twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡದಲ್ಲಿ ಬಿಡುಗಡೆಯಾದ ಮೊದಲ ಐದು ಟಾಕಿ ಚಿತ್ರಗಳು ಯಾವುವು ಗೊತ್ತೆ?

    |

    ಕನ್ನಡ ಸಿನಿಮಾರಂಗದಲ್ಲಿ ಅನೇಕ ಕಲಾವಿದರು, ತಂತ್ರಜ್ಞರು ದಶಕಗಳಿಂದ ಕಲಾ ಸೇವೆಯನ್ನು ಮಾಡಿಕೊಂಡು ಬಂದಿದ್ದಾರೆ. ಕನ್ನಡ ಸಿನಿಮಾರಂಗ ಇದುವರೆಗೆ ಸಾವಿರಾರು ಕಲಾಮುತ್ತುಗಳನ್ನು ಪಡೆದು ಧನ್ಯವಾಗಿದೆ. ಸಾವಿರಾರು ತಂತ್ರಜ್ಞರು, ಸಾಹಿತಿಗಳು, ಚಿತ್ರಕಥೆಗಾರರು, ಕಲಾವಿದರು ಕನ್ನಡ ಸಿನಿಮಾರಂಗಕ್ಕೆ ಸರಿ ಸುಮಾರು 90 ವರ್ಷಗಳಿಂದ ಅನನ್ಯವಾದ ಕಲಾಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ ಮತ್ತು ಸಿನಿಮಾರಂಗವನ್ನು ಬೆಳೆಸಿದ್ದಾರೆ. ಅದರಲ್ಲೂ ಕನ್ನಡ ಸಿನಿಮಾರಂಗ ಅಂಬೆಗಾಲು ಇಡುತ್ತಿದ್ದ ಆರಂಭದ ದಿನಗಳಲ್ಲಿ (1930-60) ತಮ್ಮ ಆಸ್ತಿಪಾಸ್ತಿಯನ್ನು ಮಾರಿಕೊಂಡು, ಅನೇಕ ತರದ ಅವಮಾನಗಳನ್ನು ಸಹ ಎದುರಿಸಿ ಸಿನಿಮಾಗಳನ್ನು ನಿರ್ಮಾಣ ಮಾಡುವ ಮೂಲಕ ಕನ್ನಡ ಸಿನಿಮಾರಂಗವನ್ನು ಬೆಳೆಸುವ ಪ್ರಯತ್ನವನ್ನು ಮಾಡಿದ್ದಾರೆ. ಅಂದಿನವರ ಸತತ ಶ್ರಮ ಮತ್ತು ಪ್ರಯತ್ನದಿಂದಲೇ ಕನ್ನಡ ಸಿನಿಮಾರಂಗ ಇಂದು ಅಗಾಧವಾಗಿ ಬೆಳೆದು ನಿಂತಿದೆ.

    ಇಂದು ಕನ್ನಡ ಸಿನಿಮಾ ರಂಗ ಸಾವಿರ ಕೋಟಿ ಕ್ಲಬ್ ಸೇರಿರಬಹುದು. ಇಂದು ನೂರಾರು ಕೋಟಿ ವೆಚ್ಚದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ನಿರ್ಮಾಣ ಕೂಡ ನಡೆಯುತ್ತಿದೆ. ಇಂದು ಕಲಾವಿದರು- ತಂತ್ರಜ್ಞರು ಕೋಟ್ಯಂತರ ರೂಪಾಯಿಗಳ ಸಂಭಾವನೆ ಕೂಡ ಪಡೆಯುತ್ತಿದ್ದಾರೆ. ಅದೇ 1930-70 ಈ ನಾಲ್ಕು ದಶಕಗಳನ್ನು ನಾವು ಪರಿಶೀಲಿಸಿದರೆ ಅಂದಿನ ಅನೇಕ ಕಲಾವಿದರಿಗೆ, ತಂತ್ರಜ್ಞರಿಗೆ ಒಪ್ಪತ್ತಿನ ಊಟಕ್ಕೂ ಕೂಡ ಕಷ್ಟಕರವಾಗಿತ್ತು. ಆದರೂ ಅವರೆಲ್ಲ ತಮ್ಮಕಷ್ಟ ಮತ್ತು ನೋವಿನ ಮಧ್ಯೆ ಕೂಡ ಅನನ್ಯವಾದ ಕಲಾಸೇವೆಯನ್ನು ಕನ್ನಡ ಸಿನಿಮಾ ರಂಗಕ್ಕೆ ಮಾಡಿದ್ದಾರೆ.

    ಕನ್ನಡದಲ್ಲಿ ಮೊದಲ ಟಾಕಿ ಚಿತ್ರ 1934 ರಲ್ಲಿ ಬಿಡುಗಡೆಯಾಯಿತು. ಅಲ್ಲಿಂದ ಇಲ್ಲಿಯವರೆಗೆ ಸಾವಿರಾರು ಚಿತ್ರಗಳು ಬಿಡುಗಡೆಯಾಗಿವೆ. ರಾಷ್ಟ್ರೀಯ -ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಕೂಡ ಪಡೆದಿದೆ. ಕೆಲವೊಂದು ಚಿತ್ರಗಳು ಐತಿಹಾಸಿಕ ದಾಖಲೆಗಳನ್ನು ಬಾಕ್ಸಾಫೀಸ್ ನಲ್ಲಿ ತಮ್ಮ ಹೆಸರಿಗೆ ಬರೆದುಕೊಂಡಿವೆ. ಆದರೆ ಕನ್ನಡ ಸಿನಿಮಾರಂಗದ ಮೊದಲ ಐದು ಟಾಕಿ ಚಿತ್ರಗಳು ಯಾವುವು? ಅವುಗಳ ನಿರ್ಮಾಣ ಯಾವ ಸಮಯದಲ್ಲಿ ಆಯಿತು? ಇದರ ಪೂರ್ಣ ವಿವರಗಳು ಇಲ್ಲಿದೆ.

    ಮೊಟ್ಟ ಮೊದಲ ಕನ್ನಡ ಚಿತ್ರ 'ಸತಿಸುಲೋಚನ'

    ಮೊಟ್ಟ ಮೊದಲ ಕನ್ನಡ ಚಿತ್ರ 'ಸತಿಸುಲೋಚನ'

    1934 ರಲ್ಲಿ ಬಿಡುಗಡೆಯಾದ 'ಸತಿಸುಲೋಚನ' ಕನ್ನಡದ ಮೊಟ್ಟ ಮೊದಲ ಟಾಕಿ ಚಿತ್ರ. ಆದರೆ ಇದಕ್ಕೂ ಮೊದಲೇ ' ಭಕ್ತ ಧ್ರುವ' ಶೂಟಿಂಗ್ ಆರಂಭಿಸಿತ್ತು, ಆದರೆ 'ಸತಿಸುಲೋಚನ' ಮೊದಲು ಬಿಡುಗಡೆಯಾಯಿತು. ಈ ಚಿತ್ರದ ಮೂಲಕ ಸುಬ್ಬಯ್ಯನಾಯ್ಡು ಕನ್ನಡದ ಮೊಟ್ಟ ಮೊದಲ ನಾಯಕನಟನಾಗಿ ಮತ್ತು ತ್ರಿಪುರಾಂಬ ಮೊಟ್ಟಮೊದಲ ಕನ್ನಡ ಸಿನಿಮಾರಂಗದ ನಾಯಕನಟಿಯಾಗಿ ಕನ್ನಡ ಸಿನಿಮಾ ರಂಗದಲ್ಲಿ ಇತಿಹಾಸವನ್ನು ಬರೆದರು. ಮಾರ್ಚ್ 3, 1934 ರಲ್ಲಿ ಬಿಡುಗಡೆಯಾದ 'ಸತಿಸುಲೋಚನ' ಕನ್ನಡದ ಮೊಟ್ಟಮೊದಲ ಟಾಕಿ ಸಿನಿಮಾ ಆಯಿತು.

    ಮೊದಲ ಸಿನಿಮಾ ನಿರ್ದೇಶಕ ವೈ. ವಿ.ರಾವ್

    ಮೊದಲ ಸಿನಿಮಾ ನಿರ್ದೇಶಕ ವೈ. ವಿ.ರಾವ್

    ಸತಿ ಸುಲೋಚನ ರಾಮಾಯಣದಲ್ಲಿ ಬರುವಂತಹ ಒಂದು ಪಾತ್ರ. ಲಂಕಾಧೀಶ್ವರ ರಾವಣನ ಮಗ ಇಂದ್ರಜಿತ್ ನ ಹೆಂಡತಿ ಸುಲೋಚನ. ಸತಿ ಶಿರೋಮಣಿಯಾದ ಸುಲೋಚನ ತನ್ನ ಪ್ರಿಯ ಪತಿ ಇಂದ್ರಜಿತ್, ಲಕ್ಷ್ಮಣನ ಕೈಯಲ್ಲಿ ಕೊಲ್ಲಲ್ಪಟ್ಟ ಮೇಲೆ ತನ್ನ ಪ್ರಿಯ ಪತಿಯ ಅಗಲಿಕೆಯ ನೋವನ್ನು ತಡೆಯಲಾಗದೆ ಇಂದ್ರಜಿತ್ ಚಿತೆಗೆ ಅವಳು ಪ್ರವೇಶಮಾಡಿ ಸತಿಸಹಗಮನದ ಪದ್ಧತಿಯಲ್ಲಿ ತನ್ನನ್ನು ತಾನು ಅರ್ಪಿಸಿಕೊಳ್ಳುತ್ತಾಳೆ. ಈ ಕಥಾಹಂದರವನ್ನು ಹೊಂದಿದ ಚಿತ್ರವನ್ನು ವೈ.ವಿ. (ಯರಗುಡಿಪತಿ ವರದ) ರಾವ್ ನಿರ್ದೇಶನ ಮಾಡಿದರು. ಹೀಗಾಗಿಯೇ ಕನ್ನಡದ ಮೊಟ್ಟ ಮೊದಲ ನಿರ್ದೇಶಕರು ಎಂಬ ಹೆಗ್ಗಳಿಕೆಗೆ ವೈ. ವಿ. ರಾವ್ ಪಾತ್ರರಾಗಿದ್ದಾರೆ. ಈ ಚಿತ್ರಕ್ಕೆ ಆರ್.ನಾಗೇಂದ್ರರಾವ್ ಅವರ ಸಂಗೀತವಿದೆ. ಹೀಗಾಗಿಯೇ ಮೊದಲ ಕನ್ನಡ ಸಂಗೀತ ನಿರ್ದೇಶಕರು ಎಂಬ ಪಟ್ಟ ಆರ್. ನಾಗೇಂದ್ರರಾವ್ ಹೆಸರಿಗೆ ಸಲ್ಲುತ್ತದೆ.

    ಚಿತ್ರೀಕರಣ ಆರಂಭಿಸಿದ ಮೊದಲ ಚಿತ್ರ 'ಭಕ್ತ ಧ್ರುವ'

    ಚಿತ್ರೀಕರಣ ಆರಂಭಿಸಿದ ಮೊದಲ ಚಿತ್ರ 'ಭಕ್ತ ಧ್ರುವ'

    'ಸತಿ ಸುಲೋಚನ' ಕನ್ನಡದ ಮೊದಲ ಟಾಕಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು, ಅದಕ್ಕಿಂತ ಮೊದಲೇ ಚಿತ್ರೀಕರಣ ಆರಂಭಿಸಿದ್ದು ಮಾತ್ರ 'ಭಕ್ತಧ್ರುವ'. ಮೊಟ್ಟ ಮೊದಲ ಟಾಕಿ ಚಿತ್ರದ ಅಡಿಪಾಯ ಕನ್ನಡ ಸಿನಿಮಾರಂಗದಲ್ಲಿ ಬಿದ್ದಿದ್ದೆ 'ಭಕ್ತಧ್ರುವ 'ಮೂಲಕ. ವಿಷ್ಣುವಿನ ಪರಮಭಕ್ತನಾದ ಬಾಲಕ ಧ್ರುವನ ಜೀವನ ಕಥಾವಸ್ತುವೇ 'ಭಕ್ತ ಧ್ರುವ'. ವಿಷ್ಣು, ಧ್ರುವನ ಭಕ್ತಿಗೆ ಮೆಚ್ಚಿ ಶಾಶ್ವತವಾಗಿ ತಾರಾಮಂಡಲದಲ್ಲಿ ವಿರಾಜಮಾನನಾಗುವಂತೆ ನೀಡಿದ ವರದಂತೆ ಇಂದಿಗೂ ಕೂಡ ಧ್ರುವ, ನಕ್ಷತ್ರವಾಗಿ ತಾರಾಮಂಡಲದಲ್ಲಿ ಬೆಳಗುತ್ತಿದ್ದಾನೆ. 'ಭಕ್ತ ಧ್ರುವ' ಕಥಾವಸ್ತು ಮೂಲತಃ ಮರಾಠಿ ರತ್ನಾವಳಿ ನಾಟಕ ಕಂಪನಿ ಪ್ರಸ್ತುತ ಪ್ರಸ್ತುತಪಡಿಸುತ್ತಿದ್ದ 'ಭಕ್ತಧ್ರುವ' ರಂಗಪ್ರಯೋಗದ ಆಧಾರವಾಗಿತ್ತು.ಪಾರ್ಶ್ವನಾಥ ಅಲ್ಟೇಕರ್ ನಿರ್ದೇಶನದ ಈ ಚಿತ್ರದಲ್ಲಿ ಮಾಸ್ಟರ್ ಮುತ್ತು ಧ್ರುವನ ಪಾತ್ರ ನಿರ್ವಹಿಸಿದ್ದರು. ಇನ್ನು ಈ ಚಿತ್ರಕ್ಕೆ ಪ್ರಸಿದ್ಧ ಸಾಹಿತ್ಯಗಳಾದ ದೇವುಡು ನರಸಿಂಹಸ್ವಾಮಿ ಶಾಸ್ತ್ರಿಗಳು ಚಿತ್ರಕಥೆಯನ್ನು ಬರೆದಿರುತ್ತಾರೆ. 'ಭಕ್ತ ಧ್ರುವ' ಎಪ್ರಿಲ್ 1, 1934 ರಂದು ಬಿಡುಗಡೆಯಾಯಿತು.

    ಗಳಿಕೆಯಲ್ಲಿ ಹೊಸ ದಾಖಲೆ ಕಂಡಿದ್ದ 'ಸದಾರಮೆ'

    ಗಳಿಕೆಯಲ್ಲಿ ಹೊಸ ದಾಖಲೆ ಕಂಡಿದ್ದ 'ಸದಾರಮೆ'

    'ಸದಾರಮೆ' ಎರಡು ಕಾರಣಕ್ಕೆ ಅತ್ಯಂತ ಪ್ರಸಿದ್ಧವಾಗಿದೆ. ಒಂದು; ಸದಾರಮೆ ಅತ್ಯಂತ ಜನಪ್ರಿಯ ಹಾಸ್ಯ ನಾಟಕಗಳಲ್ಲಿ ಒಂದು. ಇನ್ನೊಂದೆಡೆ ಸದಾರಮೆ ಚಿತ್ರ ಕೂಡ ಅಷ್ಟೇ ಜನಪ್ರಿಯವಾಗಿ ಜನಮಾನಸದಲ್ಲಿದೆ. ಇಂದಿಗೂ ಕೂಡ 'ಸದಾರಮೆ' ನಾಟಕವನ್ನು ಅನೇಕ ಕಡೆ ಪ್ರದರ್ಶನ ಮಾಡುತ್ತಲೇ ಬಂದಿದ್ದಾರೆ. 'ಸದಾರಮೆ' ಚಿತ್ರ ಮೂಲದಲ್ಲಿ ಮರಾಠಿ ರಂಗಪ್ರಯೋಗ 'ಮಿತ್ರ' ನಾಟಕವಾಗಿದೆ.1935 ರಲ್ಲಿ ಬಿಡುಗಡೆಯಾದ ಸದಾರಮೆ ಚಿತ್ರವನ್ನು ನಿರ್ದೇಶನ ಮಾಡಿದವರು ರಾಜಾ ಚಂದ್ರಶೇಖರ್. ಇನ್ನು ಈ ಚಿತ್ರದ ನಿರ್ಮಾಪಕರಾದ ಗುಬ್ಬಿ ವೀರಣ್ಣ ಸ್ವತಃ ಈ ಚಿತ್ರದಲ್ಲಿ ಪ್ರಮುಖ ಪಾತ್ರ 'ಕಳ್ಳ' ಪಾತ್ರಧಾರಿಯಾಗಿ ನಟಿಸಿದ್ದಾರೆ. K. ಅಶ್ವತ್ಥಮ್ಮನವರು ಸದಾರಮೆಯ ಪಾತ್ರದಲ್ಲಿ ಮಿಂಚಿದ್ದರು. ಹಾಸ್ಯಭರಿತವಾದ ಈ ಚಿತ್ರಕ್ಕೆ ಪ್ರಸಿದ್ಧ ಸಾಹಿತಿಗಳಾದ ದೇವುಡು ನರಸಿಂಹ ಶಾಸ್ತ್ರಿಗಳು ಚಿತ್ರಕತೆಯನ್ನು ಬರೆದಿದ್ದಾರೆ. 1935ರಲ್ಲಿ ತೆರೆಗೆ ಬಂದ ಈ ಚಿತ್ರ ಕನ್ನಡದ ಮೂರನೇ ಟಾಕಿ ಚಿತ್ರವಾಗಿತ್ತು. ಚಿತ್ರ ಭಾರಿ ಗಳಿಕೆಯನ್ನು ಕಂಡಿತ್ತು ಹೀಗಾಗಿದೆ ಚಿತ್ರವನ್ನು ತಮಿಳಿನಲ್ಲಿ "ನವೀನ ಸದಾರಮೆ' ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಲಾಯಿತು. 1956 ಮತ್ತೊಮ್ಮೆ 'ಸದಾರಮೆ' ಯನ್ನು ಗುಬ್ಬಿವೀರಣ್ಣ ನಿರ್ಮಿಸಿದರು.'ಸದಾರಮೆ'ಯ ಅಪಾರ ಯಶಸ್ಸಿನಿಂದ ಪ್ರೇರಿತರಾಗಿದ್ದ ಗುಬ್ಬಿವೀರಣ್ಣನವರು 1956 ರಲ್ಲಿ ಮತ್ತೊಮ್ಮೆ 'ಸದಾರಮೆ' ಚಿತ್ರವನ್ನು ನಿರ್ಮಿಸಿದರು. 1956 ರಲ್ಲಿ ಮತ್ತೆ ಸದಾರಮೆ ಪುನರ್ ನಿರ್ಮಾಣ ಮಾಡಲಾದ ಈ ಚಿತ್ರದಲ್ಲಿ ಕಲ್ಯಾಣಕುಮಾರ್, ಸಾಹುಕಾರ್ ಜಾನಕಿ, ಗುಬ್ಬಿವೀರಣ್ಣ ಪ್ರಮುಖ ಪಾತ್ರಗಳನ್ನು ವಹಿಸಿದ್ದರು. ಈ ಚಿತ್ರ ಕೂಡ ಬಾಕ್ಸಾಫೀಸಿನಲ್ಲಿ ಅದ್ಭುತವಾದ ಯಶಸ್ಸನ್ನು ಕಂಡಿತ್ತು.

    ಮೊದಲ ಸೋಶಿಯಲ್ ಸಿನಿಮಾ 'ಸಂಸಾರ ನೌಕೆ'

    ಮೊದಲ ಸೋಶಿಯಲ್ ಸಿನಿಮಾ 'ಸಂಸಾರ ನೌಕೆ'

    ಪೌರಾಣಿಕ ಮತ್ತು ಐತಿಹಾಸಿಕ ಕಥಾವಸ್ತುಗಳನ್ನು ಮಾತ್ರವೇ ಸಿನಿಮಾಗಳಾಗಿ ಮಾಡುತ್ತಿದ್ದ ಆಗಿನ ಕಾಲದಲ್ಲಿ ಸಾಮಾಜಿಕ ಅಂಶಗಳಿಂದ ತೆರೆಗೆ ಬಂದ ಮೊದಲ ಕನ್ನಡ ಚಿತ್ರ 'ಸಂಸಾರ ನೌಕೆ'. ಹೆಚ್ ಎಲ್ ಎನ್ ಸಿಂಹ ನಿರ್ದೇಶನದ ಈ ಚಿತ್ರದಲ್ಲಿ ಬಿ.ಆರ್. ಪಂತುಲು, ಡಿಕ್ಕಿ ಮಾಧವರಾವ್, ರಾಜಮ್ಮ ಪ್ರಮುಖ ತಾರಾಗಣದಲ್ಲಿದ್ದರು. ಇದು ಕನ್ನಡದ ಮೊಟ್ಟ ಮೊದಲ ಸಾಮಾಜಿಕ ಚಲನಚಿತ್ರವೆಂಬ ಹೆಗ್ಗಳಿಕೆಯನ್ನು ಹೊಂದಿದೆ. ತಾತನ (ಡಿಕ್ಕಿ ಮಾಧವರಾವ್)ಇಚ್ಚೆಗೆ ವಿರುದ್ಧವಾಗಿ ಮೊಮ್ಮಗ ಸುಂದರ್ (ಪಂತುಲು) ಸರಳನನ್ನು (ರಾಜಮ್ಮ) ಮದುವೆಯಾಗಿ ಮನೆಯಿಂದ ಹೊರ ನಡೆಯುತ್ತಾನೆ. ಮಾವನ ಮನೆಗೆ ಹೋಗಿ ಸಂಸಾರ ಹೂಡುವ ಸುಂದರ್ ಅಲ್ಲಿ ಅನುಭವಿಸುವ ಯಾತನೆ, ಆನಂತರ ತಾತನ ತನ್ನ ಮೊಮ್ಮಗನಿಗೆ ಗೊತ್ತು ಮಾಡಿದ್ದ ಸುಶೀಲಾಳ ಕೊಲೆಯಾಗುತ್ತದೆ. ಈ ಕೊಲೆಯ ಹಣೆಪಟ್ಟಿ ಸುಂದರ ತಲೆಗೆ ಕಟ್ಟಲಾಗುತ್ತದೆ. ಇದರಿಂದ ಸುಂದರ ಹೇಗೆ ಹೊರಬರುತ್ತಾನೆ ಎಂಬುವುದೇ ಕಥಾವಸ್ತು. 1936 ರಲ್ಲಿ ಬಿಡುಗಡೆಯಾದ ಈ ಚಿತ್ರ ಕನ್ನಡ ಸಿನಿಮಾರಂಗದ ನಾಲ್ಕನೆಯ ಚಿತ್ರವಾಗಿದ್ದು, ಅಂದಿನ ಯಶಸ್ವಿ ಚಿತ್ರಗಳಲ್ಲಿ ಒಂದಾಗಿತ್ತು.

    ಪ್ರೇಕ್ಷಕರಿಗೆ ಅಷ್ಟಾಗಿ ರುಚಿಸದ 'ಚಿರಂಜೀವಿ'

    ಪ್ರೇಕ್ಷಕರಿಗೆ ಅಷ್ಟಾಗಿ ರುಚಿಸದ 'ಚಿರಂಜೀವಿ'

    1936 ರಲ್ಲಿ 'ಸಂಸಾರ ನೌಕ' ಚಿತ್ರ ಭಾರಿ ಯಶಸ್ಸನ್ನು ಕಂಡಿತ್ತು. ಆದರೆ ಇದೇ ವರ್ಷ ಬಿಡುಗಡೆಯಾದ ಮತ್ತೊಂದು ಚಿತ್ರ 'ಚಿರಂಜೀವಿ' ಚಲನಚಿತ್ರ ಪ್ರೇಕ್ಷಕರಿಗೆ ಅಷ್ಟಾಗಿ ರುಚಿಸಲಿಲ್ಲ. ಚಿರಂಜೀವಿ ಕನ್ನಡದಲ್ಲಿ ಬಿಡುಗಡೆಯಾದ ಐದನೇ ಚಿತ್ರ.ಈ ಚಿತ್ರದ ನಿರ್ದೇಶಕರು ಕೂಡ ಸಾಮಾನ್ಯ ವ್ಯಕ್ತಿಯಾಗಿರಲಿಲ್ಲ. ಹಿಂದಿ ಸಿನಿಮಾರಂಗದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದ K.P. ಭಾವೆ ಈ ಚಿತ್ರವನ್ನು ನಿರ್ದೇಶಿಸಿದ್ದರು. 'ಶಾಹ್- ಇ -ಜಂಗಲ್', 'ಭಗವಾ ಝೀನಾ, 'ಗೋಡಾ ಬಂಗಲ್' ಅಂತಹ ಯಶಸ್ವಿ ಚಿತ್ರಗಳನ್ನು ಹಿಂದಿಯಲ್ಲಿ ನಿರ್ದೇಶನ ಮಾಡಿದ್ದರು. ಇನ್ನು 'ಚಿರಂಜೀವಿ' ಚಿತ್ರದಲ್ಲಿ ದೇವುಡು, ಶಾರದಾ ಮುಖ್ಯ ಭೂಮಿಕೆಯಲ್ಲಿದ್ದರು. 'ಚಿರಂಜೀವಿ' ಚಿತ್ರ ಅಂತಹ ಯಶಸ್ವಿ ಕಾಣದ ಕಾರಣಕ್ಕೋ, ಏನೋ ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಕೂಡ ಸಿಗುವುದಿಲ್ಲ.

    English summary
    Which are the first five talkie films released in kannada? first Kannada talkie film was released in the year 1934.
    Saturday, May 28, 2022, 10:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X