»   »  ಪೃಥ್ವಿಗೇಕೆ ಅಷ್ಟೊಂದು ಸಂಭಾಷಣೆಕಾರರು?

ಪೃಥ್ವಿಗೇಕೆ ಅಷ್ಟೊಂದು ಸಂಭಾಷಣೆಕಾರರು?

By: *ಜಯಂತಿ
Subscribe to Filmibeat Kannada

ಹಿಂದೊಮ್ಮೆ ಉಭಯಕುಶಲೋಪರಿ ಮಾತಾಡುತ್ತಾ ಮಂಜು ಮಾಂಡವ್ಯ 'ಪೃಥ್ವಿ' ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿರುವುದಾಗಿ ಹೇಳಿದ್ದರು. ಆದರೆ, ಮುಹೂರ್ತದ ದಿನ ಆದದ್ದು ಅಚ್ಚರಿ. ಮಂಜು ಜಾಗದಲ್ಲಿ ಬಿ.ಎ.ಮಧು ಇದ್ದರು. ಯಾಕೀ ಬದಲಾವಣೆ ಎಂಬ ಪ್ರಶ್ನೆ ಹುಟ್ಟಿದ್ದೇ ಆಗ.

'ಸವಾರಿ' ಚಿತ್ರಕ್ಕೆ ಸಂಭಾಷಣೆ ಬರೆದಿದ್ದು ಮಂಜು ಮಾಂಡವ್ಯ. ಅವರು ಬರೆದ ಮಾತುಗಳಿಗೆ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಹಾಗಾಗಿ ನಿರ್ದೇಶಕ ಜೇಕಬ್ ವರ್ಗೀಸ್‌ಗೆ ಅವರ ಮೇಲೆ ಮನಸ್ಸು. ಸಾಮಾನ್ಯವಾಗಿ ಪುನೀತ್ ನಾಯಕನಾಗಿ ನಟಿಸುವ ಚಿತ್ರಗಳಿಗೆ ಎಂ.ಎಸ್.ರಮೇಶ್ ಸಂಭಾಷಣೆ ಬರೆಯುವುದು ರೂಢಿ.

ಗಾಂಧಿನಗರದ ಕೆಲವರು ಇದನ್ನು ಶುಭಶಕುನವಾಗಿ ನೋಡುವುದೂ ಉಂಟು. ಪೃಥ್ವಿಗೆ ಮಾತು ಬರೆಯಲು ಎಂ.ಎಸ್.ರಮೇಶ್ ಸಹ ಮೊದಲು ಪೆನ್ನು ಪೇಪರ್ ಹಿಡಿದು ಕೂತಿದ್ದರು. ಅದ್ಯಾಕೋ ರಾಘವೇಂದ್ರ ರಾಜ್‌ಕುಮಾರ್‌ಗೆ ಬಿ.ಎ.ಮಧು ನೆನಪಾಗಿಬಿಟ್ಟಿದೆ. ಅವರೇ ಸಂಭಾಷಣೆ ಬರೆಯಬೇಕು ಎಂದು ರಾಘವೇಂದ್ರ ಪಟ್ಟು ಹಿಡಿದರಂತೆ.

ಒಂದು ಮೂಲದ ಪ್ರಕಾರ ಪೃಥ್ವಿಗೆ ಎಂ.ಎಸ್.ರಮೇಶ್ ಹಾಗೂ ಮಂಜು ಮಾಂಡವ್ಯ ಸಂಭಾಷಣೆ ಬರೆದು ಆಗಿತ್ತಂತೆ. ಅವರಿಬ್ಬರು ಬರೆದದ್ದನ್ನು ನೋಡಿದ ಮೇಲೆ ಬಿ.ಎ.ಮಧು ಫೈನ್ ಕಾಪಿ ಸಿದ್ಧಪಡಿಸಿದ್ದಾರೆಂಬುದು ಗುಸುಗುಸು. ಮಧು ಮಾತ್ರ ತಮಗೆ ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾಗಿ ಹೇಳುತ್ತಾರೆ. ಒಂದೇ ಚಿತ್ರಕ್ಕೆ ಹೀಗೆ ಮೂವರು ರೈಟರ್‌ಗಳನ್ನು ಬಳಸಿಕೊಳ್ಳುವ ಪರಿಪಾಠವೇನೋ ಒಳ್ಳೆಯದೇ. ಆದರೆ, ಕ್ರೆಡಿಟ್ಟು ಮೂವರಿಗೂ ಸಂದಿದ್ದರೆ ಚೆನ್ನಾಗಿತ್ತು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada