»   » ಶ್ರೀನಿವಾಸಮೂರ್ತಿವಿರುದ್ಧದ ಆರೋಪ ಸಾಬೀತು

ಶ್ರೀನಿವಾಸಮೂರ್ತಿವಿರುದ್ಧದ ಆರೋಪ ಸಾಬೀತು

Posted By:
Subscribe to Filmibeat Kannada
Actor Srinivasa Murthy
ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಶ್ರೀನಿವಾಸ ಮೂರ್ತಿ ಅವರ ಮೇಲ್ಮನವಿ ಅರ್ಜಿಯನ್ನು ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ಶುಕ್ರವಾರ ವಜಾಗೊಳಿಸಿದೆ. ಈ ಮೂಲಕ 6ನೇ ಎಸಿಎಂಎಂ ನ್ಯಾಯಾಲಯ ಶ್ರೀನಿವಾಸಮೂರ್ತಿ ಅವರಿಗೆ ವಿಧಿಸಿದ್ದ ಶಿಕ್ಷೆಯನ್ನು ಸೆಷನ್ಸ್ ನ್ಯಾಯಾಲಯ ಎತ್ತಿಹಿಡಿದಿದೆ. ಈ ಸಂಬಂಧ ಶ್ರೀನಿವಾಸ ಮೂರ್ತಿ ಅವರು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. "ಬಾಲ ನೌಕೆ''(1987) ಚಿತ್ರದ ನಿರ್ಮಾಪಕ, ವಿತರಕ ಹಾಗೂ ನಟ ಮುರಳಿ ಕೃಷ್ಣ ಅವರ ಸಹಿಯನ್ನು ನಕಲು ಮಾಡಿ ಸುಳ್ಳು ಪತ್ರ ಸೃಷ್ಟಿಸಿದ್ದರು ಎಂಬ ಆರೋಪ ಶ್ರೀನಿವಾಸ ಮೂರ್ತಿ ಅವರ ಮೇಲಿತ್ತು.

ತೀರ್ಪು ಹೊರಬಿದ್ದ ಬಳಿಕ ಮಾತನಾಡಿರುವ ಶ್ರೀನಿವಾಸಮೂರ್ತಿ, "ನಾನು ನಿರಪರಾಧಿ. ನನ್ನ ವಿರುದ್ಧ ಆಗದವರು ನಡೆಸಿದ ಒಳಸಂಚು ಇದು. ನ್ಯಾಯಕ್ಕಾಗಿ ಹೈಕೋರ್ಟ್ ಮೆಟ್ಟಿಲೇರುವುದಾಗಿ" ಹೇಳಿದ್ದಾರೆ. ಶ್ರೀನಿವಾಸಮೂರ್ತಿ ಅವರ ವಿರುದ್ಧದ ಕೇಸನ್ನು ತ್ವರಿತ ನ್ಯಾಯಾಲಯ ಶುಕ್ರವಾರ ಎತ್ತಿಹಿಡಿದಿತ್ತು. ಈ ಸಂಬಂಧ ಅವರು ಸೂಕ್ತ ನ್ಯಾಯಕ್ಕಾಗಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಿದ್ದಾರೆ.

ಸದ್ಯಕ್ಕೆ ಶ್ರೀನಿವಾಸಮೂರ್ತಿ ಅವರು ಮೈಸೂರಿನಲ್ಲಿ ಚಿತ್ರವೊಂದರ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಘಟನೆಯ ವಿವರಗಳು...1987ರಲ್ಲಿ ಕೆಎನ್ ಆರ್ ಟಿ ಎಂಟರ್ ಪ್ರೈಸಸ್ ಲಾಂಛನದಲ್ಲಿ "ಬಾಲ ನೌಕೆ" ಚಿತ್ರ ನಿರ್ಮಿಸಿತ್ತು. ಈ ಚಿತ್ರದ ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಮುರಳಿಕೃಷ್ಣ ಅವರ ಸಹಿಯನ್ನು ಶ್ರೀನಿವಾಸಮೂರ್ತಿ ನಕಲು ಮಾಡಿದ್ದರು ಎಂದು ಆರೋಪಿಸಲಾಗಿತ್ತು.

ಶ್ರೀನಿವಾಸಮೂರ್ತಿ ಹಾಗೂ ಆತನ ಸ್ನೇಹಿತ, ಪಾಲುದಾರನಾದ ಜಾಫರುಲ್ಲಾ ಒಂದು ಪ್ರದೇಶದ ವಿತರಣೆ ಹಕ್ಕುಗಳನ್ನು ರು.5.25 ಲಕ್ಷಕ್ಕೆ ಪಡೆದಿದ್ದರು. ಮುಂಗಡ ಹಣ ಕೊಟ್ಟು ಉಳಿದ ಬಾಕಿ ಹಣ ರು.3.45 ಲಕ್ಷಗಳನ್ನು ವಿತರಕರಿಂದ ಸಂಗ್ರಹಿಸಿದ ಬಳಿಕ ಕೊಡುವುದಾಗಿ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಆದರೆ ಬಾಕಿ ಹಣವನ್ನು ಶ್ರೀನಿವಾಸಮೂರ್ತಿ ಕೊಡಲಿಲ್ಲ ಎಂದು ಫಿಲ್ಮ್ ಚೇಂಬರ್ ಗೆ ಮುರಳಿಕೃಷ್ಣ ಮೊರೆಹೋದರು. ಮೂರ್ತಿ ಅವರು ಲಾಭಕ್ಕೆ ವಿತರಣೆ ಹಕ್ಕುಗಳನ್ನು ಮಾರಿಕೊಂಡಿದ್ದಾರೆ ಎಂದು ಆರೋಪಿದ್ದರು. ಆದರೆ ಮೂರ್ತಿ ಅವರನ್ನು ಚೇಂಬರ್ ಗೆ ಕರೆಸಿ ಕೇಳಿದಾಗ ತಾವು ಬಾಕಿ ಹಣ ಹಿಂತಿರುಗಿಸಿದ್ದಾಗಿ ದಾಖಲೆಗಳನ್ನು ತೋರಿಸಿದ್ದರು. ತಮ್ಮ ಸಹಿಯನ್ನು ನಕಲು ಮಾಡಿ ಸುಳ್ಳು ದಾಖಲೆಯನ್ನು ಸೃಷ್ಟಿಸಲಾಗಿದೆ ಎಂದು ಮೂರ್ತಿ ವಿರುದ್ಧ ಮುರಳಿಕೃಷ್ಣ ನ್ಯಾಯಾಲಯದಲ್ಲಿ ದಾವಾ ಹೂಡಿದ್ದರು.

ಜುಲೈ 6, 2007ರಲ್ಲಿ 6ನೇ ಎಸಿಎಂಎಂ ನ್ಯಾಯಾಲಯ ನಟ ಶ್ರೀನಿವಾಸಮೂರ್ತಿ ಅವರಿಗೆ ಮೂರು ವರ್ಷಗಳ ಶಿಕ್ಷೆ ಜಾರಿಮಾಡಿತ್ತು. ಬಳಿಕ ಅದನ್ನು ಪ್ರಶ್ನಿಸಿ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಅರ್ಜಿಯನ್ನು ವಜಾಗೊಳಿಸಿರುವ ಸೆಷನ್ಸ್ ನ್ಯಾಯಾಲಯ ಶ್ರೀನಿವಾಸಮೂರ್ತಿ ವಿರುದ್ಧದ ತೀರ್ಪನ್ನು ಎತ್ತಿಹಿಡಿದಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada