»   » ನೆನಪಿರಲಿ, ಲವ್ಲಿ ಸ್ಟಾರ್ ಪ್ರೇಮ್ ಗೆ ಭಾರೀ ಶುಕ್ರದೆಸೆ

ನೆನಪಿರಲಿ, ಲವ್ಲಿ ಸ್ಟಾರ್ ಪ್ರೇಮ್ ಗೆ ಭಾರೀ ಶುಕ್ರದೆಸೆ

Posted By:
Subscribe to Filmibeat Kannada
ನೆನಪಿರಲಿ ಚಿತ್ರದ ಯಶಸ್ಸಿನ ನಂತರ ನೆನಪಿರಲಿ ಪ್ರೇಮ್ ಕೆಲಕಾಲ ಮರೆಯಾಗಿದ್ದರು. ಜೊತೆಜೊತೆಯಲಿ ಹಾಗೂ ಜೊತೆಗಾರ ಯಶಸ್ಸಿನ ನಂತರ ಮತ್ತೊಮ್ಮೆ ಲೈಮ್ ಲೈಟ್ ಗೆ ಬಂದ ಪ್ರೇಮ್ ಮತ್ತೆ ಮರೆಯಾಗಿದ್ದರು. ಇನ್ನೇನು ನೆನಪಿರಲಿ ಪ್ರೇಮ್ ಅವರನ್ನು ಕನ್ನಡ ಪ್ರೇಕ್ಷಕರು ಮರೆತಿದ್ದಾರೆ ಎನ್ನುವಷ್ಟರಲ್ಲಿ ಪ್ರೇಮ್ ಮತ್ತೆ ಬಹುಬೇಡಿಕೆಯ ನಟರಾಗಿ ಬದಲಾಗಿದ್ದಾರೆ.

ಈ ಬಾರಿ ಪ್ರೇಮ್ ಹವಾ ತೀರಾ ಜೋರಾಗಿಯೇ ಇದೆ. ರೂಪಾ ಅಯ್ಯರ್ ಚಂದ್ರ ಚಿತ್ರದ ಚಿತ್ರೀಕರಣದಲ್ಲಿರುವ ಪ್ರೇಮ್, ಆರ್ ಚಂದ್ರು ನಿರ್ದೇಶನದ ಚಾರ್ ಮಿನಾರ್ ಚಿತ್ರಕ್ಕೂ ನಾಯಕರು. ಇದೇ ವೇಳೆ, ಶತ್ರು, ಕೆಟ್ಟವನು ಎಂಬೆಲ್ಲಾ ಚಿತ್ರಗಳು ಪ್ರೇಮ್ ಕೈಯಲ್ಲಿದ್ದರೂ ಅವ್ಯಾವುದೂ ಹೇಳಿಕೊಳ್ಳವಂತಹ ಬ್ಯಾನರ್ ಚಿತ್ರಗಳೇನಲ್ಲ. ಆದರೂ ಪ್ರೇಮ್ ಬೇಡಿಕೆಯನ್ನು ಸೂಚಿಸುವಂಥವು.

ಆದರೆ, ಚಂದ್ರ ಹಾಗೂ ಚಾರ್ ಮಿನಾರ್ ದೊಡ್ಡ ಹವಾ ಎಬ್ಬಸಲಿರುವುದಂತೂ ಗ್ಯಾರಂಟಿ. ಇತ್ತೀಚಿಗೆ ಪ್ರೇಮ್ ಅವರಿಗೆ ಇನ್ನೊಂದು ಚಿತ್ರದಲ್ಲಿ ನಾಯಕರಾಗುವ ಅವಕಾಶ ಲಭಿಸಿದೆ. ಅದು 'ಲೋಕಲ್ ವೆಂಕಟೇಶ' ಎಂಬ ಹೆಸರಿನ ಚಿತ್ರ. ಇಂದ್ರ ಎಂಬುವರು ಈ ಪಕ್ಕಾ ಮಾಸ್ ಚಿತ್ರದ ನಿರ್ದೇಶಕರು. ಹೆಸರೇ ಈ ಚಿತ್ರ ಪಕ್ಕಾ ಮಾಸ್ ಎಂಬುದನ್ನು ಸೂಚಿಸುತ್ತದೆ.

ಚಾಕೋಲೇಟ್ ಇಮೇಜ್ ಹೊಂದಿರುವ ಪ್ರೇಮ್ ಅವರಿಗೆ ರಫ್ ಅಂಡ್ ಟಫ್ ಪಾತ್ರಗಳು ಹೊಂದುವುದಿಲ್ಲ ಎಂಬ ಮಾತು ಕೇಳಿಬರುತ್ತಿತ್ತು. ಅದಕ್ಕೆ ಸರಿಯಾಗಿ ಪ್ರೇಮ್ ಕೂಡ ಲವರ್ ಬಾಯ್ ಚಿತ್ರಗಳಲ್ಲೇ ಕಾಣಿಸಿಕೊಂಡು ಏಕತಾನತೆ ಅನುಭವಿಸಿದರು. ಪ್ರೇಕ್ಷಕರಿಗೂ ಪ್ರೇಮ್ ರನ್ನು ಒಂದೇ ರೀತಿಯ ಪಾತ್ರಗಳಲ್ಲಿ ನೋಡಿ ನೋಡಿ ಬೇಜಾರಾಗಿತ್ತೇನೋ! ಪ್ರೇಮ್ ಮರೆಯಾಗಲು ತೊಡಗಿದ್ದರು.

ಈಗ ಪ್ರೇಮ್ ಪಾತ್ರಗಳ ಆಯ್ಕೆಯಲ್ಲಿ ವಿಭಿನ್ನತೆ ಮೆರೆಯುತ್ತಿದ್ದಾರೆ. ಒಪ್ಪಿಕೊಂಡಿರುವ ಚಿತ್ರಗಳೆಲ್ಲವೂ ವಿಭಿನ್ನ ರೀತಿ ಪಾತ್ರ ಹೊಂದಿದಂಥವು. ಈ ಲೋಕಲ್ ವೆಂಕಟೇಶ ಚಿತ್ರವಂತೂ ಪ್ರೇಮ್ ಇಲ್ಲಿಯವೆರೆಗೂ ಮಾಡದಿರುವ ರೀತಿಯ ಪಾತ್ರ ಎನ್ನಲಾಗಿದೆ.

ಈ ಚಿತ್ರಕ್ಕೆ ನಾಯಕಿಯಾಗಿ ಸಾರಥಿ, ಪರಮಾತ್ಮ ಖ್ಯಾತಿಯ ದೀಪಾ ಸನ್ನಿಧಿ ಅಥವಾ ಬಹುಭಾಷಾ ತಾರೆ ಪ್ರಿಯಾಮಣಿ ಈ ಇಬ್ಬರಲ್ಲಿ ಒಬ್ಬರನ್ನು ಆರಿಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ಇದರಲ್ಲಿ ಭೂಗತ ಲೋಕದ ಪಾತ್ರ ಪ್ರೇಮ್‌ ಅವರದು ಎನ್ನಲಾಗಿದೆ.

ಸಂಗೀತ ನಿರ್ದೇಶನದ ಅನುಭವ ಹೊಂದಿರುವ ಹೊಸ ನಿರ್ದೇಶಕ ಇಂದ್ರ, ಈ ಲೋಕಲ್ ವೆಂಕಟೇಶ್ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಸಂಗೀತ ಕೂಡ ಇವರೇ ನೀಡಲಿದ್ದಾರೆ. ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ನಟಿ ಭಾವನಾ ಆಯ್ಕೆಯಾಗಿದ್ದಾರೆ. ಮಿಕ್ಕ ತಾರಾಗಣದಲ್ಲಿ ರಂಗಾಯಣ ರಘು, ರವಿಕಾಳೆ ಇದ್ದಾರೆ.

ಸದ್ಯ ನಾಯಕ ಪ್ರೇಮ್ ಬಹಳಷ್ಟು ಬಿಜಿ ಇರುವುದರಿಂದ ಸೆಪ್ಟೆಂಬರ್ ತಿಂಗಳಲ್ಲಿ ಮಹೂರ್ತ ಆಚರಿಸಿಕೊಂಡು ನಂತರ ಚಿತ್ರೀಕರಣ ಪ್ರಾರಂಭವಾಗಲಿದೆ. 'ತಾಳಿದವನು ಬಾಳಿಯಾನು', ಹಾಗೂ 'ಎಲ್ಲರಿಗೂ ಕಾಲ ಬಂದೇ ಬರುತ್ತದೆ', ಎಂಬ ಮಾತುಗಳು ಲವ್ಲಿ ಸ್ಟಾರ್ ಪ್ರೇಮ್ ಅವರ ವಿಷಯದಲ್ಲಂತೂ ನಿಜವಾಗಿದೆ, ನೀವೇನಂತೀರಾ? (ಒನ್ ಇಂಡಿಯಾ ಕನ್ನಡ)

English summary
Lovely Star Prem Kumar acts in upcoming movie 'Local Venkatesh'. This movie to directs by Indra, the music director. He is not only directing this movie, also taking responsibility of story, screenplay and Music also. It will launch on September 2012.
 
Please Wait while comments are loading...