twitter
    For Quick Alerts
    ALLOW NOTIFICATIONS  
    For Daily Alerts

    ಸೌತ್ ಸಿನಿಮಾಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ತ್ರಿಮೂರ್ತಿಗಳಿವರು!

    |

    ಪ್ರಸ್ತುತ ಭಾರತೀಯ ಸಿನಿಮಾರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಹವಾ ಜೋರಾಗಿದೆ. ಅದರಲ್ಲೂ ವಿಶೇಷವಾಗಿ ಈಗ ಸೌತ್ ಸಿನಿಮಾಗಳ ಹವಾ ದೊಡ್ಡದಾಗಿದೆ. ದಕ್ಷಿಣದ ದೊಡ್ಡ ಬಜೆಟ್ಟಿನ ಪ್ರತಿ ಚಿತ್ರ ಕೂಡ ಈಗ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬಿಡುಗಡೆಯಾಗುತ್ತಿದೆ. ಸುದೀಪ್ ಅಭಿನಯದ 'ವಿಕ್ರಾಂತ್ ರೋಣ', ರಕ್ಷಿತ್ ಶೆಟ್ಟಿ ' 777 ಚಾರ್ಲಿ' ಕನ್ನಡದಿಂದ ಶೀಘ್ರವೇ ಬಿಡುಗಡೆಯಾಗುತ್ತಿರುವ ಎರಡು ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾಗಳು.

    ಈ ದಿನ ಪ್ರತಿ ದಕ್ಷಿಣ ಭಾರತೀಯ ಸಿನಿಮಾ ಬಾಲಿವುಡ್ ಗೆ ದೊಡ್ಡಮಟ್ಟದಲ್ಲಿ ಸವಾಲು ಎಸೆಯುವುದರ ಹಿಂದೆ ದಕ್ಷಿಣ ಭಾರತದ ಮೂರು ನಿರ್ದೇಶಕರ ಶ್ರಮ ಮತ್ತು ಅವರ ಮೇಕಿಂಗ್ ಕೆಲಸ ಮಾಡಿದೆ. ದಕ್ಷಿಣ ಸಿನಿಮಾಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋದ ಕೀರ್ತಿ ಈ ಮೂವರು ನಿರ್ದೇಶಕರಿಗೆ ಸಲ್ಲುತ್ತದೆ.

    ಶಂಕರ್ ಎಂದರೆ ಅದ್ದೂರಿತನಕ್ಕೆ ಮತ್ತೊಂದು ಹೆಸರು. ಇವತ್ತಿಗೂ ಭಾರತೀಯ ಸಿನಿಮಾ ರಂಗದಲ್ಲಿ ತಾಂತ್ರಿಕ ವಿಚಾರಕ್ಕೆ ಬಂದರೆ ಶಂಕರ್ ಗೆ ಸರಿಸಾಟಿಯಾದ ಮತ್ತೊಬ್ಬ ನಿರ್ದೇಶಕನಿಲ್ಲ. ತಮಿಳು ಸಿನಿಮಾರಂಗದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ನಿರ್ದೇಶಕರಲ್ಲಿ ಶಂಕರ್ ಅಗ್ರಗಣ್ಯರು. ಬಾಲಿವುಡ್ ಮಂದಿ ಕೂಡ ತಮ್ಮ ಸೂಪರ್ ಸ್ಟಾರ್ ಗಳ ಮೇಲೆ ಹಣ ಹೂಡಲು ಹಿಂದೆ ಮುಂದೆ ನೋಡುತ್ತಿದ್ದ ಕಾಲದಲ್ಲೇ ಶಂಕರ್ ಚಿತ್ರಗಳು ಮೇಲೆ ನೂರಾರು ಕೋಟಿ ಬಂಡವಾಳ ಹೂಡಿ ಸಿನಿಮಾ ಮಾಡಿದ್ದರು. ಶಂಕರ್ ತಮಿಳು ಸಿನಿಮಾ ರಂಗದಲ್ಲಿ ನೂರಾರು ಕೋಟಿ ಬಂಡವಾಳ ಹೂಡಿ ಸಿನಿಮಾಗಳನ್ನು ತೆಗೆದು, ಗೆದ್ದವರು.

    ಶಂಕರ್ ನಿರ್ದೇಶನದ ವಿಶೇಷತೆ ಏನು?

    ಶಂಕರ್ ನಿರ್ದೇಶನದ ವಿಶೇಷತೆ ಏನು?

    'ಜೆಂಟಲ್ ಮ್ಯಾನ್' ನಿಂದ ಮೊದಲುಗೊಂಡು '2.0' ವರೆಗೂ ಶಂಕರ್ ಮಾಡಿದ ಪ್ರತಿ ಚಿತ್ರ ಕೂಡ ಕಮರ್ಷಿಯಲ್ ಆಯಾಮದೊಳಗೆ ಸಾಮಾಜಿಕ ಅಂಶಗಳು ಅದರಲ್ಲೂ ವಿಶೇಷವಾಗಿ ಭ್ರಷ್ಟಾಚಾರದ ವಿರುದ್ಧದ ಜನಸಾಮಾನ್ಯನ ಹೋರಾಟವನ್ನು ಕಾಣಬಹುದಾಗಿದೆ. ಹೀಗಾಗಿ ಶಂಕರ್ ತಮಿಳಿನಲ್ಲಿ ಸಿನಿಮಾ ಮಾಡಿದರು ಕೂಡ ಅದು ಭಾರತೀಯ ಮಟ್ಟದಲ್ಲಿ ಸದಾ ಸುದ್ದಿಯಾಗುತ್ತಿರುವುದು. ಶಂಕರ್ ಕಾಲದ ನಿರ್ದೇಶಕರು ಪ್ರಸ್ತುತ ಹೊಸ ಜನರೇಷನ್ ಜೊತೆ ಹೊಸ ಟೆಕ್ನಾಲಜಿ ಜೊತೆ ಅಪ್ ಗ್ರೇಡ್ ಆಗಿ ಸಿನಿಮಾ ಮಾಡುವಂತಹ ಸಾಮರ್ಥ್ಯವನ್ನು ಹೊಂದಿಲ್ಲದೆ ಮೂಲೆಗುಂಪಾಗಿದ್ದಾರೆ. ಆದರೆ ಶಂಕರ್ ಇವತ್ತಿಗೂ ಕೂಡ ಹೊಸ ತಂತ್ರಜ್ಞಾನವನ್ನು ಅತ್ಯಂತ ವೇಗವಾಗಿ ಅರ್ಥೈಸಿಕೊಂಡು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಭಾರತದ ನಂಬರ್ ಒನ್ ನಿರ್ದೇಶಕ ಎನಿಸಿಕೊಂಡಿದ್ದಾರೆ. ಶಂಕರ್ ಅವರ 'ಜಂಟಲ್ ಮ್ಯಾನ್', 'ಜೀನ್ಸ್', 'ಇಂಡಿಯನ್', 'ಅನ್ನಿಯನ್'', 'ಮುಧಲ್ವನ್', 'ಐ', 'ಶಿವಾಜಿ', '2.0', 'ರೋಬೋಟ್' ಹೀಗೆ ಅವರು ನಿರ್ದೇಶನ ಮಾಡಿದ ಎಲ್ಲವೂ ಕೂಡ ದೊಡ್ಡ ಮಟ್ಟದಲ್ಲಿ ಗಮನ ಸೆಳೆದ ಚಿತ್ರಗಳೇ ಆಗಿವೆ. ಪ್ರಸ್ತುತ ಶಂಕರ್ ರಾಮಚರಣ್ ಅಭಿನಯದಲ್ಲಿ ಭಾರಿ ಬಜೆಟ್ ಚಿತ್ರವೊಂದನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಅದ್ದೂರಿ ಚಿತ್ರವಾಗಿದ್ದು ಈಗಾಗಲೇ ಇದು ಭಾರತೀಯ ಸಿನಿಮಾ ರಂಗದ ಗಮನಸೆಳೆಯುತ್ತಿದೆ.ದಕ್ಷಿಣ ಭಾರತದಿಂದ ಬಾಲಿವುಡ್ಡಿಗೆ ಸವಾಲ್ ಎಸೆದ ಮೊದಲ ನಿರ್ದೇಶಕ ಶಂಕರ್.

    ಭಾರತೀಯ ಸಿನಿಮಾರಂಗದ ಟಾಪ್ ಒನ್ ನಿರ್ದೇಶಕ ರಾಜಮೌಳಿ

    ಭಾರತೀಯ ಸಿನಿಮಾರಂಗದ ಟಾಪ್ ಒನ್ ನಿರ್ದೇಶಕ ರಾಜಮೌಳಿ

    ಪ್ರಸಕ್ತ ಭಾರತೀಯ ಸಿನಿಮಾ ರಂಗದಲ್ಲಿ ನಂಬರ್ ಒನ್ ನಿರ್ದೇಶಕ ಎಂದರೆ ನಿಸ್ಸಂದೇಹವಾಗಿ ಎಸ್ಎಸ್ ರಾಜಮೌಳಿ ಅಂತ ಹೇಳಬಹುದು. ದಕ್ಷಿಣ ಸಿನಿಮಾಗಳ ಬಗ್ಗೆ ಮೂಗು ಮುರಿಯುತ್ತಿದ್ದ ಕಾಲದಲ್ಲಿ ಬಾಲಿವುಡ್ ಮಂದಿ ಮೂಗಿನ ಮೇಲೆ ಬೆರಳಿಟ್ಟು ನೋಡಿಕೊಳ್ಳುವಂತೆ ಸಿನಿಮಾಗಳನ್ನು ಮಾಡಿ ತೋರಿಸಿದ ಹೆಗ್ಗಳಿಕೆ ರಾಜಮೌಳಿ ಅವರಿಗೆ ಸಲ್ಲುತ್ತದೆ. ಶಂಕರ್ ನಂತರ ತಂತ್ರಜ್ಞಾನವನ್ನು ಅದ್ಭುತವಾಗಿ ಬಳಸಿಕೊಂಡ ಮತ್ತೊಬ್ಬ ನಿರ್ದೇಶಕ ಎಂದರೆ ಅದು ರಾಜಮೌಳಿ ಮಾತ್ರ. ಹೀಗಾಗಿಯೇ ನೊಣ (ಈಗ) ವೊಂದನ್ನು ಇಟ್ಟುಕೊಂಡು ಕೂಡ ಸಿನಿಮಾ ಮಾಡಿ ಗೆದ್ದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ಗ್ರಾಫಿಕ್ ತಂತ್ರಜ್ಞಾನದ ಅದ್ಭುತ ಕಲ್ಪನೆಯನ್ನು ಸಿನಿಮಾದ ಮೂಲಕ ಮೋಡಿ ಮಾಡುತ್ತಾರೆ ರಾಜಮೌಳಿ. 'ಮಗಧೀರ' ಕೂಡ ಇದೇ ಕ್ರಮದಲ್ಲಿ ದೊಡ್ಡ ಯಶಸ್ಸನ್ನು ಕಂಡ ಚಿತ್ರ. ಎಸ್ಎಸ್ ರಾಜಮೌಳಿ ಅವರನ್ನು ಪ್ಯಾನ್ ಇಂಡಿಯ ಸಿನಿಮಾಗಳ ಸೃಷ್ಟಿಕರ್ತ ಅಂತ ಹೇಳಿದರೆ ತಪ್ಪಾಗಲಾರದು ಅಂತ ಕಾಣುತ್ತದೆ.

    ಬಾಹುಬಲಿಗೆ ಮುಂಚೆ, ಬಾಹುಬಲಿ ನಂತರ

    ಬಾಹುಬಲಿಗೆ ಮುಂಚೆ, ಬಾಹುಬಲಿ ನಂತರ

    ಬಾಹುಬಲಿ ಚಿತ್ರದ ಮೂಲಕ ಭಾರತೀಯ ಸಿನಿಮಾ ರಂಗದಲ್ಲಿ ಹೊಸ ಅಧ್ಯಾಯವನ್ನು ರಾಜಮೌಳಿ ಬರೆದರು. ಬಾಹುಬಲಿಗೆ ಮೊದಲು ಭಾರತೀಯ ಸಿನಿಮಾರಂಗವನ್ನು ನಾವು ಗಮನಿಸಿದರೆ, ಇಡೀ ಭಾರತವನ್ನು ಒಟ್ಟುಮಾಡಿ ಒಂದು ಸಿನಿಮಾ ನೋಡುವ ಕಲ್ಪನೆಯೇ ಇರಲಿಲ್ಲ. ಬಾಲಿವುಡ್ ಹೀರೋಗಳು ಬಾಲಿವುಡ್ ಹೀರೋಗಳು ಅಷ್ಟೇ. ತೆಲುಗು ಸ್ಟಾರ್ ಗಳು ತೆಲುಗು ಹೀರೋಗಳು, ತಮಿಳು ಸ್ಟಾರ್ ಗಳು ತಮಿಳು ಹೀರೋಗಳು, ಕನ್ನಡದವರು ಕನ್ನಡದವರು ಹೀಗೆ ಅವರವರ ಮಾರ್ಕೆಟ್ ಗೆ ಸೀಮಿತವಾದ ಕಥೆಗಳನ್ನು ಮಾಡುತ್ತಿದ್ದರು. ಆದರೆ ಬಾಹುಬಲಿ ಸರಣಿ ಇಡೀ ಭಾರತೀಯ ಸಿನಿಮಾ ರಂಗವನ್ನು ತನ್ನೆಡೆಗೆ ಸೆಳೆದುಕೊಂಡ ಮೇಲೆ ಅರ್ಥವಾಗಿದ್ದು ಒಂದು ಸಿನಿಮಾ ಕಂಟೆಂಟ್ ಎಲ್ಲರಿಗೂ ಕನೆಕ್ಟ್ ಆದರೆ ಅದು ಪ್ಯಾನ್ ಇಂಡಿಯಾ ಸಿನಿಮಾ ಅಂತ. 'ಬಾಹುಬಲಿ -2' ಭಾರತೀಯ ಸಿನಿಮಾ ರಂಗದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿ ಮಾಡಿದ್ದು ಕೂಡ ಇದೇ ಕಾರಣಕ್ಕೆ. ರಾಜಮೌಳಿಯವರ 'ಆರ್ ಆರ್ ಆರ್' ಚಿತ್ರ ಕೂಡ ಸಾವಿರ ಕೋಟಿ ಕ್ಲಬ್ ಸೇರುವ ಮೂಲಕ ಸತತವಾಗಿ ಎರಡು ಚಿತ್ರಗಳು1000 ಕೋಟಿ ಕ್ಲಬ್ ಸೇರಿದ ಏಕೈಕ ನಿರ್ದೇಶಕ ಅಂತ ರಾಜಮೌಳಿ ಎನಿಸಿಕೊಂಡಿದ್ದಾರೆ. ಚಂದಮಾಮ ಕಥೆಗಳಿಗೆ ಒಂದು ಆಧುನಿಕ ರೂಪವನ್ನು ಕೊಟ್ಟರೆ ಅದು ರಾಜಮೌಳಿ ಚಿತ್ರಗಳಾಗಿರುತ್ತದೆ. ಇವರ ಸಿನಿಮಾಗಳು ಒಂದು ಫ್ಯಾಂಟಸಿ ಪ್ರಪಂಚವನ್ನು ನಮ್ಮ ಮುಂದೆ ತೆರೆದಿಡುತ್ತದೆ. ಇನ್ನು ರಾಜಮೌಳಿ ಅವರ ಮುಂದಿನ ಚಿತ್ರದ ಬಜೆಟ್ 800 ಕೋಟಿ. ಇಂತಹ ಒಂದು ಬಜೆಟ್ ಊಹೆ ಕೂಡ ಬಾಲಿವುಡ್ ನಲ್ಲಿ ಮಾಡಿಕೊಳ್ಳಲು ಸಾಧ್ಯವಿಲ್ಲ.

    ಮೂರೇ ಚಿತ್ರಗಳಿಂದ ಪ್ಯಾನ್ ಇಂಡಿಯಾ ಡೈರೆಕ್ಟರ್ ಆದ ಪ್ರಶಾಂತ್ ನೀಲ್

    ಮೂರೇ ಚಿತ್ರಗಳಿಂದ ಪ್ಯಾನ್ ಇಂಡಿಯಾ ಡೈರೆಕ್ಟರ್ ಆದ ಪ್ರಶಾಂತ್ ನೀಲ್

    'ಕೆಜಿಎಫ್-2' ಈಗಲೂ ಕೂಡ ದಿನೇ-ದಿನೇ ಹೊಸ ದಾಖಲೆಗಳನ್ನು ಬರೆದು ಮುನ್ನುಗ್ಗುತ್ತಿದೆ. ಕನ್ನಡ ಸಿನಿಮಾ ಅಂದರೆ ಅದೊಂದು ಸಣ್ಣ ಬಜೆಟ್ ಚಿತ್ರಗಳೆಂದು ಹಾಸ್ಯ ಮಾಡುತ್ತಿದ್ದವರಿಗೆ ಕನ್ನಡ ಸಿನಿಮಾರಂಗದ ತಾಕತ್ತನ್ನು ಪರಿಚಯಿಸಿದವರು ಪ್ರಶಾಂತ್ ನೀಲ್. ಪ್ರಸ್ತುತ ಭಾರತೀಯ ಸಿನಿಮಾ ರಂಗದಲ್ಲಿ ಸಾವಿರ ಕೋಟಿ ಗಳಿಕೆ ಮಾಡಿದ 4 ಚಿತ್ರಗಳಿದ್ದು, ಅದರಲ್ಲಿ 'ಕೆಜಿಎಫ್-2' ಕೂಡ ಒಂದು. ನಿರ್ದೇಶನ ಮಾಡಿದ ಮೂರನೇ ಚಿತ್ರಕ್ಕೆ ಸಾವಿರ ಕೋಟಿ ಕ್ಲಬ್ ಸೇರಿದ ನಿರ್ದೇಶಕ ಪ್ರಶಾಂತ್ ನೀಲ್. ನಿರ್ದೇಶನ ಮಾಡಿದ ಮೊದಲ ಚಿತ್ರ 'ಉಗ್ರಂ' ಮೂಲಕವೇ ಗಮನಸೆಳೆದ ನಿರ್ದೇಶಕ. ಕೆಜಿಎಫ್ ಚಿತ್ರದ ಮೇಕಿಂಗ್ ನಲ್ಲಿ ತಾಂತ್ರಿಕ ಶ್ರೀಮಂತಿಕೆಯನ್ನು ಮೆರೆಸಿ ವಿಶ್ವ ಪ್ರಸಿದ್ಧರಾಗಿದ್ದಾರೆ.

    ಮೇಕಿಂಗ್ ವಿಷಯದಲ್ಲಿ ಸದಾ ಮುಂದೆ

    ಮೇಕಿಂಗ್ ವಿಷಯದಲ್ಲಿ ಸದಾ ಮುಂದೆ

    ಪ್ರಶಾಂತ್ ನೀಲ್ ಅವರ ದೊಡ್ಡ ಸ್ಟ್ರೆಂತ್ ಮೇಕಿಂಗ್ ವಿಷಯದಲ್ಲಿ ನೋ ಕಾಂಪ್ರಮೈಸ್. ಪ್ರತಿ ಫ್ರೇಮ್ ಅದ್ಭುತವಾಗಿ ಇರಬೇಕೆಂದು ಬಯಸುತ್ತಾರೆ. ಹೀಗಾಗಿಯೇ ಅವರು ಸತತ ಐದು ವರ್ಷ ಕೆಜಿಎಫ್ ಸರಣಿ ಚಿತ್ರಗಳನ್ನು ಮಾಡಲು ಸಮಯ ತೆಗೆದುಕೊಂಡಿದ್ದರು. ಅಂಡರ್ ವರ್ಲ್ಡ್ ಕಥೆಗಳಿಗೂ ಕೂಡ ಒಂದು ಅದ್ಭುತವಾದ ಮೇಕಿಂಗ್ ಟಚ್ ಕೊಡುವುದು ಪ್ರಶಾಂತ್ ಹೆಗ್ಗಳಿಕೆ ಇವರ ಪ್ರತಿ ಸಿನಿಮಾ ಕೂಡ ರಾ ಸಬ್ಜೆಕ್ಟ್ ಗಳಾಗಿದ್ದು, ಅಂಡರ್ ಕರೆಂಟ್ ನಲ್ಲಿ ಕಥೆಗಳನ್ನು ಇಂಟರೆಸ್ಟಿಂಗ್ ಆಗಿ ಪ್ರೆಸೆಂಟ್ ಮಾಡುತ್ತಾರೆ.ಪ್ರಶಾಂತ್ ನೀಲ್ ಅವರ ಮುಂದಿನ ಪ್ರತಿ ಚಿತ್ರವು ಕೂಡ ಪ್ಯಾನ್ ಇಂಡಿಯಾ ಸಿನಿಮಾಗಳೇ ಆಗಿರುತ್ತದೆ. ಈ ಎಲ್ಲಾ ಚಿತ್ರಗಳು ಕೂಡ ಬಾಲಿವುಡ್ ಸಿನಿಮಾರಂಗವನ್ನು ನಿದ್ದೆಗೆಡಿಸುವರಲ್ಲಿ ಅನುಮಾನವಿಲ್ಲ. ಪ್ರಭಾಸ್ ಅಭಿನಯದ 'ಸಲಾರ್', ಎನ್ ಟಿ ಆರ್ ಚಿತ್ರ, ರಾಮಚರಣ್ ಚಿತ್ರ, ಜೊತೆಗೆ 'KGF-3' ಚಿತ್ರಗಳು ಮುಂಬರುವ ವರ್ಷಗಳಲ್ಲಿ ಎಂತಹ ಸಂಚಲನಗಳಿಗೆ ಕಾರಣವಾಗುತ್ತದೆ ಅಂತ ಕಾದುನೋಡಬೇಕಿದೆ.

    ನಾಗ್ ಅಶ್ವಿನ್ ಆಗಬಹುದೇ ಮತ್ತೊಬ್ಬ ಪ್ಯಾನ್ ಇಂಡಿಯಾ ಡೈರೆಕ್ಟರ್?

    ನಾಗ್ ಅಶ್ವಿನ್ ಆಗಬಹುದೇ ಮತ್ತೊಬ್ಬ ಪ್ಯಾನ್ ಇಂಡಿಯಾ ಡೈರೆಕ್ಟರ್?

    ಮುಂಬರುವ ದಿನಗಳಲ್ಲಿ ಯಾರು ಅಂತಹ ಪ್ಯಾನ್ ಇಂಡಿಯಾ ನಿರ್ದೇಶಕರಾಗುವ ಅವಕಾಶಗಳಿವೆ? ಎಂಬ ಪ್ರಶ್ನೆ ಮೂಡಿ ಬರುವುದು ಕೂಡ ಸಹಜ. ಮಾಡಿದ ಎರಡೇ ಚಿತ್ರಗಳಿಂದ ಗಮನಸೆಳೆದಿರುವ ನಾಗ್ ಅಶ್ವಿನ್ ಅಂತಹದೊಂದು ಅವಕಾಶವಿರುವ ನಿರ್ದೇಶಕರಾಗಿ ಕಾಣುತ್ತಿದ್ದಾರೆ. ಮಾಡಿದ ಮೊದಲ ಚಿತ್ರ 'ಎವಡೇ ಸುಬ್ರಮಣ್ಯಂ' ಒಂದು ಸೆನ್ಸಿಬಲ್ ಸಬ್ಜೆಕ್ಟ್ ಆಗಿತ್ತು. ಇನ್ನು ಎರಡನೇ ಚಿತ್ರವೇ ಅತ್ಯಂತ ಸವಾಲಿನ ಚಿತ್ರವಾಗಿ ಹೊರಹೊಮ್ಮಿತು. ಅದೇ ಹಿರಿಯ ನಟಿ ಸಾವಿತ್ರಿ ಅವರ ಜೀವನಾಧಾರಿತ ಚಿತ್ರ 'ಮಹಾನಟಿ'. ಬಯೋಪಿಕ್ ಗಳಲ್ಲೇ ಭಿನ್ನವಾದ ಚಿತ್ರವಾಗಿ ಗಮನಸೆಳೆದಿದ್ದು 'ಮಹಾನಟಿ'. ಪ್ರಸ್ತುತ ನಾಗ್ ಅಶ್ವಿನ್ ಪ್ರಭಾಸ್ -ಅಮಿತಾಬಚ್ಚನ್- ದೀಪಿಕಾ ಪಡುಕೋಣೆ ಪ್ರಮುಖ ತಾರಾಗಣದಲ್ಲಿ ಸೈನ್ಸ್ ಫಿಕ್ಷನ್ 'ಪ್ರಾಜೆಕ್ಟ್ -ಕೆ' ಅನ್ನು ನಿರ್ದೇಶನ ಮಾಡುತ್ತಿದ್ದಾರೆ .ಸುಮಾರು 700 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಎಲ್ಲ ಭಾರತೀಯ ಭಾಷೆಗಳ ಜೊತೆಗೆ ವಿದೇಶಿ ಭಾಷೆಗಳಲ್ಲಿ ಕೂಡ ಪ್ಯಾನ್ ವರ್ಲ್ಡ್ ಸಿನಿಮಾ ಆಗಿ ಬಿಡುಗಡೆ ಮಾಡಲಾಗುತ್ತಿದೆ. ಸಂಭಾವಿತ ಮೂರನೇ ಮಹಾಯುದ್ಧದ ಕಲ್ಪನೆಯೊಂದಿಗೆ ಮೂಡಿಬರುತ್ತಿರುವ ಈ ಚಿತ್ರ ಈಗಾಗಲೇ ಭಾರಿ ಸುದ್ದಿಯಾಗುತ್ತಿದೆ.ಈ ಚಿತ್ರದ ನಂತರ ನಾಗ್ ಅಶ್ವಿನ್ ಕೂಡ ಪ್ಯಾನ್ ಇಂಡಿಯಾ ನಿರ್ದೇಶಕರಾಗುವ ಸಾಧ್ಯತೆಗಳಿವೆ. ಒಟ್ಟಾರೆ ದಕ್ಷಿಣದ ನಿರ್ದೇಶಕರು ತಮ್ಮ ಮೇಕಿಂಗ್ ಮೂಲಕ ಪ್ಯಾನ್ ಇಂಡಿಯಾ ನಿರ್ದೇಶಕರಾಗಿ ತಮ್ಮ ತಮ್ಮ ಭಾಷೆಯ ಚಿತ್ರಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ.

    English summary
    The trio are the ones who have taken South cinema to international standards. Pan India cinema means presence across the nation.
    Thursday, May 19, 2022, 9:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X