»   »  ಗಾಳಿಪಟಕ್ಕೆ ಸಬ್ಸಿಡಿ ಇಲ್ಲ, ಲಂಚ ಸಾಮ್ರಾಜ್ಯಕ್ಕೆ ಜೈ!

ಗಾಳಿಪಟಕ್ಕೆ ಸಬ್ಸಿಡಿ ಇಲ್ಲ, ಲಂಚ ಸಾಮ್ರಾಜ್ಯಕ್ಕೆ ಜೈ!

By: * ಜಯಂತಿ
Subscribe to Filmibeat Kannada

ಗಾಳಿಪಟ, ಇಂತಿ ನಿನ್ನ ಪ್ರೀತಿಯ, ಆಕ್ಸಿಡೆಂಟ್, ಸೈಕೋ ಚಿತ್ರಗಳಿಗೆ ಸಬ್ಸಿಡಿ ಇಲ್ಲ. ಜನಪದ, ಲಡ್ಡುಮುತ್ಯಾ, ಲಂಚ ಸಾಮ್ರಾಜ್ಯ, ಧೀಮಂತ ಮನುಷ್ಯ, ಯುಗಯುಗಗಳೆ ಸಾಗಲಿ ಚಿತ್ರಗಳಿಗೆ ಸಬ್ಸಿಡಿ. ರಾಜ್ಯ ಸರ್ಕಾರ ಕೊಡಮಾಡಲಿರುವ ಸಬ್ಸಿಡಿ ಪಡೆದ ಚಿತ್ರಗಳ ಪಟ್ಟಿ ಮುಖ್ಯಮಂತ್ರಿಗಳ ಸಹಿ ಪಡೆಯಲು ಸಿದ್ಧವಿದೆ. ಅದರಲ್ಲಿ ಇಂಥ ಅನೇಕ ತಮಾಷೆಗಳಾಗಿರುವ ಸುದ್ದಿ ಈಗಾಗಲೇ ಗಾಂಧಿನಗರದ ಗಲ್ಲಿಗಳಲ್ಲಿ ಚಾಲ್ತಿಯಲ್ಲಿದೆ.

'ಗಾಳಿಪಟ"ಕ್ಕೇ ಸಬ್ಸಿಡಿ ಇಲ್ಲವಂತೆ ಎಂಬ ಮಾತಂತೂ ದೊಡ್ಡ ದನಿಯಲ್ಲಿ ಕೇಳುತ್ತಿದೆ. ಈ ಸಲ ಮೂವತ್ತೈದು ಚಿತ್ರಗಳಿಗೆ ತಲಾ ಹತ್ತು ಲಕ್ಷ ರೂಪಾಯಿ ಸಬ್ಸಿಡಿಯನ್ನು ಸರ್ಕಾರ ನೀಡುತ್ತಿದೆ. ಅದು ಜನರೇ ಕೊಟ್ಟಿರುವ ತೆರಿಗೆ ಹಣ ಎಂಬುದು ಮುಖ್ಯ.

ಜನ ಸ್ವೀಕರಿಸದ, ಕನಿಷ್ಠ ಐವತ್ತು ದಿನವೂ ಓಡದ ಸಿನಿಮಾಗಳಿಗೆ ಸಬ್ಸಿಡಿಯಂಥ ಸೌಕರ್ಯ ಯಾಕೆ ಎಂಬ ವಾದವನ್ನು ಕೆಲವರು ಮೊದಲಿನಿಂದ ಇಡುತ್ತಾ ಬಂದಿದ್ದಾರೆ. ಆ ವಾದಕ್ಕೆ ಜೋತುಬಿದ್ದು, ಸಬ್ಸಿಡಿ ಪಡೆದ ಸಿನಿಮಾಗಳ ಪಟ್ಟಿ ನೋಡಿದರೆ ಈ ಸಲ ನಿರಾಸೆಯಾಗುವುದು ದಿಟ.

'ಬಂಗಾರದ ಮನುಷ್ಯ"ದಂಥ ಟ್ರೆಂಡ್ ಸೆಟಿಂಗ್ ಸಿನಿಮಾ ನಿರ್ದೇಶಿಸಿದ ಸಿದ್ಧಲಿಂಗಯ್ಯ ಸಬ್ಸಿಡಿ ಕೊಡಬೇಕಾದ ಚಿತ್ರಗಳನ್ನು ಆಯ್ಕೆ ಮಾಡಿದ ಸಮಿತಿಯ ಅಧ್ಯಕ್ಷರು. ಪತ್ರಕರ್ತ ಲಕ್ಷ್ಮಣ ಕೊಡಸೆ, ಸಾಹಸ ಕಲಾವಿದ ಎ.ಟಿ.ರಘು, ಸಾಹಿತಿ ಕುಂ.ವೀರಭದ್ರಪ್ಪ ಮೊದಲಾದ ಘಟಾನುಘಟಿಗಳು ಸಮಿತಿಯಲ್ಲಿದ್ದರು. ಇವರಲ್ಲಿ ಯಾರು ಭ್ರಷ್ಟರು ಎಂಬ ಜಿಜ್ಞಾಸೆಯನ್ನು ವಾರ್ತಾ ಇಲಾಖೆಯ ಅಧಿಕಾರಿಗಳೇ ಹುಟ್ಟುಹಾಕಿರುವುದು ವಿಪರ್ಯಾಸ.

ಚಿತ್ರವೊಂದಕ್ಕೆ ಸಬ್ಸಿಡಿ ಕೊಡಿಸಲು ಶೇ. 25ರಷ್ಟು ಲಂಚವನ್ನು ವಾರ್ತಾ ಇಲಾಖೆ ಅಧಿಕಾರಿಗಳು ಪಡೆದಿದ್ದಾರೆ ಎಂಬುದು ಗುಸುಗುಸು. ಕೊಟ್ಟ ಕೋಡಂಗಿ ಹಾಗೂ ಇಸ್ಕೊಂಡ ಈರಭದ್ರರಿಗೆ ಮಾತ್ರ ಈ ಸಂಗತಿ ಗೊತ್ತಿದೆ. ಆದರೆ, ಸಿನಿಮಾ ಆಯ್ಕೆ ಪಟ್ಟಿ ಅಧಿಕೃತವಾಗಿ ಹೊರಬಿದ್ದ ಮೇಲೆ ಬಿಸಿಬಿಸಿ ಚರ್ಚೆಯಾಗುವುದಂತೂ ಸತ್ಯ. ಸಿನಿಮಾ ಮನರಂಜನೆಯ ಮಾಧ್ಯಮ. 'ಗಾಳಿಪಟ"ದಲ್ಲಿ ಅದು ಭರ್ತಿಯಾಗಿದೆ. ಜನಮನ್ನಣೆ ಪಡೆದ ಚಿತ್ರವೊಂದಕ್ಕೆ ಸಬ್ಸಿಡಿ ನಿರಾಕರಿಸಿರುವುದೇ ಆದಲ್ಲಿ ಅದು ಚರ್ಚೆಗೆ ನಾಂದಿ ಹಾಡಲಿದೆ.

ಅಂದಹಾಗೆ, ಸಮಿತಿಯು ಸಿನಿಮಾಗಳನ್ನು ನೋಡುತ್ತಿದ್ದ ಅವಧಿಯಲ್ಲೇ ಬರಗೂರು ರಾಮಚಂದ್ರನವರು ಸಿದ್ಧಲಿಂಗಯ್ಯನವರನ್ನು ಪದೇಪದೇ ಪ್ರೀತಿಯಿಂದ ಮಾತನಾಡಿಸುತ್ತಿದ್ದರಂತೆ. ಸಬ್ಸಿಡಿಗೆ ದಾರಿ ಯಾವುದಯ್ಯಾ? ಅಂದರೆ, 'ಇದೇ ಅಲ್ಲವೇ" ಎನ್ನಬೇಕಲ್ಲವೇ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada