲ್ಲಿ ಆಗಲ್ಲ. ಪ್ರತಿ ಪೈಸಾ ಸಿನಿಮಾದ ಮೇಕಿಂಗ್ ಮೇಲೆ ಹೂಡುತ್ತಾರೆ. ಸಿನಿಮಾ, ಗೆದ್ದರೂ ಸೋತರೂ ಪ್ರೇಮಲೋಕದಿಂದ ಆರಂಭವಾದ ವೀರಸ್ವಾಮಿ ರವಿಚಂದ್ರನ್ ಅವರ ಮೇಕಿಂಗ್ ಮಾತ್ರ ಎಂದಿಗೂ ಸೋತಿಲ್ಲ ಸೋಲುವುದಿಲ್ಲ.

  English summary
  Sandalwood Hit movie Premaloka Completes 34 Years: Interesting Facts about Ravichandran directional debut Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X