»   »  ‘ಅನು’ಕ್ಷಣ ತವಕ ತಲ್ಲಣ!

‘ಅನು’ಕ್ಷಣ ತವಕ ತಲ್ಲಣ!

Subscribe to Filmibeat Kannada
Anu movie producer Balu
'ಅನು" ಚಿತ್ರದ ನಿರ್ಮಾಪಕ ಕಂ ನಟ ಬಾಲು ಮೂಗು ತಿಕ್ಕಿಕೊಳ್ಳುತ್ತಾ ನಿಂತಿದ್ದರು. ಕಣ್ಣಲ್ಲಿ ತುಂಬು ವಿಷಾದ. ಮೊಬೈಲನ್ನು ಪದೇಪದೇ ಕಿವಿಗಿಟ್ಟು ಅವು ಕೆಂಪಾಗಿದ್ದವು. ಥಿಯೇಟರ್ ದಕ್ಕಿಸಿಕೊಡುವ ವಿಷಯದಲ್ಲಿ ಅವರು ನಂಬಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು 'ನಾಟ್‌ರೀಚಬಲ್" ಆಗಿದ್ದುದೇ ಅವರ ಬೇಗುದಿಗೆ ಕಾರಣ.

ಕಳೆದ ವಾರ ತ್ರಿವೇಣಿ ಚಿತ್ರಮಂದಿರದಲ್ಲಿ ನಿಮ್ಮ ಸಿನಿಮಾ ರಿಲೀಸ್ ಮಾಡ್ಕೊಳ್ಳಿ ಅಂತ ಚೇಂಬರ್ ಹೇಳಿದೆ. ಆಮೇಲೆ ಇದ್ದಕ್ಕಿದ್ದಂತೆ ತ್ರಿವೇಣಿ ಆಗೊಲ್ಲ, ಅಭಿಯನ್ ಕೊಡಿಸ್ತೀವಿ ಅಂದಿದೆ. ತ್ರಿವೇಣಿ ಸಿಕ್ಕರೆ ಒಳ್ಳೆಯದು ಅನ್ನೋದು ಬಾಲು ವಿನಂತಿ. ಅದಕ್ಕೆ ಚೇಂಬರ್ ದೀರ್ಘ ಕಾಲ ಯೋಚಿಸಿ ಹೇಳಿದ್ದು- ಫಸ್ಟ್ ಶೋ ಹಾಗೂ ಸೆಕೆಂಡ್ ಶೋ ಬೇಕಿದ್ದರೆ ಕೊಡ್ತೀವಿ. ಬೆಳಗಿನ ಎರಡು ಆಟ 'ರಾಕಿ" ಚಿತ್ರಕ್ಕೇ ಮೀಸಲು- ಅಂತ. ಪರವಾಗಿಲ್ಲ, ಅಭಿನಯ್ ಚಿತ್ರಮಂದಿರವೇ ಇರಲಿ ಅಂತ ಬಾಲು ತೃಪ್ತಿಪಟ್ಟುಕೊಂಡಿದ್ದಾರೆ. ಯಾವುದಕ್ಕೂ ಮಂಗಳವಾರ ಮಧ್ಯಾಹ್ನ ಫೋನ್ ಮಾಡಿ ಅಂತ ಮಂಡಳಿಯ ಅಧ್ಯಕ್ಷರಾದ ಜಯಮಾಲ ಸೂಚಿಸಿದ್ದಾರೆ. ತಮ್ಮ ಬೆಂಬಲ ಇದ್ದೇ ಇರುತ್ತದೆ ಅಂತ ರಾಕ್‌ಲೈನ್ ವೆಂಕಟೇಶ್ ಕೂಡ ಧೈರ್ಯ ತುಂಬಿದ್ದಾರೆ. ಅವರ ಮಾತಿನಿಂದ ಬಾಲು ಆಗ ನಿರಾಳವಾಗಿದ್ದು ನಿಜ.

ಸಮಸ್ಯೆ ಶುರುವಾಗಿದ್ದು ಮಂಗಳವಾರ ಮಧ್ಯಾಹ್ನದಿಂದ. ಜಯಮಾಲ ಅವತ್ತಿನಿಂದ ಬಾಲು ಫೋನ್ ಮಾಡಿದರೆ ಮೊಬೈಲ್ ಎತ್ತುತ್ತಿಲ್ಲ. ರಾಕ್‌ಲೈನ್ ಕೂಡ ನಾಟ್ ಆನ್ಸರಿಂಗ್. ಗುರುವಾರ ಬೆಳಿಗ್ಗೆವರೆಗೆ ನೋಡಿದ ಬಾಲು ಖುದ್ದು ಅಭಿನಯ್ ಚಿತ್ರಮಂದಿರಕ್ಕೆ ಹೋಗಿ ಮಂಡಳಿ ಕೊಟ್ಟ ಪತ್ರ ತೋರಿಸಿದ್ದಾರೆ. ಆ ಪತ್ರವನ್ನು ಗಂಭೀರವಾಗಿ ಪರಿಗಣಿಸದ ಮಾಲೀಕ ಪಾಲ್ ಹಾಕಿದ್ದು ಒಂದೇ ಶರತ್ತು- ಮೂರು ದಿನ ನಿಮ್ಮ ಸಿನಿಮಾ ಅರುವತ್ತು ಶೇಕಡಾ ಕಲೆಕ್ಷನ್ ಮಾಡಬೇಕು. ಇಲ್ಲದಿದ್ದರೆ ಎತ್ತಿಹಾಕುತ್ತೀವಿ. ಅದಕ್ಕೆ ಒಪ್ಪಿ, ನೀವು ಬರೆದುಕೊಟ್ಟರೆ ಸಿನಿಮಾ ರಿಲೀಸ್. ಅದರ್‌ವೈಸ್ ಬೇರೆ ಥಿಯೇಟರ್ ನೋಡ್ಕಳ್ಳಿ! ವಿಧಿಯಿಲ್ಲದೆ ಬಾಲು ಅದಕ್ಕೂ ಒಪ್ಪಿ, ಬರೆದುಕೊಟ್ಟು ಬಂದರು.

'ಅನು" ಸಿನಿಮಾ ಓಡುವ ಕುರಿತು ಗಾಂಧಿನಗರದಲ್ಲಿ ಕೆಲವರಿಗೆ ವಿಶ್ವಾಸವಿದೆ. ಅದನ್ನು ತ್ರಿವೇಣಿ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುತ್ತಾರೆ ಎಂದಿಟ್ಟುಕೊಳ್ಳಿ. ಮುಂದಿನವಾರ ಅಲ್ಲಿ ಚಿನ್ನೇಗೌಡರ ಮಗ ಶ್ರೀಮುರಳಿ ನಾಯಕನಾಗಿರುವ 'ಶಿವಮಣಿ" ಬಿಡುಗಡೆಯಾಗಬೇಕು. ಅದಕ್ಕೆ 'ಅನು" ಕಂಟಕವಾದೀತೆಂಬ ಭಯ. ಸಿನಿಮಾ ಕಚ್ಚಿಕೊಂಡರೆ ಶ್ರೀಮುರಳಿ ಸಿನಿಮಾಗೆ ಥಿಯೇಟರ್ ಸಮಸ್ಯೆ ಬರುತ್ತದಲ್ಲ! ಅದಕ್ಕೇ ತ್ರಿವೇಣಿ ಚಿತ್ರಮಂದಿರವನ್ನೇ ಬಾಲುಗೆ ಮಂಡಳಿ ಬಿಟ್ಟುಕೊಟ್ಟಿಲ್ಲವೆಂಬುದು ಸ್ಪಷ್ಟ.

ಕನ್ನಡ ಚಿತ್ರರಂಗಕ್ಕೆ 75 ವರ್ಷ ಸಂದ ಸಂದರ್ಭವನ್ನು ಆಚರಿಸುವ ಸಿದ್ಧತೆ ಮಾಡುತ್ತಿರುವ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಪದಾಧಿಕಾರಿಗಳು ಹೇಗೆಲ್ಲಾ ವರ್ತಿಸುತ್ತಿದ್ದಾರೆ ಅನ್ನೋದಕ್ಕೆ ಈ ಘಟನೆ ಉದಾಹರಣೆಯಷ್ಟೆ. ಉದ್ಯಮದ ಯಾರ ಸಹವಾಸ, ಪರಿಚಯವೂ ಇಲ್ಲದ ಇಂಥವರ ಹಣೆಬರಹವೇ ಇಷ್ಟಾಗಿಬಿಟ್ಟಿದೆ. ಅಂದಹಾಗೆ, 'ಅನು" ಸಿನಿಮಾ ಒಂದು ಒಳ್ಳೆಯ ಪ್ರಯತ್ನವಂತೂ ಹೌದು. ಪ್ರೇಕ್ಷಕರು ಹೋಗಿ ನೋಡಿ, ವಾಣಿಜ್ಯ ಮಂಡಳಿಯವರಿಗೆ ಬುದ್ಧಿ ಕಲಿಸಬೇಕು!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada